ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಫಾರ್ಮಸಿಸ್ಟ್‌ಗಳ ಕ್ರಿಯಾಶೀಲತೆ ಅಗತ್ಯ

09:56 PM Sep 24, 2024 IST | Samyukta Karnataka

(ಇಂದು ವಿಶ್ವ ಫಾರ್ಮಸಿಸ್ಟ್ ದಿನಾಚರಣೆ)
ವಿಶ್ವತೋಮುಖವಾದ ಔಷಧಗಳ ಕಾರ್ಯ ವಲಯದಲ್ಲಿ ಫಾರ್ಮಸಿಸ್ಟ್ ಸಂಘಟನೆ ಗಮನಾರ್ಹವಾದುದು.
ಸೆಪ್ಟೆಂಬರ್ ೨೫ (ನಾಳೆ) ವಿಶ್ವ ಫಾರ್ಮಸಿಸ್ಟ್ ದಿನಾಚರಣೆ. ಅಂತಾರಾಷ್ಟ್ರೀಯ ಫಾರ್ಮಸಿ ಫೆಡರೇಷನ್ (ಎಫ್‌ಐಪಿ)ನ ಕರೆಯಂತೆ ವಿಶ್ವಾದ್ಯಂತ ಫಾರ್ಮಸಿಸ್ಟ್ ದಿನಾಚರಣೆ ನಡೆಯುತ್ತಿದೆ. ೨೦೦೯ರಲ್ಲಿ ಇಂಟರ್ ನ್ಯಾಷನಲ್ ಫಾರ್ಮಸ್ಯುಟಿಕಲ್ ಫೆಡರೇಷನ್ (ಎಫ್‌ಐಪಿ) ಮಹಾಸಭೆಯಲ್ಲಿ ಟರ್ಕಿ ಫಾರ್ಮಸಿಸ್ಟ್ ಅಸೋಸಿಯೇಷನ್ ಸಲಹೆಯಂತೆ ಪ್ರತಿ ಸೆ. ೨೫ರಂದು ವಿಶ್ವ ಫಾರ್ಮಸಿಸ್ಟ್ ದಿನ ಆಚರಿಸಲು ನಿರ್ಣಯ ತೆಗೆದುಕೊಳ್ಳಲಾಯಿತು. ೨೦೧೦ರಿಂದ ಆರಂಭಗೊಂಡ ವಿಶ್ವ ಫಾರ್ಮಸಿಸ್ಟ್ ದಿನಕ್ಕೆ ಈಗ ೧೫ನೇ ವರ್ಷದ ಸಂಭ್ರಮ. ಈ ವರ್ಷದ ಫಾರ್ಮಸಿಸ್ಟ್ ದಿನಾಚರಣೆಯ ಧ್ಯೇಯದಂತೆ ವಿಶ್ವತೋಮುಖವಾದ ಔಷಧ ಅಗತ್ಯಗಳನ್ನು ಪೂರೈಸಲು ಫಾರ್ಮಸಿಸ್ಟರ ಕ್ರಿಯಾಶೀಲತೆ ಅಗತ್ಯವಾಗಿದೆ.
ಫಾರ್ಮಸಿ ಕಾಲೇಜುಗಳು, ಔಷಧ ಉತ್ಪಾದನಾ ಘಟಕಗಳು, ಔಷಧ ನಿಯಂತ್ರಣ ಇಲಾಖೆ, ಫಾರ್ಮಸಿ ಪರಿಷತ್ತು, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಫಾರ್ಮಸಿ ಸೇರಿದಂತೆ ಔಷಧಿ ಅಂಗಡಿಗಳಲ್ಲಿ ಕಾರ್ಯ ನಿರ್ವಹಿಸುವ ಫಾರ್ಮಸಿಸ್ಟರು ಮತ್ತು ಸಹಾಯಕರು, ಔಷಧ ಕಂಪೆನಿಗಳ ಮಾರಾಟ ಪ್ರತಿನಿಧಿಗಳು ಫಾರ್ಮಸಿಸ್ಟ್ ದಿನಾಚರಣೆಯನ್ನು ಪ್ರೋತ್ಸಾಹಿಸುತ್ತಾರೆ.
ವೈದ್ಯರು ಬರೆಯುವ ಔಷಧ ಚೀಟಿಯನ್ನು ಓದಿ, ಅರ್ಥೈಸಿಕೊಂಡು ಅದಕ್ಕೆ ತಕ್ಕಂತೆ ಔಷಧಗಳನ್ನು ಕೊಡುವುದರ ಜತೆಗೆ ಸೇವನಾ ಕ್ರಮಗಳನ್ನು ಮನ ಮುಟ್ಟುವಂತೆ ವಿವರಿಸಿ ಬರೆದು ಕೊಡುವುದು ಫಾರ್ಮಸಿಸ್ಟರ ಕರ್ತವ್ಯ. ಔಷಧಿಗಳ ಜೋಡಣೆ, ಶೇಖರಣೆ, ವಿಂಗಡಣೆ ಬಗ್ಗೆ ನಿಖರತೆಯನ್ನು ಸಾಧಿಸಿಕೊಳ್ಳಲು ಫಾರ್ಮಸಿಸ್ಟರಿಗೆ ವೃತ್ತಿ ಅನುಭವ ಪಾಠ ನೀಡುತ್ತದೆ. ಹಿರಿಯ ಫಾರ್ಮಸಿಸ್ಟರ ಒಡನಾಟದಲ್ಲಿ ಪಳಗಿದ ಕಿರಿಯರು ಫಾರ್ಮಸಿಯ ಸರ್ವಾಂಗ ಕಾರ್ಯ ವೈಖರಿ ಬಗ್ಗೆ ತಿಳಿದುಕೊಳ್ಳಲು ಸಹಾಯವಾಗಬಹುದು. ಮಾಹಿತಿ ತಂತ್ರಜ್ಞಾನದ ತಿಳಿವಳಿಕೆಗಳೂ ಯುವ ಫಾರ್ಮಸಿಸ್ಟರಿಗೆ ಇರುವುದರಿಂದ ಶೀಘ್ರ ಕಾರ್ಯಕ್ಷಮತೆ ಈಡೇರಲು ಸಹಾಯಕ.
ಫಾರ್ಮಸಿಸ್ಟರಿಗೆ ಸಹಕರಿಸುತ್ತ ಸಹೋದ್ಯೋಗಿಗಳಾಗಿ ನೆರವು ನೀಡುತ್ತಿರುವ ಫಾರ್ಮಸಿ ಸಹಾಯಕ ಸಿಬ್ಬಂದಿಗಳ ಕೊಡುಗೆಯನ್ನು ವಿಶ್ವ ಫಾರ್ಮಸಿಸ್ಟ್ ದಿನಾಚರಣೆ ಸಂದರ್ಭದಲ್ಲಿ ಉಲ್ಲೇಖಿಸುವುದು ಸೂಕ್ತ. ತುರ್ತು ಸಂದರ್ಭಗಳಲ್ಲಿ ಅತಿ ಅಗತ್ಯದ ಔಷಧಿಗಳ ಕೊರತೆ ಆಗಾಗ ಕಂಡು ಬರುವುದು ಸಹಜ. ಅಂತಹ ಸಮಯದಲ್ಲಿ ಲಭ್ಯ ಇರುವ ಔಷಧ ಕೇಂದ್ರಗಳನ್ನು ಸಂಪರ್ಕಿಸಿ ಔಷಧಿಗಳನ್ನು ತರಿಸಿ ರೋಗಿಗಳಿಗೆ ಒದಗಿಸಲು ಪ್ರಯತ್ನಿಸುವುದು ವೃತ್ತಿಪರ ಫಾರ್ಮಸಿಸ್ಟರ ಕರ್ತವ್ಯ. ಬೇಡಿಕೆಗೆ ಅನುಸಾರವಾಗಿ ದಾಸ್ತಾನು ಕಾಪಾಡುವುದು, ಅವುಗಳ ಜೀವಿತಾವಧಿ ಪರಿಶೀಲಿಸಿಕೊಂಡು, ಅಲ್ಪ ಜೀವಿತಾವಧಿಯ ಔಷಧಿಗಳನ್ನು ಹಿಂದಿರುಗಿಸಿ ಹೆಚ್ಚಿನ ಅವಧಿ ಅಥವಾ ಶೀಘ್ರ ಚಾಲ್ತಿಯಲ್ಲಿರುವ ಗುಣಮಟ್ಟದ ಕಂಪೆನಿಯ ಔಷಧಿಗಳನ್ನು ಒದಗಿಸುವುದು ಫಾರ್ಮಸಿಸ್ಟರ ಕಾರ್ಯವ್ಯಾಪ್ತಿಗೆ ಬರುತ್ತದೆ.
ಔಷಧಿ ವಿತರಿಸುವ ಮೊದಲೇ ಎರಡು ಬಾರಿ ಪರಿಶೀಲಿಸಿಕೊಳ್ಳಬೇಕು ಎಂಬ ವಿಚಾರವನ್ನು ಫಾರ್ಮಸಿಸ್ಟರು ಗಮನಿಸುವುದು ಅವಶ್ಯಕ. ಔಷಧಿಗಳ ದುರುಪಯೋಗ ಆಗದಂತೆ ನೋಡಿಕೊಳ್ಳುವುದೂ ಅವರ ಜವಾಬ್ದಾರಿ. ವೈದ್ಯರುಗಳ ಸೂಕ್ತ ಸಲಹಾ ಚೀಟಿ ಇದ್ದಾಗ ಮಾತ್ರ ಔಷಧಿ ಕೊಡಬೇಕು ಎನ್ನುವುದು ಔಷಧ ನಿಯಂತ್ರಣ ಇಲಾಖೆಯ ನಿಯಮ. ಎಲ್ಲ ಫಾರ್ಮಸಿಗಳಲ್ಲಿ, ಔಷಧಿ ಅಂಗಡಿಗಳಲ್ಲಿ ವೃತ್ತಿನಿರತ ಫಾರ್ಮಸಿಸ್ಟರು ಪೂರ್ಣಾವಧಿ ಕರ್ತವ್ಯ ನಿರ್ವಹಿಸಬೇಕು ಎಂದು ಫಾರ್ಮಸಿಸ್ಟರ ಸಂಘಟನೆ ನಿಯಮವನ್ನು ನೆನಪಿಸುವುದು ವಿಶ್ವ ಫಾರ್ಮಸಿಸ್ಟ್ ದಿನಾಚರಣೆಯ ಪ್ರಮುಖ ಅಂಶಗಳಲ್ಲಿ ಒಂದು.ವೃತ್ತಿನಿರತ ಎಲ್ಲ ಫಾರ್ಮಸಿಸ್ಟರು ವಿಶ್ವ ಫಾರ್ಮಸಿಸ್ಟ್ ದಿನ ಆಚರಿಸುವಂತೆ ಎಫ್‌ಐಪಿ ಕರೆ ನೀಡಿದೆ. ಮೌಲ್ಯಯುತ ಧ್ಯೇಯವುಳ್ಳ ಫಾರ್ಮಸಿಸ್ಟರು ಸಾರ್ವತ್ರಿಕ ಸ್ವಾಸ್ಥ್ಯಕ್ಕೆ ಪೂರಕವಾದ ಕಾರ್ಯ ನಿರ್ವಹಿಸಲಿ ಎಂಬುದು ಎಫ್‌ಐಪಿಯ ಆಶಯ. ಎಲ್ಲ ವೃತ್ತಿನಿರತ ಫಾರ್ಮಸಿಸ್ಟರಿಗೆ ಶುಭಾಶಯಗಳು.
ಕನ್ನಡ ಬಳಕೆಯ ಪರೋಕ್ಷ ಪ್ರಹಾರ
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆಯವರು ತಮ್ಮ ಹೇಳಿಕೆಯಲ್ಲಿ ಕನ್ನಡದಲ್ಲಿ ಔಷಧ ಚೀಟಿ ನೀಡಬೇಕೆಂದು ಪ್ರಸ್ತಾಪಿಸಿದ ಬಗ್ಗೆ ವ್ಯಾಪಕವಾದ ಚರ್ಚೆಗಳು ನಡೆಯುತ್ತಿವೆ. ಬಹುತೇಕ ಕರ್ನಾಟಕದ ಹೆಚ್ಚಿನೆಲ್ಲ ಸಿಬ್ಬಂದಿಗಳು ಇಂಗ್ಲೀಷ್‌ನಲ್ಲಿ ಬರೆದ ಔಷಧಗಳ ಹೆಸರುಗಳನ್ನು ಓದಿ ಔಷಧ ನೀಡಿ ಮೌಖಿಕವಾಗಿ ಕನ್ನಡದಲ್ಲಿ ಸೇವನಾ ಕ್ರಮದ ಬಗ್ಗೆ ವಿವರಿಸುವುದಲ್ಲದೆ ಕನ್ನಡದಲ್ಲಿ 'ಆಹಾರದ ಮೊದಲು, ಆಹಾರದ ನಂತರ, ಬೆಳಿಗ್ಗೆ, ರಾತ್ರಿ ಸೇವಿಸಿ' ಹೀಗೆ ಬರೆದು ಉಭಯ ಭಾಷಾ ಮೈತ್ರಿಗೆ ಅಳಿಲ ಸೇವೆ ಸಲ್ಲಿಸುತ್ತಿದ್ದಾರೆ.
ಈಗ ಸಹಸ್ರಾರು ವೈದ್ಯರು ಪ್ರಿಸ್ಕ್ರಿಪ್ಶನ್‌ನ್ನು ಕ್ಯಾಪಿಟಲ್ ಅಕ್ಷರಗಳಲ್ಲಿ ಬರೆದು ಸುಲಭವಾಗಿ ತಿಳಿಯುವಂತೆ ಸಹಕರಿಸುತ್ತಿದ್ದಾರೆ. ಕನ್ನಡದಲ್ಲಿ ವೈದ್ಯರು ಚೀಟಿ ಬರೆಯಬೇಕೆಂಬ ಈ ಚರ್ಚೆಯ ಗಡಿ ದಾಟಿ ಫಾರ್ಮಸಿಯ ತಳಮಟ್ಟದ ನೌಕರರನ್ನು, ಫಾರ್ಮಸಿಸ್ಟರನ್ನು ವಿನಾ ಕಾರಣ ಅವಮಾನಿಸುವುದು ಕೆಲವೆಡೆ ಕಂಡುಬರುತ್ತದೆ. ನೂರಾರು ಮದ್ದುಗಳ ಮತ್ತು ಇಂಜೆಕ್ಷನ್‌ಗಳ ಲೇಬಲ್‌ಗಳಲ್ಲಿ ವಿವರಗಳು ಅತಿ ಸಣ್ಣ ಅಕ್ಷರಗಳಲ್ಲಿರುತ್ತದೆ. ಮದ್ದುಗಳ ರಾಸಾಯನಿಕಗಳ ಹೆಸರು, ಉತ್ಪಾದನಾ ಕ್ರಮಾಂಕ, ಜೀವಿತಾವಧಿ, ದರ ಇವುಗಳನ್ನು ಸ್ಫುಟವಾಗಿ ಮುದ್ರಿತವಾಗುವಂತೆ ಎಲ್ಲ ಫಾರ್ಮಸಿಸ್ಟರು ಒತ್ತಾಯಿಸಬೇಕಾಗಿದೆ. ಚರ್ಚೆ ವಿಮರ್ಶಕರಿಂದ ಜನಪರವಾಗಿ ಸಾಗಿದಾಗ ಸಾರ್ಥಕ.

Next Article