For the best experience, open
https://m.samyuktakarnataka.in
on your mobile browser.

ಬಘೇಲ್ ಕೊರಳಿಗೆ ಬೆಟ್ಟಿಂಗ್ ಉರುಳು

11:09 PM Mar 17, 2024 IST | Samyukta Karnataka
ಬಘೇಲ್ ಕೊರಳಿಗೆ ಬೆಟ್ಟಿಂಗ್ ಉರುಳು

ನವದೆಹಲಿ: ಛತ್ತೀಸಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಪಾಲಿಗೆ ಮಹಾದೇವ್ ಆನ್‌ಲೈನ್ ಬೆಟ್ಟಿಂಗ್ ಹಗರಣ ಮತ್ತೊಮ್ಮೆ ಕಗ್ಗಂಟಾಗಿ ಪರಿಣಮಿಸಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈ ಬೆಟ್ಟಿಂಗ್ ಆ್ಯಪ್‌ನ ಪ್ರತಿಕೂಲ ಪರಿಣಾಮದಿಂದಾಗಿ ಭೂಪೇಶ್ ಸಹಿತ ಕಾಂಗ್ರೆಸ್ ಸೋಲು ಕಂಡಿತ್ತು. ಇದೀಗ ಈ ಮಾಜಿ ಮುಖ್ಯಮಂತ್ರಿ ರಾಜನಂದನ್‌ಗಾಂವ್ ಲೋಕಸಭಾ ಕ್ಷೇತ್ರದಿಂದ ಚುನಾವಣೆ ಎದುರಿಸಲು ಸನ್ನಾಹ ನಡೆಸುತ್ತಿರುವಾಗಲೇ ಮಹಾದೇವ್ ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಪ್ರಕರಣದ ಆರೋಪಿ ಎಂದು ಛತ್ತೀಸಗಢದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಬೆಳವಣಿಗೆಯಿಂದ ಲೋಕಸಭಾ ಚುನಾವಣೆಗೆ ಮೊದಲೇ ಬಘೇಲ್ ಅವರಿಗೆ ಕಾನೂನಿನ ತೊಡಕಾಗಿ ಪರಿಣಮಿಸುವ ಸಾಧ್ಯತೆ ಇದೆ.
ಮಾಜಿ ಮುಖ್ಯಮಂತ್ರಿ ಬಘೇಲ್ ಅವರು ಈ ಆ್ಯಪ್‌ನ ಪ್ರಮೋಟರ್‌ಗಳಾದ ಸೌರಬ್ ಚಂದ್ರಶೇಖರ್ ಹಾಗೂ ರವಿ ಉಪ್ಪಳ ಅವರಿಂದ ಲಂಚ ಪಡೆದಿದ್ದಾರೆ ಎಂದು ಛತ್ತೀಸಗಢ ಪೊಲೀಸರು ಮಾರ್ಚ್ ನಾಲ್ಕರಂದು ಎಫ್‌ಐಆರ್ ದಾಖಲಿಸಿದ್ದರು. ಚಂದ್ರಶೇಖರ್ ಹಾಗೂ ಉಪ್ಪಳ್ ಅವರಿಬ್ಬರೂ ಸೇರಿ ಬಘೇಲ್ ಅವರಿಗೆ ೫೦೮ ಕೋಟಿ ರೂ.ಗಳ ಲಂಚ ನೀಡಿದ್ದಾರೆಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ. ಇದಲ್ಲದೆ, ಕಾನೂನುಬಾಹಿರವಾಗಿ ನಡೆಯುತ್ತಿದ್ದ ಈ ಬೆಟ್ಟಿಂಗ್ ದಂಧೆಗೆ ಯಾವುದೇ ಸಮಸ್ಯೆಯಾಗದಂತೆ ರಕ್ಷಣೆ ನೀಡುವ ಉದ್ದೇಶದಿಂದ ರಾಜ್ಯಸರ್ಕಾರದ ಉನ್ನತಮಟ್ಟದ ಅಧಿಕಾರಿಗಳೂ ಲಂಚ ಗಿಟ್ಟಿಸಿಕೊಂಡಿದ್ದಾರೆ ಎಂದೂ ದೂರಿದೆ. ಹೀಗಾಗಿ ಇಡಿ ಆರೋಪ ಆಧಾರಿಸಿ ರಾಜ್ಯದ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಇದರ ಪರಿಣಾಮವಾಗಿ ಇಡಿ ಅಧಿಕಾರಿಗಳು ಕಪ್ಪು ಹಣ ಪ್ರಕರಣದಲ್ಲಿ ಬಘೇಲ್ ಅವರನ್ನು ಆರೋಪಿಯನ್ನಾಗಿ ಮಾಡುವ ಮತ್ತೊಂದು ಹೊಸ ಪ್ರಕರಣವನ್ನು ದಾಖಲಿಸುವ ಸಾಧ್ಯತೆಗಳಿವೆ.