For the best experience, open
https://m.samyuktakarnataka.in
on your mobile browser.

ಪ್ರೀತಿಯ ಬಲೆಗೆ ಬಿದ್ದು ಹೆತ್ತ ಮಕ್ಕಳನ್ನೇ ಅಪಹರಿಸಿದ ತಾಯಂದಿರು, ನಾಲ್ವರ ಬಂಧನ

03:22 AM Nov 21, 2024 IST | Samyukta Karnataka
ಪ್ರೀತಿಯ ಬಲೆಗೆ ಬಿದ್ದು ಹೆತ್ತ ಮಕ್ಕಳನ್ನೇ ಅಪಹರಿಸಿದ ತಾಯಂದಿರು  ನಾಲ್ವರ ಬಂಧನ

ಧಾರವಾಡ: ಹೆತ್ತು ಹೊತ್ತು ತಾಯಿ ತನ್ನ ಮಕ್ಕಳು ಸಮಾಜದಲ್ಲಿ ದೊಡ್ಡವರಾಗಿ ಬದುಕಲಿ ಎಂದು ಆಸೆ ಪಡುತ್ತಾಳೆ. ಆದರೆ, ಇಲ್ಲಿಬ್ಬರು ತಾಯಂದಿರು ಪ್ರೀತಿಯ ಬಲೆಗೆ ಬಿದ್ದು ಸ್ವತಃ ತಮ್ಮ ಮಕ್ಕಳನ್ನೇ ಅಪಹರಿಸಿ ಕುಟುಂಬಕ್ಕೆ ಹಣದ ಬೇಡಿಕೆ ಇಟ್ಟ ವಿಚಿತ್ರ, ಅಮಾನವೀಯ ಪ್ರಕರಣ ಬೆಳಕಿಗೆ ಬಂದಿದೆ.
ಇಲ್ಲಿಯ ವಿದ್ಯಾಗಿರಿ ಠಾಣಾ ವ್ಯಾಪ್ತಿಯಲ್ಲಿಯ ರೇಷ್ಮಾ ಮತ್ತು ಪ್ರಿಯಾಂಕಾ ಎಂಬುವವರೇ ಪ್ರಿಯಕರರೊಂದಿಗೆ ಸೇರಿಕೊಂಡು ತಮ್ಮ ಆರು ಮಕ್ಕಳನ್ನು ಅಪಹರಿಸಿಕೊಂಡು ಕುಟುಂಬಕ್ಕೆ ೧೦ ಲಕ್ಷ ಹಣದ ಬೇಡಿಕೆ ಇಟ್ಟ ಮೂಲ ಆರೋಪಿಗಳು.
ಪ್ರಕರಣದ ಬೆನ್ನಟ್ಟಿದ ಪೊಲೀಸರು ಮಂಗಳವಾರ ಬೆಂಗಳೂರಿನ ಹೆಬ್ಬಾಳದಲ್ಲಿ ಆರು ಮಕ್ಕಳನ್ನು ರಕ್ಷಣೆ ಮಾಡುವುದರ ಜೊತೆಗೆ ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಎನ್. ಶಶಿಕುಮಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಇದೊಂದು ಪೂರ್ವ ನಿಯೋಜಿತ ಅಪಹರಣವಾಗಿದ್ದು, ಸಿನಿಮೀಯ ರೀತಿಯಲ್ಲಿ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳು ಎನ್ನದೇ ಪ್ರಿಯಕರರೊಂದಿಗೆ ಸೇರಿಕೊಂಡು ತಮ್ಮ ಮಕ್ಕಳನ್ನೇ ಅಪಹರಣ ಮಾಡಿರುವುದು ಆಘಾತ ಸೃಷ್ಟಿಸಿದೆ.

ಯಾರಿವರು?
ಧಾರವಾಡ ಜನ್ನತನಗರದ ರಶ್ಮಿ ಉರ್ಫ ರೇಷ್ಮಾ ಸಾಂಬ್ರಾಣಿ ಎಂಬುವವಳು ಮೂಲತಃ ಶಿಕಾರಿಪುರದ ಹಾಗೂ ಇಲ್ಲಿಯ ಜಿಲ್ಲಾಸ್ಪತ್ರೆ ಹತ್ತಿರದ ಮುತ್ತುರಾಜ ಬಂಗಾರೆಪ್ಪ ಎಂಬಾತನನ್ನು ಪ್ರೀತಿಸುತ್ತಿದ್ದರೆ, ಪ್ರಿಯಾಂಕಾ ಸಾಂಬ್ರಾಣಿ ತನ್ನ ಪತಿ ಮೃತಪಟ್ಟ ಬಳಿಕ ಜಕಣಿಬಾವಿ ಹತ್ತಿರದ ನಿವಾಸಿ ಸುನೀಲಕುಮಾರ ಎಂಬಾತನೊಂದಿಗೆ ಸ್ನೇಹ ಬೆಳೆಸಿದ್ದಳಂತೆ.
ರೇಷ್ಮಾಳಿಗೆ ಮೂವರು ಮಕ್ಕಳಿದ್ದು, ಪತಿ ದೀಪಕ ಅನ್ಯೋನ್ಯತೆಯಿಂದ ಇದ್ದರೂ ಮದುವೆಗೂ ಮುಂಚೆಯೇ ಪ್ರೀತಿಯ ಬಲೆಯಲ್ಲಿದ್ದ ಮುತ್ತುರಾಜನ ಜೊತೆಗೆ ರೇಷ್ಮಾ ಸಂಪರ್ಕ ಮುಂದುವರೆಸಿದ್ದಳೆನ್ನಲಾಗಿದೆ. ಕೆಲ ವರ್ಷಗಳ ಹಿಂದೆ ದೀಪಕನ ಸಹೋದರ ಸಂತೋಷಕುಮಾರ ಮೃತಪಟ್ಟ ಹಿನ್ನೆಲೆಯಲ್ಲಿ ಪತ್ನಿ ಪ್ರಿಯಾಂಕಾ ಸುನೀಲಕುಮಾರ ಎಂಬಾತನನ್ನು ಪ್ರೀತಿಸುತ್ತಿದ್ದಳು.
ರೇಷ್ಮಾ ಕೆಲ ವರ್ಷಗಳಿಂದ ಪತಿ ದೀಪಕ್‌ಗೆ ವಿವಾಹವಿಚ್ಚೇದನ ನೀಡುವಂತೆ ಒತ್ತಾಯ ಮಾಡುತ್ತಲೇ ಇದ್ದಳು. ಅಲ್ಲದೇ ತಮ್ಮೊಂದಿಗೆ ಪ್ರಿಯಾಂಕಾಳನ್ನು ಕಳುಹಿಸಿಕೊಡುವಂತೆ ಕುಟುಂಬದವರಿಗೆ ಮೇಲಿಂದ ಮೇಲೆ ಒತ್ತಡ ಹಾಕುತ್ತಿದ್ದಳು ಎನ್ನಲಾಗಿದೆ. ಆದರೆ, ಇದಕ್ಕೆ ಕುಟುಂಬದವರು ಒಪ್ಪದ ಹಿನ್ನೆಲೆಯಲ್ಲಿ ಪ್ರೀತಿಸಿದ ಯುವಕರೊಂದಿಗೆ ಸೇರಿಕೊಂಡು ಮಕ್ಕಳನ್ನು ಅಪಹರಣ ಮಾಡುವ ಪ್ಲ್ಯಾನ್ ಮಾಡಿದ್ದಾರೆ.

೧೦ ಲಕ್ಷ ರೂ.ಗಳಿಗೆ ಡಿಮ್ಯಾಂಡ್…
ತಮ್ಮ ಪ್ರಿಯಕರರೊಂದಿಗೆ ಮಕ್ಕಳನ್ನು ಅಪಹರಿಸಿಕೊಂಡು ಹೋಗಿದ್ದ ರೇಷ್ಮಾ ಮತ್ತು ಪ್ರಿಯಾಂಕಾ ಬೆಂಗಳೂರಿನ ಹೆಬ್ಬಾಳದಲ್ಲಿ ವಾಸಿಸುತ್ತಿದ್ದರು. ಅಲ್ಲದೇ, ಮಕ್ಕಳನ್ನು ಹಿಂದಿರುಗಿಸಬೇಕೆಂದರೆ ಕನಿಷ್ಠ ೧೦ ಲಕ್ಷ ರೂ.ಗಳನ್ನು ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಇದಕ್ಕೆ ಸಂಬಂಧಿಸಿದಂತೆ ರೇಷ್ಮಾಳ ಪತಿ ದೀಪಕ್ ವಿದ್ಯಾಗಿರಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದ ಬೆನ್ನಟ್ಟಿದ ವಿದ್ಯಾಗಿರಿ ಠಾಣೆ ಪೊಲೀಸರು ಗೋವಾ, ಮಹಾರಾಷ್ಟ್ರ ಮತ್ತು ಹೈದರಾಬಾದ್‌ನಲ್ಲಿ ತನಿಖೆ ಕೈಗೊಂಡಿದ್ದರು. ಆದರೆ, ಮಂಗಳವಾರ ಬೆಂಗಳೂರಿನ ಹೆಬ್ಬಾಳದಲ್ಲಿ ಆರೋಪಿಗಳ ಚಲನವಲನ ಕಂಡುಬಂದ ಹಿನ್ನೆಲೆಯಲ್ಲಿ ತಕ್ಷಣ ಬೆಂಗಳೂರಿನಲ್ಲಿದ್ದ ಪೊಲೀಸರ ತಂಡ ಅವರನ್ನು ವಶಕ್ಕೆ ಪಡೆದು ಮಕ್ಕಳ ರಕ್ಷಣೆ ಮಾಡಿದ್ದಾರೆ.