ಪೊಲಿಟಿಕಲ್ ಆಟಗಾರರ ಖರೀದಿ ಪ್ರಕ್ರಿಯೆ
ಮೊನ್ನೆ ಮೊನ್ನೆ ಐಪಿಎಲ್‌ನಲ್ಲಿ ಕ್ರಿಕೆಟ್ ಆಟಗಾರರ ಹರಾಜು ನೋಡಿದ ತಿಗಡೇಸಿಯು… ರಾಜಕೀಯ ಕ್ಷೇತ್ರದಲ್ಲಿಯೂ ಸಹ ಇದೇ ನಮೂನಿ ಹರಾಜು ಹಾಕಿ ಚುನಾವಣೆಗೆ ನಿಲ್ಲಿಸಬಹುದು. ಎಲ್ಲ ಪಕ್ಷಗಳು ಒಂದೆಡೆ ಸೇರಿ ರಾಜಕೀಯ ಆಟಗಾರರನ್ನು ಖರೀದಿಸಿದರೆ ಪಕ್ಷಕ್ಕೆ ಒಳ್ಳೆಯದಲ್ಲವೇ? ಈ ಕೆಲಸ ನಾನೇ ಮಾಡಬೇಕು ಎಂದು ಅಂದುಕೊಂಡು ಸೋದಿಮಾಮಾ, ಅಮ್ಮೋರು, ಲೇವೇಗೌಡರು, ಮುಂಬೈ ಕಾಕಾ, ದೋ ನಾಥ್ ಗುಂದೆ, ಸಮತಾದೀದಿ, ಬಿಹಾರ ಕುತೀಸ್ಕುಮಾರ, ಆಂಧ್ರದ ಕುರಿಗಡ್ಡದ ಚಂದ್ರಪ್ಪ, ತೆಲಂಗಾಣದ ಹುಡುಗ ಸೇರಿದಂತೆ ಅನೇಕರನ್ನು ಸೇರಿಸಿಕೊಂಡು ವಾಟ್ಸಾಪ್ ಗ್ರೂಪ್ ಮಾಡಿ ಅದಕ್ಕೆ ಹರಾಜು-ಗ್ಯಾರೇಜು ಎಂದು ಹೆಸರಿಟ್ಟು ಗ್ರೂಪ್‌ನಲ್ಲಿ ಹಾಯ್ ಎಂದು ಹಾಕಿ ನೋಡಿ… ಈಗ ಹೇಗಾಗಿದೆ ಎಂದರೆ ಇಲ್ಲಿದ್ದವರು ಅಲ್ಲಿ-ಅಲ್ಲಿದ್ದವರು ಇಲ್ಲಿ ಎನ್ನುವ ಹಾಗೆ ಆಗಿದೆ. ಆದ್ದರಿಂದ ಇನ್ನು ಮುಂದೆ ನೀವೇ ಪೊಲಿಟಿಕಲ್ ಆಟಗಾರರನ್ನು ಖರೀದಿಸಿ ಅವರನ್ನು ಚುನಾವಣೆಗೆ ನಿಲ್ಲಿಸಿ ಎಂದು ಹೇಳಿದರು. ನಮಗೆ ಬೇಕಾದಷ್ಟು ಆಟಗಾರರನ್ನು ಖರೀದಿ ಮಾಡಲು ಆಗುವುದಿಲ್ಲ. ಪ್ರಮುಖ, ಸ್ಟ್ರಾಂಗ್ ಆಟಗಾರರನ್ನಷ್ಟೇ ಖರೀದಿ ಮಾಡುತ್ತೇವೆ ಎಂದು ನಿರ್ಧರಿಸಿದರು. ಆಟಗಾರರ ಹರಾಜು ಹಾಕುವ ದಿನವನ್ನು ನಿರ್ಧರಿಸಲಾಯಿತು. ಎಲ್ಲೆಡೆ ಪೋಸ್ಟರ್ ಅಂಟಿಸಲಾಯಿತು. ಯಾವ್ಯಾವ ಆಟಗಾರರು ಇರಬೇಕು ಎಂದು ಮೊದಲೇ ಲಿಸ್ಟ್ ಮಾಡಿಕೊಂಡು ಅವರನ್ನು ಕರೆಯಿಸಲಾಯಿತು. ಎಲ್ಲರೂ ಮೈದಾನದಲ್ಲಿ ಸೇರಿದರು. ತಿಗಡೇಸಿ ಮೈಕ್ ಹಿಡಿದುಕೊಂಡು ಇಂತಹ ಆಟಗಾರನನ್ನು ಸೋದಿಮಾಮಾ ಇಷ್ಟಪಟ್ಟಿದ್ದಾರೆ. ಇವರು ಇಷ್ಟಕ್ಕೆ ಅನ್ನುತ್ತಿದ್ದಾರೆ ಎಂದಾಗ… ಅಮ್ಮೋರು.. ಅವರು ಅಷ್ಟು ಕೊಟ್ಟರೆ ನಾನು ಇಷ್ಟು ಅಂದರು. ಮುಂಬೈ ಕಾಕಾ ಇವರು ಎಷ್ಟು ಹೇಳಿದ್ದಾರೋ ಅದಕ್ಕಿಂತ ಒಂದು ರೂ ಹೆಚ್ಚಿಗೆ ಅಂದರು. ಪಂ. ಲೇವೇಗೌಡರು ಮಾತ್ರ…ನಾನು ಖರೀದಿ ಮಾಡುತ್ತೇನೆ. ಆಮೇಲೆ ಅವರೇ ನನಗೆ ಕೊಡಬೇಕು ಅಂದರು. ಅದಕ್ಕೆ ಎಲ್ಲರೂ ಮುಖ ಮುಖ ನೋಡಿಕೊಂಡರು. ಈ ಎಲ್ಲ ಆಟಗಾರರು ಗುಸುಗುಸು ಮಾತನಾಡಿಕೊಂಡು…. ಮೈಕ್ ಇಸಿದುಕೊಂಡು ನೆರೆದ ಜನಗಳೇ… ಇಲ್ಲಿ ನಮ್ಮನ್ನು ಖರೀದಿ ಮಾಡುವವರು-ನಾವು ಇಬ್ಬರೂ ಆಟಗಾರರೇ… ಅವರನ್ನೂ ಸಹ ಖರೀದಿಸಬಹುದು. ಆದ್ದರಿಂದ ನಾವೆಲ್ಲರೂ ಸೇರಿ ನಮಗೆ ಒಬ್ಬೊಬ್ಬರೆಂದು ಅವರನ್ನೇ ಖರೀದಿ ಮಾಡುತ್ತೇವೆ ಎಂದು ಕೂಗಿ ವೇದಿಕೆಯತ್ತ ನೋಡಿದಾಗ… ಖರೀದಿ ಮಾಡಲು ಬಂದವರು ಜಾಗ ಖಾಲಿ ಮಾಡಿದ್ದರು.