ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಪುರುಷರದು ದೃಷ್ಟಿ-ಸ್ತ್ರೀಗೆ ದೂರದೃಷ್ಟಿ

02:37 AM Mar 06, 2024 IST | Samyukta Karnataka

ಜೀವನದಲ್ಲಿ ಹಬ್ಬ ಹರಿದಿನಗಳು, ಆಚರಣೆಗಳು ಮರಳಿ ಮರಳಿ ಬರುತ್ತವೆ ಹಾಗೆ ಮಾರ್ಚ್ ೮ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಬಂದಿದೆ.
೧೯೦೮ರಲ್ಲಿ ನ್ಯೂಯಾರ್ಕ್ನ ಸಿದ್ಧ ಉಡುಪಿನ ಕಾರ್ಖಾನೆಯಲ್ಲಿ ದುಡಿಯುತ್ತಿದ್ದ ಮಹಿಳೆಯರು ಸಮಾನ ವೇತನಕ್ಕಾಗಿ ಎಂಬ ಕಾಸಿನ ದುಡಿಯುವ ಅವಧಿ ರಜೆಯ ಜೊತೆಗೆ ಅವರಿಗೆ ಬೇಕಾಗುವ ಮೂಲಭೂತ ಸೌಕರ್ಯ, ಶೌಚಾಲಯ ಇನ್ನಿತರ ಬೇಡಿಕೆಗಾಗಿ ಹೋರಾಟ ಮಾಡಿದ ಹಿನ್ನೆಲೆಯಲ್ಲಿ ಮುಂದುವರಿದ ರಾಷ್ಟ್ರಗಳಲ್ಲಿ ಹೋರಾಟದ ಹವಾ ಶುರುವಾಯಿತು.
೧೯೧೧ರಲ್ಲಿ ಡೆನ್ಮಾರ್ಕಿನ ೨ನೇ ಅಂತಾರಾಷ್ಟ್ರೀಯ ಕಾರ್ಮಿಕ ಸಮ್ಮೇಳನದಲ್ಲಿ ೧೫ಕ್ಕೂ ಹೆಚ್ಚು ದೇಶಗಳು ಪ್ರತಿನಿಧಿಸಿದ್ದು ಮಾರ್ಚ್ ೮ರಂದು ವಿಶ್ವವ್ಯಾಪಿಯಾಗಿ ಗಂಭೀರ ಹೋರಾಟದ ಹಿನ್ನೆಲೆಯಲ್ಲಿ ೧೯೭೫ರಲ್ಲಿ ವಿಶ್ವಸಂಸ್ಥೆಯು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲು ಕರೆ ನೀಡಿದ್ದು ಇತಿಹಾಸ.
ಮುಂದುವರಿಯುತ್ತಿರುವ ರಾಷ್ಟ್ರ ಭಾರತದಲ್ಲೂ ಸಾವಿರಾರು ವರ್ಷಗಳಿಂದ ಹೋರಾಟ ನಡೆದಿದೆ, ನಡೆಯುತ್ತಿದೆ ಎಂಬುದು ಗಮನಾರ್ಹವಾದ ವಿಚಾರ. ಶರಣರು, ಸಂತರು, ದಾಸರು, ದಾರ್ಶನಿಕರು ಪ್ರವಾದಿಗಳು ಹುಟ್ಟಿದ ರಾಷ್ಟçದಲ್ಲಿ ಮಹಿಳೆಯರ ಪರವಾಗಿ ಹೋರಾಟ ನಡೆಸಿ ಮಹಿಳೆಯರ ದನಿಗೆ ಧ್ವನಿಗೂಡಿಸಿದವರು ಅಭಿಮಾನದ ಪ್ರತೀಕ, ಸರ್ವಜ್ಞನ ತ್ರಿಪದಿಗಳಲ್ಲಿ ಜನಪದ ಸಾಹಿತ್ಯದಲ್ಲೂ ವಚನ ಸಾಹಿತ್ಯದಲ್ಲಿ, ದಾಸ ಸಾಹಿತ್ಯದಲ್ಲಿ ಪ್ರತಿಧ್ವನಿಸಿತು.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಸಂವಿಧಾನ, ದಯಾನಂದ ಸರಸ್ವತಿಯವರ ವಿಚಾರಧಾರೆ, ಸಹಧರ್ಮ ಪದ್ಧತಿಯಿಂದ ವಿಧವೆಯನ್ನು ರಕ್ಷಿಸಿದ ರಾಜ ರಾಮ್ ಮೋಹನ್ ರಾಯ್‌ರ ನಿಲುವು, ಹೆಣ್ಣು ಸಮಾಜದ ಕಣ್ಣು ಎಂದ ಜನಪದ ಸಾಹಿತ್ಯ ಇವುಗಳು ಮಹಿಳೆಯರ ವಿಚಾರವಾಗಿ ಧ್ವನಿಯ ಜೊತೆಗೆ ಆತ್ಮವಿಶ್ವಾಸವನ್ನು ಕೊಟ್ಟಂತಹ ನಿಲುವನ್ನು ಕಾಣುತ್ತೇವೆ. ೧೯೯೫ರಲ್ಲಿ ಬೀಜಿಂಗ್‌ನಲ್ಲಿ ನಡೆದ ಸಮ್ಮೇಳನದಲ್ಲಿ ಶಾಂತಿ, ಆರೋಗ್ಯ, ಶಿಕ್ಷಣ ಇವು ನೀಲಿ ನಕ್ಷೆಯ ಬುನಾದಿಯಾಗಿತ್ತು. ಮಾನವ ಹಕ್ಕು ಮಹಿಳೆಯ ಹಕ್ಕಾಗಬೇಕು ಎಂಬ ಪಾಶ್ಚಾತ್ಯರ ಪೋಷಣೆಯಾದರೆ `ಮಾತೃದೇವೋಭವ' ಎಂಬ ಪ್ರಾಚೀನ ಪರಿಕಲ್ಪನೆ ಎಂತಹ ಉದಾತ್ತವಾದದ್ದು. ಇದರ ಮಧ್ಯೆ ಹೆಣ್ಣು ಮಕ್ಕಳ ಭ್ರೂಣ ಹತ್ಯೆ ಎಂಬ ಸಾಮಾಜಿಕ ಪಿಡುಗು ಸಮಾಜದ ಅಸಮತೋಲನಕ್ಕೆ ಎಡೆಮಾಡಿದ್ದು ದೊಡ್ಡ ಸವಾಲಾಗಿರುವುದೂ ವಿಪರ್ಯಾಸ. ಜನಸಂಖ್ಯೆಯಲ್ಲಿ ಶೇ. ೫೦ ಮೇಲ್ಪಟ್ಟ ಪ್ರತಿನಿಧಿಸುವ ಮಹಿಳಾ ವಿಭಾಗಕ್ಕೆ ಇಂದು ದೊಡ್ಡ ಕೊಡಲಿ ಪೆಟ್ಟು ಮಹಿಳಾ ವಿಚಾರ ಸಾಂಕೇತಿಕವಾಗದೆ ಸಾಮಾಜಿಕವಾದಾಗ ಬದುಕಿದ ಸಂಘರ್ಷಕ್ಕೆ ಎಡೆಮಾಡದೆ ಸಾಮರಸ್ಯದಿಂದ ಇದ್ದರೆ ಸಮಾನತೆಗೆ ಅರ್ಥ ಬರುತ್ತದೆ. ಮಾರ್ಚ್ ತಿಂಗಳಲ್ಲಿ ಬರುವ ಈ ದಿನಾಚರಣೆ ನಿರಂತರವಾಗಿ ಆಚರಣೆಯಾಗುತ್ತಿದೆಯೇ ಹೊರತು ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ಕೊಲೆ, ಹೆಣ್ಣು ಮಕ್ಕಳ ಮೇಲೆ ಲೈಂಗಿಕ ಕಿರುಕುಳ ನಿರಂತರವಾಗಿ ನಡೆಯುತ್ತಿರುವುದು ದುರದೃಷ್ಟಕರ.
ಇತಿಹಾಸದತ್ತ ಕಣ್ಣು ಹಾಯಿಸಿದರೆ ಸಮಾಜಮುಖಿಯಾಗಿ ಆದರ್ಶವಾದ ಅನೇಕ ಮಹಿಳೆಯರ ಕೊಡುಗೆಯನ್ನು ಕಾಣುತ್ತೇವೆ. ಪ್ರತಿಯೊಂದು ಜೀವವು ಬೆಳಕಾಗಬೇಕು ಅಂತಹ ಬೆಳಕಿನಲ್ಲಿ ಎದ್ದು ಕಾಣುವ ಪ್ರತಿಬಿಂಬ "ಅಕ್ಕ" ಅಕ್ಕಮಹಾದೇವಿ ಜ್ಞಾನದ ದೀವಿಗೆ, ೧೨ನೇ ಶತಮಾನದಲ್ಲಿ ಪ್ರಕಾಶಿಸಿರುವ ಈ ದೀಪಗಳನ್ನು ನೋಡಲು ಮತ್ತೊಂದು ದೀಪದ ಬೆಳಕು ಬೇಕಿಲ್ಲ.
ಜೀವನದಲ್ಲಿ ಮಹಿಳೆ ಮಾತೆಯಾಗಿ, ಮಡದಿಯಾಗಿ, ಮಗಳಾಗಿ, ಸಹೋದರಿಯಾಗಿ ಅನೇಕ ಪಾತ್ರಗಳಲ್ಲಿ ಪುರುಷನಿಗೆ ಸಾಟಿಯಾಗುತ್ತಾರೆ. ಕಾಲನನ್ನು ಗೆದ್ದ ಸಾವಿತ್ರಿ ಕರ್ಮವನ್ನು ಗೆದ್ದ ಗಾಯತ್ರಿ, ಯಜ್ಞವಲ್ಕ್ಯನನ್ನು ಗೆದ್ದ ಗಾರ್ತಿಯ ಒಂದೆಡೆಯಾದರೆ, ಇಂದಿನ ದಿನಮಾನಗಳಲ್ಲಿ ಬದುಕಿನಲ್ಲಿ ಭ್ರಷ್ಟಾಚಾರ ಹಾಸು ಹೊಕ್ಕಾಗಿರುವ ನಮಗೆ ಆದರ್ಶವಾದ ಆಯ್ದಕ್ಕಿ ಲಕ್ಕಮ್ಮ, ಪತಿ ಅಗತ್ಯಕ್ಕಿಂತ ಹೆಚ್ಚು ಅಕ್ಕಿ ತಂದಾಗ ಅಕ್ಕಿ ಆಸೆ ಸಾಮಾಜಿಕ ಪಿಡುಗು ಎಂದು ತಿಳಿ ಹೇಳಿದ ಸಾಧ್ವಿ ಅವಳ ಸಂದೇಶ ಇಂದು ಅನಿವಾರ್ಯ ಎನ್ನುವ ಆರ್ಥಿಕ ನೀತಿಯ ಸಂಕೇತ ಮಟ್ಟಕ್ಕೆ ಬಂದಿರುವುದು ದುರಂತ. ದುಗ್ಗಳೆ, ಸೂಳೆ ಸಂಕವ್ವೆ, ಅಕ್ಕ ನಾಗಮ್ಮ ಮುಕ್ತಾಯಕ್ಕ ಸತ್ರಕ್ಕ ಇಂತಹ ಅನೇಕ ಹಿಂದುಳಿದ ಮಹಿಳೆಯರು ಸಮಾಜಕ್ಕೆ ಆದರ್ಶವಾಗುತ್ತಾರೆ.
ಸಮಾಜದ ಆರೋಗ್ಯ ಇರುವುದು ಪ್ರಾಮಾಣಿಕ ಬದುಕಿನ ಸೇವೆಯಲ್ಲಿ ಎಂದು ಬದುಕನ್ನು ಮುಡುಪಾಗಿಟ್ಟವರ ಬದುಕುವ ನಮಗೆಲ್ಲಾ ಆದರ್ಶವಾಗಿ ಕಂಡಾಗ ಮಾತ್ರ ಅವರು ಆದರ್ಶವಾಗುತ್ತಾರೆ. ಇಂತಹವರ ಪ್ರೇರಣೆ ಮಹಿಳೆಯರಿಗೆ ಮೇಲ್ಪಂಕ್ತಿಯಾಗಬೇಕು. ಧಾರ್ಮಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ, ರಾಜಕೀಯವಾಗಿ ಮಹಿಳೆ ಸಮಾಜದ ಬೆಳವಣಿಗೆಗೆ ಅನಿವಾರ್ಯ ಹಾಗೂ ಅವಶ್ಯವಾದಾಗ ಮಾತ್ರ ಉತ್ತಮ ಸಮಾಜದ ಅವಿಭಾಜ್ಯ ಅಂಗವಾಗಲಿಕ್ಕೆ ಸಾಧ್ಯವಾಗುತ್ತದೆ. ನಮಗೆ ಉತ್ತಮವಾದ ಸಂವಿಧಾನವಿದೆ ಅದು ನಮ್ಮ ಬದುಕಿನಲ್ಲಿ ಸಂವಿಧಾನವಾಗಬೇಕು. ಬಾಲಗಂಗಾಧರ ತಿಲಕರು ಸ್ವಾತಂತ್ರ್ಯವನ್ನು ನಮ್ಮ ಜನ್ಮಸಿದ್ಧ ಹಕ್ಕು ಎಂದು ಘೋಷಿಸಿದ ಹಿನ್ನೆಲೆಯಲ್ಲಿ ಬಾಳುವ ಬದುಕು ನಿಮ್ಮದು ಎಂದು ಮಹಿಳೆಯರಿಗೆ ಕರೆ ಕೊಟ್ಟ ಡಾ.ರಾಜಾ ರಾಮ್ ಮೋಹನ್‌ರಾಯ್ ಅವರ ಚಿಂತನೆಯ ಹಿನ್ನೆಲೆಯಲ್ಲಿ ಮಹಿಳೆಯರ ಬದುಕಿನ ಪ್ರಾಮಾಣಿಕತೆ ನಮ್ಮ ಸಂಸ್ಕೃತಿಯ ಸಂಕೇತವಾಗಿ ಹೊರಹೊಮ್ಮಿದಾಗ ಮಹಿಳಾ ದಿನಾಚರಣೆ ಅರ್ಥ ಬರುತ್ತದೆ. ಇದು ಬರೀ ಆಚರಣೆಯಾಗದೆ ಅನುಭವಿಸಿ, ಅರ್ಥೈಸಿ, ಆರಾಧಿಸಿದಾಗ ಮಾತ್ರ ಮಹಿಳಾ ದಿನಾಚರಣೆಯ ಪರಿಪೂರ್ಣತೆ ಎಂದು ತಿಳಿದು ಶುಭ ಹಾರೈಸುತ್ತೇನೆ.
ಕಂದಾಯ ಇಲಾಖೆಯ ಆಡಳಿತದಲ್ಲಿ ಅತ್ಯುತ್ತಮ ಕಾನೂನುಗಳನ್ನು ತಂದು ಇಂದು ಸಹ ಇಲಾಖೆಯಲ್ಲಿ ಚಾಲ್ತಿಯಲ್ಲಿದೆ ಎಂದರೆ ಆಕೆಯ ಚಾಣಕ್ಯ ಮುತ್ಸದ್ದಿತನಕ್ಕೆ ಸಾಕ್ಷಿ ಬೆಳವಡಿ ಮಲ್ಲಮ್ಮ ಬೆಳಗಾವಿ ಜಿಲ್ಲೆಯ ವೀರರಾಣಿ ಮರಾಠರ ವಿರುದ್ಧ ಹೋರಾಡಲು ಮಹಿಳಾ ಸೇನೆಯನ್ನು ಕಟ್ಟಿದ ವೀರಸೇನಾನಿ ಶೂರನಾದ ಶಿವಾಜಿಗೆ ದೇಸಾಯಿ ವಂಶದ ಮಲ್ಲಮ್ಮನನ್ನು ಸೋಲಿಸಲು ಆಗದ್ದು ಆಕೆಯ ಧೀರತ್ವಕ್ಕೆ ಸಾಕ್ಷಿ. ಸ್ವಾತಂತ್ರ್ಯ ಹೋರಾಟ ಸಂಗ್ರಾಮದಲ್ಲಿ ತನಗೆ ಅನಿವಾರ್ಯ ಅನ್ನುವ ಸಮಯದಲ್ಲಿ ಕಿತ್ತೂರಿನ ಆಡಳಿತವನ್ನು ಕೈಗೆತ್ತಿಕೊಂಡು ಬ್ರಿಟಿಷರ ವಿರುದ್ಧ ಹೋರಾಟ ಮಾಡಿದವರಲ್ಲಿ ಅಗ್ರಗಣ್ಯಳಾಗಿ ಪ್ರಥಮ ಮಹಿಳಾ ಶಕ್ತಿಯಾಗಿ ಹೊರಹೊಮ್ಮಿದ ವೀರರಾಣಿ ಕಿತ್ತೂರಾಣಿ ಚೆನ್ನಮ್ಮ ದೊಡ್ಡ ಆದರ್ಶ.
ಮಂಗಳೂರಿನ ಉಳ್ಳಾಲದ ರಾಣಿ ಅಬ್ಬಕ್ಕದೇವಿ ಪೋರ್ಚುಗೀಸರ ವಿರುದ್ಧ ಹೋರಾಡಿದ ಇತಿಹಾಸ ಎಲ್ಲರ ಗಮನಸೆಳೆಯುವಂತದ್ದು. ೨೦ನೇ ಶತಮಾನದ ಮತ್ತೊಂದು ಸ್ತ್ರೀ ಶಕ್ತಿ ಇಂದಿರಾಗಾಂಧಿಯವರು ಪ್ರಜಾಪ್ರಭುತ್ವದ ಪ್ರತಿನಿಧಿಯಾಗಿ ಭಾರತದ ಪ್ರಧಾನಿಯಾಗಿ ದೀರ್ಘಕಾಲ ಆಳಿದ ಉಕ್ಕಿನ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾದದ್ದು ವಿಶೇಷವಾಗಿ ಮಹಿಳೆಯರ ಹೆಮ್ಮೆ. ಇತ್ತೀಚಿನ ದಿನಮಾನಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶಗಳು ಒದಗಿ ಬಂದಿರುವುದು ಒಂದು ಉತ್ತಮ ಬೆಳವಣಿಗೆ. ಆದರೂ ಮಹಿಳೆ ದೌರ್ಜನ್ಯ ಕಳವಳಕಾರಿಯಾಗಿದ್ದು ಸಮಾಜದಲ್ಲಿ ಮನೋವೈಜ್ಞಾನಿಕತೆ ಬಗ್ಗೆ ಅರಿವು ಮೂಡಬೇಕು. ನಾಗರಿಕತೆಯ ಬೆಳವಣಿಗೆಯ ಜೊತೆಗೆ ಅದರ ಅರ್ಥವನ್ನು ಅರಿಯುವ ವಿಚಾರಗಳು ಬಂದಾಗ ಮಾತ್ರ ಅದು ಸಾಧ್ಯ. ಶಿಕ್ಷೆ ಮಾತ್ರ ಮದ್ದಲ್ಲ. ಫ್ಯಾಷನ್ ಎಂಬುದು ಪ್ರಚೋದನೆಯಾಗದೆ ಹೆಣ್ಣು ಮಕ್ಕಳು ಈ ವಿಚಾರದಲ್ಲಿ ಪ್ರಬುದ್ಧತೆಯಿಂದ ನಡೆದುಕೊಂಡಾಗ ಸುಭದ್ರ ಸಮಾಜ ನಿರ್ಮಾಣ ಮಾಡಲು ಸಹಕಾರಿಯಾಗುತ್ತದೆ. ಪುರುಷರಿಗೆ ದೃಷ್ಟಿ ಇದ್ದರೆ ಮಹಿಳೆಯರಿಗೆ ದೂರದೃಷ್ಟಿ ಇರಬೇಕು. ಮಹಿಳೆಯ ಹುಟ್ಟೇ ಒಂದು ಪವಾಡ ಎಂಬ ಕವಿಯ ವಾಣಿಗೆ ತಕ್ಕಂತೆ ಬದುಕು ರೂಪಿಸಿಕೊಳ್ಳಲು ಪ್ರಯತ್ನ ಮಾಡೋಣ.

Next Article