ಪ್ರಗತಿ ಕಾಣಿಸದಿದ್ದರೆ ಮುಲಾಜಿಲ್ಲದೆ ಬದಲಾವಣೆ
ಪ್ರತಿ ತಿಂಗಳು ಪ್ರಗತಿ ಪರಿಶೀಲನೆ ನಡೆಸಲಿದ್ದೇನೆ. ನಿಗದಿತ ಗುರಿಯನ್ನು ಸಾಧಿಸದ ಅಧಿಕಾರಿಗಳನ್ನು ಹೊಣೆಗಾರರಾಗಿ ಮಾಡಲಾಗುವುದು
ಬೆಂಗಳೂರು: ಇನ್ನುಮುಂದೆ ಪ್ರತಿ ತಿಂಗಳ ಕೊನೆಗೆ ನಾನೇ ಒಟ್ ಟು ಒನ್ ಪ್ರಗತಿ ಪರಿಶೀಲನೆ ನಡೆಸುತ್ತೇನೆ. ಪ್ರಗತಿ ಕಾಣಿಸದಿದ್ದರೆ ಮುಲಾಜಿಲ್ಲದೆ ಅಧಿಕಾರಿಗಳನ್ನು ಬದಲಾವಣೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಅವರು ವಾಣಿಜ್ಯ ತೆರಿಗೆ ಸಂಗ್ರಹ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ನೀಡಿದ ಸೂಚನೆಗಳಿವು 2024-25 ನೇ ಸಾಲಿನಲ್ಲಿ ಒಟ್ಟು ₹1,10,000 ಕೋಟಿ ತೆರಿಗೆ ಸಂಗ್ರಹದ ಗುರಿ ಹೊಂದಲಾಗಿದೆ, ಅಕ್ಟೋಬರ್ ಅಂತ್ಯದವರೆಗೆ ಒಟ್ಟು ರೂ. 58,773 ಕೋಟಿ ಸಂಗ್ರಹಿಸಲಾಗಿದ್ದು, ಇದರಲ್ಲಿ ಜಿಎಸ್‌ಟಿ ರೂ. 44,783 ಕೋಟಿ, ಕೆಎಸ್‌ಟಿ ರೂ. 13,193 ಕೋಟಿ, ವೃತ್ತಿ ತೆರಿಗೆ ರೂ. 797 ಕೋಟಿ ಸೇರಿದೆ. ಅಕ್ಟೋಬರ್ ಕೊನೆಯವರೆಗೆ ಶೇ.53.5 ಗುರಿ ಸಾಧನೆಯಾಗಿದೆ. 2023-24ನೇ ಸಾಲಿಗೆ ಹೋಲಿಸಿದರೆ ರೂ.5,957 ಕೋಟಿ ಹೆಚ್ಚುವರಿ ಸಂಗ್ರಹವಾಗಿರುತ್ತದೆ. ಮುಂದಿನ ಐದು ತಿಂಗಳ ಅವಧಿಯಲ್ಲಿ ಪ್ರತಿ ತಿಂಗಳು ರೂ.10,200ಕೋಟಿ ತೆರಿಗೆ ಸಂಗ್ರಹ ಗುರಿಯನ್ನು ಇರಿಸಿ ಮಾರ್ಚ್ ಒಳಗಾಗಿ ಗುರಿಯನ್ನು ಸಾಧಿಸಬೇಕು. ಸಮನ್ವಯದಿಂದ ಕಾರ್ಯನಿರ್ವಹಿಸಿದರೆ ಮಾತ್ರ ಗುರಿ ಸಾಧನೆ ಸಾಧ್ಯ. ಪ್ರತಿ ತಿಂಗಳು ಪ್ರಗತಿ ಪರಿಶೀಲನೆ ನಡೆಸಲಿದ್ದೇನೆ. ನಿಗದಿತ ಗುರಿಯನ್ನು ಸಾಧಿಸದ ಅಧಿಕಾರಿಗಳನ್ನು ಹೊಣೆಗಾರರಾಗಿ ಮಾಡಲಾಗುವುದು. ಯಾವುದೇ ಕಾರಣಕ್ಕೂ ವಾಣಿಜ್ಯ ತೆರಿಗೆ ಸಂಗ್ರಹದಲ್ಲಿ ಗುರಿಗಿಂತ ಕಡಿಮೆಯಾಗಲೇಬಾರದು. ಕರ ಸಮಾಧಾನ ಯೋಜನೆ ಅಡಿ ರೂ. 2 ಸಾವಿರ ಕೋಟಿ ಹೆಚ್ಚುವರಿ ಸಂಗ್ರಹಣೆಯ ನಿರೀಕ್ಷೆಯಿದೆ. ರಾಜ್ಯದ ಅಭಿವೃದ್ಧಿಗೆ ತೆರಿಗೆ ಸಂಗ್ರಹದಲ್ಲಿ ಗುರಿಯನ್ನು ಸಾಧಿಸಬೇಕಿದೆ.