For the best experience, open
https://m.samyuktakarnataka.in
on your mobile browser.

ಬಂತಿದೋ ರಮ್ಯ ಚೈತ್ರಕಾಲ

01:00 AM Mar 01, 2024 IST | Samyukta Karnataka
ಬಂತಿದೋ ರಮ್ಯ ಚೈತ್ರಕಾಲ

ಸರ್ಕಾರದ ಆಡಳಿತದ ನಿಘಂಟಿನಲ್ಲಿ ದರ ಇಳಿಕೆ ಎಂಬ ಶಬ್ದವನ್ನು ಎಷ್ಟೇ ತಿಣುಕಾಡಿ ಹುಡುಕಿದರೂ ಸಿಗುವುದಿಲ್ಲ. ಏಕೆಂದರೆ, ಅಂತಹ ದರ ಇಳಿಕೆ ಪ್ರಸ್ತಾಪ ಸರ್ಕಾರದಲ್ಲಿ ಹಿಂದೆಯೂ ಬಂದಿಲ್ಲ ಬಹುಶಃ ಮುಂದೆಯೂ ಬರಲಾರದೇನೋ. ಆದರೆ, ಅಚ್ಚರಿಯ ಬೆಳವಣಿಗೆಯ ರೀತಿಯಲ್ಲಿ ಚೈತ್ರ ಮಾಸ ಆರಂಭದ ಸಂದರ್ಭದಲ್ಲಿ ವಿದ್ಯುತ್ ದರ ಇಳಿಕೆಯಾಗುವ ನಿಟ್ಟಿನಲ್ಲಿ ಬೆಳವಣಿಗೆಯಾಗಿರುವುದು ಸಾರ್ವಜನಿಕರ ಮಟ್ಟಿಗೆ ರಮ್ಯ ಚೈತ್ರಕಾಲವೇ ಸರಿ. ಕಾರಣ ಹಾಗೂ ಪ್ರೇರಣೆಗಳು ಏನೇ ಇರಲಿ. ಗ್ಯಾರಂಟಿ ಯೋಜನೆಗಳ ಜಾರಿಯ ನಂತರ ಮಾಸಿಕ ೧೦೦ ಯೂನಿಟ್‌ಗಿಂತಲೂ ಹೆಚ್ಚು ಬಳಸುವ ಗ್ರಾಹಕರ ವಿದ್ಯುತ್ ದರವನ್ನು ಯೂನಿಟ್‌ಗೆ ೧ರೂ. ೧೦ ಪೈಸೆ ಇಳಿಸಿರುವುದು ಒಳ್ಳೆಯ ಬೆಳವಣಿಗೆಯೇ. ಬೆಲೆ ಏರಿಕೆ ಗಗನ ಮುಟ್ಟುತ್ತಿರುವ ಕಾಲಘಟ್ಟದಲ್ಲಿ ಇಂತಹ ದರ ಇಳಿಕೆಗೆ ಕಾರಣವಾಗಿರುವ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಹಾಗೂ ರಾಜ್ಯ ಸರ್ಕಾರದ ಕ್ರಮಗಳು ನಿಜಕ್ಕೂ ಮೆಚ್ಚತಕ್ಕದ್ದೆ.
ವಿದ್ಯುತ್ ಬೇಡಿಕೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದು ಉತ್ಪಾದನೆ ಹಾಗೂ ಸರಬರಾಜಿನ ಮೇಲೆ ತೀವ್ರ ಒತ್ತಡ ಬೀಳುತ್ತಿದೆ. ವಿದ್ಯುತ್ ಇಲ್ಲದೇ ಯಾವ ಕ್ಷೇತ್ರವೂ ಸುಸೂತ್ರವಾಗಿ ಕಾರ್ಯ ನಿರ್ವಹಿಸುವುದು ಕಷ್ಟ ಎಂಬ ಸನ್ನಿವೇಶದಲ್ಲಿ ಉತ್ಪಾದನಾ ಕ್ಷೇತ್ರದ ಪ್ರಗತಿ ಇಳಿಮುಖವಾಗುವ ಅಪಾಯ ಸದಾ ಕಾಲ ತೂಗುಗತ್ತಿಯಂತಿದೆ. ಬರಿದಾಗುತ್ತಿರುವ ಜಲಾಶಯಗಳು, ಬೆಳೆ ಒಣಗುತ್ತಿರುವ ಜಮೀನು, ಚಟುವಟಿಕೆಯನ್ನು ನಿಯಂತ್ರಿಸಿಕೊಳ್ಳುತ್ತಿರುವ ಔದ್ಯಮಿಕ ಕ್ಷೇತ್ರಗಳ ಬವಣೆ ಅಷ್ಟಿಷ್ಟಲ್ಲ. ಇದಿಷ್ಟನ್ನೂ ತೂಗಿಸಿಕೊಂಡು ಗ್ರಾಹಕರಿಗೆ ಪೂರೈಕೆಯಾಗುವ ವಿದ್ಯುತ್ ದರವನ್ನು ಇಳಿಸಿರುವುದಂತೂ ಒಂದು ರೀತಿಯ ಅಚ್ಚರಿಯ ಬೆಳವಣಿಗೆಯೇ.
ಸರ್ವೇ ಸಾಮಾನ್ಯವಾಗಿ ದರ ಇಳಿಕೆಯ ಕ್ರಮದಿಂದ ಅಂದಾಜು ಮಾಸಿಕ ೨೦೦ರಿಂದ ೨೫೦ ರೂಪಾಯಿಯವರೆಗೆ ಗ್ರಾಹಕರು ಕಡಿಮೆ ಪಾವತಿ ಮಾಡುವ ಅವಕಾಶ ಪಡೆದುಕೊಳ್ಳಲಿದ್ದಾರೆ. ವರ್ಷಾವಧಿ ಯುಗಾದಿ ಹಬ್ಬದ ಕೊಡುಗೆಯ ರೀತಿಯಲ್ಲಿ ಏಪ್ರಿಲ್ ತಿಂಗಳಿನಿಂದ ಜಾರಿಗೆ ಬರುವ ಹೊಸ ದರಗಳು ಕೈಗಾರಿಕಾ ಬಳಕೆದಾರರಿಗೂ ಕೂಡಾ ಅನ್ವಯವಾಗುವುದು ಕಾರ್ಖಾನೆಗಳ ಸುಸೂತ್ರ ಚಟುವಟಿಕೆಗೆ ಇಂಬು ನೀಡಲಿದೆ. ಹಲವಾರು ಸಂದರ್ಭಗಳಲ್ಲಿ ವಿದ್ಯುತ್ ಆಯೋಗ ಶಿಫಾರಸು ಮಾಡಿದ್ದರೂ ದರ ಇಳಿಕೆಯಾಗುವ ಬದಲು ಯಥಾಸ್ಥಿತಿಯಲ್ಲಿಯೇ ಗ್ರಾಹಕರಿಂದ ದರವನ್ನು ವಸೂಲು ಮಾಡುತ್ತಿದ್ದ ಪರಿಪಾಠಕ್ಕೆ ಇದೊಂದು ಅಪವಾದವಾಗಿದೆ.
ವಿದ್ಯುತ್ ದರ ಇಳಿಕೆಯಾಗಿರುವುದು ಸಂತಸದ ವಿಚಾರವೇ. ಆದರೆ, ನಿಯಮಿತವಾಗಿ ವಿದ್ಯುತ್ ಪೂರೈಕೆಯಾಗುವಂತೆ ನೋಡಿಕೊಳ್ಳುವುದು ಆದ್ಯತೆಯ ಮೇಲೆ ಆಗಬೇಕಾದ ಕೆಲಸ. ಗ್ರಾಮೀಣ ಪ್ರದೇಶಗಳಲ್ಲಿ ಈಗಾಗಲೇ ವಿದ್ಯುತ್ ಬವಣೆಯಿಂದ ಜನ ನಲುಗುತ್ತಿರುವ ದೂರುಗಳು ಬರುತ್ತಿವೆ. ಹಗಲು ವೇಳೆ ವಿದ್ಯುತ್ ಪೂರೈಕೆಯಾಗುವುದು ಅಪರೂಪ. ರಾತ್ರಿಯ ವೇಳೆ ಪೂರೈಕೆಯಾಗುವ ವಿದ್ಯುತ್ ಅನ್ನು ಬಳಸಿಕೊಳ್ಳುವಾಗ ಹುಳಹುಪ್ಪಟೆಗಳ ಹಾವಳಿಯಿಂದಾಗಿ ಕೆಲವೆಡೆ ಪ್ರಾಣ ನೀಗಿಕೊಂಡಿರುವ ಘಟನೆಗಳು ಜರುಗಿವೆ.
ಹಗಲಿನ ವೇಳೆ ವಿದ್ಯುತ್ ಪೂರೈಕೆಯಾಗುವಂತೆ ನೋಡಿಕೊಳ್ಳುವುದು ಇಂಧನ ಇಲಾಖೆಯ ಕರ್ತವ್ಯ. ಇದರ ಜೊತೆಗೆ ಸಿಂಗಲ್ ಫೇಸ್ ವಿದ್ಯುತ್ ಪೂರೈಕೆ ಮಾಡುವ ಪರಿಪಾಠವೂ ಇದೆ.
ಇದರಿಂದ ನೀರಾವರಿ ಪಂಪ್ ಸೆಟ್‌ಗಳನ್ನು ಬಳಸಿಕೊಳ್ಳಲು ರೈತರಿಗೆ ಅಸಾಧ್ಯವಾಗಿದೆ. ಅನೇಕ ಕಡೆ ವಿದ್ಯುತ್ ಬದಲು ಪರ್ಯಾಯ ಮಾರ್ಗವಾಗಿ ಡೀಸೆಲ್ ಜನರೇಟರ್ ಆಧರಿಸಿ ಸಣ್ಣ ಕೈಗಾರಿಕೆಗಳು ಕಾರ್ಯ ನಿರ್ವಹಿಸುತ್ತಿರುವ ಬೆಳವಣಿಗೆಗಳೂ ಇವೆ. ಹೀಗಾಗಿ ವಿದ್ಯುತ್ ದರ ಇಳಿಕೆಯಾಗಿದೆ ಎಂಬುದು ಹಿಗ್ಗಿನ ವಿಚಾರವಾದರೂ ಮೂಲ ಸಮಸ್ಯೆಗಳಿಗೆ ಪರಿಹಾರ ದೊರಕದ ಹೊರತು ಕೇವಲ ದರ ಇಳಿಕೆಯಿಂದ ಸಮಸ್ಯೆ ಪರಿಪೂರ್ಣವಾಗಿ ನಿವಾರಣೆಯಾದಂತಾಗುವುದಿಲ್ಲ.
ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಪಟ್ಟಣ ಪ್ರದೇಶದಲ್ಲಿ ವಿದ್ಯುತ್ ನಂಬಿ ಜನರು ಜೀವಿಸುವುದು ಕಷ್ಟವಾಗಿದೆ. ಬಹುತೇಕರು ಪರ್ಯಾಯವಾಗಿ ಬ್ಯಾಟರಿ ಆಧಾರಿತ ವಿದ್ಯುತ್ ಸಂಪರ್ಕ ಪಡೆಯುತ್ತಿರುವುದು ಪರಿಸ್ಥಿತಿಯ ಇನ್ನೊಂದು ಮುಖ. ಉದ್ಯಮಗಳು ಈ ಬ್ಯಾಟರಿ ಆಧಾರಿತ ವಿದ್ಯುತ್ ಬಳಸಿಕೊಂಡು ನಿರೀಕ್ಷಿತ ಪ್ರಮಾಣದಲ್ಲಿ ಉತ್ಪಾದನೆಯನ್ನು ನಿರೀಕ್ಷಿಸುವುದು ಅಸಾಧ್ಯ.
ಈ ನಿಟ್ಟಿನಲ್ಲಿ ಈಗಾಗಲೇ ಕುಡಿಯುವ ನೀರಿನ ಹಾಹಾಕಾರ ಹಾಗೂ ಕೃಷಿ ಕ್ಷೇತ್ರದಲ್ಲಿ ನೀರಿನ ಕ್ಷಾಮ, ಜನ ಹಾಗೂ ಜಾನುವಾರುಗಳಿಗೆ ಅಗತ್ಯವಾದ ಜೀವಜಲ ದೊರೆಯದೇ ದುರ್ಬರ ಪರಿಸ್ಥಿತಿ ಎದುರಾಗುತ್ತಿರುವ ಸಂದರ್ಭದಲ್ಲಿ ವಿದ್ಯುತ್ ಉತ್ಪಾದನೆ ಹೆಚ್ಚಿರುವ ರಾಜ್ಯಗಳು ಹಾಗೂ ಕೇಂದ್ರ ಸರ್ಕಾರದ ಜಾಲದಿಂದ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಪಡೆದು ರಾಜ್ಯದಲ್ಲಿ ಬಿಕ್ಕಟ್ಟಿನ ನಿವಾರಣೆಗೆ ಕಾರ್ಯೋನ್ಮುಖವಾಗುವುದು ಆದ್ಯತೆಯ ಮೇಲೆ ಆಗಬೇಕಾದ ಕೆಲಸವಾಗಿದೆ.