For the best experience, open
https://m.samyuktakarnataka.in
on your mobile browser.

ಬಂದೂಕು ತರಬೇತಿ ಶಿಬಿರ

02:57 AM Aug 20, 2024 IST | Samyukta Karnataka
ಬಂದೂಕು ತರಬೇತಿ ಶಿಬಿರ

ಹೆಗಲ ಮೇಲೆ ಬಂದೂಕು ಇಟ್ಟು ಹೊಡೆಯುವುದು ಹೇಗೆ ಎನ್ನುವ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು ಇಂದಿನಿಂದಲೇ ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಬಹಳ ದಿನಗಳಿಂದ ಹೆಗಲ ಮೇಲೆ ಬಂದೂಕು ಹೇಗೆ ಇಟ್ಟು ಹೊಡೆಯುವುದು? ಬಂದೂಕಿನ ತುದಿಯನ್ನು ಎಲ್ಲಿ ಗುರಿ ಇಡಬೇಕು. ಒಂದು ವೇಳೆ ಗುರಿ ತಪ್ಪಿದರೆ ಅದು ಎಲ್ಲಿಗಾದರೂ ಬಿದ್ದರೆ ಏನು ಮಾಡಬೇಕು? ಗುರಿ ತಪ್ಪದಂತೆ ಹೊಡೆಯುವುದು ಹೇಗೆ ಎಂದು ಬಲು ಮನಸ್ಸಿಗೆ ಹಚ್ಚಿಕೊಂಡಿದ್ದ ತಿಗಡೇಸಿ ಅವರು ನಾಲ್ಕಾರು ಕಡೆ ಅಡ್ಡಾಡಿದರು. ತಿಳಿದವರನ್ನು ಕೇಳಿದರು. ಆದರೆ ಹೆಗಲ ಮೇಲೆ ಬಂದೂಕು ಇಟ್ಟು ಹೊಡೆಯುವುದರ ಬಗ್ಗೆ ಕೇಳಿದ್ದೇವೆಯೇ ಹೊರತು ಅದು ಹೇಗೆಂದು ನಮಗೆ ಗೊತ್ತಿಲ್ಲ ಅಂದರು.ಕೊನೆಗೆ ತಳವಾರ್ಕಂಟಿಯನ್ನು ಸಂಪರ್ಕಿಸಿದಾಗ…ಆತ ಮುಸಿ ಸೇದಿ ಗಾಢವಾಗಿ ಹೊಗೆ ಬಿಟ್ಟು ಜೋರಾಗಿ ನಕ್ಕು.. ಅಯ್ಯೋ ತಿಗಡೇಸಿಯೇ ಅಷ್ಟೂ ನಿನಗೆ ಗೊತ್ತಿಲ್ಲವೇ? ಸೀದಾ ನೀನು ಅಲ್ಲಿಗೆ ಹೋಗು.. ಅಲ್ಲಿ ಅವರೇನು ಅವಳಿಗಳಲ್ಲ… ಆದರೆ ಅವರನ್ನು ಅವಳಿ ಜವಳಿ ಎಂದು ಕರೆಯಬಹುದು ಹಾಗೆ ಇದ್ದಾರೆ. ನೀನು ಹೋಗಿ ಅವರನ್ನು ಇಂಗಿಂಗೆ ಹೆಗಲ ಮೇಲೆ ಬಂದೂಕು ಇಟ್ಟು ಹೊಡೆಯುವುದನ್ನು ಕಲಿಸುತ್ತೀರಾ? ಎಂದು ಕೇಳಿದರೆ ಬಾಯಿಗೆ ಬಂದಂತೆ ಬಯ್ಯಬಹುದು… ಪೊಲೈಟ್ ಆಗಿ ಕೇಳು ಎಂದು ಹೇಳಿ ಕಳುಹಿಸಿದ. ಅದರಂತೆ ಡೆಲ್ಲಿಗೆ ಹೋದ ತಿಗಡೇಸಿ ಅವರನ್ನು ಅದು ಹೇಗೆ ಒಪ್ಪಿಸಿದನೋ ಏನೋ ಅಂತೂ ಆ ಕೋರ್ಸಿಗೆ ಸೇರಿ ಮೂರು ತಿಂಗಳಿನಲ್ಲಿ ಆ ವಿದ್ಯೆಯನ್ನು ಕಲಿತು ಬಂದ. ಅಲ್ಲಿಂದ ಬರುವಾಗ ಆತನಿಗೆ ಕಲಿಸಿದ ಗುರುಗಳು… ನೋಡು ತಮ್ಮಾ…ಈ ವಿದ್ಯೆಯನ್ನು ಕೇವಲ ನೀನು ಕಲಿತರೆ ಸಾಲದು… ಇತರರಿಗೆ ಧಾರೆ ಎರೆಯಬೇಕು ಎಂದು ಹೇಳಿದ್ದರು. ಅದನ್ನು ಬಹಳ ಮನಸ್ಸಿನಲ್ಲಿಟ್ಟುಕೊಂಡಿದ್ದ ತಿಗಡೇಸಿ ಊರಿಗೆ ಬಂದು…ನಾನು ತರಬೇತಿ ಶಿಬಿರ ತೆರೆದು ನಾಲ್ಕಾರು ಮಂದಿಗೆ ಕಲಿಸುತ್ತೇನೆ ಎಂದು ಈಗ ಶಿಬಿರ ಓಪನ್ ಮಾಡಿದ್ಧಾನೆ. ಮೊದಲ ತಂಡ ಈಗಾಗಲೇ ಕಲಿತು ಹೊರಬಿದ್ದಿದೆ. ಆಗಿನಿಂದ ರಾಜ್ಯದಲ್ಲಿ ಏನೇನೋ ಆಗುತ್ತಿದೆ. ನೋಡಿದರೆ ಇವರೇ ಮಾಡಿದ್ದಾರೆ ಎಂದು ಅನಿಸುತ್ತಿದೆ. ಆದರೆ ಅದರ ಹಿಂದೆ ಮಾಡಿಸುವವರೇ ಬೇರೆ ಇರುತ್ತಾರೆ. ಈ ಕೋರ್ಸಿನ ತರಬೇತಿ ಪಡೆದವರೇ ಹೀಗೆ ಮಾಡುತ್ತಿದ್ದಾರೆ ಎಂದು ತಿಳಿದಾಗ ಓಹೋ… ರಾಜ್ಯದಲ್ಲಿ ಅದಕ್ಕೇ ಮೂಡಾ-ಕೂಡಾ-ಜೋಡಾ ಎಂದು ಆಗುತ್ತಿದೆ ಎಂದು ಅನೇಕರು ಮಾತನಾಡಿಕೊಳ್ಳುತ್ತಿದ್ದಾರೆ.