ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಬಡವರ ಪರ ಕೆಲಸ ಮಾಡುವುದು ನಮ್ಮ ಬದ್ಧತೆ

05:02 PM Nov 12, 2024 IST | Samyukta Karnataka

ಬೆಂಗಳೂರು: ವಾಲ್ಮೀಕಿಯವರು ಸಂಸ್ಕೃತದಲ್ಲಿ 20 ಸಾವಿರ ಶ್ಲೋಕಗಳನ್ನು ರಚಿಸಿದ್ದಾರೆ. ಶೂದ್ರ ವರ್ಗದ ಜನ ವಿದ್ಯೆ ಕಲಿಯುವುದೇ ನಿಷಿದ್ಧವಾಗಿದ್ದ ಕಾಲದಲ್ಲಿ ವಿದ್ಯೆ ಕಲಿತು, ಸಂಸ್ಕೃತವನ್ನೂ ಕಲಿತು, ರಾಮಾಯಣ ರಚಿಸಿದ್ದು ಬಹಳ ದೊಡ್ಡ ಹೋರಾಟ ಮತ್ತು ಸಾಧನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ
ಹೆಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದಲ್ಲಿನ ₹443 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ, ಫಲಾನುಭವಿಗಳಿಗೆ ಕೃಷಿ ಸಲಕರಣೆಗಳ ವಿತರಣೆ ಹಾಗೂ ವಾಲ್ಮೀಕಿ ಜಯಂತಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ ಮಹಾಭಾರತ ಬರೆದ ವ್ಯಾಸರು ಬೆಸ್ತರು, ರಾಮಾಯಣ ಬರೆದ ವಾಲ್ಮೀಕಿ ಬೇಡ ಸಮುದಾಯದವರು, ಶಾಕುಂತಲ ಬರೆದ ಕಾಳಿದಾಸರು ಕುರುಬ ಸಮುದಾಯದವರು. ವಿದ್ಯೆ ಯಾರೊಬ್ಬರ ಸ್ವತ್ತೂ ಅಲ್ಲ. ಅವಕಾಶಗಳು ಸಿಗಬೇಕು ಅಷ್ಟೆ. ನಮ್ಮ ಜೀವನವನ್ನು ರೂಪಿಸಿಕೊಳ್ಖುವ ಶಿಲ್ಪಿ ನಾವೇ. ಆದ್ದರಿಂದ ವಿದ್ಯೆ ಕಲಿಯಲೇಬೇಕು. ಶೂದ್ರ ಜಾತಿಯ ಕನಕದಾಸರು ದಾಸಶ್ರೇಷ್ಠರಾದರು. ಆದ್ದರಿಂದ ವಿದ್ಯಾವಂತರಾಗಲು ಜಾತಿ ಅಡ್ಡಿ ಬರುವುದಿಲ್ಲ. ಮೇಲ್ವರ್ಗದವರಿಗೆ ಮಾತ್ರ ವಿದ್ಯೆ ಸಿದ್ಧಿಸುತ್ತದೆ ಎನ್ನುವುದನ್ನು ನಮ್ಮಲ್ಲಿ ಬಿತ್ತಿದ್ದಾರೆ. ಇದು ತಪ್ಪು.

ಚನ್ನಪ್ಪಯ್ಯ ಎನ್ನುವ ಮೇಲ್ವರ್ಗದವರ ಮಾತು ಕೇಳಿ, ಕುರುಬರೆಲ್ಲಾ ಲಾಯರ್ ಓದೋಕೆ ಆಗಲ್ಲ ಎಂದು ನನ್ನಪ್ಪ ಹೇಳುತ್ತಿದ್ದರು. ಆದರೆ ನಾನು ಹಠ ತೊಟ್ಟು ಕಾನೂನು ಓದಿ ಲಾಯರ್ ಆದೆ. ಮುಖ್ಯಮಂತ್ರಿಯೂ ಆದೆ. ಇಂದು ನಾವು ಆಚರಿಸುತ್ತಿರುವ ಪ್ರಜಾಪ್ರಭುತ್ವಕ್ಕೆ ವಾಲ್ಮೀಕಿ ಅವರು ಅವತ್ತೇ ಅಡಿಪಾಯ ಹಾಕಿದ್ದರು. ಮಹಾತ್ಮ ಗಾಂಧಿಯವರು ಹೇಳುವ ರಾಮರಾಜ್ಯವನ್ನು ವಾಲ್ಮೀಕಿ ಅವರು ರಾಮಾಯಣದಲ್ಲೇ ಚಿತ್ರಿಸಿದ್ದಾರೆ. ಆದರೂ ವಾಲ್ಮೀಕಿ ಅವರು ದರೋಡೆಕೋರ ಆಗಿದ್ದರು ಎಂದೆಲ್ಲಾ ಸುಳ್ಳು ಕತೆ ಸೃಷ್ಟಿಸಿದ್ದಾರೆ. ಇವೆಲ್ಲಾ ನಂಬೋಕೆ ಹೋಗಬೇಡಿ. ವಾಲ್ಮೀಕಿ ಮಹಾನ್ ಮೇದಾವಿ, ವಿದ್ಯಾವಂತ ಆಗಿದ್ದರು. ನಾವು ಈಗಾಗಲೇ ಸರ್ಕಾರದ ವತಿಯಿಂದ ವಾಲ್ಮೀಕಿ ಜಯಂತಿ ಆಚರಿಸುತ್ತಿದ್ದು ರಾಜ್ಯ ಮಟ್ಟದ ವಾಲ್ಮೀಕಿ ಪ್ರಶಸ್ತಿಯನ್ನೂ ನೀಡುತ್ತಿದ್ದೇವೆ. ಇಂದು ಹೆಚ್.ಡಿ.ಕೋಟೆಯಲ್ಲಿ ₹443 ಕೋಟಿ ಮೊತ್ತದ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ನೆರವೇರಿಸಿದ್ದೇನೆ. ರಾಜ್ಯ ಸರ್ಕಾರದ ಬಳಿ ಸಂಬಳ ಕೊಡಲು, ಅಭಿವೃದ್ಧಿಗೆ ಹಣ ಇಲ್ಲ ಎಂದು ಬಿಜೆಪಿಯವರು ಹಸಿ ಸುಳ್ಳು ಹರಡಿಸುತ್ತಾರೆ. ನಮ್ಮಲ್ಲಿ ಹಣ ಇಲ್ಲದಿದ್ದರೆ ಈ ₹443 ಕೋಟಿ ಎಲ್ಲಿಂದ ಬಂತು? ಯಾವುದಾದರೂ ರಾಜ್ಯ ಸರ್ಕಾರಿ ನೌಕರರಿಗೆ ಸಂಬಳ ನಿಂತಿದೆಯಾ? ರಾಜ್ಯದ ಕೋಟಿ ಕೋಟಿ ಫಲಾನುಭವಿಗಳು ನಮ್ಮ ಐದೂ ಗ್ಯಾರಂಟಿ ಯೋಜನೆಗಳ ಫಲವನ್ನು ಪ್ರತೀ ತಿಂಗಳೂ ಪಡೆಯುತ್ತಿದ್ದಾರೆ. ಆದರೂ ಕರ್ನಾಟಕ ಬಿಜೆಪಿ ನಾಯಕರು ಗ್ಯಾರಂಟಿ ಯೋಜನೆಗಳಿಗೂ ಹಣ ಇಲ್ಲ ಎಂದು ಸುಳ್ಳು ಹರಡಿಸುತ್ತಿದ್ದಾರೆ. ಸುಳ್ಳೇ ಬಿಜೆಪಿಯ ಮನೆ ದೇವರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಜನಸಂಖ್ಯೆಗೆ ಅನುಗುಣವಾಗಿ ಅಭಿವೃದ್ಧಿ ಅನುದಾನವನ್ನು ಮೀಸಲಿಟ್ಟಿದ್ದು ನಮ್ಮ ಸರ್ಕಾರ. ಇದನ್ನು ದೇಶದ ಬೇರೆ ಯಾವ ಸರ್ಕಾರವೂ ಕೊಟ್ಟಿರಲಿಲ್ಲ. ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಮೀಸಲಿಟ್ಟಿದ್ದ ಹಣದಲ್ಲಿ ಒಂದು ಪೈಸೆ ಕೂಡ ಕಡಿಮೆ ಆಗದಂತೆ ಕೊಡಲಾಗುವುದು. ಪರಿಶಿಷ್ಠ ವರ್ಗದ ಮಂತ್ರಿಯಾಗಿದ್ದ ನಾಗೇಂದ್ರ ಅವರ ಮೇಲೂ ಸುಳ್ಳು ಕೇಸು ಹಾಕಿದ್ದರು. ಈಗ ನಾಗೇಂದ್ರ ಅವರು ಜೈಲಿನಿಂದ ಹೊರಗೆ ಬಂದಿದ್ದಾರೆ. ಉಪ ಚುನಾವಣೆ ಮುಗಿದ ಬಳಿಕ ಈ ಬಗ್ಗೆ ಒಳ್ಳೆ ತೀರ್ಮಾನ ಮಾಡುತ್ತೇನೆ. ನಮ್ಮ ಗ್ಯಾರಂಟಿಗಳಿಂದ ಅನುಕೂಲ ಪಡೆದವರು ನಮಗೆ ಮತ ಕೊಡಲಿ, ಬಿಡಲಿ ಆದರೆ ನಾವು ಬಡವರ ಕಲ್ಯಾಣಕ್ಕೆ ಕೆಲಸ ಮಾಡುವುದನ್ನು ಮಾತ್ರ ನಿಲ್ಲಿಸುವುದಿಲ್ಲ. ಬಡವರ ಪರ ಕೆಲಸ ಮಾಡುವುದು ನಮ್ಮ ಬದ್ಧತೆ. ವಾಲ್ಮೀಕಿ ಸಂಘದ ಬೇಡಿಕೆಯಂತೆ ಹೆಚ್.ಡಿ.ಕೋಟೆಯಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕೆ 2 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.

Next Article