For the best experience, open
https://m.samyuktakarnataka.in
on your mobile browser.

ಫಾಲಿ ನಾರಿಮನ್ ಅವರೊಂದಿಗೆ ಕಳೆದ ಕ್ಷಣಗಳ ಮೆಲುಕು ಹಾಕಿದ ಎಂ ಬಿ ಪಾಟೀಲ

12:05 PM Feb 21, 2024 IST | Samyukta Karnataka
ಫಾಲಿ ನಾರಿಮನ್ ಅವರೊಂದಿಗೆ ಕಳೆದ ಕ್ಷಣಗಳ ಮೆಲುಕು ಹಾಕಿದ ಎಂ ಬಿ ಪಾಟೀಲ

ಬೆಂಗಳೂರು: ನ್ಯಾಯಶಾಸ್ತ್ರಜ್ಞ ಫಾಲಿ ಸ್ಯಾಮ್ ನಾರಿಮನ್ ಇಂದು ನೆನಪಿನ ಅಂಗಳಕ್ಕೆ ಜಾರಿದ್ದಾರೆ. ಅವರೊಂದಿಗಿನ ಒಡನಾಟ ಸ್ಮರಿಸಿ, ಅವರಿಗೆ ನುಡಿನಮನ ಅರ್ಪಿಸುತ್ತಿದ್ದೇನೆ ಎಂದು ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ನಾರಿಮನ್ ಅವರು ಈ ದೇಶ ಕಂಡ ಅಪ್ರತಿಮ ನ್ಯಾಯವಾದಿಗಳಲ್ಲಿ ಒಬ್ಬರು. ವೃತ್ತಿಯಲ್ಲಿ ಮೌಲ್ಯಗಳನ್ನು ಪ್ರತಿನಿಧಿಸುತ್ತಿದ್ದ ಅವರು, ಉದಾರ ಮಾನವತಾವಾದಿ ಆಗಿದ್ದರು. ನಾನು ಜಲ ಸಂಪನ್ಮೂಲ ಸಚಿವನಾಗಿದ್ದಾಗ ಕಾವೇರಿ ನೀರಿನ ಹಕ್ಕಿನ ವಿಚಾರವಾಗಿ ಮಾತನಾಡುವಾಗ ಇದು ಅನುಭವಕ್ಕೆ ಬಂದಿತ್ತು.

ಕಾವೇರಿ ಜಲ ವಿವಾದ ಭುಗಿಲೆದ್ದಾಗ ನಾರಿಮನ್ ಅವರು ಕರ್ನಾಟಕದ ಹಕ್ಕನ್ನು ಸಮರ್ಥವಾಗಿ ಮಂಡಿಸಿದರು. ಅವರ ವಾದದಿಂದಾಗಿ ರಾಜ್ಯಕ್ಕೆ ಹೆಚ್ಚು ನೀರು ಸಿಕ್ಕಿತು. ನಮ್ಮ ಅಹವಾಲುಗಳನ್ನು ನಾರಿಮನ್ ಅವರು ಸದಾ ಸಹಾನುಭೂತಿಯಿಂದ ಆಲಿಸುತ್ತಿದ್ದರು.

ನಾರಿಮನ್ ಅವರೊಂದಿಗೆ ನನಗೆ ವೈಯಕ್ತಿಕವಾಗಿ ಗಾಢ ಸಂಬಂಧವಿತ್ತು. ಕಾವೇರಿ ನದಿಯ ವಿಚಾರದಲ್ಲಿ ಪ್ರತಿಯೊಂದು ವಿವರ ಮತ್ತು ಅಂಕಿ ಅಂಶಗಳನ್ನೆಲ್ಲ ಅವರು ಕರತಲಾಮಲಕ ಮಾಡಿಕೊಂಡಿದ್ದರು. ಎಷ್ಟೋ ಸಂದರ್ಭಗಳಲ್ಲಿ ಅವರು ನಮ್ಮನ್ನೆಲ್ಲ ಉದ್ದೇಶಿಸಿ, ಸಚಿವರಾದವರು ಯಾವುದೇ ವಿಚಾರದ ಬಗ್ಗೆ ಸೂಕ್ತ ತಿಳಿವಳಿಕೆ ಹೊಂದಿರಬೇಕು ಎಂದು ಹೇಳುತ್ತಿದ್ದರು. ಅವರ ಇಂತಹ ಮಾತುಗಳು ನಮ್ಮ ಆತ್ಮಸಾಕ್ಷಿಯನ್ನು ಜಾಗೃತಗೊಳಿಸುತ್ತಿದ್ದವು.

ಒಂದು ಹಂತದಲ್ಲಿ ನಾರಿಮನ್ ಅವರಿಗೆ ಅನಗತ್ಯವಾಗಿ ಅತ್ಯಧಿಕ ಶುಲ್ಕ ಪಾವತಿ ಮಾಡಲಾಗುತ್ತಿದೆ ಎನ್ನುವ ಅನಪೇಕ್ಷಿತ ಮಾತುಗಳು ಕೇಳಿಬಂದವು. ಆಗ ನೊಂದುಕೊಂಡ ನಾರಿಮನ್ ಅವರು ತಾವು ಹಿಂದೆ ಸರಿಯುವುದಾಗಿ ಹೇಳಿದರು. ಆ ಸಂದರ್ಭದಲ್ಲಿ ನಾನು ಅವರನ್ನು ಮನವೊಲಿಸಿ, ಪುನಃ ರಾಜ್ಯದ ಪರವಾಗಿ ವಾದಿಸುವಂತೆ ಮಾಡಿದೆ. ಅಂತಿಮವಾಗಿ ಅವರು ತಾವು ಕೊಟ್ಟ ಮಾತಿನಂತೆ ಕರ್ನಾಟಕಕ್ಕೆ ನ್ಯಾಯ ಒದಗಿಸಿ ಕೊಟ್ಟಿದ್ದನ್ನು ಮರೆಯಲಾಗದು.

ಕಾವೇರಿ ನದಿ ನೀರಿನ ವಿಚಾರದಲ್ಲಿ ತಮಿಳುನಾಡು ಅವಾಸ್ತವಿಕವಾಗಿ ಮಾತನಾಡುತ್ತಿತ್ತು. ಆಗ ನಾರಿಮನ್ ಅವರು ಚೆನ್ನೈ ನಗರದ ಕುಡಿಯುವ ನೀರಿನ ಅಗತ್ಯಕ್ಕೆ ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ತಮ್ಮ ಪಾಲಿನ ತಲಾ 5 ಟಿಎಂಸಿ ಅಡಿ ನೀರನ್ನು ಉದಾರವಾಗಿ ಬಿಟ್ಟು ಕೊಟ್ಟಿರುವುದನ್ನು ನ್ಯಾಯ ಮಂಡಲಿಯ ಗಮನಕ್ಕೆ ತಂದರು. ಈ ಮೂಲಕ ಬೆಂಗಳೂರು ನಗರಕ್ಕೆ ಹೆಚ್ಚುವರಿಯಾಗಿ 4.75 ಟಿಎಂಸಿ ನೀರು ಸಿಗುವಂತೆ ನೋಡಿಕೊಂಡರು. ಇದಕ್ಕಾಗಿ ಬೆಂಗಳೂರು ನಗರದ ಜನ ನಾರಿಮನ್ ಅವರಿಗೆ ಸದಾ ಕೃತಜ್ಞರಾಗಿರುತ್ತಾರೆ ಎಂದಿದ್ದಾರೆ.