ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಪ್ರೋಟೆಮ್ ಸ್ಪೀಕರ್ ವಿವಾದ

02:03 AM Jun 25, 2024 IST | Samyukta Karnataka

ಚುನಾವಣೆಯ ನಂತರ ನಡೆಯುವ ಮೊದಲ ಅಧಿವೇಶನದ ಕಾರ್ಯಕಲಾಪ ನಿರ್ವಹಣೆಯ ಹೊಣೆಗಾರಿಕೆ ಇರುವುದು ಪ್ರೋಟೆಮ್ ಸ್ಪೀಕರ್ ಮೇಲೆ. ಈ ಕಲಾಪದ ಮುಖ್ಯ ಕರ್ತವ್ಯ ಹೊಸದಾಗಿ ಆರಿಸಿಬಂದಿರುವ ಸದಸ್ಯರಿಗೆ ಪ್ರಮಾಣವಚನ ಬೋಧಿಸುವ ಜೊತೆಗೆ ಹೊಸ ಸ್ಪೀಕರ್ ಚುನಾವಣೆಯನ್ನು ನಿರ್ವಹಿಸುವ ಹೊಣೆಗಾರಿಕೆ. ಇಷ್ಟು ಮುಗಿದ ಮೇಲೆ ಪ್ರೋಟೆಮ್ ಸ್ಪೀಕರ್ ಕರ್ತವ್ಯಕ್ಕೆ ತೆರೆ. ಆದರೆ, ಈ ಇವರನ್ನು ಆಯ್ಕೆ ಮಾಡುವಾಗ ಶಾಸನಕ್ಕಿಂತ ಸಂಪ್ರದಾಯಗಳ ಪರಿಪಾಲನೆ ಯಾವತ್ತಿಗೂ ನಿರ್ಣಾಯಕ.
ಲೋಕಸಭೆ ಇರಲಿ ಅಥವಾ ವಿಧಾನಸಭೆಯೇ ಆಗಿರಲಿ. ಹೆಚ್ಚು ಬಾರಿ ಆಯ್ಕೆಯಾಗಿರುವ ಹಿರಿಯ ಸದಸ್ಯರನ್ನು ಗುರುತಿಸಿ ಅವರಿಗೆ ಪ್ರೋಟೆಮ್ ಸ್ಪೀಕರ್ ಸ್ಥಾನದ ಗೌರವ ನೀಡುವುದು ಸಂಪ್ರದಾಯ. ಬಹುತೇಕ ಸಂದರ್ಭಗಳಲ್ಲಿ ಈ ಸ್ಥಾನದ ನೇಮಕಾತಿಗೆ ಯಾವುದೇ ವಿವಾದಗಳು ಉದ್ಭವಿಸಿರುವ ನಿದರ್ಶನಗಳು ಕಡಿಮೆ. ಆದರೆ, ಈ ಬಾರಿಯ ಲೋಕಸಭಾ ಅಧಿವೇಶನದಲ್ಲಿ ಪ್ರೋಟೆಮ್ ಸ್ಪೀಕರ್ ಸ್ಥಾನದ ಆಯ್ಕೆಯೇ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ನಡುವಣ ಸಂಘರ್ಷಕ್ಕೆ ಕಿಡಿ ಹೊತ್ತಿಸಿರುವುದು ಮುಂದಿನ ದಿನಗಳಲ್ಲಿ ಕಲಾಪ ಯಾವ ದಾರಿ ಹಿಡಿಯಬಹುದು ಎಂಬುದರ ದಿಕ್ಸೂಚಿ.
ಒಡಿಶಾದ ಭರ್ತೃಹರಿ ಮೆಹ್ತಾಬ್ ಅವರಿಗೆ ಈ ಬಾರಿಯ ಪ್ರೋಟೆಮ್ ಸ್ಪೀಕರ್ ಕರ್ತವ್ಯ ನಿರ್ವಹಣೆಯ ಅವಕಾಶ ಬಂದೊದಗಿದೆ. ಒದಗಿದ ಅವಕಾಶವನ್ನು ಬಳಸಿ ಎಲ್ಲಾ ಹೊಸ ಸದಸ್ಯರಿಗೆ ಪ್ರಮಾಣ ವಚನ ಬೋಧಿಸುವ ಕರ್ತವ್ಯವನ್ನು ಅವರು ಸುಸೂತ್ರವಾಗಿ ನಿರ್ವಹಿಸಿ ಸದನದ ಗಮನ ಸೆಳೆದರು. ಇದರ ಜೊತೆಗೆ ಗಮನ ಸೆಳೆದ ಇನ್ನೊಂದು ಕಾರಣವೆಂದರೆ, ಕೇರಳದ ಅತ್ಯಂತ ಹಿರಿಯ ಸದಸ್ಯ ಕೊಡುಕುನ್ನಿಲ್ ಸುರೇಶ್ ಬದಲು ಭರ್ತೃಹರಿ ಮೆಹ್ತಾಬ್ ವರಿಗೆ ಪ್ರೋಟೆಮ್ ಸ್ಪೀಕರ್ ಸ್ಥಾನ ಕೊಟ್ಟ ಬಗ್ಗೆ ಕಾಂಗ್ರೆಸ್ ಪಕ್ಷದವರಿಗೆ ತೀವ್ರ ಅತೃಪ್ತಿ. ಸಂಪ್ರದಾಯವನ್ನು ಬದಿಗೊತ್ತಿ ತಮ್ಮ ಪಕ್ಷದವರಿಗೆ ಅವಕಾಶ ಸೃಷ್ಟಿಸಿರುವುದು ಸರಿಯಲ್ಲ ಎಂಬುದು ಕಾಂಗ್ರೆಸ್ ಧುರೀಣರ ಆರೋಪ. ಆದರೆ, ಆಳುವ ಪಕ್ಷದ ಮುಖಂಡರು ಹಾಗೂ ಸರ್ಕಾರದ ಪರವಾಗಿ ಮಂತ್ರಿಗಳು ಕಾಂಗ್ರೆಸ್ ಮುಖಂಡರ ಈ ಆರೋಪವನ್ನು ಸಾರಾಸಗಟಾಗಿ ತಿರಸ್ಕರಿಸಿ `ಭರ್ತೃಹರಿ ಮೆಹ್ತಾಬ್ ಅವರು ಸತತವಾಗಿ ಸದನಕ್ಕೆ ಆಯ್ಕೆಯಾಗುತ್ತಿದ್ದಾರೆ. ಆದರೆ, ಕೊಡುಕುನ್ನಿಲ್ ಸುರೇಶ್ ಸತತವಾಗಿ ಆಯ್ಕೆಯಾಗಿಲ್ಲ. ಒಮ್ಮೆ ಚುನಾವಣೆಯಲ್ಲಿ ಸೋತಿದ್ದರು' ಎಂಬುದನ್ನು ಕಾರಣವಾಗಿ ಕೊಟ್ಟಿದ್ದಾರೆ. ಈ ಸಂಪ್ರದಾಯದಲ್ಲಿ ಪರಿಪಾಲನೆ ಮಾಡುವಾಗ ಸತತ ಆಯ್ಕೆ ಎಂಬ ಷರತ್ತು ಇರುವ ಬಗ್ಗೆ ಖಚಿತತೆ ಇಲ್ಲ. ಹೀಗಾಗಿ ಈ ಬಾರಿಯ ಅಧಿವೇಶನ ವಿವಾದದೊಂದಿಗೆ ಆರಂಭವಾದದ್ದು ಶುಭ ಶಕುನವಾಗದು ಎಂಬುದು ಹಲವರ ನಂಬಿಕೆ.
ಈ ಹಿಂದೆಯೂ ಕೂಡಾ ಪ್ರೊಟೆಮ್ ಸ್ಪೀಕರ್ ಆಯ್ಕೆ ಹಲವಾರು ರೀತಿಯ ವಿವಾದಗಳಿಗೆ ಎಡೆಮಾಡಿಕೊಟ್ಟಿತ್ತು. ೨೦೧೯ರಲ್ಲಿ ಮೇನಕಾ ಗಾಂಧಿ ಅವರ ಹೆಸರನ್ನು ಪ್ರೊಟೆಮ್ ಸ್ಪೀಕರ್ ಸ್ಥಾನಕ್ಕೆ ಬಿಜೆಪಿ ಪ್ರಸ್ತಾಪಿಸಿದಾಗ ಅವರು ಕೂಡಾ ಸತತವಾಗಿ ಸಂಸತ್ತಿಗೆ ಆಯ್ಕೆಯಾದವರಲ್ಲ ಎಂಬ ಸಂಗತಿಯನ್ನು ಬಿಜೆಪಿಯವರು ಮರೆತೇಬಿಟ್ಟಿದ್ದರು. ಆಗ ಅನ್ವಯವಾಗದ ಷರತ್ತು ಈಗ ಷರತ್ತಾಗಿ ಪರಿಗಣಿಸುವುದರಲ್ಲಿ ಯಾವ ನ್ಯಾಯವಿದೆ ಎಂಬುದು ಅರ್ಥವಾಗುತ್ತಿಲ್ಲ. ರಾಜಕಾರಣ ಎಷ್ಟಾದರೂ ಜಾತಿ ವರ್ಗ ಆಧಾರಿತವಾಗಿ ರೂಪಾಂತರಗೊಂಡ ಮೇಲೆ ಸ್ಥಾನಗಳ ಗಮನಿಸಿ ವ್ಯಕ್ತಿಗಳನ್ನು ಆರಿಸುವ ಪ್ರವೃತ್ತಿ ಬೇರೂರಿಬಿಟ್ಟಿದೆ. ಕೊಡಿಕುನ್ನಿಲ್ ಸುರೇಶ್ ದಲಿತ ವರ್ಗಕ್ಕೆ ಸೇರಿದ ಮುಖಂಡರು. ಹೀಗಾಗಿ ದಲಿತ ವರ್ಗಕ್ಕೆ ಈ ಅವಕಾಶ ಸಿಗಬಾರದು ಎಂಬ ದೃಷ್ಟಿಯಿಂದ ಬಿಜೆಪಿ ಇಂತಹ ಪಿತೂರಿ ಮಾಡಿದೆ ಎಂಬ ಮಾತುಗಳನ್ನು ನಿರಾಕರಿಸುವುದು ಕಷ್ಟವೇ. ಜಾತಿ ರಾಜಕಾರಣವೇ ನಿರ್ಣಾಯಕವಾಗಿರುವ ಸಂದರ್ಭದಲ್ಲಿ ಸ್ವಾಭಾವಿಕ ಅಥವಾ ಅಸ್ವಾಭಾವಿಕ ಸಂಬಂಧಗಳನ್ನು ಕಲ್ಪಿಸುವುದು ತೀರಾ ಸುಲಭ.
ಕರ್ನಾಟಕದ ಸಂದರ್ಭದಲ್ಲಿ ಈ ಹಿಂದೆ ೧೯೭೨ರ ಚುನಾವಣೆಯ ನಂತರ ವಿಧಾನಸಭೆ ಮೊದಲ ಬಾರಿಗೆ ಸಮಾವೇಶಗೊಂಡಾಗ ಪ್ರೋಟೆಮ್ ಸ್ಪೀಕರ್ ಸ್ಥಾನಕ್ಕೆ ಕೊರಟಗೆರೆ ಕ್ಷೇತ್ರದ ಶಾಸಕ ಎಚ್.ವಿ. ಮುದ್ದುರಾಮಯ್ಯ ಎಂಬುವವರನ್ನು ದೇವರಾಜ ಅರಸು ನೇತೃತ್ವದ ಕಾಂಗ್ರೆಸ್ ಪಕ್ಷ ಆಯ್ಕೆ ಮಾಡಿದಾಗ ಆಗಿನ ಪ್ರತಿಪಕ್ಷದ ಮುಖಂಡರು ದೊಡ್ಡ ಆಕ್ಷೇಪವೆತ್ತಿದ್ದರು. ಆದರೆ, ಈ ಆಕ್ಷೇಪವನ್ನು ದೇವರಾಜ ಅರಸು ತಳ್ಳಿಹಾಕಿ ಹಿಂದುಳಿದ ವರ್ಗಕ್ಕೆ ಸೇರಿದ ಮುದ್ದುರಾಮಯ್ಯ ಅವರ ನೇತೃತ್ವದಲ್ಲಿಯೇ ಹೊಸ ಸದಸ್ಯರು ಪ್ರಮಾಣವಚನ ಸ್ವೀಕರಿಸುವಂತೆ ನೋಡಿಕೊಂಡಿದ್ದರು. ಇಂತಹುದೇ ವಿವಾದಗಳು ಹಲವು ರಾಜ್ಯಗಳಲ್ಲಿಯೂ ಜರುಗಿವೆ. ಇದರ ನಿವಾರಣೆಗೆ ಇರುವ ಏಕೈಕ ಮಾರ್ಗವೆಂದರೆ ಸಂಪ್ರದಾಯದ ಬದಲಿಗೆ ಶಾಸನದ ಮೂಲಕ ಪ್ರೊಟೆಮ್ ಸ್ಪೀಕರ್ ಅಯ್ಕೆ ಮಾಡುವ ವಿಧಾನದ ಅನುಸರಣೆ.

Next Article