ಪಾಸ್ ನೀಡಿದ ಸಿಂಹ ಯಾವ ಗುಹೆಯಲ್ಲಿದೆ?
ಕೊಪ್ಪಳ: ಸಂಸತ್ ಪ್ರವೇಶಿಸಲು ಪಾಸ್ ನೀಡಿದ ಸಿಂಹ ಯಾವ ಗುಹೆಗೆ ಹೋಗಿದೆ? ಅದೇ ಮುಸ್ಲಿಮರು ಮಾಡಿದ್ದರೆ, ಸಿಂಹ ಬಂದು ಚೆಲ್ಲಾಟ ಆಡುತ್ತಿತ್ತು ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಟೀಕಿಸಿದರು.
ಕಾಂಗ್ರೆಸ್ ಸಂಸದರ ಅಮಾನತು ಖಂಡಿಸಿ ಜಿಲ್ಲಾ ಕಾಂಗ್ರೆಸ್ ನಗರದ ಅಶೋಕ ವೃತ್ತದಲ್ಲಿ ಶುಕ್ರವಾರ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಆಕ್ರೋಶ ವ್ಯಕ್ತಪಡಿಸಿದರು.
ಸಂಸತ್ ದಾಳಿಯ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಪಾಸ್ ನೀಡಿದ ಸಂಸದ ಪ್ರತಾಪ ಸಿಂಹನನ್ನು ವಿಚಾರಣೆ ಮಾಡಬೇಕು. ಕೇಂದ್ರ ಸರ್ಕಾರ ಇದ್ಯಾವುದನ್ನು ಮಾಡುತ್ತಿಲ್ಲ. ಈ ಪ್ರಕರಣವನ್ನೇ ಮುಚ್ಚಿ ಹಾಕಲು ಯತ್ನಿಸುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ. ಹಾಗಾಗಿ ಸೂಕ್ತ ತನಿಖೆ ನಡೆಸಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಸಂಸತ್ತಿನಿಂದ ಸಂಸದರನ್ನು ಅಮಾನತುಗೊಳಿಸಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಯಾವುದೇ ಉತ್ತರ ನೀಡಿಲ್ಲ. ಈ ಮೂಲಕ ಮೋದಿ ಉತ್ತರಕುಮಾರರಾಗಿದ್ದಾರೆ. ಅಮಾನತು ಮಾಡುವ ಮೂಲಕ ಬಿಜೆಪಿ, ಸಂಸದರಿಗೆ ಅವಮಾನ ಮಾಡಿದೆ. ಸಂಸತ್ ಭವನದಲ್ಲಿ ಸ್ಮೋಕ್ ಬಾಂಬ್ ದಾಳಿಯ ಹಿಂದೆ ಬಿಜೆಪಿ ನಾಯಕರ ಕೈವಾಡವಿದ್ದು, ಕೇಂದ್ರ ಸರ್ಕಾರದ ಭದ್ರತಾ ವೈಫಲ್ಯದಿಂದ ಸಂಸತ್ ಭವನದಲ್ಲಿ ಸ್ಮೋಕ್ ಬಾಂಬ್ ದಾಳಿಯಾಗಿದೆ. ಇದಕ್ಕೆ ಉತ್ತರಿಸುವಂತೆ ಪ್ರಶ್ನಿಸಿದರೆ, ಅಧಿಕಾರ ದುರುಪಯೋಗ ಮಾಡಿಕೊಂಡು ೧೪೫ ಸಂಸದರನ್ನು ಹೊರಗೆ ಹಾಕಿ, ಪ್ರಜಾಪ್ರಭುತ್ವವನ್ನು ಕೊಲೆ ಮಾಡಿದೆ. ಈ ಮೂಲಕ ತಮ್ಮ ಲೋಪ ಮುಚ್ಚಿಕೊಳ್ಳಲು ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.