ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಪುತ್ರಿ ಸಂಶಯದಿಂದಲೇ ಬಯಲಾಯ್ತಾ ತಂದೆ ಕೊಲೆ ರಹಸ್ಯ..?

09:42 PM Oct 16, 2024 IST | Samyukta Karnataka

ಬೆಳಗಾವಿ: ಕಳೆದೊಂದು ವಾರದ ಹಿಂದೆ ಸಾವನ್ನಪ್ಪಿದ ಉದ್ಯಮಿ, ಕೋಟ್ಯಾಧೀಶ ಸಂತೋಷ ಪದ್ಮಣ್ಣವರ ಸಾವಿನ ಬಗ್ಗೆ ಪುತ್ರಿ ಸಂಜನಾ ಸಂದೇಹ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮಾಳಮಾರುತಿ ಠಾಣಾ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.
ಅ. ೯ರಂದು ಉದ್ಯಮಿ ಸಂತೋಷ ಪದ್ಮಣ್ಣವರ ಸಾವನ್ನಪ್ಪಿದ್ದರು ಎಂದು ಆತನ ಪತ್ನಿ ಉಮಾ ಪದ್ಮಣ್ಣವರ ಮಗಳಿಗೆ ಮಾಹಿತಿ ನೀಡಿದ್ದರು. ಬೆಂಗಳೂರಿನಲ್ಲಿ ಓದುತ್ತಿದ್ದ ಪುತ್ರಿ ಹಾಗೂ ಕುಟುಂಬದವರು ಆಗಮಿಸಿದ ನಂತರ ಅ. ೧೦ರಂದು ಸದಾಶಿವನಗರದ ಸ್ಮಶಾನದಲ್ಲಿ ಮೃತದೇಹದ ಅಂತ್ಯಸಂಸ್ಕಾರವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಗಿತ್ತು. ಆದರೆ ನಂತರ ಮನೆಗೆ ಬಂದ ಬಳಿಕ ನಡೆದ ಕೆಲವು ಘಟನೆಗಳಿಂದ ಪುತ್ರಿ ಸಂಜನಾ ಅಪ್ಪನ ಸಾವಿನ ಬಗ್ಗೆ ಸಂದೇಹಪಡುವಂತಾಗಿದೆ. ಆರೋಗ್ಯವಂತನಾಗಿದ್ದ ಸಂತೋಷ ಏಕಾಏಕಿ ಸಾವಿಗೆ ಕಾರಣವೇನೆಂದು ಮನೆಯ ಸಿಸಿ ಕ್ಯಾಮೆರಾದಲ್ಲಿ ನೋಡುವಾಗ ಅ. ೮ರಿಂದ ೧೦ರ ತನಕದ ದೃಶ್ಯಾವಳಿಗಳು ಡಿಲೀಟ್ ಆಗಿರುವುದು ಮಗಳ ಸಂಶಯ ಜಾಸ್ತಿಯಾಗಲು ಕಾರಣವಾಯಿತು. ಮನೆಯಲ್ಲಿ ಪತಿ-ಪತ್ನಿಯ ನಡುವೆ ಸಾಮರಸ್ಯ ಕೊರತೆ ಇರುವುದು ತಿಳಿದುಕೊಂಡಿದ್ದ ಪುತ್ರಿ ತಂದೆಯ ಸಾವಿನಲ್ಲಿ ಸಂದೇಹ ವ್ಯಕ್ತಪಡಿಸಿ ಮಾಳಮಾರುತಿ ಠಾಣೆಗೆ ಅ. ೧೫ರಂದು ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಸಾವಿನ ತನಿಖೆ ಚುರುಕುಗೊಳಿಸಿದ್ದಾರೆ.
ಮಂಗಳವಾರ ಮೃತರ ಆಂಜನೇಯನಗರದ ನಿವಾಸಕ್ಕೆ ತೆರಳಿ ಪರಿಶೀಲನೆ ನಡೆಸಿ ಹಲವು ದಾಖಲೆ ಹಾಗೂ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬುಧವಾರ ಮೃತರ ಪತ್ನಿ ಉಮಾ ಪದ್ಮಣ್ಣವರ ಹಾಗೂ ಮನೆಯ ಕೆಲಸದವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಸ್ಮಶಾನದಲ್ಲಿ ಹೂತಿಟ್ಟ ಸಂತೋಷ ಪದ್ಮಣ್ಣವರ ಪಾರ್ಥೀವ ಶರೀರವನ್ನು ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಕೈ ಸೇರಿದ ತಕ್ಷಣವೇ ಇದು ಸಹಜ ಸಾವೋ? ಕೊಲೆಯೋ ಎಂಬುದು ತಿಳಿಯಲಿದೆ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.

ಕೋಟಿ ವ್ಯವಹಾರ: ನೇತ್ರದಾನ
ಮೃತ ಸಂತೋಷ ಪದ್ಮಣ್ಣವರ ಲೇವಾದೇವಿ ಹಣಕಾಸು ವ್ಯವಹಾರ ಮಾಡುತ್ತಿದ್ದು, ಸಂತೋಷ ಫೈನಾನ್ಸ್ ಹೆಸರಿನಲ್ಲಿ ಉದ್ಯಮ ನಡೆಸುತ್ತಿದ್ದರು. ಇದಲ್ಲದೆ ರಿಯಲ್ ಎಸ್ಟೇಟ್, ಗುತ್ತಿಗೆ ಕಾಮಗಾರಿ ಸೇರಿದಂತೆ ಹಲವಾರು ವ್ಯವಹಾರ ಹೊಂದಿದ್ದ ಅವರು ಎರಡು ಮದುವೆ ಮಾಡಿಕೊಂಡಿದ್ದರು ಎಂದು ಗೊತ್ತಾಗಿದೆ.
ಎರಡನೇ ಪತ್ನಿಯ ಬಗ್ಗೆ ವಿಶೇಷ ಅಕ್ಕರೆ ತೋರುತ್ತಿದ್ದ ಪತಿಯ ಬಗ್ಗೆ, ಎರಡನೇ ಪತ್ನಿಗಾಗಿ ಸಾಕಷ್ಟು ಹಣ ಖರ್ಚು ಮಾಡುತ್ತಿದ್ದ ಬಗ್ಗೆ ಮೊದಲ ಪತ್ನಿ ಉಮಾ ಪದ್ಮಣ್ಣವರ ಅವರಿಗೆ ಕೋಪ ಇತ್ತು. ಈ ವಿಚಾರದಲ್ಲಿ ದಂಪತಿ ನಡುವೆ ಸಾಕಷ್ಟು ಜಗಳ ನಡೆಯುತ್ತಿತ್ತು ಎಂದು ತಿಳಿದುಬಂದಿದೆ. ಶೋಕಿವಾಲಾ ಆಗಿದ್ದ ಸಂತೋಷ ಹೊಸ ಹೊಸ ಕಾರುಗಳು, ಬೈಕ್‌ಗಳನ್ನು ಖರೀದಿಸುವ ಹವ್ಯಾಸ ಹೊಂದಿದ್ದ. ಇದೇ ವೇಳೆ ಸಂತೋಷ ಪದ್ಮಣ್ಣವರ ಆಸೆಯಂತೆ ಅವರ ನೇತ್ರದಾನವನ್ನು ನಡೆಸಿದ್ದರೆಂದು ಗೊತ್ತಾಗಿದೆ. ಸದ್ಯ ಮರಣೋತ್ತರ ಪರೀಕ್ಷೆ ವರದಿ ಕೈ ಸೇರಿದ ಮೇಲಷ್ಟೆ ಇದೊಂದು ಕೊಲೆಯೋ ಅಲ್ಲವೋ ಎಂಬುದು ತಿಳಿದುಬರಲಿದೆ.

Tags :
belagavidaughtermurder
Next Article