For the best experience, open
https://m.samyuktakarnataka.in
on your mobile browser.

ಪ್ರಭುತ್ವ ರಾಜಕಳೆಗೆ ಜನರ ಜೀವಕಳೆ

04:28 AM Sep 16, 2024 IST | Samyukta Karnataka
ಪ್ರಭುತ್ವ ರಾಜಕಳೆಗೆ ಜನರ ಜೀವಕಳೆ

ಜನರ ಮೈಮನಗಳಲ್ಲಿ ಬೆರೆತುಹೋಗಿರುವ ಹಲವಾರು ಸಂಗತಿಗಳು ಬದುಕಿನ ಲೋಕ ನೀತಿಯಾಗಿ ಆಡಳಿತ ಸೂತ್ರವಾಗಿರುವ ಅಂಶಗಳು ಜನರ ಅನುಭವಕ್ಕೆ ಬಾರದಿರುವ ಸಾಧ್ಯತೆಗಳು ಹೆಚ್ಚು. ಏಕೆಂದರೆ, ಲೋಕನೀತಿ ಎಂಬುದು ಯಾರೊಬ್ಬರ ಊಳಿಗದ ಸ್ವತ್ತಲ್ಲ. ಅದು ಪ್ರತಿಯೊಬ್ಬರ ಮೂಲಕ ಅರಳುವ ಜ್ಞಾನಕೋಶ. ಗ್ರೀಸ್ ದೇಶದಲ್ಲಿ ಅವತಾರವೆತ್ತಿ ಫ್ರಾನ್ಸ್, ಜರ್ಮನಿ, ಬ್ರಿಟನ್ ಮೊದಲಾದ ದೇಶಗಳಲ್ಲಿ ಹೊಸ ರೂಪ ಪಡೆದುಕೊಂಡು ಭಾರತವೂ ಸೇರಿದಂತೆ ಪೌರ್ವಾತ್ಯ ದೇಶಗಳಲ್ಲಿ ಚಿಗುರೊಡೆದ ಪ್ರಜಾಪ್ರಭುತ್ವ ಲೋಕದ ದೃಷ್ಟಿಯಲ್ಲಿ ಹೆಮ್ಮರ; ಆದರೆ, ತತ್ವಜ್ಞಾನಿಗಳ ದೃಷ್ಟಿಯಲ್ಲಿ ಅದಿನ್ನೂ ಬೆಳೆಯುತ್ತಿರುವ ಕೂಸು.
ಪ್ರಜಾಪ್ರಭುತ್ವದ ಅಂತರರಾಷ್ಟ್ರೀಯ ದಿನಾಚರಣೆ ಸಂದರ್ಭದಲ್ಲಿ ಊರಿನಿಂದ ಹಿಡಿದು ರಾಜಧಾನಿಯವರೆಗಿನ ಸಮಸ್ತ ಚಟುವಟಿಕೆಗಳನ್ನು ನಿಯಂತ್ರಿಸುತ್ತಲೇ ಮುಕ್ತ ಸ್ವಾತಂತ್ರö್ಯವನ್ನು ಒದಗಿಸುವ ಲೋಕನೀತಿಯ ಜನಕರು ಯಾರೆಂದರೆ ಅದು ನಾವೇ ಎಂದು ಗರ್ವದಿಂದ, ಹೆಮ್ಮೆಯಿಂದ ಅಭಿಮಾನದಿಂದ ಹೇಳಿಕೊಳ್ಳಬಹುದಾದ ಏಕೈಕ ಹೆಗ್ಗಳಿಕೆ ಭಾವಾವೇಶಕ್ಕೆ ಇಳಿಸದೆ ವಾಸ್ತವ ಲೋಕದ ಸ್ಥಿತಿಗತಿಗಳ ಸುಧಾರಣೆಗೆ ಎಲ್ಲರಲಿ ಒಂದಾಗುವ ಮನೋಧರ್ಮವನ್ನು ರೂಡಿಸಿಕೊಳ್ಳುವ ಕಾಲಘಟ್ಟದಲ್ಲಿ ರೂಪಾಂತರಗಳು ಸ್ವಾಭಾವಿಕ. ಜಗತ್ತಿನಲ್ಲಿಯೇ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದ ಕಡೆ ಎಲ್ಲಾ ದೇಶಗಳ ಕುತೂಹಲದ ಕಣ್ಣು ಬೀಳಲು ಕಾರಣಗಳು ಹಲವಾರು. ಉಜ್ವಲ ಪರಂಪರೆ, ಸಾಂವಿಧಾನಿಕ ಚೌಕಟ್ಟನ್ನು ಪಾಲಿಸುವ ಶಿಸ್ತಿನ ಜನ, ಏಕತೆಯ ಕಡೆಗೆ ಗುರಿ ಇಟ್ಟರೂ ಬಹುತ್ವವನ್ನು ಮರೆಯದೆ ಮುನ್ನೆಲೆಗೆ ತರುವ ಛಾತಿಯ ಸಮಾಜ ಹಾಗೂ ಸರ್ವೋದಯದ ಪರಿಕಲ್ಪನೆಯಲ್ಲಿ ಪ್ರತಿಯೊಬ್ಬರ ಬಾಳಿನ ದೀವಿಗೆಯನ್ನು ನಂದಾದೀಪದಂತೆ ಬೆಳಗಲು ಮುಂದಾಗುವ ಸಮಾಜದ ವಿವಿಧ ಸ್ತರಗಳ ಗಣ್ಯಮಾನ್ಯರ ಬೆಂಗಾವಲಿನಲ್ಲಿ ದೇಶ ಸಾಗುತ್ತಿರುವಾಗ ಎಡವುವುದು ಸ್ವಾಭಾವಿಕ. ಎಡವಟ್ಟುಗಳಾಗುವುದು ಕೂಡಾ ಅಷ್ಟೇ ಸ್ವಾಭಾವಿಕ. ಎಡಬಿಡಂಗಿಯಂತೆ ಕಾಣುವುದೂ ಕೂಡಾ ಇನ್ನೂ ಸ್ವಾಭಾವಿಕ. ಇಂತಹ ಸನ್ನಿವೇಶವನ್ನು ಸುಧಾರಿಸಿಕೊಂಡು ಅನುಭವದ ಮೂಲಕ ಮುಂದಿನ ದಾರಿಗೆ ಸಾಗಲು ಮೊದಲಿಗೆ ಪ್ರತಿವಾದ ಹೂಡದೆ ಸಂವಾದಗಳ ಮೂಲಕವೇ ಸಂಧಾನ ಮಾರ್ಗದಲ್ಲಿ ಸರ್ವಸಮ್ಮತ ನಿಲುವನ್ನು ರೂಪಿಸಿಕೊಂಡು ಹೆಜ್ಜೆ ಹಾಕುತ್ತಿರುವ ಸೊಗಸು ನಿಜಕ್ಕೂ ಅಗ್ನಿದಿವ್ಯ.
೧೨ನೆಯ ಶತಮಾನದಲ್ಲಿಯೇ ಕರ್ನಾಟಕದಲ್ಲಿ ಬಸವಾದಿ ಶರಣರ ಮೂಲಕ ಪ್ರಜಾಪ್ರಭುತ್ವದ ಪೈರು ಸೊಂಪಾಗಿ ಬೆಳೆದದ್ದನ್ನು ಇಡೀ ವಿಶ್ವವೇ ಗಮನಿಸಿದೆ. ಅನುಭವ ಮಂಟಪ ಎಂಬುದು ಸಮಸಮಾಜ ಸಂಸ್ಥಾಪಿಸುವ ನಿಟ್ಟಿನಲ್ಲಿ ಎಲ್ಲಾ ವರ್ಗದವರ ಪ್ರಾತಿನಿಧ್ಯ ಇರುವ ಒಂದು ಶಾಸನಸಭೆಯ ಪ್ರತಿರೂಪವಾಗಿತ್ತು. ರಾಷ್ಟ್ರಕ್ಕೊಂದು ಪರಿಪಕ್ವವಾದ ದೂರದೃಷ್ಟಿಯ ಸಂವಿಧಾನವನ್ನು ಕೊಟ್ಟ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸಮಾನತೆ, ಭ್ರಾತೃತ್ವ ಹಾಗೂ ಸ್ವಾತಂತ್ರ್ಯದ ಪರಿಕಲ್ಪನೆಗೆ ಕಾನೂನಿನ ಚೌಕಟ್ಟನ್ನು ರೂಪಿಸಿಕೊಟ್ಟು ಹೋಗಿರುವುದು ಭಾರತದಲ್ಲಿ ಜನತಂತ್ರ ಅಜರಾಮರವಾಗಿರಲು ಭದ್ರ ಬುನಾದಿ. ಇಂತಹ ಪುಣ್ಯ ಪುರುಷರ ಪರಿಶ್ರಮದ ಫಲವೇ ಈಗ ನಾವೆಲ್ಲರೂ ಪಾತ್ರಧಾರಿಗಳು, ಸೂತ್ರಧಾರಿಗಳು ಹಾಗೂ ಫಲಾನುಭವಿಗಳೂ ಆಗಿರುವ ಸುಸ್ಪಷ್ಟ ಕಾನೂನಿನ ಆಡಳಿತವನ್ನು ಹೊಂದಿರುವ ಸಾಂವಿಧಾನಿಕ ವ್ಯವಸ್ಥೆ.
ನಿಜ. ಪ್ರಜಾಪ್ರಭುತ್ವವೆಂದರೆ ಸ್ವರ್ಗಸೀಮೆಯಲ್ಲ. ನಾವಿರುವ ಸೀಮೆಯನ್ನೇ ಸ್ವರ್ಗವಾಗಿಸುವ ಪ್ರಯತ್ನ ಅಷ್ಟೆ. ಇದು ಒಬ್ಬರ ಮೂಲಕ ಆಗುವ ಕೆಲಸವೂ ಅಲ್ಲ. ಎಲ್ಲರೂ ಒಂದೇ ದಾರಿಯಲ್ಲಿ ಸಾಗಿ ಚಿಂತನ ಮಂಥನ ಮೂಲಕ ಭಿನ್ನಮತಗಳು ಉದ್ಭವಿಸಿದಾಗ ಅವುಗಳಿಗೆ ಸಹಮತವನ್ನು ಕಂಡುಕೊಳ್ಳುತ್ತಲೇ ಸಹನೆ ಮತ್ತು ಕರುಣೆಯಲ್ಲಿ ಸಾಮರಸ್ಯದ ಸಮಾಜವನ್ನು ಸೃಷ್ಟಿಸುವುದೇ ಆರೋಗ್ಯಕರ ಸಮಾಜ ಬಲವರ್ಧನೆ ಮಾಡುವ ಕೆಲಸ. ಪ್ರಜಾಪ್ರಭುತ್ವವೆಂಬುದು ಜನರಿಂದ-ಜನರಿಗಾಗಿ- ಜನರಿಗೊಸ್ಕರ ಇರುವ ಒಂದು ಪವಿತ್ರ ಸಾಧನ. ಹೆಚ್ಚಿನವರ ಕಲ್ಯಾಣಕ್ಕೆ ಕೆಲವರಿಗೆ ತೊಂದರೆಯಾದರೆ ಸಹಿಸಿಕೊಳ್ಳಬೇಕಾದದ್ದು ಅನಿವಾರ್ಯ. ಆದರೆ, ಸಹಿಸಿಕೊಂಡ ಸಂತ್ರಸ್ತರ ಬಗ್ಗೆ ಕರುಣೆ ಮಮತೆಗಳು ಉಕ್ಕಿ ಹರಿದಾಗಲಷ್ಟೆ ಸಾಮರಸ್ಯದ ಜ್ಯೋತಿ ಬೆಳಗಲು ಸಾಧ್ಯ.
ಚುನಾವಣೆ ಎಂಬುದು ಜನತಂತ್ರ ಪದ್ಧತಿಯ ಒಂದು ಹಬ್ಬ. ನಮ್ಮನ್ನಾಳುವ ನಾಯಕನನ್ನು ನಾವೇ ಆರಿಸಿಕೊಳ್ಳುವಾಗ ಆಯ್ಕೆಯನ್ನು ರಾಗದ್ವೇಷಗಳಿಂದ ಮುಕ್ತವಾಗಿ ವ್ಯಕ್ತಿಯನ್ನು ಮಾತ್ರ ನೋಡದೆ ಆತನ ವ್ಯಕ್ತಿತ್ವವನ್ನು ಗುರುತಿಸಿ, ಆತನ ಚರಿತ್ರೆಗೆ ಮಾತ್ರ ಸೀಮಿತವಾಗದೆ ಆತನ ಚಾರಿತ್ರ್ಯವನ್ನು ಗಮನಿಸಿ ವಿಶ್ವಾಸಾರ್ಹತೆಯ ಅಂಶವನ್ನು ಗುರುತಿಸಿ ನಿರ್ಧರಿಸಿದರೆ ಆಗ ನಾವು ಅಪೇಕ್ಷಿಸುವ ನಾಯಕ ಒದಗಬಹುದು. ಆದರೆ, ಒಬ್ಬರ ಆಯ್ಕೆಯಿಂದ ಅಂತಹ ನಾಯಕ ಹುಟ್ಟುವುದಿಲ್ಲ. ಇಂತಹ ನಾಯಕನನ್ನು ಅಪೇಕ್ಷಿಸುವ ಜನವರ್ಗ ಹೆಚ್ಚಾಗಬೇಕು. ಅರ್ಥಾತ್ ಜನ ಗುಣ ನೋಡಿ ಆಯ್ಕೆ ಮಾಡುವ ಮಾರ್ಗವನ್ನು ಅನುಸರಿಸಿದರೆ ಆಗ ರಾಜಕಾರಣದ ಬಣ್ಣವೇ ಬದಲು. ಆದರೆ, ಕೈಗೆ ದೊರೆತ ಅವಕಾಶದ ಅಸ್ತ್ರವನ್ನು ವಿವೇಚನೆಯಿಂದ ಬಳಕೆ ಮಾಡದೆ ಮತ್ತೆ ರಾಜಕಾರಣ ಹಾಗೂ ರಾಜಕಾರಣಿಗಳನ್ನು ದೂಷಿಸುವ ಪ್ರವೃತ್ತಿ ಕೇವಲ ಮೈಪರಚಿಕೊಳ್ಳುವ ವರ್ತನೆಯಷ್ಟೆ. ವಿವೇಚನೆಯ ಗುಣವನ್ನು ವಿವೇಕದ ಮೂಲಕ ತಿದ್ದಿಕೊಳ್ಳುವ ಮಾರ್ಗಕ್ಕೆ ನಾವೆಲ್ಲರೂ ಬಂದದ್ದೇ ಆದರೆ ಆಗ ಪ್ರಜಾಪ್ರಭುತ್ವವೆಂಬುದು ಅರ್ಥದಲ್ಲಿ ಸ್ವರ್ಗಸೀಮೆ ಆದೀತು.