ಪ್ರೇಮ ಪ್ರಕರಣ: ಗ್ರಾಮಕ್ಕೆ ನುಗ್ಗಿದ 30ಕ್ಕೂ ಅಧಿಕ ಮುಸುಕುಧಾರಿಗಳು: ಎಲ್ಲಾ ಪೀಸ್ ಪೀಸ್
ಬೆಳಗಾವಿ: ಪ್ರೀತಿ ವಿಚಾರಕ್ಕೆ ಹೊಸ ವಂಟಮೂರಿ ಘಟನೆಗೆ ತಿಂಗಳು ಕಳೆಯುವ ಮುನ್ನವೇ ನಾವಗೆ ಗ್ರಾಮದಲ್ಲಿ ಮತ್ತೊಂದು ದಾಂಧಲೆ ಪ್ರಕರಣ ನಡೆದಿದೆ.
ನಾವಗೆ ಹಾಗೂ ಬಾದರವಾಡಿ ಗ್ರಾಮದ ಇಬ್ಬರು ಕಾಲೇಜು ಯುವಕರು ಒಂದೆ ಹುಡುಗಿಯನ್ನು ಪ್ರೀತಿ ಮಾಡುತ್ತಿದ್ದರು. ಈ ಬಗ್ಗೆ ಯುವಕರ ನಡುವೆ ವೈಮನಸ್ಸು ಇತ್ತು. ಇಬ್ಬರೂ ಒಂದೆ ಹುಡುಗಿಯ ಸ್ಟೇಟಸ್ ಇಟ್ಟದ್ದರಿಂದ ಶನಿವಾರ ನಾವಗೆ ಯುವಕನ ಮನೆಗೆ ತನ್ನ ಐವರು ಸ್ನೇಹಿತರೊಂದಿಗೆ ಬಂದ ಬಾದರವಾಡಿ ಹುಡುಗನಿಗೆ ನಾವಗೆಯ ಪಂಚರು ಬುದ್ಧಿಮಾತು ಹೇಳಿ ಕಳುಹಿಸಿದ್ದರು. ಇದು ಪ್ರೀತಿ ಪ್ರೇಮದ ವಯಸ್ಸಲ್ಲ. ಚೆನ್ನಾಗಿ ಓದಿ ಜೀವನದಲ್ಲಿ ಏನನ್ನಾದರೂ ಸಾಧಿಸಿ ತೋರಿಸುವಂತೆ ಪಂಚರಲ್ಲಿ ಒಬ್ಬರಾದ ಗ್ರಾಮಪಂಚಾಯ್ತಿಯ ಮಾರುತಿ ಅವರು ತಿಳಿಹೇಳಿದ್ದರು.
ಇದೇ ವೈಷಮ್ಯ ಇಟ್ಟುಕೊಂಡ ಬಾದರವಾಡಿಯ ಯುವಕರು ಸುಮಾರು ೩೦ ಮಂದಿಯ ಮುಸುಕುದಾರಿ ತಂಡದ ಜತೆ ನಿನ್ನೆ ತಡರಾತ್ರಿ ನಾವಗೆಗೆ ನುಗ್ಗಿ ಮಾರುತಿ ಹಾಗೂ ಅಕ್ಕಪಕ್ಕದ ನಾಲ್ಕು ಮನೆಗಳ ಕಿಟಿಕಿ ಗಾಜು, ಮನೆ ಮುಂದಿನ ಟೈಲ್ಸ್ ಹೊಡೆದು ಹಾಕಿ ಮನೆ ಮುಂದೆ ನಿಲ್ಲಿಸಿದ್ದ ೩ ಕಾರು 6 ಬೈಕುಗಳಿಗೆ ಜಖಂ ಮಾಡಿದ್ದಾರೆ. ಪ್ರಕರಣದ ಬಗ್ಗೆ ಮಾಹಿತಿ ತಿಳಿದು ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಪರಿಸ್ಥಿತಿ ಸದ್ಯ ತಹಬದಿಗೆ ಬಂದಿದ್ದು, ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಆರೋಪಿಗಳ ಪತ್ತೆಗೆ ಮೂರು ತಂಡ: ನಾವಗೆ ಗ್ರಾಮದಲ್ಲಿ ದಾಂಧಲೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳ ಬಂಧನಕ್ಕೆ ಮೂತು ತಂಡ ರಚನೆ ಮಾಡಿರುವುದಾಗಿ ಡಿಸಿಪಿ ರೋಹನ್ ಜಗದೀಶ ತಿಳಿಸಿದ್ದಾರೆ.