For the best experience, open
https://m.samyuktakarnataka.in
on your mobile browser.

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: 6ನೇ ಆರೋಪಿ ವಶಕ್ಕೆ

07:57 PM Dec 20, 2024 IST | Samyukta Karnataka
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ  6ನೇ ಆರೋಪಿ ವಶಕ್ಕೆ

ಮಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿದೇಶದಿಂದ ವಾಪಸ್ ಬರುತ್ತಿದ್ದ 6ನೇ ಆರೋಪಿಯನ್ನು ದೆಹಲಿ ವಿಮಾನದಲ್ಲಿ ಎನ್​ಐಎ ಅಧಿಕಾರಿಗಳು ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೋಡಾಜೆ ನಿವಾಸಿ ಮಹಮ್ಮದ್ ಶರೀಫ್(55) ಬಂಧಿತ ಆರೋಪಿಯಾಗಿದ್ದಾನೆ.
ಆರೋಪಿಯ ಪತ್ತೆಗಾಗಿ ಎನ್​ಐಎ‌ ಅಧಿಕಾರಿಗಳು 5 ಲಕ್ಷ ರೂ. ಬಹುಮಾನ ಘೋಷಿಸಿದ್ದರು. ಈತ ಪ್ರವೀಣ್ ಕೊಲೆಗೆ ಸಂಚು ರೂಪಿಸುತ್ತಿದ್ದ ತಂಡದಲ್ಲಿದ್ದ. ಜೊತೆಗೆ ನಿಷೇಧಿತ ಪಿಎಫ್ಐ ಸಂಘಟನೆಯ ಮುಖಂಡನಾಗಿದ್ದ. ಎರಡು ಬಾರಿ ಎನ್​ಐಎ ಅಧಿಕಾರಿಗಳು ಶರೀಫ್ ಮನೆ ಮೇಲೆ ದಾಳಿ ಮಾಡಿದ್ದರು. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಸಹಚರರ ಸ್ಥಳಗಳ ಮೇಲೆ ಇತ್ತೀಚೆಗೆ ಎನ್​ಐಎ ದಾಳಿ ಮಾಡಿ ದಾಖಲೆಗಳು ಜಪ್ತಿ ಮಾಡಿಕೊಂಡಿತ್ತು. ಕರ್ನಾಟಕ ಸೇರಿ ತಮಿಳುನಾಡಿನ 16 ಕಡೆ ಎನ್​​​ಐಎ ಅಧಿಕಾರಿಗಳು ದಾಳಿ ಮಾಡಿದ್ದರು. ಹತ್ಯೆಯ ಪ್ರಮುಖ ಆರೋಪಿ ಮುಸ್ತಫಾ ಪೈಚಾರ್‌ಗೆ ಇಬ್ಬರು ಆರೋಪಿಗಳು ಆಶ್ರಯ ನೀಡಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಡಂಗಡಿಯಲ್ಲಿರುವ ಆರೋಪಿ ನೌಷದ್ ಮನೆ ಮೇಲೆ ಕೂಡ ಎನ್​ಐಎ ಅಧಿಕಾರಿಗಳು ಇತ್ತೀಚೆಗೆ ದಾಳಿ ಮಾಡಿದ್ದರು. ದಾಳಿ ವಿಚಾರ ತಿಳಿದು ಮನೆ ಲಾಕ್ ಮಾಡಿ ಕುಟುಂಬ ಪರಾರಿ ಆಗಿತ್ತು. ನೌಷದ್ ಪತ್ತೆಗೂ ಎನ್​ಐಎ 2 ಲಕ್ಷ ರೂ. ಬಹುಮಾನ ಘೋಷಿಸಿತ್ತು. ಎನ್​ಐಎ ಪ್ರವೀಣ್ ನೆಟ್ಟಾರು ಕೊಲೆ ಕೇಸ್ ತನಿಖೆ ನಡೆಸುತ್ತಿದ್ದು, 21 ಮಂದಿಯನ್ನು ಬಂಧಿಸಿ ಆರೋಪಿಗಳ ವಿರುದ್ಧ ಜಾರ್ಜ್‌ಶೀಟ್ ಸಲ್ಲಿಕೆ ಮಾಡಿತ್ತು. ಮಹಮ್ಮದ್ ಶರೀಫ್ ಸೇರಿದಂತೆ ಈವರೆಗೆ 20 ಜನರನ್ನು ಬಂಧಿಸಲಾಗಿದೆ.