ಬಡ್ಡಿ ಕಿರುಕುಳ: ೨೩ ಬಡ್ಡಿ ಕುಳಗಳ ಬಂಧನ
ಹುಬ್ಬಳ್ಳಿ: ಬಡ್ಡಿ ಕಿರುಕುಳ ನೀಡಿದ ಆರೋಪದ ಮೇಲೆ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ೧೬ ಪ್ರಕರಣ ದಾಖಲಿಸಿ, ೨೩ ಜನ ಆರೋಪಿತರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ ತಿಳಿಸಿದರು.
ಇಲ್ಲಿನ ಉಪನಗರ ಪೊಲೀಸ್ ಠಾಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತಲಾಯ ವ್ಯಾಪ್ತಿಯ ೧೩ ಠಾಣೆಗಳಲ್ಲಿ ೧೬ ಪ್ರಕರಣ ದಾಖಲಿಸಿಕೊಂಡಿದ್ದು, ೨೩ ಜನ ಬಡ್ಡಿ ದಂಧೆಕೋರರನ್ನು ಬಂಧಿಸಲಾಗಿದ್ದು, ಅಂದಾಜು ನಾಲ್ಕು ಲಕ್ಷ ಮೌಲ್ಯದ ಕಾರು, ಬೈಕ್, ಮೊಬೈಲ್ ಮತ್ತು ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಈ ಹಿಂದೆ ಬಡ್ಡಿ ಕಿರುಕುಳ ಆರೋಪದಲ್ಲಿ ಏಳು ಪ್ರಕರಣದಲ್ಲಿ ೨೫ ಜನರನ್ನು ಬಂಧಿಸಲಾಗಿತ್ತು. ಮುಂದುವರೆದು ೨೩ ಜನರನ್ನು ಬಂಧಿಸಲಾಗಿದೆ. ಸಾರ್ವಜನಿಕರಿಗೆ ಬಡ್ಡಿ ಕಿರುಕುಳ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ಕಾರ್ಯಾಚರಣೆ ಮುಂದುವರೆಸಲಾಗುತ್ತಿದ್ದು, ಬಡ್ಡಿ ಕುಳಗಳ ಮೇಲೆ ನೊಂದವರು ದೂರು ನೀಡಿದರೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ್ ಸಿ.ಆರ್., ಎಸಿಪಿಗಳಾದ ಶಿವಪ್ರಕಾಶ ನಾಯಕ್, ಉಮೇಶ ಚಿಕ್ಕಮಠ ಸೇರಿದಂತೆ ವಿವಿಧ ಠಾಣೆಗಳ ಸಿಪಿಐಗಳು ಇದ್ದರು.