For the best experience, open
https://m.samyuktakarnataka.in
on your mobile browser.

ಪಿಎಸ್‌ಐ ವರ್ತನೆ ಖಂಡಿಸಿ ಬೆಳ್ಳಂಬೆಳಗ್ಗೆ ಪ್ರತಿಭಟನೆ

09:13 AM Mar 24, 2024 IST | Samyukta Karnataka
ಪಿಎಸ್‌ಐ ವರ್ತನೆ ಖಂಡಿಸಿ ಬೆಳ್ಳಂಬೆಳಗ್ಗೆ ಪ್ರತಿಭಟನೆ

ಬಾಗಲಕೋಟೆ: ಐತಿಹಾಸಿಕ ಬಾಗಲಕೋಟೆ ಹೋಳಿಯ ಕಾಮದಹನದ ವೇಳೆ ಪಿಎಸ್‌ಐ ವರ್ತನೆ ಖಂಡಿಸಿ ಸಾರ್ವಜನಿಕರು ಪ್ರತಿಭಟಿಸಿದ ಘಟನೆ ಜರುಗಿದೆ.
ರವಿವಾರ ನಸುಕಿನ ಜಾವ ಕಿಲ್ಲಾ ಓಣಿಯ ಹಿರಿಯರು ಹಾಗೂ ಯುವಕರು ದಲಿತಕೇರಿಯಿಂದ ಕಾಮದಹನಕ್ಕೆ ಬೆಂಕಿ ತರಳು ತೆರಳಿದಾಗ ಕುಳ್ಳಿನೊಂದಿಗೆ ಕಿಡಿಗೇಡಿಗಳು ಕಲ್ಲು ತೂರಿದ್ದು, ಪೊಲೀಸರು ಸೂಕ್ತ ಬಂದೋಬಸ್ತ್ ನೀಡುವಂತೆ ಮನವಿ ಮಾಡಲು ತೆರಳಿದಾಗ ಪಿಎಸ್‌ಐ ವಿನೋದ ಹೊಸಮನಿ ಯುವಕರಿಗೆ ಅವಾಚ್ಯಶಬ್ದಗಳಿಂದ ನಿಂದಿಸಿರುವ ಆರೋಪ ಕೇಳಿ ಬಂದಿದೆ. ಈ ವಿಚಾರವಾಗಿ ಕಿಲ್ಲಾ ಓಣಿಯಲ್ಲಿ ಹಿರಿಯರು ಪ್ರಶ್ನಿಸಲು ಮುಂದಾದಾಗ ಪಿಎಸ್‌ಐ ಕೂಡಿದ್ದ ಸಾರ್ವಜನಿಕರ ಮುಂದೆ ಹಿರೋಯಿಸಂ ತೋರಿಸಲು ಮುಂದಾಗಿ ಹಲ್ಲೆ ನಡೆಸಲು ಯತ್ನಿಸಿದ್ದಾರೆ. ಈ ವಿಚಾರದಿಂದ ಕೆರಳಿದ ಸಾರ್ವಜನಿಕರು ಘೋಷಣೆಳನ್ನು ಕೂಗಿ ಆಕ್ರೋಶ ಹೊರಹಾಕಿದ್ದಾರೆ.
ನಂತರ ಸ್ಥಳಕ್ಕೆ ಡಿವೈಎಸ್ಪಿ ಪಂಪನಗೌಡ ಅವರು ಆಗಮಿಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವ ವೇಳೆಯೂ ಪಿಎಸ್‌ಐ ಹಿರಿಯ ಅಧಿಕಾರಿ ಸ್ಥಳದಲ್ಲಿ ಇರುವುದು ಲೆಕ್ಕಿಸದೆ ಸಾರ್ವಜನಿಕರೊಂದಿಗೆ ಮಾತಿನ ಚಕಮಕಿಗೆ ಇಳಿದಿದ್ದಾರೆ. ಆಗ ಡಿವೈಎಸ್‌ಪಿ ಪಂಪನಗೌಡ ಅವರು ಸಹ ಪಿಎಸ್‌ಐಗೆ ಸ್ಥಳದಲ್ಲಿ ನಾನಿರುವುದಕ್ಕಾದರೂ ಬೆಲೆ ಬೇಡವೆ ದೂರದಲ್ಲಿ ಇರು ಎಂದರೆ ಅರ್ಥವಾಗುವುದಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಹೆಚ್ಚುವರಿ ಎಸ್‌ಪಿ ಮಹಾಂತೇಶ್ವರ ಜಿದ್ದಿ ಘಟನಾ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದ್ದಾರೆ.
ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಸಹ ಸ್ಥಳಕ್ಕೆ ಆಗಮಿಸಿದ್ದು, ಪೊಲೀಸರ ವರ್ತನೆ ಖಂಡಿಸಿದ್ದಾರೆ. ಪಿಎಸ್‌ಐ ಮೇಲೆ ಕ್ರಮಕ್ಕೆ ರವಿವಾರ ಬೆಳಗ್ಗೆ ೧೧ ಗಂಟೆಯವರೆಗೆ ಗಡುವು ನೀಡಿದ್ದಾರೆ.