ಬಂಗಾರಪೇಟೆ ಶಾಸಕರಿಗೆ ೫೪ ಎಕರೆ ಭೂಮಿ ಮಂಜೂರಾತಿಗೆ ವಿರೋಧ
ಕೋಲಾರ: ಬಂಗಾರಪೇಟೆ ಕಾಂಗ್ರೆಸ್ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಮತ್ತು ಗಾಲ್ಫ್ ಬಿಲ್ಡರ್ ಕಂಪನಿಯು ಕಬಳಿಸಿರುವ ೫೪ ಎಕರೆ ಸರ್ಕಾರಿ ಭೂಮಿ, ಕೆರೆ, ಗೋಮಾಳ ಮತ್ತು ಗುಂಡು ತೋಪುಗಳನ್ನು ಸಕ್ರಮಗೊಳಿಸಿ ಅವರಿಗೇ ಮಂಜೂರು ಮಾಡಿಕೊಡಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಕೋಲಾರ ಸಂಸತ್ ಮಾಜಿ ಸದಸ್ಯ ಎಸ್. ಮುನಿಸ್ವಾಮಿ ಆರೋಪ ಮಾಡಿದ್ದಾರೆ.
ಬಂಗಾರಪೇಟೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ದಿವಂಗತ ಡಿ.ಕೆ. ರವಿ ಅವರು ಸರ್ವೇ ಮಾಡಿ ಬಂಗಾರಪೇಟೆ ತಾಲೂಕಿನ ವಗ್ಗಯ್ಯನದಿನ್ನೆ ಹಾಗೂ ಹನಿಗಾನಹಳ್ಳಿ ಸರ್ವೇ ನಂಬರ್‌ಗಳಲ್ಲಿ ಇದ್ದ ೫೪ ಎಕರೆ ಸರ್ಕಾರಿ ಭೂಮಿಯನ್ನು ಗಾಲ್ಫ್ ಸಂಸ್ಥೆಯವರು ಕಬಳಿಸಿದ್ದಾರೆ ಎಂದು ಸರ್ಕಾರಕ್ಕೆ ವರದಿ ನೀಡಿದ್ದರು. ಅದೇ ಭೂಮಿಯನ್ನು ಈಗ ಸಕ್ರಮಗೊಳಿಸಿ ಎಸ್.ಎನ್. ನಾರಾಯಣಸ್ವಾಮಿ ಮತ್ತು ಗಾಲ್ಫ್ ಸಂಸ್ಥೆಗೆ ಕೋಟ್ಯಾಂತರ ರೂ. ಬೆಲೆ ಬಾಳುವ ಸರ್ಕಾರಿ ಆಸ್ತಿಯನ್ನು ಕೊಡುಗೆ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಮುನಿಸ್ವಾಮಿ ಟೀಕಿಸಿದರು.
ಜಿಲ್ಲಾಧಿಕಾರಿ ನೀಡಿದ್ದ ವರದಿಯನ್ನು ನಿರ್ಲಕ್ಷಿಸಿ ಕೋಟ್ಯಾಂತರ ರೂ. ಬೆಲೆ ಬಾಳುವ ಭೂಮಿಯನ್ನು ಬಿಲ್ಡರ್‌ಗಳಿಗೆ ಸಕ್ರಮ ಮಾಡಿಕೊಡಲು ಸಚಿವ ಸಂಪುಟದ ಮುಂದೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇಷ್ಟೊಂದು ದಾರಾಳತನ ತೋರಿಸುವ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂದಾಯ ಸಚಿವ ಕೃಷ್ಣ ಬೈರೇಗೌಡ ಹಾಗೂ ಕಂದಾಯ ಇಲಾಖೆ ಪ್ರಧಾನಕಾರ್ಯದರ್ಶಿ ರಾಜೇಂದ್ರಕುಮಾರ್ ಕಠಾರಿಯಾ ಅವರುಗಳ ಆಸಕ್ತಿಯ ಹಿಂದಿನ ಉದ್ದೇಶವೇನು ಎಂದು ಮುನಿಸ್ವಾಮಿ ಪ್ರಶ್ನಿಸಿದರು.
ದರಕಾಸ್ತು ಸಮಿತಿ ಅಧ್ಯಕ್ಷರಾಗಿ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಗಾಲ್ಫ್ ಸಂಸ್ಥೆ ಉದ್ಯೋಗಿಗಳು ಹಾಗೂ ತಮ್ಮ ಎಸ್.ಎನ್ ಸಿಟಿ ಹಾಗೂ ಎಸ್‌ಎನ್ ರೆಸಾರ್ಟ್‌ನಲ್ಲಿ ಕೆಲಸ ಮಾಡುವ ಕಾರ್ಮಿಕರ ಹೆಸರಿಗೆ ಸಾಗುವಳಿ ಚೀಟಿಗಳನ್ನು ವಿತರಿಸಿದ್ದಾರೆ. ಅಲ್ಲದೆ ತಮ್ಮ ತಾಯಿಯ ಹೆಸರಿಗೆ ೪ ಎಕರೆ ಭೂಮಿ ಮಂಜೂರು ಮಾಡಿದ್ದಾರೆ ಎಂದು ಮುನಿಸ್ವಾಮಿ ಆರೋಪಿಸಿದರು.
ಬಂಗಾರಪೇಟೆ ಕ್ಷೇತ್ರದ ಬಡವರಿಗೆ ಮತ್ತು ಭೂಹೀನರಿಗೆ ದೊರಕಬೇಕಾಗಿದ್ದ ಸರ್ಕಾರಿ ಭೂಮಿಯನ್ನು ಬಿಲ್ಡರ್‌ಗಳು ಮತ್ತು ತಮ್ಮ ಖಾಸಗಿ ಸಂಸ್ಥೆಯ ನೌಕರರಿಗೆ ದೊರಕಿಸುತ್ತಿರುವ ಶಾಸಕರ ವರ್ತನೆಗೆ ಕಡಿವಾಣ ಹಾಕುವ ಬದಲು ಸರ್ಕಾರ ತನ್ನ ಆಸ್ತಿಯನ್ನೇ ಕೊಡುಗೆ ನೀಡಲು ಮುಂದಾಗಿರುವುದು ಏಕೆ ಎಂದು ಮಾಜಿ ಸಂಸದರು ಪ್ರಶ್ನಿಸಿದರು.
ಸರ್ಕಾರ ಕೋಟ್ಯಂತರ ರೂ. ಆಸ್ತಿಯನ್ನು ಖಾಗಿ ಬಿಲ್ಡರ್‌ಗಳಿಗೆ ಕೊಡುವಂತಿದ್ದರೆ ಜಿಲ್ಲೆಯಲ್ಲಿ ಈಗಾಗಲೇ ತೆರವುಗೊಳಿಸಿರುವ ಎರಡು ಸಾವಿರ ಎಕರೆ ಅರಣ್ಯ ಭೂಮಿ ಹಾಗೂ ಸರ್ಕಾರಿ ಜಮೀನುಗಳನ್ನು ಒತ್ತುವರಿ ಮಾಡಿಕೊಂಡಿರುವ ರೈತರಿಗೆ ಮಂಜೂರು ಮಾಡಲಿ ಎಂದು ಅವರು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೋಲಾರದ ಹಾಲಿ ಸಂಸತ್ ಸದಸ್ಯ ಮಲ್ಲೇಶ್ ಬಾಬು, ಮಾಜಿ ಶಾಸಕ ಎನ್. ನಾರಾಯಣಸ್ವಾಮಿ, ಬಿಜೆಪಿ ಮುಖಂಡ ಬಿ. ಹೊಸರಾಯಪ್ಪ, ನಿವೃತ್ತ ಡಿವೈಎಸ್‌ಪಿ ಪಿ.ಶಿವಕುಮಾರ್ ಇದ್ದರು.