ಪ್ರತೀಕಾರದ ರೋಚ`ಕಥೆ'
ಚಿತ್ರ: ಪಣಿ
ನಿರ್ದೇಶನ: ಜೋಜು ಜಾರ್ಜ್
ನಿರ್ಮಾಣ: ರಿಯಾಜ್ ಅದಂ, ಸಿಜೋ ವಡಕ್ಕಮ್
ತಾರಾಗಣ: ಜೋಜು ಜಾರ್ಜ್, ಬಾಬ್ಬಿ ಕುರಿಯನ್, ಅಭಿನಯ, ಸಾಗರ್ ಸೂರ್ಯ, ಜೂನಿಯಾಜ್ ಇತರರು.
ರೇಟಿಂಗ್ಸ್: 3.5
- ಗಣೇಶ್ ರಾಣೆಬೆನ್ನೂರು
ಜೋಜು ಜಾರ್ಜ್ ಮಲಯಾಳಂ ಚಿತ್ರರಂಗದಲ್ಲಿ ಹೆಸರು ಮಾಡಿರುವ ಖ್ಯಾತ ನಟ. ಸರಿ ಸುಮಾರು ೩೦ ವರ್ಷಗಳಿಂದ ಸಿನಿಮಾ ರಂಗದಲ್ಲಿ ಸಕ್ರಿಯ. ನಟನೆ ಮಾತ್ರವಲ್ಲ, ತಾನು ನಿರ್ದೇಶನವನ್ನು ಸೈ ಅನ್ನಿಸುವಂತೆಯೇ ಮಾಡಬಲ್ಲೆ ಎಂಬುದನ್ನು ಸಾಕ್ಷೀಕರಿಸುವಂತೆ ಅವರೊಂದು ಸಿನಿಮಾ ಮಾಡಿದ್ದಾರೆ. ಚಿತ್ರದ ಹೆಸರು ಪಣಿ. ಕನ್ನಡಕ್ಕೂ ಇದು ಡಬ್ ಆಗಿ ಬಿಡುಗಡೆಯಾಗಿದೆ.
ಜೋಡಿ ಹಕ್ಕಿಗಳ ರೀತಿ ಬಾಳುತ್ತಿರುವ ಇಬ್ಬರು ದಂಪತಿಗಳು. ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಹ ಸಂಸಾರ. ಎಲ್ಲವೂ ಚೆನ್ನಾಗಿದೆ ಅಂದುಕೊಳ್ಳುತ್ತಿರುವಂತೆಯೇ, ದಿಢೀರನೆ ಅವರ ಬಾಳಿಗೆ ಪ್ರವೇಶ ಪಡೆಯುವ ಇಬ್ಬರು ಯುವಕರು ನಿಜಕ್ಕೂ ದಂಪತಿಗಳ ಬದುಕಿಗೆ ಕಿಚ್ಚು ಹಚ್ಚುವಂತಹ ಸನ್ನಿವೇಶವೇ ನಡೆಯುತ್ತದೆ. ಆ ಬೆಂಕಿ ಹೇಗೆಲ್ಲಾ ಧಗಧಗಿಸುತ್ತದೆ, ಹೇಗೆ ಜ್ವಾಲೆಯಾಗಿ ವ್ಯಾಪಿಸುತ್ತದೆ ಇದಕ್ಕೆ ಸಿನಿಮಾ ನೋಡಬೇಕು. ಮೇಲ್ನೋಟಕ್ಕೆ ಇದೂ ಒಂದು ಪ್ರತೀಕಾರದ ಕಥೆಯಂತೆಯೇ ಭಾಸವಾದರೂ, ಜೋಜು ಜಾರ್ಜ್ ಅದನ್ನು ತೋರಿಸಲು ಹೆಣೆದಿರುವ ಚಿತ್ರಕಥೆ ರೋಚಕವಾಗಿದೆ. ಉಸಿರು ಬಿಗಿಹಿಡಿದು ನೋಡಿಸಿಕೊಳ್ಳುವಂತಿದೆ. ಥ್ರಿಲ್ಲರ್ ಕಥೆ ಹೆಣೆಯುವುದರಲ್ಲಿ ಮಲಯಾಳಿಗಳು ನಿಪುಣರು. ಪಣಿ ಕೂಡ ಅದಕ್ಕೆ ಹೊರತಾಗಿಲ್ಲ. ದಂಪತಿಗಳ ಹಿನ್ನೆಲೆ ಇಟ್ಟುಕೊಂಡು ತ್ರಿಶೂರ್‌ನ ಪಾತಕ ಜಗತ್ತನ್ನು ನಿರ್ದೇಶಕ ಅನಾವರಣ ಮಾಡಿದ್ದಾರೆ.
ನಟನೆ ವಿಷಯದಲ್ಲಿ ಜೋಜು ಎಂದಿನಂತೆಯೇ ಇಷ್ಟವಾಗುತ್ತಾರೆ. ಕ್ರೌರ್ಯ ವ್ಯಕ್ತಪಡಿಸುವಾಗಲು ಅಬ್ಬರಕ್ಕಿಂತ, ತಣ್ಣಗಿನ ನೋಟದ ಮೂಲಕವೇ ಭಯ ಹುಟ್ಟಿಸುತ್ತಾರೆ. ಅವರಿಗೆ ಜೋಡಿಯಾಗಿ ಪಾತ್ರ ಮಾಡಿರುವ ಅಭಿನಯ ಸರಳ ಸುಂದರ. ಬಾಬ್ಬಿ ಕುರಿಯನ್ ನಟನೆಗೆ ಪೂರ್ಣಾಂಕ.
ಮಿಕ್ಕಂತೆ, ದೃಶ್ಯವನ್ನು ಅಂದಗಾಣಿಸುವಲ್ಲಿ ಛಾಯಾಗ್ರಾಹಕರಾದ ಜಿಂಟೊ ಜಾರ್ಜ್ ಮತ್ತು ವೇಣು ಕೆಲಸ ಮೆಚ್ಚುಗೆ ಮೂಡಿಸುತ್ತದೆ. ದೃಶ್ಯದ ಬಿಗಿ ಹೆಚ್ಚಿಸಲು ವಿಷ್ಣು ವಿಜಯ್, ಸಂತೋಷ್ ನಾರಾಯಣ್ ಹಾಗೂ ಸ್ಯಾಮ್ ಹಿನ್ನೆಲೆ ಸಂಗೀತದ ಮೂಲಕ ಜೋರಾಗಿಯೇ ಬ್ಯಾಂಡು ಬಜಾಯಿಸಿದ್ದಾರೆ. ಹಾಗಂತ ಸಿನಿಮಾದಲ್ಲಿ ಲೋಪದೋಷಗಳೇ ಇಲ್ಲವೆಂದಲ್ಲ. ಆದರೆ ಓರೆಕೋರೆಗಳನ್ನು ಸಿನಿಮಾದ ಒಟ್ಟಂದ ಮರೆಸುತ್ತದೆ.