ಪುದುಚೆರಿಗೆ ಇಂದು ಚಂಡಮಾರುತ
ನವದೆಹಲಿ: ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ವಾಯುಭಾರ ಕುಸಿತ ತೀವ್ರಗೊಂಡಿದ್ದು, ಚಂಡ ಮಾರುತದ ಸ್ವರೂಪ ಪಡೆದಿದೆ. ಇದಕ್ಕೆ ಫೀಂಜಲ್ ಎಂದು ಹೆಸರಿಸಲಾಗಿದೆ. ಫೀಂಜಲ್ ಎನ್ನುವುದು ಸೌದಿ ಅರೇಬಿಯ ನೀಡಿರುವ ಅರಬ್ ಭಾಷೆಯ ಶಬ್ದವಾಗಿದೆ.
ಶುಕ್ರವಾರ ಸಂಜೆಯ ಹೊತ್ತಿಗೆ ಶ್ರೀಲಂಕಾದ ಟ್ರಿಂಕಾಮಲೈನಿಂದ ೨೬೦ ಕಿಲೋ ಮೀಟರ್, ನಾಗಪಟ್ಟಣಂನಿಂದ ೩೧೦ ಕಿಲೋ ಮೀಟರ್, ಪುದು ಚೆರಿಯಿಂದ ೩೬೦ ಕಿಲೋ ಮೀಟರ್ ದೂರದಲ್ಲಿದ್ದು, ಗಂಟೆಗೆ ೬ರಿಂ ೭ ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿತ್ತು. ಶನಿವಾರ ಇದು ಪುದುಚೆರಿ ಸಮೀಪ ಕಾರೈಕಲ್ ಮತ್ತು ಮಹಾಬಲಿಪುರಂ ನಡುವೆ ಭೂಮಿಗೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಕ್ರಮೇಣ ಫೀಂಜಲ್ ಚಂಡಮಾರುತವು ವೇಗ ಪಡೆದುಕೊಳ್ಳಲಿದ್ದು, ಪುದುಚೆರಿಗೆ ಬರುವ ಹೊತ್ತಿಗೆ ಅದರ ವೇಗ ಗಂಟೆಗೆ ೫೫ರಿಂದ ೬೦ ಕಿಲೋ ಮೀಟರ್ ಇರುತ್ತದೆ. ಪುದುಚೆರಿ ಮತ್ತು ತಮಿಳುನಾಡು ಕರಾವಳಿ ಜಿಲ್ಲೆಗಳಲ್ಲಿ ಸಮುದ್ರ ಪ್ರಕ್ಷಬ್ದವಾಗಿದ್ದು, ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಈಗಾಗಲೇ ನಾಗಪಟ್ಟಣಂನಲ್ಲಿ ಭತ್ತದ ಬೆಳೆಗೆ ಅಪಾರ ಹಾನಿಯುಂಟಾಗಿದೆ. ೮೦೦ ಎಕರೆಗೂ ಹೆಚ್ಚು ಪ್ರದೇಶ ನೀರಿನಲ್ಲಿ ಮುಳುಗಿದೆ. ಶಾಲಾ ಕಾಲೇಜುಗಳನ್ನು ಮುಚ್ಚಲಾಗಿದೆ.