For the best experience, open
https://m.samyuktakarnataka.in
on your mobile browser.

ಪ್ರಸಾದ ತಿಂದು ಮಹಿಳೆ ಸಾವು: ಹಲವರು ಅಸ್ವಸ್ಥ

05:37 PM Dec 25, 2023 IST | Samyukta Karnataka
ಪ್ರಸಾದ ತಿಂದು ಮಹಿಳೆ ಸಾವು  ಹಲವರು ಅಸ್ವಸ್ಥ

ಬೆಂಗಳೂರು: ಹನುಮ ಜಯಂತಿ ಹಿನ್ನೆಲೆ ಭಾನುವಾರ ಭಕ್ತರು ನಗರದ ವೆಂಕಟರಮಣಸ್ವಾಮಿ, ಊರು ಬಾಗಿಲು ಆಂಜನೇಯ ಸ್ವಾಮಿ, ಕೋಟೆ ಆಂಜನೇಯ ಸ್ವಾಮಿ ದೇವಾಲಯಗಳಿಗೆ ತೆರಳಿದ್ದರು. ಅಲ್ಲಿ ನೀಡಿದ ದೇವಾಲಯಗಳಲ್ಲಿ ಪ್ರಸಾದ ಸೇವಿಸಿ ನೂರಾರು ಜನ ಅಸ್ವಸ್ಥಗೊಂಡು ಓರ್ವ ಮಹಿಳೆ ಹೊಸಕೋಟೆಯ ಸಿಲಿಕಾನ್ ಸಿಟಿ ಆಸ್ವತ್ರೆಯಲ್ಲಿ ಮೃತಪಟ್ಟ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದಲ್ಲಿ ನಡೆದಿದೆ.
ಘಟನೆಯಲ್ಲಿ ಸಿದ್ದಗಂಗಮ್ಮ (65) ಎನ್ನುವ ಮಹಿಳೆಯೇ ಸಾವನ್ನಪ್ಪಿದ್ದಾಳೆ. 15ಕ್ಕೂ ಅಧಿಕ ಜನರ ಸ್ಥಿತಿ ಗಂಭೀರವಾಗಿದೆ. ಅಲ್ಲಿ ಪುಳಿಯೊಗರೆ, ಪಾಯಸ ಹಾಗೂ ಲಡ್ಡನ್ನು ಪ್ರಸಾದದ ರೂಪದಲ್ಲಿ ನೆರೆದಿದ್ದ ಭಕ್ತರು ಸೇವಿಸಿದ್ದಾರೆ. ಹೊಸಕೋಟೆ ಖಾಸಗಿ ಆಸ್ಪತ್ರೆ, ಕೋಲಾರ ಹಾಗೂ ಬೆಂಗಳೂರಿನ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಹೊಸಕೋಟೆ ಪ್ರಭಾರ ಟಿಎಚ್‌ಒ ಡಾ. ಸುಮಾ ಮಾಹಿತಿ ನೀಡಿದ್ದು, ಸುಮಾರು ನಾಲ್ಕು ಖಾಸಗಿ ಆಸ್ಪತ್ರೆಗಳಲ್ಲಿ 80ಕ್ಕೂ ಹೆಚ್ಚು ಜನ ದಾಖಲಾಗಿದ್ದಾರೆ. ಎಲ್ಲಾ ಸ್ಯಾಂಪಲ್‌ಗಳನ್ನು ಲ್ಯಾಬ್‌ಗೆ ಕಳುಹಿಸಲಾಗಿದೆ. ಇದರ ಬಗ್ಗೆ ಕಾರಣ ಏನು ಎಂಬುದು ಲ್ಯಾಬ್ ವರದಿ ಬಳಿಕ ಗೊತ್ತಾಗಲಿದೆ. ನೀರಿನಿಂದ ಅಥವಾ ಕೆಲವು ದೇವಸ್ಥಾನಗಳಲ್ಲಿ ಪ್ರಸಾದ ಸೇವನೆ ಮಾಡಿರುವ ಬಗ್ಗೆ ಮಾಹಿತಿ ಬಂದಿದೆ. ಇದರ ಬಗ್ಗೆ ಪರಿಶೀಲನೆ ಆಗುತ್ತಿದೆ ಎಂದರು.
ಪರಿಶೀಲನೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಡಾ. ನಾಗೇಶ್, ಶನಿವಾರ ಹಾಗೂ ಭಾನುವಾರ ಪ್ರಸಾದ ತಿಂದ ಹಿನ್ನೆಲೆ ಅಸ್ವಸ್ಥರಾಗಿರುವುದು ಪ್ರಾಥಮಿಕ ಮಾಹಿತಿಯಲ್ಲಿ ಕಂಡು ಬಂದಿದೆ. ಎಲ್ಲೆಲ್ಲಿ ಪ್ರಸಾದ ಸೇವಿಸಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ. ನೀರಿನಿಂದಲೂ ಆಗಿರುವ ಶಂಕೆ ವ್ಯಕ್ತವಾಗಿದೆ. ಅಗತ್ಯ ಬಿದ್ದಲ್ಲಿ ಹೆಚ್ಚಿನ ಬೆಡ್ ಹಾಗೂ ಅಂಬುಲೆನ್ಸ್‌ಗಳ ನಿಯೋಜನೆ ಮಾಡಿಕೊಂಡಿದ್ದೇವೆ ಎಂದರು.
ಹೊಸಕೋಟೆಯ ಖಾಸಗಿ ಆಸ್ಪತ್ರೆಗಳಲ್ಲಿ ಅವಲಹಳ್ಳಿ, ನಂದಗುಡಿ ಹಾಗೂ ಹೊಸಕೋಟೆ ಠಾಣಾ ವ್ಯಾಪ್ತಿಯ ಜನರು ದಾಖಲಾಗಿದ್ದು, ಹೊಸಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಸ್ವಸ್ಥತೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮಾಹಿತಿ ಕಲೆ ಹಾಕುತ್ತಿದ್ದಾರೆ. ಆದರೆ ತಾಲೂಕು ಆರೋಗ್ಯಾಧಿಕಾರಿಗಳಿಂದ ಪೊಲೀಸರಿಗೆ ಯಾವುದೇ ಮಾಹಿತಿ ಇಲ್ಲ.