ಪೊಲೀಸ್ ಇಲಾಖೆಯ ವೈಫಲ್ಯಕ್ಕೆ ಸಾಕ್ಷಿ
ಹುಬ್ಬಳ್ಳಿ: ಯುವತಿ ಅಂಜಲಿ ಅಂಬಿಗೇರ ಕೊಲೆ ಪ್ರಕರಣದ ಆರೋಪಿಯನ್ನು ಈವರೆಗೂ ಪೊಲೀಸರು ಬಂಧಿಸದಿರುವುದು ಪೊಲೀಸ್ ಇಲಾಖೆಯ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಪೊಲೀಸರು ಎಚ್ಚೆತ್ತುಕೊಂಡಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ ಎಂದು ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ಅಂಜಲಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರೋಪಿಯ ಬೆದರಿಕೆ ಕುರಿತು ಪೊಲೀಸರ ಗಮನಕ್ಕೆ ತಂದ ತಕ್ಷಣ ಕ್ರಮ ಕೈಗೊಳ್ಳಬೇಕಿತ್ತು. ಕೊಲೆ ಅಮಾನವೀಯ ಘಟನೆ. ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಸುರಕ್ಷಿತವಾಗಿ ಬದುಕಲು ಅಸಾಧ್ಯವಾದ ವಾತಾವರಣ ಹುಬ್ಬಳ್ಳಿಯಲ್ಲಿ ನಿರ್ಮಾಣವಾಗಿದೆ. ಪ್ರೇಮ ಪ್ರಕರಣದಲ್ಲಿ ಯುವತಿಯರನ್ನು ಅಮಾನುಷವಾಗಿ ಕೊಲೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದರು.
ಯುವತಿಯ ಸಹೋದರಿಯರನ್ನು ದತ್ತುಪಡೆದು ಶಿಕ್ಷಣ ಕೊಡಲಾಗುವುದು. ಸರಕಾರ ಅಂಜಲಿ ಕುಟುಂಬಕ್ಕೆ ಮನೆ ನೀಡಬೇಕು ಹಾಗೂ ಆರ್ಥಿಕ ನೆರವನ್ನು ನೀಡಬೇಕು ಎಂದರಲ್ಲದೆ ಶುಕ್ರವಾರ ಅಂಬಿಗರ ಸಮಾಜದ ಶ್ರೀಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.