For the best experience, open
https://m.samyuktakarnataka.in
on your mobile browser.

ಪ.ಪಂ ಬಿಜೆಪಿ ೬ ಸದಸ್ಯರ ಹೈಜಾಕ್?

11:09 AM Aug 27, 2024 IST | Samyukta Karnataka
ಪ ಪಂ ಬಿಜೆಪಿ ೬ ಸದಸ್ಯರ ಹೈಜಾಕ್

ಆದರ್ಶ ಕುಲಕರ್ಣಿ.
ನರೇಗಲ್ಲ : ಪಟ್ಟಣ ಪಂಚಾಯಿತಿಯ ಅಧ್ಯಕ್ಷ-ಉಪಾಧ್ಯಕ್ಷರ ಆಡಳಿತ ಅವಧಿ ಮುಗಿದು ವರ್ಷಗಳೆ ಕಳೆದಿತ್ತು. ನೂತನ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆಗೆ ಸರ್ಕಾರ ಮೀಸಲಾತಿ ಪ್ರಕಟಿಸಿ ಆದೇಶ ಹೊರಡಿಸಿದೆ. ಪ.ಪಂ ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸಾಮಾನ್ಯ ಎರಡೂ ಸಾಮಾನ್ಯ ಮೀಸಲಾತಿ ಬಂದಿರುವುದರಿಂದ ಅಧ್ಯಕ್ಷ ಉಪಾಧ್ಯಕ್ಷ ಯಾರಾಗುತ್ತಾರೆ ಎಂಬ ಚರ್ಚೆ ಶುರುವಾದ ಹಿನ್ನೆಲೆಯಲ್ಲಿ ಆಪರೇಷನ್ ಹಸ್ತ ಕಾರ್ಯ ಸಂಶಯ ಶುರುವಾಗಿದೆ.

ಸ್ಥಳೀಯ ಪ.ಪಂ ಒಟ್ಟು ೧೭ ಸದಸ್ಯ ಬಲ ಹೊಂದಿದ್ದು, ಅದರಲ್ಲಿ ೧೨ ಬಿಜೆಪಿ, ೩ ಕಾಂಗ್ರೆಸ್ ಹಾಗೂ ೨ ಪಕ್ಷೇತರ ಸದಸ್ಯರು ಚುನಾಯಿತರಾಗಿದ್ದಾರೆ. ಪಕ್ಷೇತರರ ಪೈಕಿ ಒಬ್ಬರು ಕಾಂಗ್ರೆಸ್, ಒಬ್ಬರು ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಸ್ಪಷ್ಟ ಬಹುಮತ ಹೊಂದಿತ್ತು. ಆದರೆ, ಸೋಮವಾರ ಬೆಳಿಗ್ಗೆಯಿಂದ ೬ಜನ ಬಿಜೆಪಿ ಸದಸ್ಯರು ತಮ್ಮ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದು, ಬಿಜೆಪಿ ಮುಖಂಡರಿಗೆ ಶಾಕ್ ನೀಡಿದ್ದಾರೆ.

ಬಿಜೆಪಿ ಸಭೆಗೆ ಗೈರು :
ಸೆ. ೨ಕ್ಕೆ ಪಟ್ಟಣ ಪಂಚಾಯತಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆ ನಿಗದಿಯಾದ ಹಿನ್ನೆಲೆಯಲ್ಲಿ ಅಂತಿಮ ನಿರ್ಣಯ ಕೈಗೊಳ್ಳಲು ಮಾಜಿ ಸಚಿವ ಕಳಕಪ್ಪ ಬಂಡಿ ಅವರು ಸೋಮವಾರ ಎಲ್ಲ ಬಿಜೆಪಿ ಸದಸ್ಯರನ್ನು ಸಭೆಗೆ ಕರೆದಿದ್ದರು. ಸಭೆಗೆ ಬಿಜೆಪಿ ೬ ಸದಸ್ಯರು ಗೈರಾಗಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿ ೬ ಸದಸ್ಯರನ್ನು ಕಾಂಗ್ರೆಸ್ ಹೈಜಾಕ್ ಮಾಡಿರಬಹುದು ಎಂಬ ಸಂಶಯ ಬಿಜೆಪಿ ಮುಖಂಡರನ್ನು ಕಾಡುತ್ತಿದೆ.

ಕಾಣೆಯಾದ ಬಿಜೆಪಿ ಸದಸ್ಯರು :
ಕಾಣೆಯಾದ ಸದಸ್ಯರಾದ ವಿಜಯಲಕ್ಷ್ಮೀ ಚಲವಾದಿ, ಕುಮಾರಸ್ವಾಮಿ ಕೋರಧಾನ್ಯಮಠ, ಪಕೀರಪ್ಪ ಬಂಬಾಪೂರ, ಫಕೀರಪ್ಪ ಮಳ್ಳಿ, ಈರಪ್ಪ ಜೋಗಿ, ಮಲ್ಲಿಕಸಾಬ್ ರೋಣದ ಅವರನ್ನು ಬಿಜೆಪಿ ಮುಖಂಡರು ಸಂಪರ್ಕಿಸಲು ಕರೆ ಮಾಡಿದರೆ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದರಿಂದ ಹಲವು ಸಂಶಯಕ್ಕೆ ಕಾರಣವಾಗಿದೆ.

ಕಾಂಗ್ರೆಸ್ ಅಧಿಕಾರ ಹಿಡಿಯುವಲ್ಲಿ ಸುಲಭ :
ಪಟ್ಟಣ ಪಂಚಾಯತಿಯಲ್ಲಿ ೧೨ ಬಿಜೆಪಿ ಒಂದು ಪಕ್ಷೇತರ ಹಾಗೂ ೩ ಕಾಂಗ್ರೆಸ್ ಒಂದು ಪಕ್ಷೇತರ ಸದಸ್ಯರು ಹೊಂದಿದ್ದರು. ಈಗ ಬಿಜೆಪಿಯ ೬ ಸದಸ್ಯರನ್ನು ಸೇರಿಸಿಕೊಂಡಿದ್ದೆ ಆದರೆ, ಕಾಂಗ್ರೆಸ್‌ನ ಬಲ ಒಟ್ಟು ೧೦ಕ್ಕೆ ಏರಿಕೆಯಾಗುತ್ತದೆ. ಪ.ಪಂ ನಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿಯಲು ಸುಲಭವಾಗಲಿದೆ.