ಪಿಎಂ ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ರಾಜ್ಯ ಸರ್ಕಾರದಿಂದ `ಅಸಹಕಾರ'
ಹುಬ್ಬಳ್ಳಿ: ಪ್ರಧಾನ ಮಂತ್ರಿಗಳ ವಿಕಸಿತ ಭಾರತ ಸಂಕಲ್ಪ ಯಾತ್ರೆ(ಮೋದಿ ಗ್ಯಾರಂಟಿ ಗಾಡಿ)ಗೆ ರಾಜ್ಯ ಸರಕಾರ ಅಸಹಕಾರ ನೀಡಲು ತೀರ್ಮಾನಿಸಿದೆ. ಆದರೆ ಇದನ್ನು ನಾವೆಲ್ಲರೂ ಯಶಸ್ವಿಗೊಳಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಹುಬ್ಬಳ್ಳಿ ತಾಲೂಕಿನ ವರೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶನಿವಾರ ಹಮ್ಮಿಕೊಂಡಿದ್ದ ಕೇಂದ್ರ ಸರಕಾರದ ವಿಕಸಿತ ಭಾರತ ಸಂಕಲ್ಪ ಯಾತ್ರಾದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಫಲಾನುಭವಿಗಳ ಸಂವಾದದ ನಂತರ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ಕೇಂದ್ರ ಸರಕಾರ ಅನೇಕ ಯೋಜನೆಗಳನ್ನು ತಂದಿದೆ. ಅವುಗಳನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆಯುಷ್ಮಾನ್ ಯೋಜನೆ, ಮುದ್ರಾ ಯೋಜನೆ, ಉಜ್ವಲ್ ಯೋಜನೆ, ಪ್ರಧಾನ ಮಂತ್ರಿ ಆವಾಸ ಯೋಜನೆ, ಕೃಷಿ ಸಮ್ಮಾನ್ ಯೋಜನೆ ಸೇರಿ ವಿವಿಧ ಯೋಜನೆಗಳನ್ನು ನೀಡಿದೆ. ಎಲ್ಲ ಯೋಜನೆಗಳನ್ನು ಎಲ್ಲರಿಗೂ ಸಿಗಬೇಕು ಎನ್ನುವುದು ಈ ಸಂಕಲ್ಪ ಯಾತ್ರೆಯ ಉದ್ದೇಶವಾಗಿದೆ. ಆದರೆ ಇದು ಯಶಸ್ವಿಯಾಗಬಾರದು ಎಂಬ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಅಸಹಕಾರ ನೀಡಲು ಮುಂದಾಗಿದೆ. ಹೀಗಾಗಿ ನಮ್ಮ ಶಾಸಕರು ತಮ್ಮ ವಿಧಾನಸಭಾ ಕ್ಷೇತ್ರ ಸೇರಿ ಸುತ್ತಮುತ್ತಲಿನ ಪ್ರದೇಶದಲ್ಲಿ ದೊಡ್ಡಮಟ್ಟದಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಯಶಸ್ವಿಗೊಳಿಸಬೇಕು ಎಂದರು.