ಪಿಕ್ ಪಾಕೆಟ್, ಚೊಂಬು, ಚಿಪ್ಪು ಇತ್ಯಾದಿ…
ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ತಮ್ಮ ಆಚಾರ ವಿಚಾರಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಭಾಗವಾಗಿ ಮಾಧ್ಯಮಗಳಲ್ಲಿ ಜಾಹೀರಾತುಗಳ ಮಾರ್ಗವನ್ನು ಅನುಸರಿಸುತ್ತಿರುವುದರಲ್ಲಿ ಯಾವುದೇ ವಿಶೇಷವಿಲ್ಲ. ಈ ಪದ್ಧತಿ ಮೊದಲಿನಿಂದಲೂ ಚಾಲ್ತಿಯಲ್ಲಿದೆ. ಪ್ರಸ್ತುತ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಕರ್ನಾಟಕಕ್ಕೆ ಸೀಮಿತವಾಗಿ ಕಾಂಗ್ರೆಸ್ ಹಾಗೂ ಜನತಾ ಪಕ್ಷಗಳು ಪೈಪೋಟಿಯ ಮೇಲೆ ಬಿಡುಗಡೆ ಮಾಡುತ್ತಿರುವ ಮಾಧ್ಯಮ ಜಾಹೀರಾತುಗಳು ಅಪ್ಪಟ ಪರನಿಂದನೆ ಹಾಗೂ ಆತ್ಮಶ್ಲಾಘನೆಯ ದೃಷ್ಟಿಕೋನದ್ದು. ಮಾಧ್ಯಮ ಜಾಹೀರಾತುಗಳು ಒಂದು ರೀತಿಯಲ್ಲಿ ಚುನಾವಣಾ ಪ್ರಣಾಳಿಕೆಯ ಇನ್ನೊಂದು ರೂಪವೇ. ಪಕ್ಷದ ಆಚಾರವಂತಿಕೆ ಮತ್ತು ವಿಚಾರವಂತಿಕೆಯ ಬೆಳಕಿನಲ್ಲಿ ಮುಂದಿನ ದಿನಗಳಲ್ಲಿ ಅನುಸರಿಸುವ ಮಾರ್ಗಗಳ ದಾರಿದೀಪವಾಗಿರುವಂತೆ ರೂಪಿಸಲಾಗುವ ಈ ಜಾಹೀರಾತುಗಳು ಮೌಲ್ಯಾಧಾರಿತ ರಾಜಕಾರಣದ ಇನ್ನೊಂದು ಮುಖ. ಆದರೆ, ಈ ಬಾರಿ ಗೆಲ್ಲುವ ಜಿದ್ದಿಗೆ ಬಿದ್ದಿರುವುದರಿಂದಲೋ ಏನೋ ಎರಡೂ ಪಕ್ಷಗಳು ತಮ್ಮ ಆಚಾರವಂತಿಕೆ ಮತ್ತು ವಿಚಾರವಂತಿಕೆಯನ್ನು ಸಂಪೂರ್ಣವಾಗಿ ಮರೆತು ಪ್ರತಿಸ್ಪರ್ಧಿ ಪಕ್ಷದ ಆಚಾರವಂತಿಕೆ ಮತ್ತು ವಿಚಾರವಂತಿಕೆಯಲ್ಲಿ ಸಭ್ಯವಲ್ಲದ ರೀತಿಯಲ್ಲಿ ನೊಣವನ್ನು ಹೆಗ್ಗಣದಂತೆ ಬಿಂಬಿಸುತ್ತಿರುವ ರೀತಿ ನಿಜಕ್ಕೂ ರಾಜಕಾರಣ ಯಾವ ಹಂತ ತಲುಪಿದೆ ಎಂಬುದರ ದಿಕ್ಸೂಚಿಯಷ್ಟೆ.
ಯುದ್ಧ ಹಾಗೂ ಪ್ರಳಯದಲ್ಲಿ ಸತ್ಯ-ಅಸತ್ಯಗಳನ್ನು ಹುಡುಕುವುದು ಹೇಗೆ ಸರಿಯಲ್ಲವೋ ಚುನಾವಣೆ ಸಂದರ್ಭದ ರಾಜಕಾರಣದಲ್ಲಿಯೂ ಸತ್ಯ ಹಾಗೂ ಮಿಥ್ಯಗಳನ್ನು ಗುರುತಿಸಿ ಪ್ರತ್ಯೇಕಿಸುವುದು ನಾನಾ ಕಾರಣಗಳಿಂದ ಕಷ್ಟವೇ. ಏಕೆಂದರೆ, ಅಧಿಕಾರ ಗ್ರಹಣವೊಂದೇ ಮುಖ್ಯವಾಗಿರುವ ಈಗಿನ ರಾಜಕಾರಣದಲ್ಲಿ ಹೇಗಾದರೂ ಸರಿಯೇ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕು ಎಂಬ ಛಲ. ಬದುಕಿನಲ್ಲಿ ಛಲವಿರಬೇಕು ನಿಜ. ಆದರೆ, ಅದು ದುರ್ಯೋಧನನ ಛಲದಂತೆ ಇರಬಾರದು. ದುರ್ಯೋಧನನ ರಥದ ಲಾಂಛನ ನಾಗರಹಾವು. ನಂಬಿಕೆಯನ್ನೇ ಆಧರಿಸಿ ಹೇಳುವುದಾದರೆ ನಾಗರಹಾವು ಮತ್ಸರದ ಸಂಕೇತ. ಹಾವಿನ ದ್ವೇಷ ಹನ್ನೆರಡು ವರ್ಷ ಎಂಬ ಹಾಡಿನಲ್ಲಿರುವ ಅಂಶವನ್ನೇ ಬಳಸಿಕೊಂಡು ಹೇಳುವುದಾದರೆ ಛಲವೊಂದೇ ಮೌಲ್ಯಾಧಾರಿತ ರಾಜಕಾರಣಕ್ಕೆ ದಾರಿಯಾಗಬಾರದು. ಕನಸುಗಳು ದಾರಿಯಾಗುವುದಾದರೆ ನಿಜಕ್ಕೂ ಅದೊಂದು ಮೌಲ್ಯಾಧಾರಿತ ಸಮಾಜ ನಿರ್ಮಾಣದ ಕನಸು. ಇದೊಂದು ಪೈಪೋಟಿಯ ಯುಗ. ರಾಜಕೀಯವೂ ಕೂಡಾ ಇದಕ್ಕೆ ಹೊರತಲ್ಲ. ಉಳಿದ ಕ್ಷೇತ್ರಗಳಿಗೂ ರಾಜಕೀಯಕ್ಕೂ ಇರುವ ಗುಣಾತ್ಮಕ ವ್ಯತ್ಯಾಸವೆಂದರೆ ಎಲ್ಲಾ ಕ್ಷೇತ್ರಗಳ ಮೇಲ್ವಿಚಾರಣೆ ನೋಡಿಕೊಂಡು ಅದರ ರೀತಿ ರಿವಾಜುಗಳನ್ನು ಸುಧಾರಣೆ ಮಾಡುವ ಅಧಿಕಾರ ಸ್ಥಾಪನೆಯೇ ಗುರಿಯಾಗಿರುವಾಗ ಅದರ ಮಾರ್ಗವೂ ಕೂಡಾ ಅಚಲವಾಗಿರಬೇಕು. ಇಂತಹ ವಿಚಾರದಲ್ಲಿ ಛಲದಂಕ ಮಲ್ಲರಾಗುವುದು ರಾಜಕಾರಣಿಗಳ ಕನಸಾಗಿರಬೇಕು. ಅದಿಲ್ಲದೆ ಪಿಕ್ ಪಾಕೆಟ್, ಚೊಂಬು, ಚಿಪ್ಪು ಮೊದಲಾದ ಶಬ್ದಗಳನ್ನು ವಿರೂಪಗೊಳಿಸಿ ಆಕರ್ಷಕ ರೀತಿಯಲ್ಲಿ ಜಾಹೀರಾತುಗಳನ್ನು ರೂಪಿಸಿ ಜನರ ಮನಸ್ಸಿನ ಮೇಲೆ ಆಕ್ರಮಣ ಮಾಡುವ ರೀತಿಯ ಪ್ರಚಾರ ವಿಧಾನ ವಿವೇಚನೆಯೇ ಮುಖ್ಯವಾಗಿರುವ ಈಗಿನ ಯುಗಕ್ಕೆ ಹೊಂದುವುದಿಲ್ಲ.
ಚುನಾವಣಾ ಆಯೋಗ ಈ ವಿಚಾರದಲ್ಲಿ ಅಸಹಾಯಕವೇ. ಏಕೆಂದರೆ, ಜಾಹೀರಾತುಗಳನ್ನು ಹಣದ ಮೌಲ್ಯದ ವಿಚಾರದಲ್ಲಿ ನಿಯಂತ್ರಿಸುವ ಅಂಕುಶ ಅದರ ಬಳಿ ಇದೆ. ಆದರೆ, ಆತ್ಮಶ್ಲಾಘನೆ-ಪರನಿಂದನೆಗೆ ತಡೆ ಹಾಕುವ ಅಂಕುಶ ಆಯೋಗದ ಬಳಿ ಇಲ್ಲ. ಇದರ ಜೊತೆಗೆ ಶಬ್ದಗಳ ಬಳಕೆಗಿಂತಲೂ ಅವುಗಳನ್ನು ಅರ್ಥೈಸುವ ವಿಧಾನ ಓದುವ ಜನರ ಜಾಣ್ಮೆಗೆ ಬಿಟ್ಟದ್ದು. ಇದರ ಮೇಲೆ ಎಂತಹ ಸುಗ್ರೀವಾಜ್ಞೆಯನ್ನು ಬಳಸಿ ನಿಯಂತ್ರಣ ಹೇರಲು ಸಾಧ್ಯವಿಲ್ಲ. ಸಂವಿಧಾನದ ಕಟ್ಟುಕಟ್ಟಳೆಯೊಳಗೆ ಪರಕಾಯ ಪ್ರವೇಶ ಮಾಡಿ ಚುನಾವಣಾ ರೀತಿ ನೀತಿಗೆ ಭಾರತ ಕಂಡರಿಯದ ರೀತಿಯಲ್ಲಿ ಸುಧಾರಣೆಗಳನ್ನು ಜಾರಿಗೆ ತಂದ ಪುಣ್ಯಾತ್ಮ ಟಿ.ಎನ್. ಶೇಷನ್ ಚುನಾವಣಾ ಆಯೋಗದ ಮುಖ್ಯಸ್ಥರಾದ ಮೇಲೆ ಆಗಿರುವ ಸುಧಾರಣೆಗಳು ಲೆಕ್ಕವಿಲ್ಲದಷ್ಟು. ಆದರೆ, ಶೇಷನ್ ನಂತರ ಈಗ ಜರುಗುತ್ತಿರುವುದು ಚುನಾವಣಾ ಕಾನೂನುಗಳ ಸುರೂಪ ಚಿಕಿತ್ಸೆಯಷ್ಟೆ. ಜನರ ಕಣ್ಣಿಗೆ ಮಣ್ಣೆರೆಚುವಂತೆ ಕೋಟ್ಯಂತರ ರೂಪಾಯಿ ನಗದು ಹಣ ಬಿಗಿ ನಿರ್ಬಂಧ ಹಾಗೂ ಕಟ್ಟೆಚ್ಚರದ ಕಾವಲಿನ ನಡುವೆಯೂ ಅಕ್ರಮವಾಗಿ ಸಾಗಣೆಯಾಗುತ್ತಿರುವ ಈ ಸಂದರ್ಭದಲ್ಲಿ ಆತ್ಮಶ್ಲಾಘನೆಯ ರಾಗವನ್ನು ಗುರುತಿಸಿ ಪರನಿಂದನೆಯ ತಾಳದ ಮಾತ್ರೆಯನ್ನು ತಿಳಿದು ಲೆಕ್ಕ ಹಾಕುವುದು ವೈಚಾರಿಕ ಬದ್ಧತೆ ಜೊತೆಗೆ ಅಸ್ಖಲಿತ ಆತ್ಮಸಾಕ್ಷಿಯನ್ನು ಕಾದಿಟ್ಟುಕೊಂಡಿರುವವರು ಚುನಾವಣಾ ಪ್ರಕ್ರಿಯೆಯ ನೇತೃತ್ವ ವಹಿಸಿಕೊಂಡರಷ್ಟೆ ಅದರ ಅಷ್ಟಿಷ್ಟು ಸುಧಾರಣೆ ಸಾಧ್ಯವೇನೋ. ಇಲ್ಲವಾದರೆ ಪಿಕ್ ಪಾಕೆಟ್, ಚೊಂಬು, ಚಿಪ್ಪು ಮೊದಲಾದ ಶಬ್ದಗಳು ಹೊಸ ಅರ್ಥಗಳನ್ನು ಪಡೆದುಕೊಂಡು ಇನ್ನೊಂದು ರಾಜಕೀಯ ಪದಾರ್ಥ ಚಿಂತಾಮಣಿಯ ರಚನೆಗೆ ಪ್ರೇರಣೆಯಾಗುವುದು ಒಂದು ಜನ ಮೆಚ್ಚದ ಬೆಳವಣಿಗೆಯಾಗುವುದು ಖಂಡಿತ.