ಫಸಲ್ ಭೀಮಾ ಯೋಜನೆ ಅಕ್ರಮ ಪ್ರಕರಣ: ಇಬ್ಬರ ಬಂಧನ
ರಾಯಚೂರು: ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯಲ್ಲಿ ಜಿಲ್ಲೆಯ ಸಿರವಾರ ತಾಲ್ಲೂಕಿನ ವ್ಯಾಪ್ತಿಯ ಹಳ್ಳಿ ಹೊಸೂರು, ಮಾಡಗಿರಿ ಗ್ರಾಮದ ನೂರಾರು ರೈತರ ಬೆಳೆ ವಿಮೆಯ ಪಾವತಿಸಿದ್ದು ಪರಿಹಾರದ ಹಣ ಅನ್ಯರ ಖಾತೆಗೆ ಜಮಾ ಆಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಬುಧವಾರ ಆರೋಪಿತ ಇಬ್ಬರನ್ನು ಬಂಧಿಸಿ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಿಐಡಿಯ ಪಿಎಸ್‌ಐ ಕಿರಣ ಅವರ ನೇತೃತ್ವದ ಎಂಟು ಜನರ ತಂಡ ಸಿರವಾರ ತಾಲ್ಲೂಕಿನ ಮಾಡಗಿರಿ ಗ್ರಾಮ ಲೆಕ್ಕಾಧಿಕಾರಿ ಮಲ್ಲಯ್ಯ, ಕಂಪ್ಯೂಟರ್ ಆಪರೇಟರ್ ಆಗಿದ್ದ ಅಕ್ಷಯ ಕುಮಾರ ಎನ್.ಹೊಸೂರು ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ. ಸಿರವಾರ ಮತ್ತು ಮಾನ್ವಿ ತಾಲ್ಲೂಕಿನ ವಿವಿಧ ಗ್ರಾಮಗಳ ನೂರಾರು ಎಕರೆ ಪ್ರದೇಶದ ರೈತರು ಬೆಳೆ ವಿಮೆ ನಿಂದಾಯಿಸಿಕೊಂಡಿದ್ದರು. ಆದರೆ, ವಿಮೆ ಪರಿಹಾರದ ಹಣವು ಇತರರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿತ್ತು.ಈ ಬಗ್ಗೆ ಕಳೆದ 8 ತಿಂಗಳ ಹಿಂದೆ ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ತನಿಖೆ ಸಿಐಡಿಗೆ ಹಸ್ತಾಂತರಿಸಗೊಂಡ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.