For the best experience, open
https://m.samyuktakarnataka.in
on your mobile browser.

ಪಾಲಕರ ನಿರ್ಧಾರ ಮಕ್ಕಳ ಉಜ್ವಲ ಭವಿಷ್ಯಕ್ಕೆ ಪೂರಕವಾಗಿರಲಿ

03:32 AM Dec 14, 2024 IST | Samyukta Karnataka
ಪಾಲಕರ ನಿರ್ಧಾರ ಮಕ್ಕಳ ಉಜ್ವಲ ಭವಿಷ್ಯಕ್ಕೆ ಪೂರಕವಾಗಿರಲಿ

ಹುಬ್ಬಳ್ಳಿ: ಶಿಕ್ಷಣದ ವಿಚಾರದಲ್ಲಿ ಮಕ್ಕಳ ಆಸಕ್ತಿಯನ್ನು ಗಮನಿಸಿ ಆ ದಿಶೆಯಲ್ಲಿ ಅವರನ್ನು ಬೆಳೆಸುವುದು ಪಾಲಕರ ಜವಾಬ್ದಾರಿ.ಪಾಲಕರು ಏನೇ ನಿರ್ಧಾರ ಕೈಗೊಂಡರೂ, ಅದು ಮಕ್ಕಳ ಉಜ್ವಲ ಭವಿಷ್ಯಕ್ಕೆ ಪೂರಕವಾಗಿರಬೇಕು. ಅಂದಾಗ ಮಾತ್ರ ಮಕ್ಕಳ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ನಟ ಡಾ. ರಮೇಶ ಅರವಿಂದ ಹೇಳಿದರು.
ಕೆಎಲ್‌ಇ ಸಂಸ್ಥೆಯ ಎಂ.ಆರ್. ಸಾಖರೆ ಶಾಲೆಯ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಶಾಲಾ ಸುವರ್ಣ ಮಹೋತ್ಸವ ಹಾಗೂ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಕ್ಕಳ ಕಲಿಕೆಯ ಗುಣಮಟ್ಟ ಸುಧಾರಣೆಗೆ ಶಾಲೆ ಮತ್ತು ಮನೆಯ ವಾತಾವರಣ ಚೆನ್ನಾಗಿರಬೇಕು. ವಿದ್ಯಾರ್ಥಿಗಳ ಮತ್ತು ಗುರುಗಳ ಸಂಬಂಧ ಉತ್ತಮವಾಗಿರಬೇಕು ಎಂದು ಹೇಳಿದರು.
ಸಣ್ಣ-ಪುಟ್ಟ ವಿಚಾರಗಳು ಮಕ್ಕಳ ಮನಸ್ಸಿನ ಮೇಲೆ ಅಗಾಧವಾದ ಪರಿಣಾಮ ಬೀರುತ್ತವೆ. ಅವರ ಆಸಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಬದಲಾಗಿ ಅವರನ್ನು ಒತ್ತಡದಲ್ಲಿ ಸಿಲುಕಿಸಿದರೆ, ಪಾಲಕರೇ ವೈರಿಗಳಂತೆ ಭಾಸವಾಗುತ್ತಾರೆ. ಹೀಗಾಗಿ, ಅವರ ಜೊತೆಗೆ ಸ್ನೇಹಿತರಂತೆ ವರ್ತಿಸಿ, ಎಲ್ಲದರ ಬಗೆಗಿನ ಭಯವನ್ನು ಹೋಗಲಾಡಿಸಿ ಆತ್ಮವಿಶ್ವಾಸ ತುಂಬಬೇಕು ಎಂದು ಸಲಹೆ ನೀಡಿದರು.
ಶಿಕ್ಷಣದಿಂದ ಹಿಡಿದು ಎಲ್ಲ ಕ್ಷೇತ್ರಗಳಲ್ಲಿಯೂ ಎಲ್ಲರೂ ಗುಣಮಟ್ಟವನ್ನು ಹುಡುತ್ತಾರೆ. ಅದರಂತೆ ಕೆಎಲ್‌ಇ ಸಂಸ್ಥೆಯ ಎಂ.ಆರ್. ಸಾಖರೆ ಶಾಲೆಯೂ ಕೂಡಾ ಉತ್ತಮ ಗುಣಮಟ್ಟ ಕಾಯ್ದುಕೊಂಡ ಪರಿಣಾಮದಿಂದ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ಈ ಶಾಲೆಯಲ್ಲಿ ಅನೇಕ ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ್ದಾರೆ. ಇಂತಹದೊAದು ಐತಿಹಾಸಿಕ ಕ್ಷಣದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಇದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಕೆಎಲ್‌ಇ ಸಂಸ್ಥೆ ನಿರ್ದೇಶಕ ಶಂಕರಣ್ಣ ಮುನವಳ್ಳಿ ಮಾತನಾಡಿ, ಮಕ್ಕಳ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿದರು. ಇದೇ ಸಂದರ್ಭದಲ್ಲಿ ೨೦೨೩-೨೪ನೇ ಶೈಕ್ಷಣಿಕ ವರ್ಷದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಇದಕ್ಕೂ ಪೂರ್ವದಲ್ಲಿ ಹು-ಧಾ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಪ್ರಾಂಶುಪಾಲರಾದ ಡಾ. ಶೀತಲ ತಿವಾರಿ, ಶಾಲಾ ಮಂತ್ರಿ ಶಿವಸ್ವರೂಪ ಕುಲಬುರ್ಗಿ ಸೇರಿದಂತೆ ಇತರರು ಇದ್ದರು.

ಮಕ್ಕಳ ಜೊತೆ ಸಮಯ ಕಳೆದ ರಮೇಶ…
ಶಾಲಾ ಆವರಣಕ್ಕೆ ನಟ ಡಾ.ರಮೇಶ ಅರವಿಂದ ಆಗಮಿಸುತ್ತಿದ್ದಂತೆ ವಿದ್ಯಾರ್ಥಿಗಳು ಗೌರವ ಪೂರ್ವಕವಾಗಿ ಸ್ವಾಗತಿಸಿದರು. ಬಳಿಕ ವೇದಿಕೆ ಏರುತ್ತಿದ್ದಂತೆ ವಿದ್ಯಾರ್ಥಿಗಳು, ಪಾಲಕರು ಸಿಳ್ಳೆ, ಕೇಕೆ ಹೊಡೆದು ಸಂಭ್ರಮಿಸಿದರು. ಅದರಲ್ಲೂ ವೇದಿಕೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ನಟ ರಮೇಶ ಅರವಿಂದ ಜತೆಗೆ ವಿದ್ಯಾರ್ಥಿಗಳ ಸೆಲ್ಪಿ ಕ್ಲಿಕಿಸಿಕೊಳ್ಳಲು ಹರಸಾಹಸ ಪಡುತ್ತಿದ್ದ ದೃಶ್ಯ ಎದ್ದು ಕಂಡಿತು. ಕಾರ್ಯಕ್ರಮದ ನಂತರ ಎಂ.ಆರ್. ಸಾಖರೆ ಸ್ಕೂಲ್ ನರ್ಸರಿ ವಿದ್ಯಾರ್ಥಿಗಳ ಜತೆಗೆ ಕೆಲಹೊತ್ತು ಕಾಲ ಕಳೆದು ನಟ ರಮೇಶ ಅರವಿಂದ ಸಂಭ್ರಮಿಸಿದ್ದು ನೋಡುಗರ ಕಣ್ಮನ ಸೆಳೆಯಿತು.