ಪ್ರಚಾರಮಂತ್ರಿಗೆ ಸೋಲು ಗ್ಯಾರಂಟಿ
ಕೆ.ವಿ.ಪರಮೇಶ್
ಮೋದಿ ಅಲೆಯ ಮೇಲೆ ಚುನಾವಣೆ ನಡೆಯಲಿದೆ ಅನ್ನೋದು ನಿಜವಾ?
ಈ ಚುನಾವಣೆಯಲ್ಲಿ ರಾಜ್ಯದಲ್ಲಾಗಲೀ, ದೇಶದ ಮಟ್ಟದಲ್ಲಾಗಲೀ ಮೋದಿ ಅಲೆ ಇಲ್ಲ. ಪ್ರಧಾನಮಂತ್ರಿ ಹೋಗಿ ಅವರು ಪ್ರಚಾರಮಂತ್ರಿ ಆಗಿದ್ದಾರೆ. ಬರ ನೆರವಿಗೆ ರಾಜ್ಯ ಗೋಗರೆದರೂ ದುಡ್ಡು ಕೊಡಲಿಲ್ಲ. ಯಾವುದೇ ಬೇಡಿಕೆಗೂ ಸ್ಪಂದಿಸಲಿಲ್ಲ. ರೈತರಿಗೆ ಸಹಾಯ ಮಾಡಲಿಲ್ಲ. ಕೇಂದ್ರದ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆಗೆ ಘೋಷಿಸಿದ್ದ ೫೦೦೦ ಕೋಟಿ ರೂ ಏಲ್ಲಿ ಹೋಯ್ತು? ಪೆರಿಫೆರಲ್ ರಸ್ತೆಗೂ ಹಣ ಕೊಡಲಿಲ್ಲ. ಮೋದಿ ಸರ್ಕಾರ ಘೋಷಣೆಗಷ್ಟೇ ಸೀಮಿತವಾಗಿದೆ. ಓಟ್ ಕೇಳಲು ಮಾತ್ರ ಸಾಲುಗಟ್ಟಿ ಎಲ್ಲ ನ್ಯಾಷನಲ್ ಲೀಡರ್‌ಗಳು ಬರ್ತಾರೆ.
ಮೋದಿ ಕಿ ಗ್ಯಾರಂಟಿ ವರ್ಕೌಟ್ ಆಗಲಿದೆಯಾ?
ನಮ್ಮ ಗ್ಯಾರಂಟಿಗಳ ಮುಂದೆ ಮೋದಿ ಕಿ ಗ್ಯಾರಂಟಿ ಏನೂ ಅಲ್ಲ. ಗ್ಯಾರಂಟಿ ವಿರೋಧಿಸುತ್ತಿದ್ದವರೇ ಈಗ ಕಾಂಗ್ರೆಸ್ ಗ್ಯಾರಂಟಿಗಳನ್ನು ಕಾಪಿ ಮಾಡುತ್ತಿದ್ದಾರೆ. ೨ ಕೋಟಿ ಉದ್ಯೋಗ ಎಲ್ಲಿ ಅಂದ್ರೆ ಪಕೋಡ ಮಾರಿ ಅಂತಾರೆ. ೧೫ ಲಕ್ಷ ಅಕೌಂಟ್‌ಗೆ ಹಾಕ್ತೀವಿ ಅಂದಿದ್ರಲ್ಲಾ ಅಂತ ಕೇಳಿದರೆ, ರಾಮಮಂದಿರ ನೋಡಿ ಅಂತಾರೆ. ಕಷ್ಟದಲ್ಲಿರೋ ಜನರಿಗೆ ಸಹಾಯ ಮಾಡ್ರಪ್ಪಾ ಅಂದ್ರೆ ಹಿಂದುತ್ವ ಮಂತ್ರ ಜಪಿಸ್ತಾರೆ. ಇದು ಇವರ ಆಡಳಿತ ವೈಖರಿ. ಇದೆಲ್ಲದರಿಂದ ರಾಜ್ಯದಲ್ಲಿ ಮಾತ್ರವಲ್ಲ ದೇಶದ ಜನರೂ ಬೇಸತ್ತಿದ್ದು ಬದಲಾವಣೆ ಬಯಸಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಮಂಗಲಸೂತ್ರ ಕಸಿಯುತ್ತದೆಂಬ ಹೇಳಿಕೆ ಬಗ್ಗೆ ಏನಂತೀರಿ?
ದೇಶದ ಪ್ರಧಾನಿ ಆದವರು ಇಷ್ಟು ಕೀಳುಮಟ್ಟದ ಹೇಳಿಕೆ ಕೊಡೋದು ಆವರಿಗೆ ಗೌರವ ತರುತ್ತದೆಯೇ? ಯುಪಿಎ ಸರ್ಕಾರ ಇದ್ದಾಗ ಚಿನ್ನದ ಬೆಲೆ ಎಷ್ಟಿತ್ತು. ಇವರ ಆಡಳಿಯದಲ್ಲಿ ಬಡವರು ಬಂಗಾರ ಕೊಳ್ಳೋದಕ್ಕೆ ಆಗುತ್ತದೆಯೇ? ಇವರೇ ಅಧಿಕಾರದಲ್ಲಿದ್ದರೆ ಮಹಿಳೆಯರು ಚಿನ್ನದ ಮಂಗಲಸೂತ್ರದ ಬದಲಿಗೆ ಅರಿಶಿನದಕೊಂಬು ಕಟ್ಟಿಕೊಳ್ಳುವ ಸ್ಥಿತಿ ಬರಲಿದೆ. ಕೇವಲ ಅಂಬಾನಿ, ಅದಾನಿ ಅಂಥವರು ಮಾತ್ರ ಖರೀದಿಸಬಹುದು. ಬಡವರು, ಮಧ್ಯಮವರ್ಗಕ್ಕೆ ಚಿನ್ನ ಖರೀದಿ ಗಗನಕುಸುಮ ಆಗಲಿದೆ.
ಕಾಂಗ್ರೆಸ್ ಎಷ್ಟು ಸ್ಥಾನ ಗೆಲ್ಲಬಹುದು?
ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇದೆ. ಬಡವರು, ಮಹಿಳೆಯರು ಸಿಎಂ ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿಗಳ ಹಿನ್ನೆಲೆಯಲ್ಲಿ ಪೂರ್ಣಪ್ರಮಾಣದಲ್ಲಿ ಕಾಂಗ್ರೆಸ್ ಕೈ ಹಿಡಿದರೆ ೨೮ರಲ್ಲಿ ಇಪ್ಪತ್ತಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುತ್ತೇವೆ. ಬೆಂಗಳೂರಿನ ಮೂರು ಹಾಗೂ ಗ್ರಾಮಾಂತರದಲ್ಲಿಯೂ ಜಯಿಸುತ್ತೇವೆ.
ಬೆಂಗಳೂರು ದಕ್ಷಿಣ ಕ್ಷೇತ್ರದ ಸ್ಥಿತಿ ಹೇಗಿದೆ?
ಅಭ್ಯರ್ಥಿ ಘೋಷಣೆಗೂ ಮುನ್ನವೇ ಸೌಮ್ಯಾರೆಡ್ಡಿ ಅವರು ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು. ಈ ಹಿಂದೆ ಜಯನಗರ ಶಾಸಕಿಯಾಗಿಯೂ ಅವರು ಮಾಡಿರುವ ಹಲವು ಅಭಿವೃದ್ಧಿ ಕಾರ್ಯಗಳ ಜೊತೆಗೆ ಅವರು ಜನರೊಂದಿಗೆ ಬೆರೆಯುವ ಕಷ್ಟಸುಖಗಳಿಗೆ ಸ್ಪಂದಿಸುವ ಗುಣ ಈ ಬಾರಿ ಕೈಹಿಡಿಯಲಿದೆ. ಅದೂ ಅಲ್ಲದೆ ರಾಮಲಿಂಗಾರೆಡ್ಡಿ ಅವರು ಅಜಾತಶತ್ರು. ಕ್ಷೇತ್ರದಲ್ಲಿ ವಿರೋಧಪಕ್ಷದವರೂ ಇವರ ಪರವಾಗಿ ಕೆಲಸ ಮಾಡ್ತಾರೆ. ಶಾಸಕರು, ಕಾರ್ಪೊರೇಟರ್‌ಗಳ ನಮ್ಮ ಜತೆಗಿದ್ದಾರೆ. ನಮ್ಮ ಗೆಲುವು ಖಂಡಿತ.
ಚುನಾವಣೆ ಬಳಿಕ ಸರ್ಕಾರ ಪತನ ಇಲ್ಲವೇ ಬದಲಾವಣೆ ಆಗಲಿದೆ ಎನ್ನುವ ಮಾತಿದೆ?
ಚುನಾವಣೆ ಬಳಿಕ ರಾಜ್ಯದಲ್ಲಿ ಬದಲಾವಣೆ ಆಗುತ್ತದೆ ಎನ್ನುವುದು ಕೇವಲ ಊಹಾಪೋಹ. ರಾಜ್ಯದಲ್ಲಿ ಆಡಳಿತದಲ್ಲಿರುವ ನಿಚ್ಚಳ ಬಹುಮತದ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಯಾವುದೇ ಅಡೆತಡೆ ಇಲ್ಲದೆ ಐದು ವರ್ಷಗಳ ಪೂರ್ಣಾವಧಿ ಪೂರೈಸಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ನಿರ್ಣಾಯಕ ಸಂದರ್ಭಗಳಲ್ಲಿ ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ಧವಾಗಿರಬೇಕಾಗುತ್ತದೆ.
ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಏನಂತೀರಿ?
ಇಂಡಿಯಾ ಬ್ಲಾಕ್‌ನ ಹೆಸರಿನಲ್ಲಿ ನಾವು ಚುನಾವಣೆ ಎದುರಿಸುತ್ತಿದ್ದೇವೆ. ನಮ್ಮಲ್ಲಿ 'ಕಾಮನ್ ಮ್ಯಾನ್ ಕ್ಯಾನ್ ಬಿಕಮ್ ಪ್ರೆಮ್ ಮಿನಿಸ್ಟರ್'. ಪ್ರಧಾನಿ ಆಗುವ ಮೊದಲು ನರೇಂದ್ರ ಮೋದಿ ಹೆಸರು ಎಲ್ಲಿತ್ತು. ಐದು ವರ್ಷದಿಂದ ಚಾಲ್ತಿಗೆ ಬಂದಿದೆ ಅಷ್ಟೆ. ಬಿಜೆಪಿ ಹೆಸರಲ್ಲಿ ಅವರು ಓಟ್ ಕೇಳಲ್ಲ. ಅವರಲ್ಲಿ ಮೋದಿ ಬಿಟ್ರೆ ಯಾರೂ ಗತಿಯಿಲ್ಲ. ಕಾಂಗ್ರೆಸ್ ಸಮುದ್ರ ಇದ್ದಂತೆ ನಮ್ಮಲ್ಲಿ ಪ್ರಧಾನಮಂತ್ರಿ ಆಗಲು ನೂರು ಮಂದಿ ಸಮರ್ಥರಿದ್ದಾರೆ.
ಬದಲಾವಣೆ ಅಲೆ ಇದೆಯಾ? ಯಾಕಾಗಿ ಬದಲಾವಣೆ?
ಬೆಂಗಳೂರು ಮತ್ತು ರಾಜ್ಯದಲ್ಲಿ ಬದಲಾವಣೆಯ ದೊಡ್ಡ ಅಲೆ ಇದೆ. ಜನರಲ್ಲಿ ಹಾಗೂ ಕಾರ್ಯಕರ್ತರಲ್ಲಿ ಬದಲಾವಣೆ ಆಗಬೇಕೆಂಬ ಚಿಂತನೆ ದೀರ್ಘವಾಗಿ ಕಾಣುತ್ತಿದೆ. ೧೦ ವರ್ಷಗಳಲ್ಲಿ ಮೋದಿ ಆಡಳಿತದಲ್ಲಿ ಜನರು ಅನುಭವಿಸಿರುವ ಸಂಕಷ್ಟ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ೫ ವರ್ಷದಿಂದ ಕ್ಷೇತ್ರದ ಸಂಸದ ಏನೂ ಕೆಲಸ ಮಾಡದಿರುವುದು. ೩ನೇಯದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸರ್ಕಾರದ ಜನಪರ ಕೆಲಸ ಮತ್ತು ಗ್ಯಾರಂಟಿಗಳ ಯಶಸ್ವಿ ಅನುಷ್ಠಾನ. ಕೇವಲ ಬಸನವಗುಡಿ ಒಂದು ಕ್ಷೇತ್ರವೊಂದರಲ್ಲಿ ೮೦ ಸಾವಿರ ಜನ ಉಚಿತ ವಿದ್ಯುತ್ ಫಲಾನುಭವಿಗಳಿದ್ದಾರೆ. ೨೪ ಸಾವಿರ ಜನರಿಗೆ ಗೃಹಲಕ್ಷ್ಮೀ, ೫,೫೦೦ ಜನರಿಗೆ ಅನ್ನಭಾಗ್ಯ ಯೋಜನೆ ಹಾಗೂ ೪೦೦ಕ್ಕೂ ಹೆಚ್ಚು ನಿರುದ್ಯೋಗಿಗಳಿಗೆ ಯುವನಿಧಿ ಸಿಗುತ್ತಿದೆ. ಇನ್ನು ರಾಜ್ಯದಲ್ಲಿ ಇದರ ಯಶಸ್ಸು ಎಷ್ಟೆಂದು ನೀವೇ ಊಹಿಸಿಕೊಳ್ಳಿ.