ಪ್ರವಾಹಕ್ಕೆ ಬಾರದ ಸಚಿವರು
ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆಯಾಗಿದೆ. ಬಹುತೇಕ ಜಿಲ್ಲೆಗಳಲ್ಲಿ ಕಳೆದ ಎರಡು ವರ್ಷಗಳಿಂದ ಕಾಣದ ಪ್ರವಾಹ ಈ ಬಾರಿ ಎಲ್ಲ ನದಿಗಳಲ್ಲಿ ಕಂಡುಬಂದಿದೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಕಾವೇರಿ ನದಿಗೆ ಬಾಗಿನ ಅರ್ಪಿಸುವುದರಲ್ಲಿ ಉತ್ಸಾಹ ತೋರಿದ್ದಾರೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಅದೇ ಉತ್ಸಾಹದಲ್ಲಿ ತಮ್ಮ ತಮ್ಮ ಜಿಲ್ಲೆಗಳಲ್ಲಿ ವಾಸ್ತವ್ಯ ಹೂಡಿ ಅಧಿಕಾರಿಗಳೊಂದಿಗೆ ಕೈಜೋಡಿಸುವ ಕೆಲಸ ಮಾಡಿಲ್ಲ. ಮುಖ್ಯಮಂತ್ರಿ ಈಗ ಸಚಿವರಿಗೆ ತಮ್ಮ ತಮ್ಮ ಜಿಲ್ಲೆಗಳಿಗೆ ಹಿಂತಿರುಗುವಂತೆ ಹೇಳುವ ಪರಿಸ್ಥಿತಿ ಬಂದಿದೆ. ಇದು ನಾಚಿಕೆಗೇಡಿನ ಸಂಗತಿ. ಇತ್ತೀಚೆಗೆ ಲೋಕಸಭೆ ಚುನಾವಣೆಯಲ್ಲಿ ಓಟಿಗಾಗಿ ಮನೆ ಮನೆ ಸುತ್ತಿದ ಸಚಿವರು ಈಗ ಜನ ಕಷ್ಟದಲ್ಲಿದ್ದಾಗ ಅವರ ಕಣ್ಣೀರು ಒರೆಸುವ ಕೆಲಸ ಮಾಡದೇ ಇರುವುದು ನಿಜಕ್ಕೂ ದುರ್ದೈವ. ಮತಗಳಿಕೆಗಾಗಿ ಆಗ ಸಚಿವರು ವರ್ತಿಸಿದ ರೀತಿ ಕೇವಲ ನಾಟಕ ಎಂಬುದು ಈಗ ಸ್ಪಷ್ಟಗೊಳ್ಳುತ್ತಿದೆ. ಹಾರ ತುರಾಯಿ ಪಡೆಯುವಾಗ ತಾಮುಂದು ನಾಮುಂದು ಎನ್ನುವುದು, ಕಷ್ಟ ಬಂದಾಗ ಅಧಿಕಾರಿಗಳನ್ನು ಮುಂದೆ ತಳ್ಳಿ ಆಮೇಲೆ ಅವರನ್ನೇ ದೂರುವುದು ಸರಿಯಾದ ಕ್ರಮವಲ್ಲ. ಬೆಂಗಳೂರಿನಲ್ಲೇ ಕುಳಿತು ಕೇಂದ್ರ-ರಾಜ್ಯ ಸರ್ಕಾರದ ವಿರುದ್ಧ ಆರೋಪ-ಪ್ರತ್ಯಾರೋಪ ಮಾಡುವುದು ಮೊದಲು ನಿಲ್ಲಿಸಿ ಪ್ರವಾಹ ಪೀಡಿತ ಪ್ರದೇಶಕ್ಕೆ ಹೋಗಿ ಅಲ್ಲೇ ಬಿಡಾರ ಹೂಡಬೇಕು.
ಅಧಿಕಾರಿಗಳಿಗೆ ಸೀಮಿತ ಅಧಿಕಾರ ಇರುತ್ತದೆ. ಸಚಿವರಿಗೆ ವಿವೇಚನಾ ಅಧಿಕಾರದಲ್ಲಿ ಸ್ಥಳದಲ್ಲೇ ತೀರ್ಮಾನ ಕೈಗೊಳ್ಳುವ ಅವಕಾಶವಿದೆ. ಇದನ್ನು ಇಂಥ ತುರ್ತು ಸಂದರ್ಭದಲ್ಲಿ ಬಳಸಬೇಕು. ಜಿಲ್ಲಾ ಸಚಿವರು ಮತ್ತು ಶಾಸಕರು ಒಂದುಗೂಡಿ ಕೆಲಸ ಮಾಡಿದರೆ ಜನರಿಗೆ ತುರ್ತು ಪರಿಹಾರ ಕೊಡುವುದು ಕಷ್ಟವಲ್ಲ.
ನಿಸರ್ಗ ಯಾರ ಕೈಯಲ್ಲೂ ಇಲ್ಲ. ಕೆಲವು ತಿಂಗಳ ಹಿಂದೆ ಬರಗಾಲ ಬಂದಿತ್ತು. ಆಗಲೂ ಜನ ಕುಡಿಯುವ ನೀರಿಗೆ ತತ್ತರಿಸಿದರು. ಟ್ಯಾಂಕರ್‌ಗಳಲ್ಲಿ ಕುಡಿಯುವ ನೀರು ಒದಗಿಸಬೇಕಾದ ಸಂದರ್ಭ ಬಂದಿತ್ತು. ಆಗಲೂ ಸಚಿವರಲ್ಲಿ ಬಹುತೇಕರು ಜಿಲ್ಲೆ ಕಡೆ ತಲೆಹಾಕಲಿಲ್ಲ. ಬರಗಾಲ ಕಳೆದು ಈಗ ಪ್ರವಾಹ ಬರುತ್ತಿದೆ. ಈಗಲೂ ಸಚಿವರು ಹೋಗುತ್ತಿಲ್ಲ ಎಂದರೆ ಇವರ ಬೇಜವಾಬ್ದಾರಿಗೆ ಯಾರು ಹೊಣೆಗಾರರು. ಉಪ ಮುಖ್ಯಮಂತ್ರಿಯವರು ಕೆಪಿಸಿಸಿ ಅಧ್ಯಕ್ಷರೂ ಹೌದು. ಅವರು ಪಕ್ಷದ ವತಿಯಿಂದ ಫರ್ಮಾನು ಹೊರಡಿಸಬೇಕಿತ್ತು. ಪಕ್ಷದ ಕಾರ್ಯಕರ್ತರು ಸ್ವಯಂಸೇವಕರಾಗಿ ಕೆಲಸ ಮಾಡಬೇಕಿತ್ತು. ಎಲ್ಲೂ ಇದರ ಬಗ್ಗೆ ಪ್ರಸ್ತಾಪವೇ ಇಲ್ಲ. ರಾಜಕೀಯ ಪಕ್ಷಗಳು ಇರುವುದು ಕೇವಲ ಚುನಾವಣೆಗೆ ಮಾತ್ರ ಎಂಬಂತೆ ಆಗಿದೆ. ಪ್ರಜಾಪ್ರಭುತ್ವದಲ್ಲಿ ಸರ್ಕಾರ ಒಂದು ಭಾಗವಾದರೆ ರಾಜಕೀಯ ಪಕ್ಷಗಳು ನಿರಂತರ ಸಮಾಜ ಸೇವೆಯಲ್ಲಿ ಕಾರ್ಯತತ್ಪರವಾಗಿರಬೇಕು. ಪ್ರವಾಹ ಬಂದು ಜನ ಅದರಲ್ಲೂ ಬಡವರು ಮನೆ-ಮಠ ಕಳೆದುಕೊಳ್ಳುತ್ತಾರೆ. ಅವರಿಗೆ ಕೂಡಲೇ ವಸತಿ ಸೌಲಭ್ಯ ಕಲ್ಪಿಸಿಕೊಡಬೇಕು. ಬಹುತೇಕ ಜನ ಕೂಲಿಕಾರರು. ಅವರಿಗೆ ಪ್ರವಾಹದ ಕಾಲದಲ್ಲಿ ಉದ್ಯೋಗ ಸಿಗುವುದಿಲ್ಲ. ಅವರಿಗೆ ಆಹಾರ ಉಚಿತವಾಗಿ ಕೂಡಲೇ ಒದಗಿಸಬೇಕು. ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವುದು ಸರ್ಕಾರದ ಆದ್ಯ ಕರ್ತವ್ಯ. ಇವುಗಳೆಲ್ಲ ಸಚಿವರ ನೇತೃತ್ವದಲ್ಲೇ ನಡೆಯಬೇಕು. ನಗರದ ಜನ ಹಳ್ಳಿಯ ಜನರ ಕಷ್ಟಗಳಿಗೆ ಸ್ಪಂದಿಸುವುದನ್ನು ಬಿಟ್ಟು ಜಲಪಾತಗಳನ್ನು ನೋಡಲು ಕಾರುಗಳಲ್ಲಿ ಹೋಗುತ್ತಾರೆಯೇ ಹೊರತು ಎಲ್ಲವನ್ನೂ ಕಳೆದುಕೊಂಡು ನಿಂತ ಜನರ ಕಡೆ ತಿರುಗಿಯೂ ನೋಡುವುದಿಲ್ಲ. ಇಂಥ ಅಮಾನವೀಯ ಪರಿಸ್ಥಿತಿಗೆ ಸಚಿವರು ಹಾಗೂ ರಾಜಕಾರಣಿಗಳೂ ಪರೋಕ್ಷವಾಗಿ ಕಾರಣ. ಗಣಪತಿ, ರಾಮನವಮಿ ಹಬ್ಬಗಳಿಗೆ ಸಾರ್ವಜನಿಕರಿಂದ ಚಂದಾ ಎತ್ತುವ ಜನ ಪ್ರವಾಹದಲ್ಲಿ ನೊಂದವರಿಗೆ ನೆರವು ನೀಡಲು ಮುಂದೆಬಾರದೆ ಇರುವುದು ನಿಜಕ್ಕೂ ದುರಂತದ ಸಂಗತಿ. ಅದರೆ ಜನಸಾಮಾನ್ಯರು ಇಂಥ ಕೆಳಹಂತಕ್ಕೆ ಇಳಿಯಬಾರದು. ಮುಖ್ಯಮಂತ್ರಿ ಪರಿಹಾರ ನಿಧಿ, ನೈಸರ್ಗಿಕ ವಿಕೋಪ ಪರಿಹಾರ ನಿಧಿ ಸೇರಿದಂತೆ ಹಲವು ನಿಧಿಗಳಿವೆ. ಅವುಗಳ ಬಳಕೆ ಎಲ್ಲಿ ಆಗುತ್ತಿದೆ ಎಂಬುದು ತಿಳಿಯುತ್ತಿಲ್ಲ. ಬಹುತೇಕ ಜಿಲ್ಲೆಗಳಲ್ಲಿ ಶಾಲೆ ಕಾಲೇಜುಗಳು ನಿಂತು ಹೋಗಿವೆ. ಬಹುತೇಕ ಕಡೆ ಮಳೆ ನೀರು ನಿಂತು ಸಾಂಕ್ರಾಮಿಕ ರೋಗ ಹರಡುವ ಭೀತಿ ತಲೆದೋರಿದೆ. ಎಲ್ಲ ಜನಪ್ರತಿನಿಧಿಗಳು ತಮ್ಮ ಮನಸ್ಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಿದರೆ ಸಾಕು ಪ್ರತಿಯೊಬ್ಬರ ಕನ್ನಡಿಗನ ಕಣ್ಣೀರು ಒರೆಸಬಹುದು. ಅದಕ್ಕೆ ಬೇಕಾದ ಹಣಕಾಸು ನಮ್ಮಲ್ಲೇ ಇದೆ. ನೊಂದವರಿಗೆ ನೆರವು ನೀಡುವ ಮನಸ್ಸು ಬೇಕು.