For the best experience, open
https://m.samyuktakarnataka.in
on your mobile browser.

ಬಂಗೇರ ಮಂತ್ರಿಯಾಗಲು ಎಂದೂ ಲಾಬಿ ಮಾಡಿಲ್ಲ

05:03 PM May 21, 2024 IST | Samyukta Karnataka
ಬಂಗೇರ ಮಂತ್ರಿಯಾಗಲು ಎಂದೂ ಲಾಬಿ ಮಾಡಿಲ್ಲ

ಬೆಳ್ತಂಗಡಿ: ನಿಷ್ಠುರ, ನೇರ ನಡೆ ನುಡಿಯ ಸದಾ ಸತ್ಯವನ್ನು ಹೇಳುವ ವಿಶೇಷ ಗುಣದ ವಸಂತ ಬಂಗೇರರು ಐದು ಬಾರಿ ಶಾಸಕರಾದರೂ ಮಂತ್ರಿ ಆಗಲು ಯಾವತ್ತೂ ಸಣ್ಣ ಲಾಬಿ ಕೂಡ ನಡೆಸಿದವರಲ್ಲ. ಹೀಗಾಗಿ ಅವರು ಅತ್ಯಂತ ಮಾದರಿ ರಾಜಕೀಯ ನಾಯಕರಾಗಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಳ್ತಂಗಡಿಯಲ್ಲಿ ಇಂದು ನಡೆದ ಮಾಜಿ ಸಚಿವ ವಸಂತ ಬಂಗೇರ ಅವರ ಉತ್ತರ ಕ್ರಿಯೆ ಮತ್ತು ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ೨೦೨೩ರ ಚುನಾವಣೆಯಲ್ಲಿ ಸ್ಪರ್ಧಿಸಲು ಮನವಿ ಮಾಡಿದರೂ ಅವರು ಒಪ್ಪಲಿಲ್ಲ. ಈ ಬಾರಿ ಸ್ಪರ್ಧಿಸಿದ್ದರೆ ಖಂಡಿತಾ ಗೆದ್ದು ಮಂತ್ರಿಯಾಗುತ್ತಿದ್ದರು ಎಂದು ತಿಳಿಸಿದರು.
ಬಂಗೇರ ಅವರು ತಮ್ಮ ಬದುಕಿನುದ್ದಕ್ಕೂ ವಿಶ್ವ ಮಾನವ ಮೌಲ್ಯವನ್ನು ಪಾಲಿಸಿದರು. ಬಂಗೇರ ಅವರು ನನ್ನ ಬಳಿಗೆ ಯಾವತ್ತೂ ವೈಯುಕ್ತಿಕ ಕೆಲಸಗಳಿಗಾಗಿ ಬಂದಿಲ್ಲ. ಬಂದಾಗಲೆಲ್ಲಾ ಜನರ ಕೆಲಸಗಳಿಗಾಗಿ ಬೇಡಿಕೆ ಇಟ್ಟಿದ್ದರು. ನಾನು ಮತ್ತು ವಸಂತ ಬಂಗೇರ ಒಟ್ಟಿಗೇ ವಿಧಾನಸಭೆ ಪ್ರವೇಶಿಸಿದ್ದೆವು. ಅವತ್ತಿನಿಂದ ಅವರ ಉಸಿರಿನ ಕೊನೆ ಗಳಿಗೆಯವರೆಗೂ ನನ್ನ ಸ್ನೇಹಿತರಾಗಿದ್ದರು. ಇವರ ಅಗಲಿಕೆ ನನಗೆ ಅಪಾರ ದುಃಖ ತಂದಿದೆ ಎಂದರು.
ಸತ್ಯ, ಬಡವರ ಪರ ಕಾಳಜಿ, ರಾಜಿ ರಹಿತ ಜನಪರ ಕೆಲಸಗಳ ಮೂಲಕ ತಮ್ಮ ವೈಯುಕ್ತಿಕ ಮತ್ತು ರಾಜಕೀಯ ಜೀವನವನ್ನು ಸಾರ್ಥಕಗೊಳಿಸಿಕೊಂಡವರು ಬಂಗೇರ ಅವರು ಜನ ಮಾನಸದಲ್ಲಿ ಶಾಶ್ವತವಾಗಿ ಉಳಿಯಲಿದ್ದಾರೆ. ವಸಂತ ಬಂಗೇರ ಅವರ ಸಾವಿನಿಂದ ರಾಜ್ಯ ರಾಜಕಾರಣ ಅತ್ಯಂತ ಬಡವಾಗಿದೆ. ಇವರ ಆರೋಗ್ಯ ಚೇತರಿಸಿಕೊಳ್ಳುತ್ತದೆ ಮತ್ತಷ್ಟು ಕಾಲ ನಮ್ಮ ಜೊತೆಗೆ ಇರುತ್ತಾರೆ ಎನ್ನುವ ಆಸೆ ಇತ್ತು. ಆದರೆ ನಮ್ಮನ್ನು ಅಗಲಿಬಿಟ್ಟಿರುವುದು ನನ್ನ ಪ್ರೀತಿಯ ಸ್ನೇಹಿತನನ್ನು ಕಳೆದುಕೊಂಡಂತಾಗಿದೆ ಎಂದು ವಿಷಾದಿಸಿದರು.
ಬಸ್ ನಿಲ್ದಾಣಕ್ಕೆ ಬಂಗೇರ ಹೆಸರು: ಬೆಳ್ತಂಗಡಿ ಬಸ್ ನಿಲ್ದಾಣಕ್ಕೆ ವಸಂತ ಬಂಗೇರ ಅವರ ಹೆಸರಿಡಲು ಸರ್ಕಾರ ಸಿದ್ದವಿದೆ. ಜೊತೆಗೆ ಅವರ ಪ್ರತಿಮೆ ಸ್ಥಾಪಿಸಿ ವೃತ್ತದಲ್ಲಿ ಸ್ಥಾಪಿಸಬೇಕು ಎನ್ನುವ ಬೇಡಿಕೆಗೂ ಸರ್ಕಾರ ಸ್ಪಂದಿಸಲಿದೆ ಎಂದು ಭರವಸೆ ನೀಡಿದರು.
ಕಾಂಗ್ರೆಸ್ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ, ಸ್ಪೀಕರ್ ಯು.ಟಿ.ಖಾದರ್ ಮತ್ತು ವಸಂತ ಬಂಗೇರ ಅವರ ಕುಟುಂಬದ ಸದಸ್ಯರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳು ಉಪಸ್ಥಿತರಿದ್ದರು.