ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಪ್ಲಾಸ್ಟಿಕ್ ಡಬ್ಬಗಳ ಸರದಾರ ಟಪ್ಪರ್‌ವೇರ್ ನಿರ್ಗಮನ?

03:00 AM Sep 23, 2024 IST | Samyukta Karnataka

ಯಾವುದೇ ಮಧ್ಯಮ ಹಾಗೂ ಶ್ರೀಮಂತರ ಮನೆಯ ಅಡುಗೆ ಕೋಣೆಗೆ ಕಾಲಿಟ್ಟರೆ ಅಲ್ಲಿ ಟಪ್ಪರ್‌ವೇರ್‌ನ ಯಾವುದಾದರೂ ಉತ್ಪನ್ನ ಇರಲಿಕ್ಕೆ ಬೇಕು. ಅದು ಚಿಕ್ಕ ಚಿಕ್ಕ ಡಬ್ಬ ಗಳಿರಬಹುದು ಅಥವಾ ಏರ್ ಟೈಟ್ ವಾಟರ್ ಬಾಟಲಿಗಳಿರಬಹುದು. ಹೀಗೆ ಯಾವುದಾದರು ಒಂದು ಉತ್ಪನ್ನ ಇದ್ದೆ ಇರುತ್ತಿತ್ತು, ಈಗಲೂ ಇದೆ. ಹೆಂಗಳೆಯರಿಗಂತೂ ಕೇಳಲೇ ಬೇಡಿ ಟಪ್ಪರ್‌ವೇರ್ ಅಂದರೆ ಪಂಚ ಪ್ರಾಣ. ಎಷ್ಟರ ಮಟ್ಟಿಗೆಂದರೆ ಮಕ್ಕಳಿಗೆ ಟಪ್ಪರ್‌ವೇರ್ ಡಬ್ಬದಲ್ಲಿ ತಿಂಡಿಯನ್ನು, ಊಟವನ್ನು ಕಟ್ಟಿ ಕೊಟ್ಟರೆ ಹುಷಾರು ಇದು ಟಪ್ಪರ್‌ವೇರ್ ಡಬ್ಬ ಕಳೆದು ಕೊಂಡು ಬರಬೇಡ ಎಂಬ ಮಾತನ್ನು ಹೇಳಲು ಮರೆಯುತ್ತಿರಲಿಲ್ಲ. ಅಷ್ಟೇ ಅಲ್ಲ ಅನೇಕ ಗಂಡಸರಿಗೆ ಇದರ ಮಹತ್ವ ತಿಳಿಯದೆ ಯಾವುದಾದರೂ ಸಭೆ ಸಮಾರಂಭಗಳಲ್ಲಿ ಹೆಂಡತಿಯ, ಅಮ್ಮನ, ಅಕ್ಕ ತಂಗಿಯರ ಸ್ನೇಹಿತೆಯರು ಅತೀ ಎಂಬಷ್ಟು ಸಣ್ಣ ಡಬ್ಬವನ್ನು ಬಣ್ಣ ಬಣ್ಣದ ಪೇಪರ್‌ಗಳಲ್ಲಿ ಮಡಚಿ ಉಡುಗರೆಯಾಗಿ ಕೊಟ್ಟಾಗ, ಇದೇನಿದು ನಿನ್ನ ಸ್ನೇಹಿತೆ ಇಷ್ಟು ಸಣ್ಣ ಡಬ್ಬ ಗಿಫ್ಟ್ ಕೊಟ್ಟಿದ್ದಾರೆ ಎಂದು ಅಪ್ಪಿ ತಪ್ಪಿ ಕೇಳಿದರೆ ಮುಗಿಯಿತು ಅಲ್ಲಿಗೆ ಆ ಪುರುಷ ಪ್ರಾಣಿಯ ಕಥೆ ಅಷ್ಟೇ. ಇದು ಟಪ್ಪರ್‌ವೇರ್ ಕಣ್ರೀ ನಿಮಗೆಲ್ಲಿ ಅರ್ಥವಾಗಬೇಕು ಎಂದು ಪ್ರಾರಂಭವಾಗುವ ಬುದ್ಧಿವಾದ ಮತ್ತೊಂದು ಟಪ್ಪರ್‌ವೇರ್ ಡಬ್ಬ ಮನೆಗೆ ಬರುವವರೆಗೂ ನಿಲ್ಲುತ್ತಿರಲಿಲ್ಲ. ಹೀಗೆ ಟಪ್ಪರ್‌ವೇರ್ ಡಬ್ಬಕ್ಕೂ ಹೆಂಗಳೆಯರಿಗೂ ಅವಿನಾಭಾವ ಸಂಬಂಧ. ಅಂತಹ ಟಪ್ಪರ್‌ವೇರ್ ಕಂಪನಿ ಇದೀಗ ದಿವಾಳಿಯಾಗುವುದರಿಂದ ರಕ್ಷಿಸುವಂತೆ ಅಮೆರಿಕಾದ ಡೆಲ್ವೇರ್‌ನ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ.
ಇಂತಹ ಜಗತ್ ಖ್ಯಾತಿಯ ಟಪ್ಪರ್‌ವೇರ್ ಸಂಸ್ಥೆಯನ್ನು ಅರ್ಲ್ ಟಪ್ಪರ್ ಎಂಟು ದಶಕಗಳ ಹಿಂದೆ ಯುನೈಟೆಡ್ ಸ್ಟೇಟ್‌ನ ಮ್ಯಾಸಚೂಸೆಟ್ಸ್ ಎಂಬಲ್ಲಿ ಪ್ರಾರಂಭಿಸಿದ. ವಿಶೇಷ ಮಾದರಿಯ ಪ್ಲಾಸ್ಟಿಕ್ ಆವಿಷ್ಕಾರ ಮಾಡಿ ಬಿಸಿ ಬಿಸಿ ಆಹಾರ ಪದಾರ್ಥವನ್ನು ಈ ಡಬ್ಬಗಳಲ್ಲಿ ಹಾಕಿದರೂ ಇದರಲ್ಲಿನ ಪ್ಲಾಸ್ಟಿಕ್ ಕರಗಿ ಆಹಾರ ಪದಾರ್ಥಗಳೊಂದಿಗೆ ಬೆರೆಯುತ್ತಿರಲಿಲ್ಲ. ಹೀಗೆ ಈ ರೀತಿಯ ಹೊಸ ಆವಿಷ್ಕಾರವನ್ನು ಬಳಸಿಕೊಂಡು ಅರ್ಲ್ ಟಪ್ಪರ್ ಹೊಸ ಮಾದರಿಯ ವಿಶೇಷ ವಿನ್ಯಾಸದಲ್ಲಿ ಡಬ್ಬಗಳನ್ನು, ಕಂಟೈನರ್‌ಗಳನ್ನು, ಬಾಟಲಿಗಳನ್ನೂ ಉತ್ಪಾದನೆಗೆ ಚಾಲನೆ ನೀಡಿದನು. ಹಾಗೆ ಉತ್ಪಾದಿಸಿದ ಉತ್ಪನ್ನಗಳೆಲ್ಲವೂ ಏರ್‌ಟೈಟ್ ಕಂಟೈನರ್‌ಗಳನ್ನೇ ಉತ್ಪಾದಿಸಿತು. ಈ ಒಂದು ಅಂಶ ಟಪ್ಪರ್‌ವೇರ್ ಎಂದಿಗೂ ಹಿಂತಿರುಗಿ ನೋಡದಂತೆ ಮಾಡುವಲ್ಲಿ ಯಶಸ್ವಿ ಪಾತ್ರ ವಹಿಸಿತು. ಮೈಕ್ರೋವೇವ್‌ನಲ್ಲಿ ಟಪ್ಪರ್‌ವೇರ್ ಡಬ್ಬಗಳಲ್ಲಿ ಆಹಾರ ಪದಾರ್ಥಗಳನ್ನು ಬಿಸಿಯಾಗಲು ಯಾವುದೇ ಅಳುಕಿಲ್ಲದೆ ಬಳಸಬಹುದಾಗಿತ್ತು. ಹೀಗೆ ಇದರ ನಾನಾ ವೈಶಿಷ್ಟಗಳು ಟಪ್ಪರ್‌ವೇರ್ ಉತ್ಪನ್ನಗಳು ಮನೆ ಮನೆಗಳಲ್ಲಿ ಅನಿವಾರ್ಯ ಎಂಬ ಸನ್ನಿವೇಶವನ್ನು ಸೃಷ್ಟಿ ಮಾಡಿತ್ತು.
ಇಷ್ಟೆಲ್ಲ ವೈವಿಧ್ಯತೆಗಳಿಂದ ಹಾಗೂ ವಿಶೇಷತೆಗಳಿಂದ ಕೂಡಿದ್ದ ಟಪ್ಪರ್ ವೇರ್ ಇತರೆ ಪ್ಲಾಸ್ಟಿಕ್ ಉತ್ಪನ್ನಗಳಿಗಿಂತ ವಿಭಿನ್ನವಾಗಿ ಹಾಗೂ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿ ಹೆಸರು ಮಾಡುವುದರಲ್ಲಿ ಯಾವುದೇ ಅನುಮಾನವಿರಲಿಲ್ಲ, ಆದರೆ, ಆಶ್ಚರ್ಯ ಎಂಬಂತೆ ಡಿಪಾರ್ಟ್ಮೆಂಟಲ್ ಸ್ಟೋರ್‌ಗಳಲ್ಲಿ ಈ ಟಪ್ಪರ್ವೇರ್ ಉತ್ಪನ್ನಗಳನ್ನು ಪರಿಚಯಿಸಿದಾಗ ಈ ಉತ್ಪನ್ನಗಳು ಮಾರಾಟವಾಗಲೇ ಇಲ್ಲ. ಆಗ ಅರ್ಲ್ ಟಪ್ಪರ್ ಆತ್ಮವಲೋಕನಕ್ಕೆ ಇಳಿದ. ಈ ಉತ್ಪನ್ನಗಳು ಎಲ್ಲಿ ಹೆಚ್ಚಾಗಿ ಬಳಸಲ್ಪಡುತ್ತವೆ ಎಂದು ಮತ್ತೊಮ್ಮೆ ಕೂಲಂಕುಷವಾಗಿ ನೋಡಿದಾಗ ಹೆಚ್ಚಾಗಿ ಕಂಡು ಬಂದದ್ದು ಇದು ಅಡುಗೆ ಮನೆಯಲ್ಲಿ ಹೆಚ್ಚು ಬಳಸಲ್ಪಡುತ್ತವೆ ಹಾಗೂ ಈ ಉತ್ಪನ್ನವನ್ನು ಬಳಸುವಂತೆ ಅಥವಾ ಖರೀದಿಸಲು ಪ್ರಭಾವ ಮಾಡಬಲ್ಲವರು ಹೆಂಗಳೆಯರೇ ಅದರಲ್ಲೂ ಮನೆಯಲ್ಲಿರುವ ಗ್ರಹಣಿಯರಿಗೆ ಈ ಉತ್ಪನ್ನ ಇಷ್ಟವಾದರೆ ಈ ಉತ್ಪನ್ನ ಗೆದ್ದಂತೆ ಎಂದು ಅರ್ಲ್ ಟಪ್ಪರ್ ಬಹು ಬೇಗ ಕಂಡು ಕೊಂಡ. ಅದರಂತೆ ಬ್ರೌನಿ ವೈಸ್ ಎಂಬ ಮಹಿಳೆ ಟಪ್ಪರ್ವೇರ್ ಸಂಸ್ಥೆಯ ಸೇಲ್ಸ್ ವಿಭಾಗದ ಅಧಿಕಾರಿಯಾಗಿ ಸೇರ್ಪಡೆಯಾಗಿ ಟಪ್ಪರ್ವೇರ್ ಉತ್ಪನ್ನಗಳನ್ನು ಮಹಿಳೆಯರ ಮನೆಗಳಲ್ಲಿ ಹೌಸ್ ಪಾರ್ಟಿಗಳಲ್ಲಿ ಪ್ರದರ್ಶಿಸಿ ಮಾರಾಟ ಮಾಡುವ ಪ್ರಕ್ರಿಯೆಗೆ ಚಾಲನೆ ಕೊಟ್ಟಳು. ಇದು ಯಶಸ್ವಿಯೂ ಆಯಿತು. ಮುಂದಿನ ದಿನಗಳಲ್ಲಿ ಈ ಮಾದರಿಯಲ್ಲೇ ಅಲ್ಪ ಸ್ವಲ್ಪ ಬದಲಾವಣೆಗಳನ್ನು ಮಾಡಿ ಎಂಎಲ್‌ಎಂ ಅಂದರೆ ಮಲ್ಟಿ ಲೆವೆಲ್ ಮಾರ್ಕೆಟಿಂಗ್‌ನ ಡೈರೆಕ್ಟ್ ಮಾರ್ಕೆಟಿಂಗ್ ಪರಿಕಲ್ಪನೆಯಡಿ ಇದರ ಮಾರುಕಟ್ಟೆ ೮೦ಕ್ಕೂ ಹೆಚ್ಚು ದೇಶಗಳಿಗೆ ವಿಸ್ತಾರವಾಯಿತು. ವಿಶೇಷವೆಂದರೆ ಪ್ರತಿ ದೇಶಗಳಲ್ಲಿ ಅಲ್ಲಿನ ಜನರ ಬೇಕು ಬೇಡಗಳಿಗೆ ಒತ್ತು ಕೊಟ್ಟು ಅಲ್ಲಿನ ಜನರ ಆದ್ಯತೆಯಂತೆ ಟಪ್ಪರ್ ವೇರ್ ವಿನ್ಯಾಸಗಳು ಬದಲಾವಣೆ ಕಂಡುಕೊಂಡಿತು. ಟಪ್ಪರ್ ವೇರ್ ಆಟಿಕೆಗಳು ಕೂಡ ಮಾರುಕಟ್ಟೆ ಪ್ರವೇಶಿಸಲು ಪ್ರಾರಂಭವಾಯಿತು. ಅಂತೆಯೇ ಟಪ್ಪರ್ ವೇರ್ ೧೯೯೬ ರಲ್ಲಿ ಭಾರತದಲ್ಲೂ ತನ್ನ ಬಾಹುಳ್ಯವನ್ನು ವಿಸ್ತಾರ ಮಾಡಿತು. ಹೀಗೆ ತನ್ನ ಟಪ್ಪರ್ ವೇರ್ ಡಬ್ಬಗಳ ಸಾಮ್ರಾಜ್ಯವನ್ನು ವಿಸ್ತಾರ ಮಾಡಿದ್ದ ಕಂಪನಿ ಬದಲಾದ ಪರಿಸ್ಥಿತಿಯಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಬಿಟ್ಟು ಯಾವುದೇ ಪ್ರಾಡಕ್ಟ್ ಡೈವರ್ಸಿಫಿಕೇಷನ್ ತಂತ್ರ ಅನುಸರಿಸಲಿಲ್ಲ. ಪರಿಣಾಮವಾಗಿ ಟಪ್ಪರ್ ವೇರ್ ಹಿಂದಿನ ಗತ ವೈಭವವನ್ನು ಕಳೆದುಕೊಳ್ಳುವ ಪರಿಸ್ಥಿತಿಗೆ ಬಂದು ನಿಂತಿದೆ. ಉತ್ಪನ್ನಗಳೊಂದಿಗೆ ಆರೋಗ್ಯಕ್ಕೆ ಹಾಗೂ ಪರಿಸರಕ್ಕೆ ಹೆಚ್ಚು ಹೆಚ್ಚು ಪ್ರಾತಿನಿಧ್ಯ ಕೊಡುತ್ತಿರುವ ಗ್ರಾಹಕನ ಎದುರು ತಾಮ್ರದ ಹಾಗು ಸ್ಟೀಲಿನ ಉತ್ಪನ್ನಗಳಲ್ಲೂ ಏರ್ ಟೈಟ್ ಕಾನ್ಸೆಪ್ಟ್ ಬರಲು ಪ್ರಾರಂಭವಾಯಿತು ಗ್ರಾಹಕ ಅತ್ತ ಹೊರಳಿದ. ಅಷ್ಟೇ ಅಲ್ಲ ಕೋವಿಡ್ ಕಾಲದಲ್ಲಿ ಟಪ್ಪರ್ ವೇರ್ ಪ್ರಾತಿನಿಧ್ಯ ಕಡಿಮೆ ಆಯಿತು. ಹೆಚ್ಚಾದ ರಾ ಮೆಟೀರಿಯಲ್ ಅಂದರೆ ಕಚ್ಚಾ ವಸ್ತುಗಳ ದರ ಹಾಗೂ ಹಲವು ಖರ್ಚು ವೆಚ್ಚಗಳು ಟಪ್ಪರ್ ವೇರ್‌ನಂತ ದೈತ್ಯ ಕಂಪನಿಯನ್ನು ದಿವಾಳಿಯ ಹೊಸ್ತಿಲಲ್ಲಿ ತಂದು ನಿಲ್ಲಿಸಿದೆ. ಇದು ಬದಲಾಗಬಹುದೇ ಕಾದು ನೋಡಬೇಕು. ಟಪ್ಪರ್ ವೇರ್ ಕಂಪನಿಯ ಸಾಲವೇ ಹತ್ತು ಸಾವಿರ ಕೋಟಿಯಿಂದ ಒಂದು ಲಕ್ಷ ಕೋಟಿಯಷ್ಟಿದೆ. ಆದರೆ ಕಂಪನಿಯ ಆಸ್ತಿ ಕೇವಲ ನಾಲ್ಕು ಸಾವಿರ ಕೋಟಿಯಿಂದ ಹತ್ತು ಸಾವಿರ ಕೋಟಿಗಳಷ್ಟಿದೆ ಎಂದು ಅಂದಾಜಿಸಲಾಗಿದೆ. ಆದರೆ, ವಿಶೇಷವೆಂಬಂತೆ ಭಾರತದಲ್ಲಿರುವ ಟಪ್ಪರ್ ವೇರ್ ಇಂಡಿಯಾ ಕಂಪನಿ ಜಾಗತಿಕ ದಿವಾಳಿಗೂ ಭಾರತದ ಕಂಪನಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ. ಅಲ್ಲದೆ ಭಾರತದಲ್ಲಿನ ಟಪ್ಪರ್ ವೇರ್ ಇಂಡಿಯಾ ಕಂಪನಿಯಲ್ಲಿ ಉತ್ಪಾದಿಸಲ್ಪಡುವ ಟಪ್ಪರ್ ವೇರ್ ಉತ್ಪನ್ನಗಳಿಗೆ ಭಾರತದಲ್ಲಿ ಮಾರುಕಟ್ಟೆ ಕಡಿಮೆಯಾಗಿಲ್ಲ. ಹಾಗೂ ಡೀಲರ್‌ಗಳು ಕೂಡ ಬೇಡಿಕೆ ಸಕಾರಾತ್ಮಕವಾಗಿಯೇ ಇದೆ ಎಂದು ಹೇಳಿದ್ದಾರೆ. ಅಂದರೆ ಭಾರತದ ಗ್ರಾಹಕ ಶಕ್ತಿ ಏನೆಂದು ನೀವೇ ಊಹಿಸಿ. ಆದ್ದರಿಂದಲೇ ತಾನೇ ಐ ಫೋನಿನಿಂದ ಹಿಡಿದು ಟೆಸ್ಲಾವರೆಗೆ ಎಲ್ಲರೂ ಭಾರತದಲ್ಲೊಂದು ಉತ್ಪಾದನಾ ಘಟಕ ಇರಬೇಕೆಂದು ಹಲಬುವುದು.

Next Article