ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಪ್ರತಿಷ್ಠಿತ ಉದ್ಯಮಕ್ಕೆ ಜೀವದಾನ ಅಗತ್ಯ

11:19 AM Jan 19, 2024 IST | Samyukta Karnataka

ಈಗ ಈ ಕಾರ್ಖಾನೆಯಲ್ಲಿ ನಡೆಯುತ್ತಿರುವ ಮುಖ್ಯ ಚಟುವಟಿಕೆಯೆಂದರೆ ಭಾರತೀಯ ಉಕ್ಕು ಪ್ರಾಧಿಕಾರಕ್ಕೆ ಅಗತ್ಯವಿರುವ ಬಿಡಿ ಭಾಗಗಳ ತಯಾರಿಕೆ ಮಾತ್ರ. ಈ ಉದ್ದಿಮೆಯಲ್ಲಿ ಪ್ರಸ್ತುತ ಗುತ್ತಿಗೆ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ.

ಔದ್ಯಮಿಕ ಕ್ಷೇತ್ರಕ್ಕೆ ಹೊಸ ಭವಿಷ್ಯ ರೂಪಿಸುತ್ತಿರುವ ನವೋದ್ಯಮ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ಇಡೀ ದೇಶದಲ್ಲಿ ಅಗ್ರಸ್ಥಾನದಲ್ಲಿರುವ ಅಭಿಮಾನದ ಸಂದರ್ಭದಲ್ಲಿಯೇ ಕನ್ನಡನಾಡಿನ ಪರಂಪರೆಯ ಕುರುಹಾಗಿರುವ ಭದ್ರಾವತಿಯ ಭದ್ರಾವತಿ ವಿಶ್ವೇಶ್ವರಯ್ಯ ಉಕ್ಕಿನ ಕಾರ್ಖಾನೆ (ವಿಐಎಸ್‌ಎಲ್) ಶಾಶ್ವತವಾಗಿ ಮುಚ್ಚುವ ಹಂತ ಪ್ರವೇಶಿಸಿರುವುದು ನಿರಾಸೆಯ ಸಂಗತಿ. ಈಗಿರುವ ಖಚಿತ ಮಾಹಿತಿಯ ಪ್ರಕಾರ ಮಾರ್ಚ್ ೩೧ರಂದು ಈ ಕಾರ್ಖಾನೆಯ ಚಟುವಟಿಕೆ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿರುವುದು ಕಾರ್ಮಿಕರಿಗಷ್ಟೇ ಅಲ್ಲ, ನಾಡಿನ ಜನರಿಗೂ ಗರಬಡಿದಂತಾಗಿದೆ. ಈ ಪ್ರತಿಷ್ಠಿತ ಉದ್ಯಮಕ್ಕೆ ಹೊಸ ರೂಪ ಕೊಡುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಹಿಂದೆ ಹಲವಾರು ಯೋಜನೆಗಳ ಕಾರ್ಯರೂಪಕ್ಕೆ ಮುಂದಾಗಿತ್ತು. ಆದರೆ ಯೋಜನೆ ಕಾಗದದ ಹೂವಾಯಿತೇ ವಿನ: ಕಾರ್ಯರೂಪಕ್ಕೆ ಬರುವಲ್ಲಿ ಬರಿ ಅಡ್ಡಿ ಆತಂಕಗಳೇ ಎದುರಾದ ಪರಿಣಾಮವಾಗಿ ಹಲವಾರು ವರ್ಷಗಳಿಂದ ಈ ಉದ್ದಿಮೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ.
ಕಚ್ಚಾವಸ್ತು ಸೇರಿದಂತೆ ಕಾರ್ಖಾನೆಯ ಚಟುವಟಿಕೆಗೆ ಬೇಕಾದ ಅಗತ್ಯವಸ್ತುಗಳ ಕೊರತೆ ಈ ಉದ್ದಿಮೆ ದುಸ್ಥಿತಿಗೆ ತಿರುಗಲು ಕಾರಣವಾಯಿತು. ಕಾರ್ಖಾನೆಯ ಆಡಳಿತ ವೈಖರಿ ಹಾಗೂ ಕಾರ್ಮಿಕರ ಕಾರ್ಯಕ್ಷಮತೆ ಇದರ ದುಸ್ಥಿತಿಯ ಮೂಲ ಕಾರಣ. ಇದರ ಜೊತೆಗೆ ಕಾಲಕ್ಕೆ ತಕ್ಕಂತೆ ತಂತ್ರಜ್ಞಾನವನ್ನು ಸುಧಾರಿಸಿಕೊಳ್ಳಬೇಕಾಗಿರುವ ಈ ಉದ್ದಿಮೆ ಇನ್ನೂ ಓಬೀರಾಯನ ತಂತ್ರಜ್ಞಾನವನ್ನೇ ನೆಚ್ಚಿಕೊಂಡದ್ದು, ಮಾರುಕಟ್ಟೆಯಲ್ಲಿ ದೊಡ್ಡ ಹೊಡೆತ ತಿನ್ನಲು ಕಾರಣವಾಗಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಈ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾಪವೊಂದನ್ನು ಮಂಡಿಸಿ ಹಣಕಾಸಿನ ನೆರವು ಹಾಗೂ ತಂತ್ರಜ್ಞಾನದ ಬೆಂಬಲದಿಂದ ಈಗಿನ ಕಾಲಕ್ಕೆ ಹೊಂದುವಂತಹ ಉತ್ಪನ್ನಗಳನ್ನು ತಯಾರಿಸುವ ನಿಟ್ಟಿನಲ್ಲಿ ಮುಂದಾಗಿದ್ದರು. ಆದರೆ ಎಲ್ಲಾ ರೀತಿಯ ಸಾಧಕ ಬಾಧಕಗಳನ್ನು ಪರಿಶೀಲಿಸಿದ ಕೇಂದ್ರ ಸರ್ಕಾರ ಈ ಉದ್ದಿಮೆಯ ಸುಧಾರಣೆಗೆ ನಿರೀಕ್ಷಿತ ರೀತಿಯಲ್ಲಿ ಬೆಂಬಲ ಕೊಡಲಿಲ್ಲ. ಮಾರ್ಚ್ ನಂತರ ಇಡೀ ಚಟುವಟಿಕೆಗೆ ಮುಕ್ತಾಯಗೊಳ್ಳುವ ಪರಿಣಾಮವಾಗಿ ಕಾರ್ಮಿಕರ ಭವಿಷ್ಯದ ಮೇಲೂ ಅಂಧಕಾರ ಕವಿಯುವುದು ಖಚಿತವಾಗಿದೆ.
ಕರ್ನಾಟಕದ ಈ ಪ್ರತಿಷ್ಠಿತ ಉದ್ದಿಮೆಯನ್ನು ಉಳಿಸಿಕೊಳ್ಳಲು ರಾಜ್ಯ ಸರ್ಕಾರ ಈಗಲೂ ಪ್ರಯತ್ನಿಸಲು ಅವಕಾಶವಿದೆ. ಕಾರ್ಖಾನೆಯನ್ನು ಪುನಶ್ಚೇತನಗೊಳಿಸಿ ಲಾಭದಾಯಕ ಉದ್ಯಮವಾಗಿ ರೂಪಿಸುವ ನಿಟ್ಟಿನಲ್ಲಿ ಪರಿಷ್ಕೃತ ಯೋಜನೆಯನ್ನು ರೂಪಿಸಿ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸುವ ಮಾರ್ಗ ಅನುಸರಿಸಿದರೆ ಉದ್ದಿಮೆ ರಕ್ಷಣೆಗೆ ಅವಕಾಶವಾಗಬಹುದು. ಕೇವಲ ಪತ್ರ ವ್ಯವಹಾರದಿಂದ ಈ ಕೆಲಸ ಯಶಸ್ಸು ಕಾಣಲಾರದು. ತಜ್ಞರು ಸೇರಿದಂತೆ ಸರ್ವಪಕ್ಷಗಳ ನಿಯೋಗವನ್ನು ಪ್ರಧಾನಿ ಬಳಿಗೆ ಒಯ್ಯುವ ಮೂಲಕ ಕೇಂದ್ರ ಸರ್ಕಾರದ ಆದ್ಯತೆಯ ಗಮನ ಈ ಉದ್ದಿಮೆಯ ರಕ್ಷಣೆಯ ಕಡೆ ತಿರುಗುವಂತೆ ಮಾಡಿದರೆ ಆಗ ನಿರೀಕ್ಷಿತ ಯಶಸ್ಸು ಸಿಗಬಹುದು. ಈಗ ಲೋಕಸಭೆಯ ಚುನಾವಣೆಯ ಕಾಲ ಪ್ರತಿಯೊಂದು ರಾಜಕೀಯ ಪಕ್ಷವು ಈ ಉದ್ದಿಮೆಯ ರಕ್ಷಣೆಯನ್ನು ತನ್ನ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿ ಅದಕ್ಕೆ ಮರುಜೀವ ಕೊಡುವ ರಾಜಕೀಯ ಸಂಕಲ್ಪವನ್ನು ಪ್ರದರ್ಶಿಸಬೇಕು. ಕನ್ನಡಪರ ಚಿಂತಕರು ಹಾಗೂ ಹೋರಾಟಗಾರರು ಈ ಉದ್ದಿಮೆಯ ರಕ್ಷಣೆಯಲ್ಲಿ ಕರ್ನಾಟಕದ ಬಲವರ್ಧನೆ ಅಡಗಿದೆ ಎಂಬ ಅಂಶವನ್ನು ಹಕ್ಕೊತ್ತಾಯದ ಮೂಲಕ ಮಂಡಿಸಿ ಸಾರ್ವಜನಿಕ ಆಂದೋಲನ ರೂಪುಗೊಳ್ಳುವಂತೆ ಮಾಡಿದರೆ ಆಗ ಬಡಕಲು ಬಿಂಬದಂತಿರುವ ಈ ಉದ್ದಿಮೆ ದಷ್ಟಪುಷ್ಟವಾಗಿ ಮತ್ತೆ ಪ್ರವರ್ಧಮಾನಕ್ಕೆ ಬರಲು ಸಾಧ್ಯವಾಗುತ್ತದೆ.
ಜಾಗತೀಕರ ಗ್ರಾಮದ ಪರಿಕಲ್ಪನೆಯಲ್ಲಿ ಸಾಗುತ್ತಿರುವ ಈಗಿನ ಕಾಲಘಟ್ಟದಲ್ಲಿ ಗುಣಮಟ್ಟದ ಉತ್ಪನ್ನಗಳಿಗಷ್ಟೇ ಬೆಲೆ. ಹೀಗಾಗಿ ಈ ಉದ್ದಿಮೆ ಉಳಿಸಬೇಕಾದರೆ ಮೊದಲು ಓಬೀರಾಯನ ತಂತ್ರಜ್ಞಾನವನ್ನು ಕೈಬಿಟ್ಟು ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಗುಣಮಟ್ಟದ ಉತ್ಪನ್ನಗಳ ತಯಾರಿಕೆಗೆ ಕಾರ್ಯೋನ್ಮುಖವಾಗಬೇಕು. ಇದರ ಜೊತೆಗೆ ಕಾರ್ಮಿಕರ ಪಾತ್ರವೂ ನಿರ್ಣಾಯಕ. ಸೋಮಾರಿ ಸಂಸ್ಕೃತಿಯನ್ನು ಮರೆತು ಕಾಯಕ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಉದ್ದಿಮೆ ತಮ್ಮದು ಎಂಬ ಭಾವನೆಯಿಂದ ಕಾರ್ಯನಿರ್ವಹಿಸುವ ಮನಸ್ಥಿತಿಯನ್ನು ತಂದುಕೊಂಡರಷ್ಟೇ ಇದಕ್ಕೆ ಉಳಿಗಾಲ ಸಾಧ್ಯ. ಏನೇ ಆದರೂ ಇಂತಹ ಪ್ರತಿಷ್ಠಿತ ಉದ್ದಿಮೆಗೆ ಜೀವದಾನ ಕೊಡುವ ಕೆಲಸ ರಾಜಕೀಯ ಭಿನ್ನಮತವನ್ನು ಮೀರಿ ನಡೆದರಷ್ಟೇ ಕರ್ನಾಟಕದ ಹೃದಯ ಶ್ರೀಮಂತಿಕೆ ಏನೆಂಬುದನ್ನು ಪ್ರದರ್ಶನಕ್ಕೆ ಅವಕಾಶ.

Next Article