ಫೆಂಗಲ್ ಮಳೆ ತಗ್ಗಿದರೂ ತಗ್ಗದ ಹಾನಿ: ಸಿಡಿಲಿಗೆ ಯುವಕ ಬಲಿ
ಮಂಗಳೂರು: ಫೆಂಗಲ್ ಚಂಡಮಾರುತದ ಪರಿಣಾಮ ತೀವ್ರ ಮಳೆಯಾಗಿರುವ ದಕ್ಷಿಣ ಕನ್ನಡದಲ್ಲಿ ಇಂದು ಮಳೆ ಅಬ್ಗರ ತಗ್ಗಿದರೂ ಹಾನಿ ಮುಂದುವರೆದಿದೆ. ಯುವಕನೊಬ್ಬ ಸಿಡಿಲಿಗೆ ಬಲಿಯಾಗಿದ್ದಾನೆ.
ಸೋಮವಾರ ಆರಂಭಗೊಂಡ ಮಳೆ ಇಂದು ಮಧ್ಯಾಹ್ನ ತನಕವೂ ಸುರಿಯುತ್ತಲೇ ಇತ್ತು. ಆ ಬಳಿಕ ಮಳೆ ನಿಂತು ಬಿಸಿಲು ಕಾಣಿಸಿದೆ. ಮಳೆ ಹಿನ್ನೆಲೆಯಲ್ಲಿ ಇಂದು ಶಾಲೆ ಮತ್ತು ಪಿಯು ಕಾಲೇಜುಗಳಿಗೆ ರಜೆ ನೀಡಲಾಗಿದ್ದು, ಹಲವು ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ. ಮಳೆಯಿಂದ ಜಿಲ್ಲೆಯ ವಿವಿದೆಡೆ ಮಳೆನೀರು ಮನೆಯೊಳಗೆ ಹರಿದಿದೆ. ತಗ್ಗು ಪ್ರದೇಶ ಜಲಾವೃತವಾಗಿ ಕೃತಕ ನೆರೆಯಾಗಿದೆ. ಮಂಗಳೂರಿನ ಜೆಪ್ಪು ಸೇರಿದಂತೆ ಅಲ್ಲಲ್ಲಿ ಮನೆ ಗೋಡೆ ಕುಸಿದು ಹಾನಿಯಾಗಿರುವ ಘಟನೆ ನಡೆದಿದೆ.
ಮಂಗಳೂರಿನ ಕೊಟ್ಟಾರ ಚೌಕಿ, ಪಂಪ್ವೆಲ್, ತೊಕ್ಕೊಟ್ಟು ಮತ್ತಿತರ ಕಡೆ ನೀರು ತುಂಬಿದ್ದು, ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ. ಮಂಗಳೂರಿನ ಕರಂಗಲ್ಪಾಡಿಯಲ್ಲಿ ಕಾಂಪೌಂಡ್ ಕುಸಿದು ಮಳೆನೀರು ಮನೆಯೊಂದರ ಒಳಗೆ ನುಗ್ಗಿ ಆತಂಕ ಸೃಷ್ಟಿಸಿದೆ.
ಕೊಚ್ಚಿ ಹೋದ ದೋಣಿ: ಮಂಗಳೂರಿನ ಬಂದರಿನಲ್ಲಿ ಲಂಗರು ಹಾಕಿದ್ದ ಮೀನುಗಾರಿಕಾ ಬೋಟ್‌ಗಳಲ್ಲಿರುವ ಬಲೆ ಬೀಸುವ ಸಣ್ಣ ದೋಣಿಗಳು ಗಾಳಿ ಅಬ್ಬರಕ್ಕೆ ಕೊಚ್ಚಿ ಹೋಗಿವೆ. ನಿನ್ನೆ ರಾತ್ರಿ ವೇಳೆ ಸುರಿದ ಭಾರೀ ಮಳೆ ಹಾಗೂ ಹರಿದು ಬಂದ ನೀರಿನಿಂದಾಗಿ ದೋಣಿಗಳು ಕೊಚ್ಚಿ ಹೋಗಿವೆ. ಸುಮಾರು ಹತ್ತು ದೋಣಿಗಳಿಗೆ ಹಾನಿಯಾಗಿದೆ.
ಸಿಡಿಲಿಗೆ ಬಲಿ: ಅಕಾಲಿಕ ಸಿಡಿಲು ಮಳೆ ಪುತ್ತೂರಿನ ಕೆಯ್ಯೂರು ಸಮೀಪ ನಾರಾಯಣ (೨೫) ಎಂಬ ಯುವಕನನ್ನು ಬಲಿ ಪಡೆದಿದೆ. ಪಕ್ಕದ ಮನೆಯ ಕೆಟ್ಟು ಹೋದ ವಿದ್ಯುತ್ ಬಲ್ಬ್‌ನ್ನು ಬದಲಾಯಿಸಲು ಹೋದಾಗ ಸಿಡಿಲು ಬಡಿದು ನಾರಾಯಣ ಸಾವನ್ನಪ್ಪಿದ್ದಾರೆ. ಬಂಟ್ವಾಳದಲ್ಲಿ ಮನೆಯೊಂದಕ್ಕೆ ಸಿಡಿಲು ಬಡಿದು ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಮನೆ ಮಂದಿ ಅದೃಷ್ಟವಶಾತ್ ಪಾರಾಗಿದ್ದಾರೆ.
ಮಂಗಳೂರಿನ ಬಜಪೆ ಸಮೀಪದ ಅದ್ಯಪಾಡಿಯಲ್ಲಿ ಭಾರೀ ಭೂಕುಸಿತ ಸಂಭವಿಸಿದೆ. ಬಜಪೆ-ಅದ್ಯಪಾಡಿಯ ಸಂಪರ್ಕ ಕಡಿತವಾಗಿದ್ದು, ಮಂಗಳೂರು ವಿಮಾನನಿಲ್ದಾಣ ಕೆಳಭಾಗದ ಅದ್ಯಪಾಡಿ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದ ಕಾರಣ ಸಂಪರ್ಕ ರಸ್ತೆ ಹಾನಿಗೊಂಡಿದೆ.