For the best experience, open
https://m.samyuktakarnataka.in
on your mobile browser.

ಪೌತಿ ಖಾತೆ ಸಮಸ್ಯೆ ತ್ವರಿತ ಕ್ರಮ ಅಗತ್ಯ

02:30 AM Nov 05, 2024 IST | Samyukta Karnataka
ಪೌತಿ ಖಾತೆ ಸಮಸ್ಯೆ ತ್ವರಿತ ಕ್ರಮ ಅಗತ್ಯ

ರಾಜ್ಯದಲ್ಲಿ ಒಟ್ಟು ೪೮.೮೮ ಲಕ್ಷ ಪೌತಿ ಖಾತೆಗಳು ಪೂರ್ವಜರ ಹೆಸರಿನಲ್ಲೇ ಉಳಿದುಕೊಂಡಿದೆ ಎಂದರೆ ಅದಕ್ಕೆ ಜನಸಾಮಾನ್ಯರು ಕಾರಣ ಅಲ್ಲವೇ ಅಲ್ಲ. ಸಂಬಂಧಪಟ್ಟ ಗ್ರಾಮಲೆಕ್ಕಿಗ, ತಹಸೀಲ್ದಾರ್, ಉಪವಿಭಾಗಾಧಿಕಾರಿ ಹೊಣೆಗಾರರು. ಅವರ ಪ್ರಧಾನ ಕೆಲಸವೇ ಇದು. ಎಷ್ಟೋ ಗ್ರಾಮಗಳಲ್ಲಿ ನಮ್ಮ ತಾತನ ಕಾಲದಲ್ಲಿ ಮಾರಿದ್ದ ಭೂಮಿಯ ಖಾತೆ ಈಗಿನ ರೈತನ ಮೊಮ್ಮಗನ ಹೆಸರಿಗೆ ವರ್ಗಾವಣೆ ಆಗೇ ಇಲ್ಲ. ಎಲ್ಲದ್ದಕ್ಕೂ ಸಾವಿರಾರು ರೂ. ಸುರಿಯಬೇಕು. ರೈತನ ಬಳಿ ಇರುವುದಿಲ್ಲ. ಹಣ ಕೊಟ್ಟರೂ ಕೆಲಸವಾಗುತ್ತೆ ಎಂಬ ನಂಬಿಕೆ ಇರುವುದಿಲ್ಲ. ಜನ ಪ್ರತಿನಿಧಿಗಳು ಇದನ್ನು ಪರಿಶೀಲಿಸಿ ಅವರು ಕ್ರಮ ಕೈಗೊಳ್ಳಬೇಕು. ಪ್ರತಿತಿಂಗಳೂ ಪ್ರತಿ ತಾಲೂಕಿನಲ್ಲಿ ಪರಿಶೀಲನಾ ಸಭೆ ನಡೆಸಿದರೆ ಎಲ್ಲವೂ ಕ್ರಮಬದ್ಧವಾಗಿ ನಡೆಯುತ್ತದೆ. ಗ್ರಾಮಲೆಕ್ಕಿಗ, ತಹಸೀಲ್ದಾರ್, ಉಪವಿಭಾಗಾಧಿಕಾರಿಗಳಿಗೆ ಬಡ್ತಿ ನೀಡಬೇಕಾದರೆ ಎಷ್ಟು ಪೌತಿ ಖಾತೆಗಳನ್ನು ಬದಲಿಸಿಕೊಟ್ಟಿದ್ದಾರೆ ಎಂಬುದನ್ನು ನೋಡಬೇಕು. ಅಲ್ಲದೆ ಸಿ.ಆರ್. ನಲ್ಲಿ ಇದು ನಮೂದಾಗಬೇಕು. ಆಗ ಗ್ರಾಮ ಮಟ್ಟದಲ್ಲಿ ಎಲ್ಲ ದಾಖಲೆಗಳು ಸಕಾಲಿಕ ಮಹತ್ವ ಪಡೆಯಲು ಸಾಧ್ಯ. ರೈತರಿಗೆ ಭೂಮಿ ತಾಯಿಯೇ ಎಲ್ಲವೂ. ಅದಕ್ಕೆ ಸಂಬಂಧಿಸಿದ ದಾಖಲೆಗಳು ಭಗವದ್ಗೀತೆ ಇದ್ದಂತೆ. ಅದೇ ಅವನ ಜೀವನದಲ್ಲಿ ನೋಡುವುದಕ್ಕೆ ಆಗುವುದಿಲ್ಲ ಎಂದರೆ ಅವನು ಯಾವ ಆಸೆ ಇಟ್ಟುಕೊಂಡು ಬದುಕಬೇಕು. ಜನಸಾಮಾನ್ಯರು ಪ್ರತಿದಿನ ಕಚೇರಿಗೆ ಅಲೆದು ಅಲೆದು ಸುತ್ತಾಗುತ್ತಾರೆಯೇ ಹೊರತು ಕೆಲಸವಾಗುವುದಿಲ್ಲ. ಜಿಲ್ಲಾಧಿಕಾರಿಗಳು ಆಯಾ ಜಿಲ್ಲೆಗೆ ರಾಜರಿದ್ದಂತೆ. ಅವರು ಹೇಳಿದಂತೆ ನಡೆಯುತ್ತದೆ. ಹಿಂದೆ ವಿಜಯಪುರ ಜಿಲ್ಲಾಧಿಕಾರಿ ಬಡ ಮಹಿಳೆಯ ಕೆಲಸ ಮಾಡಿಕೊಡಲಿಲ್ಲ ಎಂದು ಗುಮಾಸ್ತನಿಗೆ ಕಪಾಳಮೋಕ್ಷ ಮಾಡಿದ್ದರು. ಅದನ್ನು ಪ್ರತಿಭಟಿಸಿ ಸರ್ಕಾರಿ ನೌಕರರು ಮಿಂಚಿನ ಮುಷ್ಕರ ನಡೆಸಿದ್ದರು. ಜಿಲ್ಲಾಧಿಕಾರಿ ಪರ ವಿದ್ಯಾರ್ಥಿಗಳು ಬೀದಿಗೆ ಇಳಿದರು. ಬಡ ಮಹಿಳೆಗೆ ನ್ಯಾಯ ಸಿಕ್ಕಿತು. ಈಗ ಅಂಥ ಅಧಿಕಾರಿಗಳನ್ನು ಕಾಣುವುದೇ ಕಷ್ಟ. ಈಗ ಭ್ರಷ್ಟಾಚಾರ ಎಲ್ಲರೂ ಒಪ್ಪಿಕೊಂಡಿರುವ ವ್ಯವಸ್ಥೆಯಾಗಿ ಬಿಟ್ಟಿದೆ. ಇದರಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಪ್ರತಿ ಕೆಲಸಕ್ಕೂ ಲಂಚ ನಿಗದಿಯಾಗಿದೆ. ಅದನ್ನು ಕೊಡದೆ ಇದ್ದಲ್ಲಿ ಸರ್ಕಾರಿ ಕಚೇರಿಯಲ್ಲಿ ಒಂದು ಹುಲುಕಡ್ಡಿಯೂ ಅಲುಗಾಡುವುದಿಲ್ಲ. ಅದರಿಂದ ತಾತನ ಕಾಲದ ಕಡತಗಳು ಕಂದಾಯ ಇಲಾಖೆಯಲ್ಲಿ ಧೂಳು ತಿನ್ನುತ್ತಿವೆ. ಬಡ ರೈತ ಸಾಲ ಸೋಲ ಮಾಡಿ ಅಥವ ಗ್ರಾಮದ ಮುಖ್ಯಸ್ಥರ ಕೈಕಾಲು ಹಿಡಿದು ಭೂಮಿಯನ್ನು ತನ್ನ ಹೆಸರಿಗೆ ಮಾಡಿಸಿಕೊಳ್ಳಬೇಕು. ಇದಾಯಿತು ಎಂದರೆ ಅವನಿಗೆ ಸ್ವರ್ಗ ಸಿಕ್ಕಂತೆ.
ಕಂದಾಯ ಸಚಿವರು ಯುವಕರು, ವಿದೇಶದಲ್ಲಿ ಓದಿ ಬಂದವರು. ಅವರು ೪೮.೮೮ ಲಕ್ಷ ಪೌತಿ ಖಾತೆಗಳಿಗೆ ಮೋಕ್ಷ ತೋರಿಸಿದರೆ ಲಕ್ಷಾಂತರ ರೈತರು ಸಂತಸ ಪಡುವುದರಲ್ಲಿ ಸಂದೇಹವಿಲ್ಲ. ಒಂದು ವರ್ಷದಲ್ಲಿ ಈ ಸಮಸ್ಯೆ ನಿವಾರಣೆಯಾಗಬಹುದು. ಈಗ ಎಲ್ಲಕಡೆ ಮಳೆಯಾಗಿದೆ. ರೈತನಿಗೆ ಸಾಲ ಸಿಗಬೇಕು ಎಂದರೆ ಅವನ ಹೆಸರಿನಲ್ಲಿ ಭೂಮಿ ಇರಬೇಕು. ಆತ ಬೇರೆಯವರ ಕೈಕಾಲು ಹಿಡಿದು ಸಾಲ ತೆಗೆದುಕೊಳ್ಳಬೇಕು. ಹೆಚ್ಚಿನ ಬಡ್ಡಿ ದರ ತೆರಬೇಕು. ಬಡತನ ಎನ್ನುವುದು ಅವನಿಗೆ ಮುಂದಿನ ಜನ್ಮಕ್ಕೂ ಮುಂದುವರಿಯಲಿದೆ ಎಂಬ ಪರಿಸ್ಥಿತಿ ಬಂದಿದೆ. ನಮ್ಮ ಜನಪ್ರತಿನಿಧಿಗಳು ನೇಗಿಲಯೋಗಿಯ ಸಮಸ್ಯೆ ಬಗೆಹರಿಸಲು ಮನಸ್ಸು ಮಾಡಿಲ್ಲ. ಸರ್ಕಾರಿ ಇಲಾಖೆ ಅದರಲ್ಲೂ ಕಂದಾಯ ಎಂದರೆ ಜನ ಬೆಚ್ಚಿಬೀಳುವಂತಾಗಿದೆ. ಧರ್ಮ-ಕರ್ಮ ಎಂಬುದೂ ಇಲ್ಲ. ಬಡರೈತ ದೇವರ ಮೇಲೆ ಭಾರ ಹಾಕಿ ಸರ್ಕಾರಿ ಕಚೇರಿ ಮಟ್ಟಿಲು ಹತ್ತಬೇಕು. ಇಂಥ ಪರಿಸ್ಥಿತಿಯನ್ನು ಬದಲಿಸಬೇಕು ಎಂದರೆ ಯುವ ಪೀಳಿಗೆಯಲ್ಲಿ ಸಾಮಾಜಿಕ ಬದ್ಧತೆ ಮೂಡಬೇಕು. ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುವವರು ತಮ್ಮ ಕಚೇರಿಗೆ ಬರುವ ಪ್ರತಿಯೊಬ್ಬ ರೈತ ಅನ್ನದಾತ ಎಂದು ತಿಳಿದರೆ ಸಾಕು. ಅವರ ಕೆಲಸ ತಂತಾನೇ ಆಗುತ್ತದೆ. ಆ ಮನೋಭಾವ ಬೆಳೆಸುವುದು ಸರ್ಕಾರದ ಕರ್ತವ್ಯ. ಇದಕ್ಕೆ ದೊಡ್ಡ ಆಂದೋಲನ ನಡೆಯಬೇಕು. ಇದು ಪಕ್ಷಾತೀತವಾಗಿರಬೇಕು. ಕಾಲಬದ್ಧವಾಗಿರಬೇಕು. ಇದಕ್ಕೆ ಲಕ್ಷಾಂತರ ರೂ. ಬೇಡ. ಬಡ ರೈತರು ಸರ್ಕಾರದ ಶುಲ್ಕ ಪಾವತಿಸಲು ಸಿದ್ಧವಿರುವಾಗ ಹಣದ ಸಮಸ್ಯೆ ಬರುವುದಿಲ್ಲ. ಇದಕ್ಕೆ ಬೇಕಿರುವುದು ರಾಜಕೀಯ ಸಂಕಲ್ಪ ಮಾತ್ರ.