ಪ್ರಧಾನಿಗೆ ನಿಂದಿಸಿದ ಅನ್ಯ ಕೋಮಿನ ಯುವಕನ ಬಂಧನ
ಹಾವೇರಿ(ರಾಣೇಬೆನ್ನೂರು): ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿ ಗ್ರಾಮದ ವ್ಯಕ್ತಿಯೊಬ್ಬನಿಗೆ ಮೊಬೈಲ್ ಧ್ವನಿ ಸಂದೇಶ ಕಳುಹಿಸಿದ ಅನ್ಯಕೋಮಿನ ಯುವಕನ ಮೇಲೆ ಪ್ರಕರಣ ದಾಖಲಿಸಿದ ಘಟನೆ ಮಂಗಳವಾರ ತಡರಾತ್ರಿ ತಾಲೂಕಿನ ಹೆಡಿಯಾಲ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸಾದಿಕ್ ದಾಲ್ ರೊಟ್ಟಿ ಉರ್ಫ್ ಹರಪನಹಳ್ಳಿ(೨೬) ಆರೋಪಿ. ಆರೋಪಿಯು ಹೆಡಿಯಾಲ ಗ್ರಾಮದ ಯೋಗೇಶ ಷಣ್ಮುಖಪ್ಪ ತೋಟಗೇರ ಈತನಿಗೆ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಒಂದು ಮೊಬೈಲ್ ಸಂದೇಶ ಕಳುಹಿಸಿದ್ದಲ್ಲದೆ ತನ್ನ ಸ್ಟೇಟಸ್ನಲ್ಲಿ ಶ್ರೀರಾಮ ಮಂದಿರದ ಚಿತ್ರದ ಮೇಲೆ ಅಲ್ಲಾ ಹೋ ಅಕ್ಬರ್ ಎಂದು ಹಾಕಿಕೊಂಡಿದ್ದಾನೆ. ಆಗ ಯೋಗೇಶನು ತನ್ನ ಸ್ನೇಹಿತ ನಾಗೇನಹಳ್ಳಿ ಗ್ರಾಮದ ಶಿವನಗೌಡ ಭರಮನಗೌಡ ಮುಲ್ಕಿಗೌಡ್ರ ಕರೆ ಮಾಡಿ ನಡೆದ ಸಂಗತಿ ತಿಳಿಸಿದ್ದಾನೆ. ಆಗ ಶಿವನಗೌಡನು ಹಲಗೇರಿ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ದೂರು ದಾಖಲಿಸಿದ್ದಾನೆ.
ದೂರು ದಾಖಲಿಸಲು ಮೀನಮೇಷ:
ಇದಕ್ಕೂ ಮೊದಲು ಫಿರ್ಯಾದಿ ಶಿವನಗೌಡ ಆರೋಪಿ ವಿರುದ್ಧ ದೂರು ದಾಖಲಿಸಲು ಪೊಲೀಸ್ ಠಾಣೆಗೆ ತೆರಳಿದಾಗ ಮೊದಲಿಗೆ ಪೊಲೀಸರು ಸತಾಯಿಸಿದ್ದಾರೆ. ಈ ವಿಷಯ ಅರಿತ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಅರುಣಕುಮಾರ ಪೂಜಾರ ತಕ್ಷಣವೇ ಹಲಗೇರಿ ಪೊಲೀಸ್ ಠಾಣೆಗೆ ತೆರಳಿ ಅಧಿಕಾರಿಗಳಿಗೆ ಪರಿಸ್ಥಿತಿ ವಿವರಿಸಿದಾಗ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರಧಾನಿ ವಿರುದ್ಧ ಅವಹೇಳನಕಾರಿ ಸಂದೇಶ ಕಳುಹಿಸಿದ ಆರೋಪದ ಮೇರೆಗೆ ಆರೋಪಿ ರಾಣೇಬೆನ್ನೂರು ತಾಲೂಕಿನ ಹೆಡಿಯಾಲ ಗ್ರಾಮದ ಸಾದಿಕ್ನನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.