`ಬಣ್ಣ ಹಚ್ಚಿ ಬಹುಮಾನ ಗೆಲ್ಲಿ ಸ್ಪರ್ಧೆ' ವಿಜೇತರಿಗೆ ಬಹುಮಾನ ವಿತರಣೆ
ಹುಬ್ಬಳ್ಳಿ: ಓದಿ ಕಂಠಪಾಠ ಮಾಡಿಕೊಳ್ಳುವ ರೂಢಿ ಸರಿಯಲ್ಲ. ಓದಿನಿಂದ ಮಾತ್ರ ಯಶಸ್ಸು ಲಭಿಸದು ವಿವಿಧ ಕೌಶಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಎಸ್. ಕೆಳದಿಮಠ ಹೇಳಿದರು.
ಸೋಮವಾರ ಸಂಯುಕ್ತ ಕರ್ನಾಟಕ ಕಚೇರಿ ಆವರಣದ ಕಬ್ಬೂರು ಸಭಾಂಗಣದಲ್ಲಿ ಗಣೇಶ ಚತುರ್ಥಿ ಹಬ್ಬದ ಅಂಗವಾಗಿ ಸಂಯುಕ್ತ ಕರ್ನಾಟಕ ದಿನ ಪತ್ರಿಕೆ ವತಿಯಿಂದ ಆಯೋಜಿಸಿದ್ದ `ಬಣ್ಣ ಹಚ್ಚಿ ಬಹುಮಾನ ಗೆಲ್ಲಿ ಸ್ಫರ್ಧೆ'ಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿ ಅವರು ಮಾತನಾಡಿದರು.
ಈ ಹಿಂದೆ ಶಿಕ್ಷಕರು ವಿದ್ಯಾರ್ಥಿಗಳ ಕುಟುಂಬಸ್ಥರೊಂದಿಗೆ ಅವಿನಾಭಾವ ಸಂಬಂಧ ಹೊಂದಿರುತ್ತಿದ್ದರು. ಅದೇ ರೀತಿ ಇಂದಿನ ಶಿಕ್ಷಕರು ವಿದ್ಯಾರ್ಥಿಗಳ ವಿಶ್ವಾಸ, ಪ್ರೀತಿಗೆ ಪಾತ್ರರಾಗಬೇಕು. ಅದೇ ರೀತಿ ಪಾಲಕರ ಜವಾಬ್ದಾರಿಯೂ ಇಂದಿನ ಕಾಲಘಟ್ಟದಲ್ಲಿ ಮಹತ್ವದ್ದಾಗಿದೆ. ಮಕ್ಕಳು ಪಾಲಕರ ಕೈ ಮೀರಿ ಹೋಗದಂತೆ ಜಾಗೃತಿ ವಹಿಸಬೇಕು ಎಂದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಗು ಬೆಳೆಯಬೇಕೆಂದರೆ ಭಾಗವಹಿಸುವಿಕೆ ಮಹತ್ವದ ಪಾತ್ರ ವಹಿಸುತ್ತದೆ. ಅಂತಹ ಅವಕಾಶವನ್ನು ಸಂಯುಕ್ತ ಕರ್ನಾಟಕ ಪತ್ರಿಕೆ ಗಣೇಶ ಹಬ್ಬದ ಅಂಗವಾಗಿ ಮಕ್ಕಳಿಗೆ ನೀಡಿದೆ. ವಿದ್ಯಾರ್ಥಿಗಳು ಅಂಕಗಳನ್ನು ಮಾತ್ರ ಗಳಿಸಲು ತಮ್ಮ ಗಮನ ಹರಿಸದೇ ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕು. ಇದಕ್ಕೆ ಪಾಲಕರ ಅಭಿರುಚಿಯೂ ಮುಖ್ಯವಾಗುತ್ತದೆ. ವಸ್ತುನಿಷ್ಠ ವರದಿಗಳಿಗೆ ಸಂಯುಕ್ತ ಕರ್ನಾಟಕ ಪತ್ರಿಕೆ ಹೆಸರುವಾಸಿಯಾಗಿದೆ. ಅದೇ ರೀತಿ ವಿದ್ಯಾರ್ಥಿಗಳ ವಿದ್ಯಾರ್ಜನೆಗಾಗಿ ಹಲವು ವರ್ಷಗಳಿಂದ ಪತ್ರಿಕೆ ಶ್ರಮಿಸುತ್ತಿದೆ. ಮಕ್ಕಳಿಗೆ ಮತ್ತಷ್ಟು ಉತ್ತೇಜನ ನೀಡುವ ಕಾರ್ಯಕ್ರಮಗಳನ್ನು ಪತ್ರಿಕೆ ಇನ್ನಷ್ಟು ರೂಪಿಸಲಿ ಎಂದು ಶುಭ ಹಾರೈಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಯುಕ್ತ ಕರ್ನಾಟಕ ಕಾರ್ಯನಿರ್ವಹಣಾಧಿಕಾರಿ, ಕಾರ್ಯನಿರ್ವಾಹಕ ಸಂಪಾದಕ ಮೋಹನ ಹೆಗಡೆ, ಮಕ್ಕಳಲ್ಲಿ ಗಣೇಶ ಚತುರ್ಥಿ ಮಹತ್ವ ತಿಳಿಸುವ ನಿಟ್ಟಿನಲ್ಲಿ ಬಣ್ಣ ಹಚ್ಚಿ ಬಹುಮಾನ ಗೆಲ್ಲಿ ಸ್ಪರ್ಧೆ ಆಯೋಜಿಸಲಾಗುತ್ತು. ಸ್ಪರ್ಧೆಯಲ್ಲಿ ಧಾರವಾಡ ಜಿಲ್ಲೆಯ ೨೦೦ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ಮಕ್ಕಳಲ್ಲಿನ ಸೃಜನಶೀಲತೆಯನ್ನು ಹೊರ ಹಾಕಲು ಈ ಸ್ಪರ್ಧೆ ಸಹಾಯಕವಾಗಿದೆ ಎಂದರು.
ಸಂಯುಕ್ತ ಕರ್ನಾಟಕ ಪತ್ರಿಕೆ ಮಕ್ಕಳ ಬುದ್ದಿಮತ್ತೆ ಹೆಚ್ಚಿಸುವ ಉದ್ದೇಶದಿಂದ ಕಿಂದರಜೋಗಿ ಪುರವಣೆಯನ್ನು ಹೊರ ತರುತ್ತಿದೆ. ಅಲ್ಲದೇ ಜಾಣರ ಗುರು ವಿದ್ಯಾರ್ಥಿ ಸಂಚಿಕೆಯನ್ನು ಪ್ರಕಟಿಸುತ್ತಿದೆ. ಈ ಪತ್ರಿಕೆಯಲ್ಲಿ ರಾಜಕೀಯ ವಿಚಾರಗಳು ಇರುವುದಿಲ್ಲ. ಶಿಕ್ಷಣಕ್ಕೆ ಅಗತ್ಯವಾದ ವಿಷಯ ವಸ್ತುಗಳನ್ನು ಈ ಪತ್ರಿಕೆ ಒಳಗೊಂಡಿದೆ. ಇಂತಹ ಪತ್ರಿಕೆಗಳ ಓದುವ ಹವ್ಯಾಸವನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಇದೇ ವೇಳೆ ಕರ್ನಾಟಕ ವಿಶ್ವವಿದ್ಯಾಲಯದ ವತಿಯಿಂದ ಗೌರವ ಡಾಕ್ಟರೇಟ್ ಪಡೆದ ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ. ಪ್ರಸಾದ ಅವರನ್ನು ಸಂಯುಕ್ತ ಕರ್ನಾಟಕ ಪತ್ರಿಕೆ ವತಿಯಿಂದ ಸನ್ಮಾನಿಸಲಾಯಿತು. ಬಣ್ಣ ಹಚ್ಚಿ ಬಹುಮಾನ ಗೆಲ್ಲಿ ಸ್ಪರ್ಧೆಯಲ್ಲಿ ವಿಜೇತರಾದ ಹತ್ತು ವಿದ್ಯಾರ್ಥಿಗಳಿಗೆ ಬಹುಮಾನ, ಸ್ಫರ್ಧೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಸಿಬ್ಬಂದಿ ವ್ಯವಸ್ಥಾಪಕ ಮಹದೇವ ಕೋಣಿ, ಸಂಯುಕ್ತ ಕರ್ನಾಟಕ ಹುಬ್ಬಳ್ಳಿ ಸ್ಥಾನಿಕ ಸಂಪಾದಕ ಷಣ್ಮುಖ ಕೋಳಿವಾಡ, ಜಾಹೀರಾತು ವಿಭಾಗದ ವ್ಯವಸ್ಥಾಪಕ ವಿಘ್ನೇಶ ಭಟ್, ಪ್ರಸಾರಾಂಗ ವಿಭಾಗದ ವ್ಯವಸ್ಥಾಪಕ ಶ್ಯಾಮ್‌ರಾವ್ ಕುಲಕರ್ಣಿ, ಸ್ಟೊರ್ಸ್ ವಿಭಾಗದ ಮುಖ್ಯಸ್ಥ ಸುರೇಶ ಕಾತೋಟೆ, ಜಾಹೀರಾತು ವಿಭಾಗದ ಹಿರಿಯ ಪ್ರತಿನಿಧಿ ಸುಧೀಂದ್ರ ಹುಲಗೂರ ಇದ್ದರು.
ಪ್ರತಿಭೆ ಅನಾವರಣಕ್ಕೆ ಸ್ಪರ್ಧೆಗಳು ವೇದಿಕೆ
ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲೂ ಒಂದಿಲ್ಲ ಒಂದು ಪ್ರತಿಭೆ ಅಡಕವಾಗಿರುತ್ತದೆ. ಆ ಪ್ರತಿಭೆಗಳ ಅನಾವರಣಕ್ಕೆ ಸ್ಪರ್ಧೆಗಳು ವೇದಿಕೆಯಾಗಿವೆ. ಬಣ್ಣ ಹಚ್ಚಿ ಬಹುಮಾನ ಗೆಲ್ಲಿ ಸ್ಪರ್ಧೆಯು ವಿದ್ಯಾರ್ಥಿಗಳ ಕಲ್ಪನಾ ಶಕ್ತಿಯನ್ನು ಹೊರ ಹಾಕಲು ಸಹಾಯಕ ಎಂದು ಸ್ವರ್ಣ ಗ್ರೂಪ್ ಆಫ್ ಕಂಪನೀಸ್ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ. ಪ್ರಸಾದ ಹೇಳಿದರು.
ಸಂಯುಕ್ತ ಕರ್ನಾಟಕ ಪತ್ರಿಕೆ ವಿದ್ಯಾರ್ಥಿಗಳ ಜ್ಞಾನಾರ್ಜನೆ ಉತ್ತೇಜಿಸುವ ಉದ್ದೇಶದಿಂದ `ಜಾಣರ ಗುರು' ಪತ್ರಿಕೆಯನ್ನು ಪ್ರಕಟಿಸುತ್ತಿದೆ. ಪ್ರತಿನಿತ್ಯ ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದುವ ರೂಢಿ ಬೆಳೆಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಹಾಯಕವಾಗಲಿದೆ ಎಂದು ಹೇಳಿದರು.
ಪಾಲಕರು ತಮ್ಮ ಮಕ್ಕಳಲ್ಲಿರುವ ಪ್ರತಿಭೆ ಹೊರಹಾಕಲು ಪ್ರೋತ್ಸಾಹ ನೀಡಬೇಕು. ಅದನ್ನು ಬಿಟ್ಟು ಮಕ್ಕಳ ಮೇಲೆ ಒತ್ತಡ ಹೇರಬಾರದು. ಇನ್ನು ಕೆಲವೇ ವರ್ಷಗಳಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆ ಶತಮಾಮನೋತ್ಸವ ಆಚರಿಸಿಕೊಳ್ಳುತ್ತಿದ್ದು, ಪತ್ರಿಕೆ ವತಿಯಿಂದ ಇನ್ನಷ್ಟು ಸಮಾಜಮುಖಿ ಕಾರ್ಯಗಳು ನಡೆಯಲಿ ಎಂದು ಆಶಯ ವ್ಯಕ್ತಪಡಿಸಿದರು.
ಬಹುಮಾನ ವಿಜೇತರು
೧) ಅದ್ವಿತಿ ಒಂಟಮೂರಿ
೨) ಚಿನ್ಮಯಿ ಟೆಂಗಿನಕಾಯಿ
೩) ಸರ್ವೇಶ ರೇವಣಕರ
೪) ನಿಧಿ ದೀಕ್ಷಿತ್
೫) ಅಪೂರ್ವ ಧಾರವಾಡ
೬) ಸಾನ್ವಿ ಯರಗೊಪ್ಪ
೭) ಇರ್ಫಾನ್ ಶೇಖ್
೮) ಪೂನಂ ಚವ್ಹಾಣ
೯) ಮಹತಿ ಜೋಶಿ
೧೦) ಸಹನಾ ಪೂಜಾರ