ಪ್ರಾಮಾಣಿಕ ಖರೀದಿದಾರನ ಹಕ್ಕು ಸಂರಕ್ಷಣೆ
ಈ ದಾವೆ ಮಾಡುವಾಗ ಅವಳನ್ನು ಮೊದಲೇ ಎಚ್ಚರಿಸಿದ್ದೆ. ಸುಮಾರು ನಲವತ್ತೈದು ವಯಸ್ಸಿನ ಗೃಹಿಣಿ ತನ್ನ ವಯಸ್ಕ ಇಬ್ಬರು ಗಂಡು ಮಕ್ಕಳನ್ನು ಕರೆದುಕೊಂಡು ಮಹಾರಾಷ್ಟ್ರದಿಂದ ಬಂದಿದ್ದಳು. ಅವಳ ಮಾತುಗಳನ್ನು ಮರಾಠಿ ಸೊಗಡಿನ ಕನ್ನಡದಲ್ಲಿ ಕೇಳಲು ಮಜಾ ಎನಿಸುತ್ತಿತ್ತು. ಎಲ್ಲ ಪದಗಳನ್ನು ಎಳೆ ಎಳೆದು ಮಾತನಾಡುತ್ತಿದ್ದಳು. ಮರಾಠಿ ಭಾಷೆ ನನಗೆ ಅರ್ಥವಾಗುತ್ತದೆ ಆದರೆ ಮಾತನಾಡಲು ಏನಾದರೂ ತಪ್ಪು, ಅನರ್ಥ ಆದೀತೆಂಬ ಹಿಂಜರಿಕೆ. ಪ್ರತಿ ಮಾತು ಮುಗಿದ ನಂತರ ನಿಮಗೆ ಅರ್ಥವಾಯಿತೆ ಎಂದು ಕೇಳುವಂತೆ, ನೋಡುತ್ತಿದ್ದಳು. ಆಗಿದೆ ಎನ್ನುವ ಭಾವ ಸೂಚಿಸಿದಾಗ ಮಾತು ಮುಂದುವರೆಸುತ್ತಿದ್ದಳು. ನಡುವೆ ಕನ್ನಡದಲ್ಲಿ ಪ್ರಶ್ನೆ ಕೇಳುತ್ತಿದ್ದೆ, ಅದು ಅವಳಿಗೆ ತಿಳಿಯುತ್ತಿತ್ತು. ಮಕ್ಕಳು ತಾಯಿ ಹೇಳುವದನ್ನು, ನಾನು ಉತ್ತರಿಸುವದನ್ನು ಏನೂ ತಿಳಿಯದೆ ಕಿವುಡರಂತೆ ನನ್ನನ್ನೊಮ್ಮೆ ಅವಳನ್ನೊಮ್ಮೆ ಶೂನ್ಯ ಭಾವದಿಂದ ಪಿಕಿಪಿಕಿ ನೋಡುತ್ತಿದ್ದರು. ಎಲ್ಲ ಕಾಗದ ಪತ್ರ ಪರಿಶೀಲನೆ ಮಾಡಿದೆ. ಅವಳು ಕೇಳುವ ಪರಿಹಾರ ನ್ಯಾಯಾಲಯದಿಂದ ಬಯಸುವದು ಸುಲಭ ಅಲ್ಲ ಅನಿಸಿಸಿತು. ಆದರೆ ಅವಳದು ಒಂದೇ ವರಾತ ತನಗೆ ತನ್ನ ಮಕ್ಕಳಿಗೆ ಆಸ್ತಿಯಲ್ಲಿ ಪಾಲು ಬೇಕು.
ಮೂಲತಃ ಮಹಾರಾಷ್ಟ್ರದ ಒಂದು ಊರಿನಲ್ಲಿ ಹುಟ್ಟಿ ಬೆಳೆದವಳು. ಕೆಳಮಧ್ಯಮ ವರ್ಗದ ಮರಾಠ ಕುಟುಂಬ. ಆ ಊರಿನ ಹಲವಾರು ಹೆಣ್ಣು ಮಕ್ಕಳನ್ನು ಕರ್ನಾಟಕದ ಊರುಗಳ ಗಂಡುಗಳ ಜೊತೆ ಲಗ್ನ ಮಾಡಿಕೊಟ್ಟಿದ್ದಾರೆ. ಹಲವಾರು ಕರ್ನಾಟಕದ ಹೆಣ್ಣು ಮಕ್ಕಳನ್ನು ಆ ಊರಿನ ಗಂಡುಗಳಿಗೆ ಲಗ್ನ ಮಾಡಿ ಕರೆದುಕೊಂಡು ಬಂದಿದ್ದಾರೆ. ದಕ್ಷಿಣ ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕದ ಸಂಸ್ಕೃತಿ ಒಂದೇ ತೆರನಾಗಿದೆ. ಹೀಗಾಗಿ ಎರಡು ಭಾಗದ ರಾಜ್ಯದ ಜನರಿಗೆ ಅವಿನಾಭಾವ ಸಂಬಂಧ. ತನ್ನ ತಂದೆ ತಾಯಿಗೆ ಒಬ್ಬನೆ ಗಂಡು ಮಗ, ಹೆಣ್ಣು ಮಕ್ಕಳು ಇಲ್ಲ. ಎಲೆಕ್ಟ್ರಿಕ್ ಕೆಲಸ ಮಾಡುತ್ತಾನೆ. ತಾಯಿ ಇಲ್ಲದ್ದು, ಒಂದು ಹೆಚ್ಚಿನ ಪ್ಲಸ್ ಪಾಯಿಂಟ್, ಅತ್ತೆ ಕಾಟ ಇಲ್ಲ. ಮಾವ ಹಾಸಿಗೆ ಹಿಡಿದಿದ್ದಾನೆ, ಬದುಕುವದು ಕೆಲವೇ ದಿನ. ಸ್ವಂತ ಮನೆ ಇದೆ. ಹೆಚ್ಚಿಗೆ ವರೋಪಚಾರ ಬೇಡ, ಇರುವಷ್ಟು ದಿನ ಮಾವನನ್ನು, ಕೆಲವೊಂದಿಷ್ಟು ತಿಂಗಳು ಮಾತ್ರ ನೋಡಿಕೊಳ್ಳಬೇಕು. ಇಷ್ಟು ಪರಿಪೂರ್ಣ ಗುಣಗಳಿರುವ ವರನು ಸಿಗಲು ಸಾಧ್ಯವೇ?. ಕೈಬಿಟ್ಟು ಹೋದಾನು ಎಂದು ಅವಸರದಲ್ಲಿ ಮದುವೆ ಮಾಡಿದರು. ಮದುವೆ ಮಾಡಿಕೊಂಡು ಮನೆಯ ಹೊಸಿಲು ತುಳಿದು ಬಂದು ಮೊದಲು ಹುಡುಕಿದ್ದು ಮಾವನನ್ನು. ಶಕ್ತಿ ಕಳೆದುಕೊಂಡು ನಿತ್ರಾಣವಾಗಿ ಮಲಗಿದವನಿಗೆ, ಮಗನ ಮದುವೆಯಾಗಿ ಸೊಸೆ ಬಂದಿದ್ದು ತಿಳಿಯಲಾರದ ಪರಿಸ್ಥಿತಿ. ಕನ್ಯೆ ನೋಡಲು ಬಂದ ಹಿರಿಯರು ವರನ ತಂದೆ ಬಹಳ ದಿನ ಬದುಕಲಾರ ಎಂದು ಒತ್ತಿ ಒತ್ತಿ ಹೇಳಿದ್ದು ನಿಜ ಅನಿಸಿತು.
ಸೊಸೆ ಬಂದ ವಾರದಲ್ಲಿ ಮಾವ ಪರಲೋಕ ಸೇರಿದ. ಗಂಡ ಹೆಂಡತಿ ಇಬ್ಬರೆ ನನ್ನಷ್ಟು ಅದೃಷ್ಟವಂತಳು ಯಾರು ಇಲ್ಲ ಎಂದು ಸಂಭ್ರಮಿಸಿದಳು. ಗಂಡ ಕೆಲಸ ಮಾಡಿ ಕೈ ತುಂಬ ಹಣ ತರುತ್ತಿದ್ದ. ತನ್ನ ತವರಿನ ಜೀವನಕ್ಕಿಂತ ಗಂಡನ ಮನೆ ಸುಖವೆಂದು ಸಂತಸಪಟ್ಟಳು. ಗಂಡ ಹೆಂಡತಿಗೆ ಯಾರು ಹೇಳುವವರು ಕೇಳುವವರು ಇಲ್ಲದ ಸ್ವತಂತ್ರ ಜೀವನ. ತವರು ಮನೆಯ ಸಂಬಂಧಿಕರು ನಿಮ್ಮ ಮಗಳು ಅದೃಷ್ಟವಂತಳು ಎಂದು ಹೊಟ್ಟೆಕಿಚ್ಚು ಮುಚ್ಚಿಟ್ಟು ಹೊಗಳುತ್ತಿದ್ದರು. ದಿನಗಳು, ತಿಂಗಳುಗಳು ಕಣ್ಣು ಮುಚ್ಚಿ ತೆಗೆಯುವಷ್ಟು ಸಮಯದಂತೆ ಸರಿದವು. ಗಂಡ ಒಂದು ರಾತ್ರಿ ಕುಡಿದು ಬಂದ. ಮೊದಲ ಸಲ ಗಂಡನ ವ್ಯಕ್ತಿ ಪರಿಚಯ ಆವರಣಗೊಂಡಿತು. ಮುಂಜಾನೆ ಎದ್ದು, ತಾನು ಮಾಡುವ ಕೆಲಸ ಬಹಳ ಶ್ರಮದ ಕೆಲಸ, ದಣಿವು ನೀಗಿಸಲು ವಾರಕ್ಕೆ ಒಮ್ಮೆ ಕುಡಿಯವುವದು ಅವಶ್ಯ ಎಂದು ಸಮಾಜಾಯಿಷಿ ನೀಡಿ ಪರೋಕ್ಷವಾಗಿ ಒಪ್ಪಿಗೆ ಪಡೆದ. ಅವಳಿಗೆ ಸರಿ ಅನಿಸಿತು. ಮುಂದೆ ವಾರಕ್ಕೆ ಎರಡು ಸಲ, ಮುಂದೆ ದಿನಾಲು ಕುಡಿದು ಬಂದ. ಗಂಡನಿಗೆ ಎಷ್ಟು ಕೆಲಸ ಹೆಚ್ಚಿದೆ ಎಂದು ಮರುಕಪಟ್ಟಳು. ಹೀಗೆ ವರ್ಷಗಳು ಉರುಳಿದವು. ಎರಡು ಗಂಡು ಮಕ್ಕಳು ಹುಟ್ಟಿದವು. ಕುಡಿದು ಬಂದು ಚಿಕ್ಕ ಮಕ್ಕಳ ಮುಂದೆ ಹೊಡೆಯುತ್ತಿದ್ದ. ಗಂಡನ ಸಂಬಂಧಿಕರನ್ನು, ತವರು ಮನೆಯವರನ್ನು ಕರೆಸಿ ಬುದ್ಧಿವಾದ ಹೇಳಿಸಿದಳು. ಮಾತುಗಳು ಮೆದುಳಿಗೆ ಮುಟ್ಟದಷ್ಟು ಕುಡಿತದ ದಾಸನಾಗಿದ್ದ. ಜೀವನ ಅಸಹನೀಯವಾಯಿತು.
ತವರುಮನೆಗೆ ಹೊರೆಯಾಗಿ, ನಿಂದನೆಯ ಮಾತು ಸಹಿಸಿ ಉಳಿದಳು. ತಂದೆ ತಾಯಿ ಮೃತರಾದರು. ಅಣ್ಣ ತಮ್ಮಂದಿರು ದೂರವಾದರು. ತವರು ಮನೆಯ ಚಿಕ್ಕ ಕೋಣೆಯಲ್ಲಿ, ಸಣ್ಣಪುಟ್ಟ ಕೆಲಸ ಮಾಡಿ ತನ್ನ ಮಕ್ಕಳ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಳು. ಗಂಡನೆಂಬ ಪ್ರಾಣಿಯನ್ನು ಮರೆತುಬಿಟ್ಟಳು. ಗಂಡ, ಹೆಂಡತಿ, ಮಕ್ಕಳು ಹೇಗಿದ್ದಾರೆಂದು ನೋಡಲು ಬರಲಿಲ್ಲ. ಗಂಡ ಮನೆ ಮಾರಾಟ ಮಾಡಿದ್ದಾನೆಂದು ತಿಳಿದು ಧಾವಿಸಿ ಬಂದು ದಾಖಲೆಗಳನ್ನು ಸಂಗ್ರಹಿಸಿದಳು. ನನ್ನ ಕೈಗೆ ಕೊಟ್ಟು ಉತ್ತರಕ್ಕೆ ಕಾದು ಕುಳಿತಳು.
ಮನೆಯನ್ನು ಗಂಡ ಇವಳನ್ನು ಮದುವೆ ಆಗುವ ಹತ್ತು ವರ್ಷ ಮುಂಚೆ ಕ್ರಯಪತ್ರ ಮಾಡಿಕೊಂಡಿದ್ದನು. ಅದು ಸ್ವಯಾರ್ಜಿತ ಆಸ್ತಿ, ಮಾರಾಟ ಮಾಡಿದ್ದಾನೆ ನಿನಗೆ ಪ್ರಶ್ನಿಸಲು ಹಕ್ಕು ಇಲ್ಲ ಎಂದು ಹೇಳಿದೆ. ಮನೆ ತನ್ನ ಮಾವನು ಹಣ ಕೊಟ್ಟು ಮಗನ ಹೆಸರಲ್ಲಿ ಖರೀದಿಸಿದ್ದಾನೆ ಎಂದು ಸಮಾಜಾಯಿಷಿ ಕೊಟ್ಟಳು. ಸರಿ ಅನಿಸಲಿಲ್ಲ. ಗಂಡನ ಮೇಲೆ ನೀನು ನಿನ್ನ ಮಕ್ಕಳು ಜೀವನಾಶಕ್ಕೆ ನ್ಯಾಯಾಲಯಕ್ಕೆ ಕೇಸು ಮಾಡಬಹುದೆಂದು ಸಲಹೆ ನೀಡಿದೆ. ಜೀವನಾಂಶ ಎಲ್ಲಿಂದ ಕೊಡುತ್ತಾನೆ ಸರ್ ಎಂದಳು. ಸರ್ ಎಲ್ಲವನ್ನು ಕಳೆದು ಹೆಂಡತಿ ಮಕ್ಕಳು ಉಪವಾಸ ಇದ್ದಾರೆಂದು ಹೇಳಿ ಹಣ ಬೇಡುತ್ತ ಅಡ್ಡಾಡುತ್ತಿದ್ದಾನೆ, ಮದ್ಯಸೇವನೆ ಮಾಡಿ ಆರೋಗ್ಯ ಹಾಳಾಗಿ ಹೋಗಿದೆ. ಮೈಯೆಲ್ಲಾ ಚರ್ಮರೋಗಮಯವಾಗಿದೆ. ಮಕ್ಕಳಿಗೆ ಅವನನ್ನು ತೋರಿಸಿಲ್ಲ. ಅವನ ಪರಿಸ್ಥಿತಿ ನೋಡಿ ನಾನೇ ನನ್ನ ಜೊತೆ ಕರೆದುಕೊಂಡು ಹೋಗಲು ಪ್ರಯತ್ನಿಸಿದೆ, ಬರಲು ಸಿದ್ಧನಿಲ್ಲ. ಅವನಿಂದ ಹೇಗೆ ಜೀವನಾಂಶ ಅಪೇಕ್ಷಿಸುವದು ಎಂದು ನನ್ನನ್ನೇ ಪ್ರಶ್ನಿಸಿದಳು.
ಅವಳು ಹೇಳುವದು ನಿಜ ಅನಿಸಿತು. ಪ್ರಯತ್ನ ಮಾಡೋಣ ಎಂದು ಅರೆಬರೆ ಭರವಸೆ ನೀಡಿ ನಾಲ್ಕು ಸಲ ತಿಳಿಹೇಳಿ, ಹೆಂಡತಿ ಮಕ್ಕಳಿಗೆ ಪಾಲು ಕೇಳಿ ಆಸ್ತಿ ವಿಭಜನೆ ಮತ್ತು ಪ್ರತ್ಯೇಕ ಸ್ವಾಧೀನ ಕುರಿತು ಗಂಡ ಹಾಗೂ ಖರೀದಿದಾರನ ಮೇಲೆ ಸಿವಿಲ್ ನ್ಯಾಯಾಲಯದಲ್ಲಿ ದಾವೆ ದಾಖಲಿಸಿದೆ. ಗಂಡ ಹಾಜರಾಗಲಿಲ್ಲ. ಖರೀದಿದಾರ ವಕೀಲರ ಮುಖಾಂತರ ಹಾಜರಾಗಿ ಕೈಫಿಯತ್ ಸಲ್ಲಿಸಿ, ದಾವೆ ಆಸ್ತಿ ಗಂಡನ ಸ್ವಯಾರ್ಜಿತ ಆಸ್ತಿ ತಾನು ದುಡ್ದು ಕೊಟ್ಟು ಕ್ರಯ ಪಡೆದುಕೊಂಡ ಪ್ರಾಮಾಣಿಕ ಖರೀದಿದಾರ ಎಂದು ವಾದಿಸಿದ. ವಾದಿ ಪ್ರತಿವಾದಿಯರು ದಾಖಲೆ ಸಮೇತ ಮೌಖಿಕ ಸಾಕ್ಷಿ ಹೇಳಿಸಿದರು. ವಾದ ಮಂಡನೆ ಆಯಿತು. ನ್ಯಾಯಾಲಯವು ತೀರ್ಪು ನೀಡಿ ವಾದಿಯ ದಾವೆ ವಜಾಗೊಳಿಸಿತು. ದಾವೆ ಆಸ್ತಿ ವಾದಿಯ ಮನೆತನದ ಪಿತ್ರಾರ್ಜಿತ ಆಸ್ತಿ ಅಲ್ಲವೆಂದು, ಅದು ಗಂಡ ಸ್ವಯಾರ್ಜಿತ ಆಸ್ತಿ, ಖರೀದಿದಾರ ದಾಖಲಾತಿ ಪರಿಶೀಲನೆ ಮಾಡಿ ಕ್ರಯಪತ್ರ ಮಾಡಿಕೊಂಡ ಪ್ರಾಮಾಣಿಕ ಅಮಾಯಕ ಖರೀದಿದಾರನೆಂದು ಅಭಿಪ್ರಾಯಕ್ಕೆ ಬಂದಿತು.
ಕಕ್ಷಿದಾರಳ ಬೇಡಿಕೆ ಕಾನೂನಿನ ಚೌಕಟ್ಟಿನಲ್ಲಿ ಕೂಡಲಿಲ್ಲ. ಹೀಗೆಲ್ಲ ಕೊನೆಗೆ ಸೋತು ಕೈಚೆಲ್ಲಿ ಹೋಗುವ ದೃಶ್ಯ ಮನಕಲಕುತ್ತದೆ. ನ್ಯಾಯ ಪಡೆದು ಖುಷಿಯಾಗಿ ಸಂತೋಷದಿಂದ ಹೋಗುವರು ಇನ್ನೊಂದು ಕಡೆ. ವೃತ್ತಿ ಕಹಿ ಸಿಹಿಗಳ ಸಮಾಗಮ. ಇಲ್ಲಿ ದೊರೆಯುವದು ಕಾನೂನು ನ್ಯಾಯ, ನೈತಿಕ ಅಲ್ಲ.