ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಪ್ರತಿಬಂಧಕಾಜ್ಞೆಗೆ ಎಚ್ಚರ ಸಂಹಿತೆ

02:00 AM Mar 28, 2024 IST | Samyukta Karnataka

ಲೋಕದ ಒಳಗುಟ್ಟನ್ನೆಲ್ಲಾ ಶರವೇಗದಲ್ಲಿ ಬಯಲು ಮಾಡುವ ತಾಂತ್ರಿಕ ಸಾಮರ್ಥ್ಯವನ್ನು ತಂತ್ರಜ್ಞಾನದ ಮೂಲಕ ಮೈಗೂಡಿಸಿಕೊಂಡಿರುವ ಮಾಧ್ಯಮ ಕ್ಷೇತ್ರ ಎದುರಿಸುತ್ತಿರುವ ಸವಾಲುಗಳು ಅನೇಕ. ಪತ್ರಿಕಾ ಮಾಧ್ಯಮ ಹಾಗೂ ಆಕಾಶವಾಣಿಗಳು ಮಾತ್ರ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಬಳಸುತ್ತಿದ್ದ ಭಾಷೆ, ಸುದ್ದಿ ಗ್ರಹಿಕೆಯ ಸ್ವರೂಪ, ಒಗಟಿನಂತೆ ಕಂಗೊಳಿಸುವ ವೈಚಾರಿಕತೆಯ ರೂಪುರೇಷೆ ಜೊತೆಗೆ ವ್ಯಕ್ತಿಗತ ವಿಚಾರಗಳನ್ನು ಪ್ರಕಟಿಸುವಾಗ ಒಂದು ರೀತಿಯ ಮಡಿವಂತಿಕೆ ಇದ್ದದ್ದು ನಿಜ. ಆಗಿನ ಕಾಲದ ಸಾಮಾಜಿಕ ಪರಿಸ್ಥಿತಿಯೂ ಕೂಡಾ ಇದೇ ರೀತಿ ಇತ್ತು. ಮಾಧ್ಯಮ ಎಂಬುದು ಎಷ್ಟಾದರೂ ಸಮಾಜದ ಸೃಷ್ಟಿ. ಔಚಿತ್ಯಪೂರ್ಣವಲ್ಲದ ಸಂಗತಿಗಳನ್ನು ಪ್ರಕಟಣೆಗೆ ಪರಿಗಣಿಸದೇ ಇದ್ದ ಕಾಲವೂ ಒಂದಿತ್ತು. ಆದರೆ, ತಂತ್ರಜ್ಞಾನದ ಮೂಲಕ ಮಾಧ್ಯಮ ಕ್ಷೇತ್ರ ವಿಸ್ತಾರ ಹಾಗೂ ವಿನ್ಯಾಸವನ್ನು ಬದಲಾಯಿಸಿಕೊಳ್ಳುತ್ತಿದ್ದಂತೆಯೇ ಅದರ ಮಡಿವಂತಿಕೆಯ ಸ್ವರೂಪವೂ ಬದಲಾದದ್ದು ಪರಿಸ್ಥಿತಿಯ ಇನ್ನೊಂದು ಮುಖ. ಒಳಗುಟ್ಟುಗಳನ್ನು ಬಹಿರಂಗ ಮಾಡುವ ಆತುರದಲ್ಲಿ ವ್ಯಕ್ತಿಗತ ವಿಜೃಂಭಣೆ ಇಲ್ಲವೇ ನಿಂದನೆ ಸ್ವರೂಪದ ಪ್ರಕಟಣೆಗಳು ದಿನಕಳೆದಂತೆ ಹೆಚ್ಚುತ್ತಿದ್ದ ಸಂದರ್ಭದಲ್ಲಿ ನೊಂದವರು ಕಂಡುಕೊಂಡ ಮಾರ್ಗವೆಂದರೆ ನ್ಯಾಯಾಲಯದ ಮೂಲಕ ಪ್ರತಿಬಂಧಕಾಜ್ಞೆ ತಂದು ಮಾಧ್ಯಮಗಳ ಮೇಲೆ ಪ್ರಕಟಣೆಗೆ ನಿರ್ಬಂಧ ಹೇರುವುದು. ದಿನ ಉರುಳಿದಂತೆ ಸಣ್ಣ ಪುಟ್ಟ ಆರೋಪಗಳು ಹಾಗೂ ತೇಜೋವಧೆ ಪ್ರಕರಣಗಳಿಂದ ಬಚಾವಾಗಲು ಹಲವಾರು ಮಂದಿ ನ್ಯಾಯಾಲಯಗಳ ಮೂಲಕ ಪ್ರತಿಬಂಧಕಾಜ್ಞೆ ತರುವ ಮಾರ್ಗವನ್ನು ಅನುಸರಿಸಿದ ಪರಿಣಾಮವಾಗಿ ಸತ್ಯ ಸಂಗತಿ ಖಚಿತವಾದರೂ ಸಾರ್ವಜನಿಕ ಹಿತದೃಷ್ಟಿಯಿಂದ ಇವುಗಳ ಪ್ರಕಟಣೆಗೆ ಸಾಧ್ಯವಾಗದೇ ಮಾಧ್ಯಮಗಳು ಅಸಹಾಯಕ ಪರಿಸ್ಥಿತಿ ಎದುರಿಸಬೇಕಾಯಿತು. ಇಂತಹ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ತ್ರಿಸದಸ್ಯ ನ್ಯಾಯಪೀಠ ಪ್ರತಿಬಂಧಕಾಜ್ಞೆ ಪ್ರಕರಣಗಳನ್ನು ಪೂರ್ವ ವಿಚಾರಣೆ ನಡೆಸದೆ ಕೊಡುವಂತಿಲ್ಲ ಎಂಬ ಷರತ್ತನ್ನು ಅಧೀನ ನ್ಯಾಯಾಲಯಗಳಿಗೆ ಹಾಕುವ ಮೂಲಕ ನ್ಯಾಯಾಂಗ ಕ್ಷೇತ್ರದಲ್ಲಿ ಹೊಗೆಯಾಡುತ್ತಿದ್ದ ವಿವಾದಕ್ಕೆ ಪರಿಹಾರ ದೊರಕಿಸಿರುವುದು ನಿಜಕ್ಕೂ ಸ್ವಾಗತಾರ್ಹ ಬೆಳವಣಿಗೆ.
ಮಾಧ್ಯಮಗಳು ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂಬುದು ಪ್ರಶ್ನಾತೀತ. ಆದರೆ, ಸಮಾಜವೂ ಕೂಡಾ ಅಷ್ಟೇ ಜವಾಬ್ದಾರಿಯಿಂದ ನಡೆದುಕೊಂಡಾಗ ಮಾತ್ರ ಮಾಧ್ಯಮಗಳ ಪಾತ್ರ ನಿರ್ವಹಣೆ ಸಾಧ್ಯ. ಸಾಮಾಜಿಕ ವ್ಯಕ್ತಿ ಶಕ್ತಿಗಳು ಬೇಜವಾಬ್ದಾರಿಯಿಂದಲೋ ಇಲ್ಲವೇ ದುರುದ್ದೇಶದಿಂದಲೋ ವರ್ತಿಸಿದಾಗ ಮಾಧ್ಯಮಗಳಿಂದ ಜವಾಬ್ದಾರಿಯುತ ನಡೆಯನ್ನು ನಿರೀಕ್ಷಿಸುವುದು ಸರಿಯಲ್ಲ. ಇದರ ಅರ್ಥ ಸೇಡಿಗೆ ಸೇಡು ಎಂದಲ್ಲಾ. ಜರುಗಿದ ಘಟನೆಯನ್ನು ಯಥಾವತ್ತಾಗಿ ಸಾರ್ವಜನಿಕರ ಗಮನಕ್ಕೆ ತರುವುದಷ್ಟೆ. ಇಂತಹ ಯಥಾವತ್ ಸಂಗತಿಗಳು ವರದಿಯಾಗುವುದನ್ನು ತಪ್ಪಿಸಲು ಪಟ್ಟಭದ್ರರು ನ್ಯಾಯಾಲಯಗಳ ಮೂಲಕ ಪ್ರತಿಬಂಧಕಾಜ್ಞೆ ತರುವ ಸಂಸ್ಕೃತಿಯನ್ನು ಆರಂಭಿಸಿದ್ದು ಮಾತ್ರ ನಿಜವಾದ ಅರ್ಥದಲ್ಲಿ ಜನದ್ರೋಹದ ಕೃತ್ಯ. ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿರುವಂತೆ ಮಾಹಿತಿ ವಿನಿಮಯ ಹಾಗೂ ಮಾಹಿತಿ ಹಂಚಿಕೊಳ್ಳುವ ಕಾಯಕದಲ್ಲಿ ಮುಕ್ತ ಅವಕಾಶಗಳಿರಬೇಕು. ಯಾವುದೇ ರೀತಿಯ ನಿರ್ಬಂಧಗಳು ಇರಬಾರದು. ರಿಟ್ ಅರ್ಜಿಗಳ ಪೂರ್ಣ ವಿಚಾರಣೆ ಇಲ್ಲದೆ ಪ್ರತಿಬಂಧಕಾಜ್ಞೆ ಕೊಡುವುದು ಎಂದರೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿದಂತೆ. ಇದಕ್ಕೆ ರಾಜ್ಯಾಂಗದ ಸಮ್ಮತಿಯಿಲ್ಲ. ಅಧೀನ ನ್ಯಾಯಾಲಯಗಳು ಇಂತಹ ಪ್ರತಿಬಂಧಕಾಜ್ಞೆಗಳ ಮನವಿಗಳನ್ನು ವಿಲೇವಾರಿ ಮಾಡುವಾಗ ಔಚಿತ್ಯಪೂರ್ಣ ದೃಷ್ಟಿಕೋನವನ್ನು ಹೊಂದಿ ನಿರ್ಧರಿಸುವುದು ಸೂಕ್ತ. ಪೂರ್ವ ವಿಚಾರಣೆ ಇಲ್ಲದೆ ಏಕಪಕ್ಷೀಯವಾಗಿ ಇಂತಹ ಆದೇಶ ಹೊರಡಿಸುವುದು ಸರಿಯಾದ ಕ್ರಮವಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿರುವುದು ರಾಜ್ಯಾಂಗದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಅವಕಾಶವನ್ನು ಎತ್ತಿತೋರಿಸುವುದಾಗಿದೆ.
ಸುಪ್ರೀಂಕೋರ್ಟ್ ಇತ್ತೀಚಿನ ವರ್ಷಗಳಲ್ಲಿ ಸಾರ್ವಜನಿಕ ಮಹತ್ವದ ಹಲವಾರು ಪ್ರಕರಣಗಳಲ್ಲಿ ಐತಿಹಾಸಿಕ ಸ್ವರೂಪದ ತೀರ್ಪುಗಳನ್ನು ನೀಡಿರುವುದು ಭಾರತದ ಸಮಗ್ರತೆ ಹಾಗೂ ಸಾರ್ವಭೌಮತ್ವಕ್ಕೆ ಒಂದು ಗರಿ. ಪ್ರತಿಬಂಧಕಾಜ್ಞೆಗಳ ಜಾರಿಯಿಂದಾಗಿ ಅನೇಕ ಸಂದರ್ಭಗಳಲ್ಲಿ ಮಾಧ್ಯಮಗಳು ಗೊತ್ತಿದ್ದ ಸಂಗತಿಯನ್ನು ಪ್ರಕಟಿಸಲಾಗದೆ ಅಸಹಾಯಕ ಸ್ಥಿತಿಯಲ್ಲಿದ್ದವು. ಪ್ರತಿಬಂಧಕಾಜ್ಞೆಗಳು ಸೀಮಿತವಾಗಿ ಒಂದು ಅಥವಾ ಎರಡು ಮಾಧ್ಯಮ ಸಂಸ್ಥೆಗಳಿಗೆ ನೀಡಿದ್ದರೆ ಅದೊಂದು ರೀತಿಯಲ್ಲಿ ಸಮರ್ಥನೀಯ ಆಗುತ್ತಿತ್ತೇನೋ. ಆದರೆ, ಸಾರಾಸಗಟಾಗಿ ಎಲ್ಲಾ ಮಾಧ್ಯಮ ಸಂಸ್ಥೆಗಳಿಗೂ ಅನ್ವಯವಾಗುವಂತೆ ಈ ಪ್ರತಿಬಂಧಕಾಜ್ಞೆಯನ್ನು ಜಾರಿ ಮಾಡಿದ್ದು ಮಾತ್ರ ಅರ್ಥವಾಗದ ವಿಚಾರ. ದೂರದ ದೆಹಲಿ, ಕೊಲ್ಕತ್ತಾದಲ್ಲಿನ ಯಾರೋ ಒಬ್ಬರು ಕರ್ನಾಟಕ, ತಮಿಳುನಾಡು ರಾಜ್ಯಗಳ ಎಲ್ಲಾ ಮಾಧ್ಯಮಗಳ ಮೇಲೆ ನಿರ್ಬಂಧಕಾಜ್ಞೆ ಜಾರಿ ಮಾಡುವ ಪ್ರವೃತ್ತಿ ಮಾಧ್ಯಮಗಳಿಗೆ ಗಂಡಾಂತರವನ್ನೇ ಸೃಷ್ಟಿಸಿತ್ತು. ಈಗ ಅಷ್ಟರ ಮಟ್ಟಿಗೆ ಅದರ ನಿವಾರಣೆಯಾದಂತಿದೆ.
ಬದಲಾಗುತ್ತಿರುವ ಕಾಲಮಾನದಲ್ಲಿ ಮಾಧ್ಯಮದ ಸೂತ್ರ ಹಾಗೂ ಪಾತ್ರ ನಿರ್ಣಾಯಕ. ಸುಪ್ರೀಂಕೋರ್ಟಿನ ಈ ಔದಾರ್ಯಪೂರ್ಣ ತೀರ್ಪಿನ ನಂತರ ಮಾಧ್ಯಮಗಳ ಜವಾಬ್ದಾರಿ ಇನ್ನಷ್ಟು ಹೆಚ್ಚಿ ಕರ್ತವ್ಯಪರತೆ ಹೊಸ ಹೊಳಪನ್ನು ಪಡೆದುಕೊಳ್ಳುವ ದಾರಿಯಲ್ಲಿ ಕ್ರಮಿಸುವುದು ನಿಜವಾದ ಅರ್ಥದ ಮಾಧ್ಯಮ ಮಾರ್ಗ.

Next Article