ಫೆ.೯, ೧೦- ರಾಜ್ಯಾದ್ಯಂತ ಹನುಮಧ್ವಜ ಅಭಿಯಾನ
ಮಂಗಳೂರು: ಮಂಡ್ಯದಲ್ಲಿ ಹನುಮಧ್ವಜ ತೆರವು ವಿರೋಧಿಸಿ ವಿಶ್ವಹಿಂದು ಪರಿಷತ್ ಹಾಗೂ ಬಜರಂಗದಳ ಫೆ.೯ ಮತ್ತು ೧೦ ರಂದು ರಾಜ್ಯಾದ್ಯಂತ ಹನುಮಧ್ವಜ ಅಭಿಯಾನ ಮತ್ತು ಜಿಲ್ಲಾಧಿಕಾರಿಕಚೇರಿಯಲ್ಲಿ ಹನುಮಾನ್ ಚಾಲೀಸ್ ಪಠಣ ಮೂಲಕ ಪ್ರತಿಭಟನೆಗೆ ಕರೆ ನೀಡಿದೆ.
ನಗರದ ವಿಹಿಂಪ ಕಚೇರಿಯಲ್ಲಿ ಶುಕ್ರವಾರ ಬಜರಂಗದಳ ಪ್ರಾಂತ ಸಂಯೋಜಕ ಸುನಿಲ್ ಕೆ.ಆರ್. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಂಡ್ಯ ಕರಗೋಡು ಆಂಜನೇಯ ದೇವಸ್ಥಾನದ ಮುಂಭಾಗ ಅಲ್ಲಿನ ಪಂಚಾಯ್ತಿ ಪರವಾನಗಿ ಪಡೆದೇ ಹನುಮಧ್ವಜ ಹಾಕಲಾಗಿದೆ. ಅಯೋಧ್ಯೆ ಮಂದಿರ ಪ್ರತಿಷ್ಠಾಪನೆಯ ಸಡಗರಕ್ಕೆ ಸ್ಥಳೀಯ ಹಿಂದು ವಿರೋಧಿಗಳು ಸೇರಿ ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ಸರ್ಕಾರಕ್ಕೆ ಒತ್ತಡ ಹಾಕಿ ಅದನ್ನು ತೆರವುಗೊಳಿಸಿದ್ದಾರೆ. ಇದು ಧರ್ಮ ವಿರೋಧಿ ಕೃತ್ಯವಾಗಿದ್ದು, ಮತ್ತೆ ಅಲ್ಲಿಯೇ ಧ್ವಜ ಹಾರಾಟಕ್ಕೆ ಅವಕಾಶಕ್ಕೆ ಆಗ್ರಹಿಸಿ ಫೆ.೯ರಂದು ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ ಎದುರು ಹಿಂದು ಸಂಘಟನೆಗಳು ಹನುಮಾನ್ ಚಾಲೀಸಾ ಪಠಣ ಮೂಲಕ ಪ್ರತಿಭಟನೆ ನಡೆಸಲಿವೆ ಎಂದರು.
ಫೆ.೨ರಿಂದ ೧೦ರ ವರೆಗೆ ರಾಜ್ಯಾದ್ಯಂತ ಹನುಮಧ್ವಜ ಅಭಿಯಾನ ನಡೆಯಲಿದೆ. ಪ್ರತಿ ಮನೆಗಳಲ್ಲಿ, ಧ್ವಜಕಟ್ಟೆ, ಧಾರ್ಮಿಕ ಕೇಂದ್ರಗಳಲ್ಲಿ ಹನುಮಧ್ವಜದ ಹಾರಿಸುವ ಮೂಲಕ ಅಭಿಯಾನ ನಡೆಸಲಾಗುವುದು. ಹಿಂದು ಸಮಾಜಕ್ಕೆ ವಿಶ್ವಾಸ ಮೂಡಿಸಲು ಈ ಅಭಿಯಾನ ಕೈಗೊಳ್ಳಲಾಗುತ್ತಿದೆ ಎಂದರು.
ಹನುಮಧ್ವಜ ಬದಲು ಕನ್ನಡ ಧ್ವಜ ಹಾಗೂ ರಾಷ್ಟ್ರಧ್ವಜ ಹಾರಿಸುತ್ತೇವೆ ಎನ್ನುವ ಮಂಡ್ಯ ಶಾಸಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಸುನಿಲ್ ಕೆ.ಆರ್, ಈ ಧ್ವಜ ಹಾರಾಟಕ್ಕೆ ನಮ್ಮ ವಿರೋಧವಿಲ್ಲ. ಈ ಧ್ವಜಗಳ ಜತೆ ಹನುಮಧ್ವಜವೂ ಹಾರಾಡಲಿ. ಶಾಸಕರ ಮನೆಯಲ್ಲಿ ಕೂಡ ಹನುಮನ ಪೂಜೆ ಮಾಡುತ್ತಾರೆ, ಇದು ಶ್ರದ್ಧೆಯ ವಿಚಾರವಾದ್ದರಿಂದ ಇಲ್ಲಿ ಅಲ್ಪಸಂಖ್ಯಾತರ ತುಷ್ಠೀಕರಣದ ಅಗತ್ಯವಿಲ್ಲ ಎಂದರು.
ಪ್ರತಿ ಬಾರಿ ಆ.೧೪ರ ರಾತ್ರಿ ಅಖಂಡ ಭಾರತಕ್ಕೆ ಸಂಕಲ್ಪ ಕೈಗೊಳ್ಳುತ್ತಿದ್ದು, ಯಾವುದೇ ಕಾರಣಕ್ಕೂ ಮತ್ತೊಮ್ಮೆ ಭಾರತ ವಿಭಜನೆಗೆ ಅವಕಾಶ ನೀಡುವುದಿಲ್ಲ ಎಂದು ದಕ್ಷಿಣ ಭಾರತ ಪ್ರತ್ಯೇಕ ರಾಷ್ಟ್ರ ಆಗಬೇಕು ಎಂಬ ಸಂಸದ ಡಿ.ಕೆ.ಸುರೇಶ್ ಕೂಗಿಗೆ ಅವರು ಪ್ರತಿಕ್ರಿಯಿಸಿದರು. ಅಪ್ಘಾನಿಸ್ತಾನ, ಪಾಕಿಸ್ತಾನ ಕೂಡ ಭಾರತದ ಭಾಗವೇ ಆಗಬೇಕು ಎಂದು ನಾವು ಅಖಂಡ ಭಾರತ ಸಂಕಲ್ಪ ದಿನ ಆಚರಿಸುತ್ತೇವೆ. ಹಾಗಿರುವಾಗ ಮತ್ತೆ ಭಾರತವನ್ನು ತುಂಡು ಮಾಡಬೇಕಾಗಿಲ್ಲ ಎಂದರು.
ಮಂಗಳೂರಿನ ಮಳಲಿ ಮಸೀದಿ ನವೀಕರಣ ವೇಳೆ ಹಿಂದು ಮಂದಿರದ ಅವಶೇಷ ಪತ್ತೆ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿದೆ. ಅದು ವಕ್ಫ್ ಆಸ್ತಿ ಅಲ್ಲ ಎಂದು ಕೋರ್ಟ್ ಹೇಳಿದ್ದು, ವಿಚಾರಣೆ ನಡೆಯುತ್ತಿದೆ. ದೇಶದಲ್ಲಿರುವ ಎಲ್ಲ ಮಸೀದಿಗಳ ಹಿನ್ನೆಲೆ ಗಮನಿಸಿದರೆ ಹಿಂದು ಮಂದಿರ, ದೇವಸ್ಥಾನಗಳೇ ಆಗಿರುತ್ತದೆ. ಅವುಗಳೆಲ್ಲ ಹಿಂದುಗಳಿಗೆ ಸೇರಬೇಕು ಎಂದು ಹೇಳಿದರು.
ವಿಭಾಗ ಸಂಯೋಜಕ ಭುಜಂಗ ಕುಲಾಲ್, ಜಿಲ್ಲಾಧ್ಯಕ್ಷ ಎಚ್.ಕೆ.ಪುರುಷೋತ್ತಮ, ವಿಭಾಗ ಸಹ ಸಂಯೋಜಕ ಪುನೀತ್ ಅತ್ತಾವರ, ಜಿಲ್ಲಾ ಸಹ ಸಂಯೋಜಕ ಪ್ರೀತಮ್ ಕಾಟಿಪಳ್ಳ ಉಪಸ್ಥಿತರಿದ್ದರು.