For the best experience, open
https://m.samyuktakarnataka.in
on your mobile browser.

ಪ್ರಸಾದಕ್ಕೆ ಪರವಾನಗಿ: ರಾಜ್ಯ ಸರ್ಕಾರದ್ದು ಹುಚ್ಚು ಆದೇಶ

10:17 PM Sep 06, 2024 IST | Samyukta Karnataka
ಪ್ರಸಾದಕ್ಕೆ ಪರವಾನಗಿ  ರಾಜ್ಯ ಸರ್ಕಾರದ್ದು ಹುಚ್ಚು ಆದೇಶ

ಹುಬ್ಬಳ್ಳಿ: ಗಣೇಶ ಪೆಂಡಾಲ್‌ಗಳಲ್ಲಿ ಪ್ರಸಾದ ಸಿದ್ಧಪಡಿಸಲು ಆಹಾರ ಸುರಕ್ಷತಾ ಇಲಾಖೆ ಪರವಾನಿಗೆ ಪಡೆಯಬೇಕು ಎಂದಿರುವ ರಾಜ್ಯ ಸರ್ಕಾರದ ಆದೇಶಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ರಾತ್ರಿ ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯ ಆಹಾರ ಇಲಾಖೆ ಹುಚ್ಚರ ರೀತಿಯಲ್ಲಿ ಇಂಥ ಆದೇಶ ಹೊರಡಿಸಿದೆ ಅಷ್ಟೇ ಎಂದು ಟೀಕಿಸಿದರು.
ಎಂಪ್ಯಾನಲ್ ಅದವರಿಂದಲೇ ಪ್ರಸಾದ ತಯಾರಿಸಬೇಕು ಎಂದಿರುವ ರಾಜ್ಯ ಸರ್ಕಾರದ ಈ ಸೂಚನೆ ಸರಿಯಲ್ಲ ಎಂದು ಖಂಡಿಸಿದರು.
ಗಣೇಶ ಹಬ್ಬದ ವೇಳೆ ದೇಶಾದ್ಯಂತ, ರಾಜ್ಯಾದ್ಯಂತ ಬಹಳ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಆಹಾರ ಸುರಕ್ಷಾ ಕ್ರಮ ಕೈಗೊಳ್ಳುವುದು ಸರಿ. ಆದರೆ, ಹೀಗೆ ಹುಚ್ಚರ ರೀತಿ ಅಲ್ಲ ಎಂದು ರಾಜ್ಯ ಸರ್ಕಾರವನ್ನು ತಿವಿದರು.
ಹಿಂದೂ ಹಬ್ಬಕ್ಕೆ ತೊಂದರೆ ಕೊಡಲೆಂದೇ ಈ ಕ್ರಮ: ರಾಜ್ಯದಲ್ಲಿ ಹಿಂದೂ ಹಬ್ಬಕ್ಕೆ ತೊಂದರೆ ಕೊಡಲೆಂದೇ ರಾಜ್ಯ ಸರ್ಕಾರದಿಂದ ಇಂಥ ಆದೇಶ ಹೊರ ಬಿದ್ದಿದೆ. ಗಣೇಶ ಪ್ರತಿಷ್ಠಾಪನೆ ಮಾಡುವ ಸಂಘಟಕರು ಇದಕ್ಕೆ ಕಿವಿಗೊಡಬೇಕಿಲ್ಲ ಎಂದು ಹೇಳಿದರು.
ಎಲ್ಲಾದರೂ ದುರುದ್ದೇಶದಿಂದ ಪ್ರಸಾದ ದಲ್ಲಿ ವಿಷ ಬೆರೆಸುವಂತ ಪ್ರಕರಣ ನಡೆದರೆ ಕ್ರಿಮಿನಲ್ ಕೇಸ್ ದಾಖಲಿಸಲಿ. ಆದg,ೆ ಸರ್ಕಾರವೇ ಹೀಗೆ ದುರುದ್ದೇಶ ಇಟ್ಟುಕೊಂಡು ಆದೇಶ ಹೊರಡಿಸಿದರೆ ಹೇಗೆ? ಎಂದು ಪ್ರಶ್ನಿಸಿದರು.
ಹಿಂದೂ ಹಬ್ಬದಲ್ಲಷ್ಟೇ ಆಹಾರ ಸುರಕ್ಷೆ ನೆನಪಾಗುತ್ತೆದೆಯೇ?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಿಂದೂಗಳ ಹಬ್ಬ ಬಂದಾಗ ಮಾತ್ರ ಆಹಾರ ಸುರಕ್ಷತಾ ನಿಯಮ ಇರೋದು ನೆನಪಾಗುತ್ತದೆಯೇ? ಎಂದ ಸಚಿವ ಜೋಶಿ, ಇಫ್ತಿಯಾರ್ ಕೂಟ ಇದ್ದಾಗ ಇಂಥ ಆದೇಶ ಹೊರಡಿಸಿ ನೋಡೋಣ ಎಂದು ಸವಾಲು ಹಾಕಿದರು.
ಸ್ವಚ್ಛತೆ, ಶುಚಿತ್ವ ಕಾಪಾಡಿಕೊಳ್ಳಿ: ಗಣೇಶ ಪೆಂಡಾಲ್‌ಗಳಲ್ಲಿ ಪ್ರಸಾದ ತಯಾರಿಕೆ ವೇಳೆ ಸ್ವಚ್ಛತೆ, ಶುಚಿತ್ವ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದ ಸಚಿವರು, ಅಗತ್ಯ ಬಿದ್ದರೆ ರಾಜ್ಯ ಸರ್ಕಾರದ ಈ ಆದೇಶ ಧಿಕ್ಕರಿಸಿ ಎಂದು ಕರೆ ಕೊಟ್ಟರು.