For the best experience, open
https://m.samyuktakarnataka.in
on your mobile browser.

ಪೋಲಾಗಿರುವ ನೀರು ಮತ್ತೆ ತುಂಬಿಕೊಳ್ಳಲಿದೆ

04:18 PM Aug 13, 2024 IST | Samyukta Karnataka
ಪೋಲಾಗಿರುವ ನೀರು ಮತ್ತೆ ತುಂಬಿಕೊಳ್ಳಲಿದೆ

ಬೆಂಗಳೂರು: ಹವಾಮಾನ ಮುನ್ಸೂಚನೆಯಂತೆ ತುಂಗಭದ್ರಾ ಜಲಾಶಯದಿಂದ ಪೋಲಾಗಿರುವ ನೀರು ಮತ್ತೆ ತುಂಬಿಕೊಳ್ಳಲಿದ್ದು, ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ೧೯ ಕೊಚ್ಚಿ‌ ಹೋಗಿದ್ದನ್ನು ಪರಿಶೀಲಿಸಿರುವ ಅವರು ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ತುಂಗಭದ್ರಾ ಜಲಾಶಯದ ನಿರ್ವಹಣೆ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸಿಲ್ಲ. ಬಿಜೆಪಿಯವರು ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಆದರೆ ಇದು ರಾಜಕೀಯ ಮಾಡುವ ವಿಷಯವಲ್ಲ. ತುಂಗಭದ್ರಾ ಮಂಡಳಿಯ ನೇತೃತ್ವವನ್ನು ಭಾರತ ಸರ್ಕಾರ ನೇಮಿಸಿದ ಅಧ್ಯಕ್ಷರು ನಿರ್ವಹಿಸುತ್ತಾರೆ. ಆಂಧ್ರ, ಕರ್ನಾಟಕ, ತೆಲಂಗಾಣ ರಾಜ್ಯದ ಸದಸ್ಯರು ಮಂಡಳಿಯಲ್ಲಿರುತ್ತಾರೆ. ಈ ಜಲಾಶಯದ ನಿರ್ವಹಣೆಯ ಜವಾಬ್ದಾರಿ ತುಂಗಭದ್ರಾ ಮಂಡಳಿಗೆ ಸೇರಿರುತ್ತದೆ. ಆದರೂ ಈ ವಿಷಯದಲ್ಲಿ ನಾನು ಯಾರನ್ನೂ ದೂಷಿಸುವುದಿಲ್ಲ. ತುಂಗಭದ್ರಾ ಜಲಾಶಯದಲ್ಲಿ ಪ್ರಸ್ತುತ 105 ಟಿಎಂಸಿ ನೀರು ತುಂಬಿತ್ತು. ಆದರೆ ತುಂಡಾಗಿರುವ ಗೇಟ್ ನ ದುರಸ್ತಿಗಾಗಿ 50 ರಿಂದ 60 ಟಿಎಂಸಿ ನೀರು ಹೊರಗೆ ಬಿಡಬೇಕಾಗಿದೆ. ಈ ವರ್ಷದ ಅಕ್ಟೋಬರ್ ವರೆಗೆ ಮಳೆಯಾಗಲಿದ್ದು, ಜಲಾಶಯದಲ್ಲಿ ಪುನ: ನೀರು ತುಂಬುವ ಸಾಧ್ಯತೆಯಿದೆ. ಹವಾಮಾನ ಮುನ್ಸೂಚನೆಯಂತೆ ಆಗಸ್ಟ್ 15 ರ ನಂತರ ಪುನ: ಮಳೆಬರುವ ನಿರೀಕ್ಷೆಯಿದೆ. ಆದ್ದರಿಂದ ಈಗ ಪೋಲಾಗಿರುವ ನೀರು ಮತ್ತೊಮ್ಮೆ ಜಲಾಶಯದಲ್ಲಿ ತುಂಬಲಿದ್ದು, ರೈತರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದಿದ್ದಾರೆ.

Tags :