For the best experience, open
https://m.samyuktakarnataka.in
on your mobile browser.

ಪಾನಮತ್ತ ಚಾಲನೆ ಮೃತ್ಯುಗೆ ಆಹ್ವಾನ..!

10:44 AM Sep 14, 2024 IST | Samyukta Karnataka
ಪಾನಮತ್ತ ಚಾಲನೆ ಮೃತ್ಯುಗೆ ಆಹ್ವಾನ

ಗಣೇಶ್ ರಾಣೆಬೆನ್ನೂರು

ಚಿತ್ರ: ವಿಕಾಸಪರ್ವ
ನಿರ್ದೇಶನ: ಅನ್ಬು ಅರಸ್
ತಾರಾಗಣ: ರೋಹಿತ್ ನಾಗೇಶ್, ಸ್ವಾತಿ, ನಿಶಿತಾ ಗೌಡ, ಅಶ್ವಿನ್ ಹಾಸನ್, ಬಲರಾಜವಾಡಿ, ಕುರಿ ರಂಗ ಇತರರು.

ಸಾಮಾಜಿಕ ಕಳಕಳಿ ಮನಸ್ಸಿನಲ್ಲಿದ್ದರೆ, ಅದನ್ನು ಚಾಚೂ ತಪ್ಪದೇ ಪಾಲಿಸಿದರೆ ತಮಗೂ ಒಳ್ಳೇದು… ಪರರಿಗೂ ಹಿತ ಎಂದು ವಿಕಾಸಪರ್ವ ಚಿತ್ರದ ಮೂಲಕ ಸಾರಿ ಸಾರಿ ಹೇಳುತ್ತಾರೆ ನಿರ್ದೇಶಕ ಅನ್ಬು ಅರಸ್. ಪಾನಮತ್ತರಾಗಿ ವಾಹನ ಚಲಾಯಿಸಬೇಡಿ, ಇದರಿಂದ ಚಾಲಕ ಸೇರಿದಂತೆ ವಾಹನದಲ್ಲಿದ್ದವರಿಗೂ ಅಪಘಾತ ತಪ್ಪಿದ್ದಲ್ಲ. ಕೂಡಲೇ ಮದ್ಯಪಾನ ತ್ಯಜಿಸಿ… ಮುಖ್ಯವಾಗಿ ಮದ್ಯ ಸೇವಿಸಿ ವಾಹನ ಓಡಿಸಬೇಡಿ ಎಂಬ ಸಂದೇಶ ಸಾರುತ್ತಾ ಚಿತ್ರದುದ್ದಕ್ಕೂ ಅದಕ್ಕೆ ಸಂಬಂಧಿಸಿದ ಘಟನೆಗಳಿಗೆ ದೃಶ್ಯ ಪೋಣಿಸುತ್ತಾ ಸಾಗಿದ್ದಾರೆ ನಿರ್ದೇಶಕ.
ಎರಡು ಘಟನೆ ಜರುಗುತ್ತದೆ. ಆ ಪೈಕಿ ಒಂದು ಕುಟುಂಬ ಗಂಡ ಕಳೆದುಕೊಂಡು ಕಣ್ಣೀರಿನಲ್ಲೇ ಕೈ ತೊಳೆಯುತ್ತಿರುತ್ತದೆ. ಹೀಗಾಗಬಾರದು ಎಂದುಕೊಂಡೇ ತಲೆಯಲ್ಲಿಟ್ಟುಕೊಂಡು ಸ್ನೇಹಿತನ ಫ್ಯಾಮಿಲಿ ಊರಿನತ್ತ ಪಯಣ ಬೆಳೆಸುತ್ತದೆ. ಆದರೆ ವಿಧಿಯಾಟದ ಮುಂದೆ ನಾವೆಲ್ಲ ಯಾರು..? ಎಂಬುದನ್ನು ಮತ್ತೊಮ್ಮೆ ನಿರೂಪಿಸುತ್ತಾರೆ ನಿರ್ದೇಶಕ. ಇದರಲ್ಲಿ ಟ್ವಿಸ್ಟ್ ಕೂಡ ಇದೆ. ಬರಿ ಮದ್ಯಪಾನದ ಕುರಿತು ಮಾತ್ರ ಸಂದೇಶ ಸಾರದೇ, ಪ್ರಯಾಣಿಸುವಾಗ ಅಜಾಗರೂಕರಾಗಿ ನಡೆದುಕೊಳ್ಳಬೇಡಿ, ಒಡವೆ ಧರಿಸಬೇಡಿ, ಅಜ್ಞಾತ ಸ್ಥಳದಲ್ಲಿ ವಾಹನ ನಿಲ್ಲಿಸುವುದು ಅಷ್ಟು ಒಳ್ಳೆಯದಲ್ಲ… ಹೀಗೆ ಅನೇಕ ಅಂಶಗಳು ಕಥೆಯೊಳಗೆ ಮಿಳಿತವಾಗಿವೆ. ಸಾಕಷ್ಟು ಸಂಗತಿಗಳನ್ನು ಕಥೆಯೊಳಗೆ ಅಡಕವಾಗಿರಿಸಿಕೊಂಡು ಸಂದೇಶದ ಜತೆ ಜತೆಗೆ ಮನರಂಜನೆಯನ್ನೂ ಉಣಬಡಿಸುವ ಪ್ರಯತ್ನ `ವಿಕಾಸ ಪರ್ವ' ಮೂಲಕ ನೆರವೇರಿದೆ. ಕೆಲವೇ ಪಾತ್ರಗಳು ಕಣ್ಮುಂದೆ ಬಂದರೂ, ಕಥೆಯನ್ನು ನೆಚ್ಚಿಕೊಂಡು ಸಿನಿಮಾ ಮಾಡಿರುವುದರಿಂದ ಉಳಿದಿದ್ದೆಲ್ಲ ಗೌಣವಾಗಿಸದೇ ಅತ್ತ ಕಡೆಯೂ ಗಮನ ಹರಿಸಿ ಹಾಡು, ಥ್ರಿಲ್ಲಿಂಗ್ ಅಂಶಗಳನ್ನು ಜೋಡಿಸಲಾಗಿದೆ. ಪ್ರಮುಖ ಪಾತ್ರಧಾರಿ ರೋಹಿತ್ ನಾಗೇಶ್ ಹಾಗೂ ಸ್ವಾತಿ ಚಿತ್ರದುದ್ದಕ್ಕೂ ಕಾಣಿಸಿಕೊಂಡಿದ್ದಾರೆ. ಪ್ರಕೃತಿ ಪರಿಚಯ ಮಾಡುವುದರ ಜತೆಗೆ ಸಾಮಾಜಿಕ ಕಳಕಳಿಯ ಭಾಗವಾಗಿದ್ದಾರೆ. ನಿಶಿತಾ ಗೌಡ, ಅಶ್ವಿನ್ ಹಾಸನ್, ಬಲರಾಜವಾಡಿ, ಕುರಿ ರಂಗ ಇತರರು ಪಾತ್ರದ ಆಳ-ಅಗಲ ಅರಿತು ನಟಿಸಿದ್ದಾರೆ. ಚಿತ್ರದ ಕಥೆಗೆ ಪೂರಕವಾಗಿ ಪರಿಸರವನ್ನೂ ಬಳಸಿಕೊಳ್ಳಲಾಗಿದೆ. ಹೀಗಾಗಿ ಕಣ್ಣಿಗೆ ಹಿತಕರ. ಇದೇ ರೀತಿ ಮನಸ್ಸಿಗೆ ಮುದ ನೀಡುವ ಹಲವು ದೃಶ್ಯಗಳು, ಅಂಶಗಳು ಚಿತ್ರದಲ್ಲಿ ಅಡಕವಾಗಿವೆ.

Tags :