ಪ್ರತಿಭಟನೆಗೆ ಮಣಿದು ರಾಜೀನಾಮೆಗೆ ನಿರ್ಧಾರ
ಢಾಕಾ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಒಬೈದುಲ್ ಹಸನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಇವರನ್ನು ಕಳೆದ ವರ್ಷ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿತ್ತು. ರಾಜೀನಾಮೆ ನೀಡದಿದ್ದರೆ ನ್ಯಾಯಾಧೀಶರ ನಿವಾಸಗಳಿಗೆ ಮುತ್ತಿಗೆ ಹಾಕುವುದಾಗಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಅವರು ಈ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಇಂದು ಬೆಳಿಗ್ಗೆ 10:30ರ ವೇಳೆಗೆ ವಿದ್ಯಾರ್ಥಿಗಳು ಮತ್ತು ವಕೀಲರು ಸೇರಿದಂತೆ ನೂರಾರು ಪ್ರತಿಭಟನಾಕಾರರು ಸುಪ್ರೀಂ ಕೋರ್ಟ್ ಹೊರಗೆ ಜಮಾಯಿಸಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಮಧ್ಯಂತರ ಸರ್ಕಾರದಲ್ಲಿ ಯುವ ಮತ್ತು ಕ್ರೀಡಾ ಸಚಿವಾಲಯದ ಸಲಹೆಗಾರ ಆಸಿಫ್ ಮಹಮೂದ್ ಮಾತನಾಡಿ ಮುಖ್ಯ ನ್ಯಾಯಮೂರ್ತಿ ಹಸನ್ ಅವರ ಬೇಷರತ್ತಾದ ರಾಜೀನಾಮೆಗೆ ಆಗ್ರಹಿಸಿದರು ಮತ್ತು ವಿವಾದಾತ್ಮಕ ನ್ಯಾಯಾಲಯದ ಸಭೆಯನ್ನು ಕೊನೆಗೊಳಿಸಬೇಕೆಂದು ಕರೆ ನೀಡಿದರು.
ಕಾನೂನು ಸಚಿವಾಲಯದ ಸಲಹೆಗಾರ ಆಸಿಫ್ ನಜ್ರುಲ್ ಅವರು ಪ್ರತಿಭಟನಾಕಾರರಿಗೆ ಮನವಿ ಮಾಡಿದ್ದು, ರಾಜಧಾನಿ ಢಾಕಾದ ಹೊರಗೆ ಇರುವ ನ್ಯಾಯಾಲಯಗಳನ್ನು ಸುತ್ತುವರಿಯದಂತೆ ಅಥವಾ ಹಾನಿ ಮಾಡುವುದನ್ನು ತಡೆಯಲು ವಿನಂತಿಸಿದ್ದಾರೆ. ಅಂತಹ ಕ್ರಮಗಳು ನಡೆಯುತ್ತಿರುವ ಚಳವಳಿಯ ಉದ್ದೇಶಗಳೊಂದಿಗೆ ಹೊಂದಿಕೆಯಾಗುವುದಿಲ್ಲ ಎಂದಿದ್ದಾರೆ.