ಪುಟ್ಟಣ್ಣ ಜಯ: ಲೋಕಸಭೆ ಚುನಾವಣೆಗೆ ದಿಕ್ಸೂಚಿ
ವಿಧಾನಪರಿಷತ್: ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣಾ ಫಲಿತಾಂಶ ಮುಂದಿನ ಲೋಕಸಭಾ ಚುನಾವಣೆಗೆ ಮಾರ್ಗಸೂಚಿ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾತು ಆಡಳಿತ ಮತ್ತು ವಿಪಕ್ಷದ ಮಧ್ಯೆ ವಾಕ್ಸಮರಕ್ಕೆ ಕಾರಣವಾಯಿತು.
ಮೇಲ್ಮನೆಯಲ್ಲಿ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದ ಪುಟ್ಟಣ್ಣ ಅವರ ಪ್ರಮಾಣವಚನ ಸ್ವೀಕಾರದ ಸಂದರ್ಭದಲ್ಲಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಪುಟ್ಟಣ್ಣ ಕೇವಲ ಪ್ರಚಾರ ಮಾಡಿದ್ದರು. ಆದರೆ, ಬಿಜೆಪಿ ಮತ್ತು ಜೆಡಿಎಸ್ ಈ ಚುನಾವಣೆ ಮುಂದಿನ ಲೋಕಸಭಾ ಚುನಾವಣೆಗೆ ಮಾರ್ಗಸೂಚಿ ಎಂದೆಲ್ಲ ಹೇಳಿದ್ದರು. ಈಗ ಮತದಾರರು ತೀರ್ಪು ನೀಡಿದ್ದು, ಇದು ಮುಂದಿನ ಚುನಾವಣೆಯ ಫಲಿತಾಂಶ ನೀಡಿದಂತಾಗಿದೆ ಎಂದರು.
ಇದಕ್ಕೆ ವಿರೋಧ ವ್ಯಕ್ತಪಡಿಸಿದ ವಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ೨೮ ಸ್ಥಾನ ಗೆಲ್ಲುವುದು ಗ್ಯಾರಂಟಿ. ಪುಟ್ಟಣ್ಣ ಅವರದ್ದು ವೈಯಕ್ತಿಕ ಗೆಲುವೇ ವಿನಃ ಪಕ್ಷದ ಗೆಲುವಲ್ಲ. ಅಭಿನಯ ಮಾಡಲು ನಿಮ್ಮಷ್ಟು ನಮಗೆ ಬರುವುದಿಲ್ಲ. ಎಷ್ಟೇ ಪ್ರಯತ್ನಿಸಿದರೂ ನಾವು ನಿಮ್ಮ ಹಿಂದೆಯೇ ಎಂದು ಕಾಲೆಳೆದರು.
ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಿಮ್ಮಂತೆ ನಾವು ಜನರಿಗೆ ಸುಳ್ಳು ಹೇಳುವುದಿಲ್ಲ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ೨೦ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ತಿಳಿಸಿದರು.
ಇದಕ್ಕೆ ಜೆಡಿಎಸ್ ಸದಸ್ಯ ಎಸ್.ಎಲ್. ಭೋಜೇಗೌಡ ಮಧ್ಯೆ ಪ್ರವೇಶಿಸುತ್ತಿದ್ದಂತೆ, ಏ… ನೀನು ಅಲ್ಲಿ ಹೊಂದಲ್ಲ. ನಿನ್ನ ಸ್ಥಾನ ಇಲ್ಲಿದೆ. ಜೆಡಿಎಸ್ `ಎಸ್' ಎಂದರೆ ಸೆಕ್ಯುಲರ್ ಅಂತಾ. ನೀನು ಸೆಕ್ಯುಲರ್ ಮನುಷ್ಯ ಇತ್ತ ಬಂದುಬಿಡು ಎಂದು ಸದನದಲ್ಲಿಯೇ ಬಹಿರಂಗವಾಗಿ ಆಹ್ವಾನಿಸಿದರು.
ಬೇಸರದಿಂದ ಹೊರಬಂದೆ: ಬುಧವಾರ ಪ್ರಮಾಣವಚನ ಸ್ವೀಕರಿಸಿದ ಸದಸ್ಯ ಪುಟ್ಟಣ್ಣ, ಐದು ಬಾರಿ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿದ್ದೇನೆ. ನನ್ನ ಗೆಲುವು ಶಿಕ್ಷಕರಿಗೆ ಸಲ್ಲಬೇಕು. ಬಿಜೆಪಿಯ ನಡೆಯಿಂದ ಬೇಸತ್ತು ನಾನು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದೇನೆ. ೧೪೧ ದಿನ ಶಿಕ್ಷಕರು ಪ್ರತಿಭಟನೆ ನಡೆಸಿದಾಗ ಸಿಎಂ ಬಳಿ ಹೋಗಿ ಶಿಕ್ಷಕರೊಂದಿಗೆ ಚರ್ಚಿಸಿ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿ ಎಂದು ಕೇಳಿದಾಗ ಅದಕ್ಕೆ ಸಿಎಂ ಒಪ್ಪಲಿಲ್ಲ. ಇದರಿಂದ ಬೇಸತ್ತು ಪಕ್ಷ ತೊರೆದಿದ್ದೇನೆ ಎಂದು ಮನದಾಳದ ಇಂಗಿತ ಸದನದ ಮುಂದಿಟ್ಟರು.