For the best experience, open
https://m.samyuktakarnataka.in
on your mobile browser.

ಬಂಗಾಳ ಕಾಯ್ದೆ ದೇಶಾದ್ಯಂತ ಅಗತ್ಯ

03:00 AM Sep 05, 2024 IST | Samyukta Karnataka
ಬಂಗಾಳ ಕಾಯ್ದೆ ದೇಶಾದ್ಯಂತ ಅಗತ್ಯ

ಪಶ್ಚಿಮ ಬಂಗಾಳ ವಿಧಾನಸಭೆ ವಿಶೇಷ ಅಧಿವೇಶನ ನಡೆಸಿ ಅತ್ಯಾಚಾರಿಗೆ ಮರಣದಂಡನೆ ವಿಧಿಸಲು ತೀರ್ಮಾನಿಸಿದೆ. ಒಂದುವೇಳೆ ಅತ್ಯಾಚಾರಕ್ಕೆ ಒಳಗಾದ ಮಹಿಳೆ ಮಿದುಳು ರಕ್ತಸ್ರಾವದಿಂದ ಜೀವಚ್ಛವವಾದರೂ ಅತ್ಯಾಚಾರಿಗೆ ಗಲ್ಲು ಕಟ್ಟಿಟ್ಟ ಬುತ್ತಿ. ಅಲ್ಲದೆ ಇದಕ್ಕಾಗಿ ವಿಶೇಷ ಕಾರ್ಯಪಡೆ, ೨೧ ದಿನಗಳಲ್ಲಿ ತನಿಖೆ ಮುಕ್ತಾಯಗೊಳಿಸಿ ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಬೇಕು. ಯಾವುದೇ ಕಾರಣಕ್ಕೂ ದುರ್ದೈವಿ ಮಹಿಳೆ ಹೆಸರು ಬಹಿರಂಗಪಡಿಸುವಂತಿಲ್ಲ. ಒಂದು ವೇಳೆ ಬಹಿರಂಗಪಡಿಸಿದರೆ ೩ ವರ್ಷ ಜೈಲು. ಕೆಲಸ ಮಾಡುವ ಮಹಿಳಾ ವೈದ್ಯರು ಹಾಗೂ ನರ್ಸ್‌ಗಳಿಗೆ ಮನೆಯಿಂದ ಕೆಲಸಕ್ಕೆ ಹೋಗಿಬರಲು ಸಂಪೂರ್ಣ ರಕ್ಷಣೆ ಒದಗಿಸಬೇಕು. ಮಹಿಳಾ ವೈದ್ಯರು ಕೆಲಸ ಮಾಡುವ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಸೇರಿದಂತೆ ಹಲವು ಕ್ರಮಗಳನ್ನು ಹೊಸ ಕಾಯ್ದೆಯಲ್ಲಿ ಸೇರ್ಪಡೆ ಮಾಡಲಾಗಿದೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದು ಐತಿಹಾಸಿಕ ತೀರ್ಮಾನ ಎಂದು ಹೇಳಿಕೊಂಡಿದ್ದರೂ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ಸರ್ಕಾರಗಳು ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಎಂದು ಕಾಯ್ದೆಗೆ ತಿದ್ದುಪಡಿ ತಂದಿದ್ದರೂ ರಾಷ್ಟçಪತಿಗಳ ಅಂಗೀಕಾರ ದೊರಕಿಲ್ಲ. ಬಂಗಾಳದ ಹೊಸ ಕಾಯ್ದೆ ಕೂಡ ರಾಷ್ಟ್ರಪತಿಗಳ ಅನುಮೋದನೆಗೆ ಕಾಯಲೇ ಬೇಕು. ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುವುದು ಸುಲಭ. ಆದರೆ ನ್ಯಾಯಾಲಯಗಳು ಗಲ್ಲು ವಿಧಿಸಲು ಹಿಂಜರಿಯುತ್ತವೆ. ಬಹುತೇಕ ಪ್ರಕರಣಗಳಲ್ಲಿ ಗಲ್ಲುಶಿಕ್ಷೆಯನ್ನು ಜೀವಾವಧಿಯಾಗಿ ಪರಿವರ್ತಿಸಲಾಗುವುದು. ಪಶ್ಚಿಮ ಬಂಗಾಳದಲ್ಲಿ ಕಿರಿಯ ವೈದ್ಯೆ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿರುದ್ಧ ದೇಶಾದ್ಯಂತ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದರಿಂದ ಮಮತ ಬ್ಯಾನರ್ಜಿ ಹೊಸ ಕಾಯ್ದೆಯನ್ನು ತರಾತುರಿಯಲ್ಲಿ ತಂದಿದ್ದಾರೆ ಎಂದು ಹಲವು ಸಂಸ್ಥೆಗಳು ಟೀಕಿಸಿವೆ.
ಪಶ್ಚಿಮ ಬಂಗಾಲದಲ್ಲಿ ಮಹಿಳೆ ವೈದ್ಯೆಯ ಮೇಲೆ ಅತ್ಯಾಚಾರ ಕೊಲೆ ನಡೆಯುವುದಕ್ಕೆ ಮುನ್ನ ದೆಹಲಿಯ ಬಸ್‌ನಲ್ಲಿ ಯುವತಿಯ ಅತ್ಯಾಚಾರ ಮತ್ತು ಸಾವು ನಡೆಯಿತು. ಆಗಲೂ ಇಡೀ ದೇಶದ ಜನ ಪ್ರತಿಭಟಿಸಿದರು. ಕೇಂದ್ರ ಸರ್ಕಾರ ನಿರ್ಭಯ ಕಾಯ್ದೆಯನ್ನು ಜಾರಿಗೆ ತಂದಿತು. ಅಲ್ಲದೆ ಮಹಿಳೆಯರ ರಕ್ಷಣೆಗಾಗಿ ನಿರ್ಭಯ ನಿಧಿಯನ್ನು ಸ್ಥಾಪಿಸಿ ಎಲ್ಲ ರಾಜ್ಯಗಳಿಗೆ ನೆರವು ನೀಡಿದವು. ಈ ನಿಧಿ ಬಳಕೆ ಶೇಕಡ ೨೦ ದಾಟಿಲ್ಲ. ಪ್ರತ್ಯೇಕ ಕಾಯ್ದೆ ರಚಿಸಿ ಪಶ್ಚಿಮ ಬಂಗಾಳ ಈ ನಿಧಿಯನ್ನು ಬಳಕೆ ಮಾಡಿಕೊಂಡಿರುವುದು ಶೇ. ೫ ಮಾತ್ರ. ೨೦೨೩-೨೪ ರಲ್ಲಿ ಕೇಂದ್ರ ನೀಡಿದ್ದು ೭೨೧೨.೮ ಕೋಟಿ ರೂ. ಬಳಕೆಯಾಗಿರುವುದು ೫೧೧೮.೦ ಕೋಟಿ ರೂ. ಇದರಿಂದಲೇ ರಾಜ್ಯಗಳ ಕಾಳಜಿ ಎಷ್ಟಿದೆ ಎಂಬುದು ಸ್ಪಷ್ಟ. ಈಗ ಪಶ್ಚಿಮ ಬಂಗಾಳ ರಾತ್ರಿ ಕೆಲಸ ಮಾಡುವ ಮಹಿಳೆಯರಿಗೆ ಸೂಕ್ತ ರಕ್ಷಣಾ ವ್ಯವಸ್ಥೆ ಕಲ್ಪಿಸುವುದಾಗಿ ಪ್ರಕಟಿಸಿದೆ. ಇದು ಕಷ್ಟದ ಕೆಲಸ. ಐಟಿ ಬಿಟಿ ಕಂಪನಿಗಳು ಮಹಿಳೆಯರಿಗೆ ರಕ್ಷಣೆ ಒದಗಿಸಲು ಕಷ್ಟ ಪಡುತ್ತಿವೆ. ಅದಕ್ಕಾಗಿ ಬಹುತೇಕ ಮಹಿಳೆಯರಿಗೆ ಮನೆಯಿಂದಲೇ ಕೆಲಸದ ಸೌಲಭ್ಯ ಕಲ್ಪಿಸಿಕೊಡುತ್ತಿವೆ. ಆದರೆ ವೈದ್ಯರು ಮತ್ತು ನರ್ಸ್ಗಳಿಗೆ ರಕ್ಷಣೆ ಒದಗಿಸುವುದು ಪ್ರಮುಖ ಕರ್ತವ್ಯವಾಗಬೇಕು. ಇದರಲ್ಲಿ ಸಮಾಜದ ಪಾತ್ರ ಪ್ರಮುಖ.
ಆಸ್ಪತ್ರೆಗಳಲ್ಲೂ ಮಹಿಳೆಯರಿಗೆ ಸೂಕ್ತ ಭದ್ರತೆ ಇರುವುದು ಅಗತ್ಯ. ಈಗ ಎಲ್ಲ ವೃತ್ತಿಗಳಲ್ಲಿ ಮಹಿಳೆಯರು ಪುರುಷರಿಗೆ ಸರಿಸಮಾನವಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸುರಕ್ಷತೆ ಒದಗಿಸುವುದು ಪ್ರತಿಯೊಂದು ಸಂಸ್ಥೆಯ ಕರ್ತವ್ಯ. ಈಗ ದೇಶದಲ್ಲಿ ಶೇ.೬೦ ರಷ್ಟು ಹುದ್ದೆಗಳಲ್ಲಿ ಮಹಿಳಾ ವೈದ್ಯರು ಕೆಲಸ ಮಾಡುತ್ತಿದ್ದಾರೆ. ಶೇ.೬೮ ರಷ್ಟು ದಂತ ವೈದ್ಯರು ಮಹಿಳೆಯರು. ಶೇ. ೭೫ ರಷ್ಟು ಮಹಿಳಾ ಫಿಸಿಯೋ ಥೆರಪಿ ವೈದ್ಯರು. ಶೇ. ೮೫ ನರ್ಸ್ಗಳು. ಹೀಗಿರುವಾಗ ಅವರ ರಕ್ಷಣೆಗೆ ಸೂಕ್ತ ವ್ಯವಸ್ಥೆ ಮಾಡುವುದು ಸರ್ಕಾರದ ಕರ್ತವ್ಯ. ಎಲ್ಲ ಸಂಸ್ಥೆಗಳಲ್ಲೂ ಮಹಿಳೆ ದೌರ್ಜನ್ಯ ವಿಚಾರಣೆಗೆ ಸಮಿತಿ ಇರಬೇಕು. ಮಹಿಳೆಯರಿಗೆ ವಿಶ್ರಾಂತಿ ಕೊಠಡಿ ಪ್ರತ್ಯೇಕವಾಗಿರಬೇಕು. ಮಹಿಳೆಯರಿಗೆ ಸಾರಿಗೆ ವ್ಯವಸ್ಥೆ ಸುರಕ್ಷಿತವಾಗಿರಬೇಕು. ಇವುಗಳಿಗೆ ಸರ್ಕಾರ ವೆಚ್ಚ ಮಾಡಬೇಕು. ಖಾಸಗಿ ಸಂಸ್ಥೆಗಳು ಕೂಡ ಈ ನಿಯಮ ಪಾಲಿಸುವಂತೆ ಕಟ್ಟುನಿಟ್ಟಿನ ನಿಯಮ ಜಾರಿಗೆ ತರಬೇಕು.
ನಿಯಮಗಳ ಪಾಲನೆ ಸಮರ್ಪಕವಾಗಿ ಆಗುತ್ತಿಲ್ಲ ಎಂಬುದಕ್ಕೆ ಮಹಿಳೆಯರ ಮೇಲೆ ದೌರ್ಜನ್ಯ ಅಧಿಕಗೊಳ್ಳುತ್ತಿರುವುದೇ ಸಾಕ್ಷಿ. ಕಾಯ್ದೆಗಳು ಕೇವಲ ಪುಸ್ತಕದಲ್ಲಿ ಉಳಿಯಬಾರದು. ಕಾಯ್ದೆಗೆತಕ್ಕಂತೆ ನಿಯಮಗಳನ್ನು ರಚಿಸಬೇಕು. ಅದನ್ನು ಜಾರಿಗೆ ತರಲು ನಿಷ್ಠಾವಂತ ಅಧಿಕಾರಿಗಳನ್ನು ನೇಮಿಸಬೇಕು. ಭಾರತೀಯ ಮಹಿಳೆಯರು ಅಬಲೆಯರಲ್ಲ ಎಂಬುದು ಸಾಬೀತಾಗಬೇಕು. ಈಗ ಎಲ್ಲ ಕಡೆ ಜಾಗೃತಿ ಮೂಡಿದೆ. ಮಹಿಳೆಯರಿಗಾಗಿ ಸಹಾಯವಾಣಿ ತೆರೆಯಲಾಗುತ್ತಿದೆ. ಅಧಿಕಾರದಲ್ಲಿರುವವರಿಗೆ ಮಹಿಳಾ ರಕ್ಷಣೆ ಸರ್ಕಾರದ ಅವಿಭಾಜ್ಯ ಕರ್ತವ್ಯ ಎಂಬ ಭಾವನೆ ಮೂಡಬೇಕು. ಲಿಂಗಸಮಾನತೆ ಅಕ್ಷರಶಃ ಜಾರಿಗೆ ಬರಬೇಕು. ಮಹಿಳೆಯರಿಗೆ ಸಾಮಾಜಿಕ ಸಮಾನತೆಯೊಂದಿಗೆ ಆರ್ಥಿಕ ಸಮಾನತೆ ಕೊಟ್ಟಾಗ ಮಾತ್ರ ಬದಲಾವಣೆ ಬರಲು ಸಾಧ್ಯ.