ಬದಲಾಗುತ್ತಿರುವ ಜಾಗತಿಕ ಚಿತ್ರಣದಲ್ಲಿ ರಾ
ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್ (ರಾ) ಭಾರತದ ಅತ್ಯಂತ ಪ್ರಮುಖ ಗುಪ್ತಚರ ಸಂಸ್ಥೆಯಾಗಿದೆ. ಮೂಲತಃ ಚೀನಾ ಮತ್ತು ಪಾಕಿಸ್ತಾನಗಳ ಮೇಲೆ ಕಣ್ಣಿಡುವ ಸಲುವಾಗಿ ಸ್ಥಾಪಿಸಲಾಗಿದ್ದ ರಾ, ಕಳೆದ ನಾಲ್ಕು ದಶಕಗಳ ಅವಧಿಯಲ್ಲಿ ತನ್ನ ವ್ಯಾಪ್ತಿಯನ್ನು ಸಾಕಷ್ಟು ವೃದ್ಧಿಸಿದ್ದು, ಜಗತ್ತಿನಾದ್ಯಂತ ಭಾರತದ ಪ್ರಭಾವವನ್ನು ವಿಸ್ತರಿಸುತ್ತಾ ಬಂದಿದೆ.
ರಾ ಸಂಸ್ಥೆಯ ಮುಖ್ಯ ಪಾತ್ರ, ಭಾರತ ಸರ್ಕಾರಕ್ಕೆ ಕಾರ್ಯತಂತ್ರದ ಮಾಹಿತಿಗಳನ್ನು ಒದಗಿಸುವುದು ಮತ್ತು ಸಂಕೀರ್ಣ ನಿರ್ಧಾರಗಳನ್ನು ತೆಗೆದುಕೊಳ್ಳಲು ನೆರವಾಗುವುದು. ರಾ ಪ್ರಮುಖ ಜಾಗತಿಕ ಗುಪ್ತಚರ ಸಂಸ್ಥೆಗಳಾದ ಸಿಐಎ, ಎಂಐ೬, ಮತ್ತು ಮೊಸಾದ್ ಜೊತೆ ನಿಕಟವಾಗಿ ಕಾರ್ಯಾಚರಿಸಿ, ಮಾಹಿತಿಗಳನ್ನು ಹಂಚಿಕೊಳ್ಳುವ, ಯೋಜನೆಗಳನ್ನು ರೂಪಿಸುವ, ಮತ್ತು ಗುಪ್ತಚರ ಕಾರ್ಯಗಳನ್ನು ನೆರವೇರಿಸುವ ಕೆಲಸ ನಿರ್ವಹಿಸುತ್ತದೆ.
ರಾ ಕಾರ್ಯಾಚರಣೆಗಳ ಮೇಲ್ನೋಟ
ರಾ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಉಸ್ತುವಾರಿಯನ್ನು ಭಾರತದ ಪ್ರಧಾನಿಯವರೇ ಹೊಂದಿದ್ದು, ರಾ ನಿರ್ದೇಶಕರು ನೇರವಾಗಿ ಪ್ರಧಾನಿಯವರಿಗೆ ವರದಿ ಸಲ್ಲಿಸುತ್ತಾರೆ. ರಾದ ವಿವಿಧ ಕಾರ್ಯಾಚರಣಾ ಘಟಕಗಳು ಮತ್ತು ವಿಭಾಗಗಳನ್ನು ನಿರ್ವಹಿಸಲು ನಿರ್ದೇಶಕರಿಗೆ ಉಪ ನಿರ್ದೇಶಕರು ಮತ್ತು ಇತರ ಹಿರಿಯ ಅಧಿಕಾರಿಗಳು ನೆರವಾಗುತ್ತಾರೆ. ವಿಶೇಷತೆ ಮತ್ತು ಪ್ರಾವೀಣ್ಯತೆಯ ಆಧಾರದಲ್ಲಿ, ರಾ ತನ್ನ ಚಟುವಟಿಕೆಗಳನ್ನು ವಿವಿಧ ವಿಭಾಗಗಳಲ್ಲಿ ವಿಂಗಡಿಸುತ್ತದೆ. ರಾ ಸಂಸ್ಥೆಯ ಪ್ರಮುಖ ವಿಭಾಗಗಳೆಂದರೆ:
ಬಾಹ್ಯ ಗುಪ್ತಚರ ವಿಭಾಗವು (ಎಕ್ಸ್ಟರ್ನಲ್ ಇಂಟಲಿಜೆನ್ಸ್) ಭಾರತದ ಹೊರಗಿನ ಮೂಲಗಳಿಂದ ಮಾಹಿತಿಗಳನ್ನು ಕಲೆಹಾಕಿ, ಅವುಗಳನ್ನು ವಿಶ್ಲೇಷಿಸುತ್ತದೆ.
ತಾಂತ್ರಿಕ ಬೆಂಬಲ ವಿಭಾಗವು ತಾಂತ್ರಿಕ ವಿಧಾನಗಳನ್ನು ಬಳಸಿಕೊಂಡು, ಗುಪ್ತಚರ ಮಾಹಿತಿಗಳನ್ನು ಕಲೆಹಾಕಿ, ಆ ಮೂಲಕ ರಾ ಸಂಸ್ಥೆಯ ಇತರ ವಿಭಾಗಗಳಿಗೆ ನೆರವು ನೀಡುತ್ತದೆ.
ವೈಮಾನಿಕ ಸಂಶೋಧನಾ ಕೇಂದ್ರ ವಿಭಾಗವು ವಿಮಾನಗಳ ಬಳಗವನ್ನು ಹೊಂದಿದ್ದು, ವೈಮಾನಿಕ ಕಣ್ಗಾವಲು ಮತ್ತು ವಿಚಕ್ಷಣಾ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತದೆ.
ಜಂಟಿ ಗುಪ್ತಚರ ಸಮಿತಿಯು ಭಾರತದ ಎಲ್ಲ ಗುಪ್ತಚರ ಸಂಸ್ಥೆಗಳ ನಡುವಿನ ಸಹಯೋಗವನ್ನು ನಿರ್ವಹಿಸುತ್ತದೆ.
ಕಾರ್ಯಾಚರಣಾ ವಿಭಾಗವು ಭಾರತದ ರಾಷ್ಟ್ರೀಯ ಭದ್ರತಾ ಗುರಿಗಳನ್ನು ಸಾಧಿಸುವ ಸಲುವಾಗಿ ರಹಸ್ಯ ಕಾರ್ಯಾಚರಣೆಗಳನ್ನು ರೂಪಿಸುವ ಮತ್ತು ಜಾರಿಗೊಳಿಸುವ ಜವಾಬ್ದಾರಿ ಹೊಂದಿದೆ.
ಈ ವಿಭಾಗಗಳ ಜೊತೆಗೆ, ರಾ ಇತರ ಹಲವು ಕಾರ್ಯಾಚರಣಾ ವಿಭಾಗಗಳನ್ನೂ ಒಳಗೊಂಡಿದೆ. ಉದಾಹರಣೆಗೆ, ಅತ್ಯುನ್ನತ ಕೌಶಲಗಳನ್ನು ಹೊಂದಿರುವ ವ್ಯಕ್ತಿಗಳಿರುವ ವಿಶೇಷ ತಂಡಗಳು ರಹಸ್ಯ ಕಾರ್ಯಾಚರಣೆಗಳನ್ನು ನಡೆಸುತ್ತವೆ. ರಾ ಭಾರತದ ಮಿಲಿಟರಿ ಮತ್ತು ನಾಗರಿಕ ವಲಯಗಳೆರಡರಿಂದಲೂ ಸಿಬ್ಬಂದಿಗಳನ್ನು ನೇಮಕಗೊಳಿಸುತ್ತದೆ.
ಅಂತಿಮವಾಗಿ, ರಾದ ಮುಖ್ಯ ಉದ್ದೇಶಗಳೆಂದರೆ: ವಿದೇಶೀ ಗುಪ್ತಚರ ಮಾಹಿತಿಗಳನ್ನು ಕಲೆಹಾಕುವುದು. ರಹಸ್ಯ ಕಾರ್ಯಾಚರಣೆಗಳನ್ನು ನಡೆಸುವುದು. ಸರ್ಕಾರಕ್ಕೆ ರಾಷ್ಟ್ರೀಯ ಭದ್ರತಾ ವಿಚಾರಗಳ ಕುರಿತಂತೆ ಸರ್ಕಾರಕ್ಕೆ ಮಾರ್ಗದರ್ಶನ ಮಾಡುವುದು. ಭಾರತದ ಭದ್ರತಾ ಹಿತಾಸಕ್ತಿಗಳನ್ನು ಕಾಪಾಡುವ ನಿಟ್ಟಿನಲ್ಲಿ, ರಾ ಸಂಸ್ಥೆಯ ಎಲ್ಲ ವಿಭಾಗಗಳೂ ಜೊತೆಯಾಗಿ ಕಾರ್ಯಾಚರಿಸಿ, ಸಂಭಾವ್ಯ ಅಪಾಯಗಳನ್ನು ನಿಭಾಯಿಸುತ್ತವೆ.
ರಾ ನೇಮಕಾತಿ ಮತ್ತು ಪಾತ್ರಗಳು
ರಾ ಸಂಸ್ಥೆಯಲ್ಲಿ ವಿವಿಧ ಮಟ್ಟದ ಹುದ್ದೆಗಳಿದ್ದು, ಪ್ರತಿಯೊಂದು ಹುದ್ದೆಯೂ ತನ್ನದೇ ಆದ ಮಹತ್ವ ಹೊಂದಿದೆ. ಪ್ರತಿಯೊಬ್ಬ ಅಧಿಕಾರಿಗೂ ಆತನ ಹುದ್ದೆಯ ಅನುಸಾರವಾಗಿ ಜವಾಬ್ದಾರಿ ನೀಡಲಾಗುತ್ತದೆ.
ಕ್ಲಾಸ್ ೧ ಅಧಿಕಾರಿ, ಸೆಕ್ರೆಟರಿ/ಅಡಿಷನಲ್ ಸೆಕ್ರೆಟರಿ (ಆರ್), ಜಾಯಿಂಟ್ ಸೆಕ್ರೆಟರಿ, ಡೈರೆಕ್ಟರ್/ಡೆಪ್ಯುಟಿ ಸೆಕ್ರೆಟರಿ/ಅಟಾಚಿ, ಗ್ರೂಪ್ ಎ ಅಧಿಕಾರಿ ಸೀನಿಯರ್ ಫೀಲ್ಡ್ ಆಫೀಸರ್, ಫೀಲ್ಡ್ ಆಫೀಸರ್, ಸಬ್ ಏರಿಯಾ ಆಫೀಸರ್, ಅಸಿಸ್ಟೆಂಟ್ ಫೀಲ್ಡ್ ಆಫೀಸರ್.
ರಾ ಏಜೆಂಟ್‌ನ ಉದ್ಯೋಗ ವಿವರ: ರಾ ಏಜೆಂಟ್ ಒಬ್ಬನ ಪ್ರಾಥಮಿಕ ಕಾರ್ಯಗಳಲ್ಲಿ ಭಾರತದ ಸುತ್ತಲಿನ ದೇಶಗಳ ಮಿಲಿಟರಿ ಮತ್ತು ರಾಜಕೀಯ ಬೆಳವಣಿಗೆಗಳನ್ನು ಗಮನಿಸುವುದು ಮುಖ್ಯವಾಗಿದೆ.
ಭಾರತದಲ್ಲಿ ರಾ ಏಜೆಂಟರ ಪ್ರಮುಖ ಕಾರ್ಯಗಳು ಮತ್ತು ಪಾತ್ರಗಳು
ವಿದೇಶೀ ಗುಪ್ತಚರ ಮಾಹಿತಿಗಳನ್ನು ಕಲೆಹಾಕುವುದು, ಉಗ್ರಗಾಮಿ ವಿರೋಧಿ ಕಾರ್ಯಾಚರಣೆಗಳನ್ನು ನಡೆಸುವುದು. ಭಾರತದ ನೀತಿನಿರೂಪಕರಿಗೆ ಸಲಹೆ ನೀಡುವುದು. ಕೌಂಟರ್ ಪ್ರೊಪಗೇಶನ್, ದೇಶದ ಪರಮಾಣು ಕಾರ್ಯಕ್ರಮವನ್ನು ಸುರಕ್ಷಿತವಾಗಿಸುವುದು.
ನೇಮಕಾತಿ: ಭಾರತದಲ್ಲಿ, ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್ (ರಾ) ಸರ್ಕಾರಿ ಸಂಸ್ಥೆಗಳು, ಸೇನಾಪಡೆ, ಗುಪ್ತಚರ ಇಲಾಖೆಗಳು, ಪೊಲೀಸ್ ಇಲಾಖೆಗಳು, ಹಾಗೂ ಆಡಳಿತ ಸೇವೆ ಸೇರಿದಂತೆ, ವಿಶಾಲ ಶ್ರೇಣಿಯ ವಲಯಗಳಿಂದ ತನ್ನ ಸಿಬ್ಬಂದಿಗಳನ್ನು ನೇಮಕಗೊಳಿಸುತ್ತದೆ. ಆದರೆ, ರಾ ಕೇವಲ ಇವಿಷ್ಟೇ ಮೂಲಗಳಿಂದ ತನ್ನ ಸಿಬ್ಬಂದಿಗಳನ್ನು ಆಯ್ಕೆ ಮಾಡುವುದಿಲ್ಲ.
ರಾ ಏಜೆಂಟ್ ಆಗಿ ಆಯ್ಕೆಯಾಗಬೇಕಾದರೆ, ಸಾಕಷ್ಟು ಔದ್ಯೋಗಿಕ ಅನುಭವ ಮತ್ತು ಉತ್ತಮ ಶೈಕ್ಷಣಿಕ ಹಿನ್ನೆಲೆಯ ಅಗತ್ಯವಿದೆ. ಅಭ್ಯರ್ಥಿಗಳು ಅತ್ಯುತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಹೊಂದಿರುವ ಅವಶ್ಯಕತೆ ಇರುವುದರಿಂದ, ಭಾರತದ ರಾ ಸಂಸ್ಥೆಗೆ ಸೇರ್ಪಡೆಯಾಗುವುದು ಒಂದು ಕಠಿಣ ಸವಾಲಾಗಿದೆ. ರಾ ಸಂಸ್ಥೆಯಲ್ಲಿ ಸ್ಥಾನ ಪಡೆದುಕೊಳ್ಳಲು, ಅಭ್ಯರ್ಥಿಗಳಿಗೆ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ಪದವಿ ಮತ್ತು ಕನಿಷ್ಠ ಯಾವುದಾದರೂ ಒಂದು ವಿದೇಶೀ ಭಾಷೆಯಲ್ಲಿ ಪ್ರಾವೀಣ್ಯತೆ ಇರಬೇಕಾಗುತ್ತದೆ.
ಅಭ್ಯರ್ಥಿಗಳು ಉತ್ತಮ ಸಂವಹನಕಾರರಾಗಿದ್ದು, ಅಷ್ಟೇ ಉತ್ತಮವಾದ ನೆನಪು ಶಕ್ತಿ ಹೊಂದಿರಬೇಕು. ಅದರೊಡನೆ, ಅಭ್ಯರ್ಥಿಗಳು ೫೬ ವರ್ಷದ ಒಳಗಿನವರಾಗಿದ್ದು, ೨೦ ವರ್ಷಗಳಿಗೂ ಹೆಚ್ಚಿನ ಔದ್ಯೋಗಿಕ ಅನುಭವ ಹೊಂದಿರಬೇಕು. ರಾ ಏಜೆಂಟ್ ಆಗಿ ಸ್ಥಾನ ಪಡೆಯಲು, ಅಭ್ಯರ್ಥಿ ಭಾರತೀಯ ಪ್ರಜೆಯಾಗಿದ್ದು, ಯಾವುದೇ ಅಪರಾಧಿ ಹಿನ್ನೆಲೆ ಮತ್ತು ಪ್ರಸ್ತುತ ನ್ಯಾಯಾಲಯದಲ್ಲಿ ಯಾವುದೇ ಮೊಕದ್ದಮೆಯನ್ನು ಎದುರಿಸುತ್ತಿರಬಾರದು.
ರಾ ಆಯ್ಕೆ ಪ್ರಕ್ರಿಯೆ
ರಾ ಸಾಮಾನ್ಯವಾಗಿ ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಐಪಿಎಸ್ ಅಥವಾ ಐಎಫ್‌ಎಸ್ ಅನ್ನು ಆಯ್ಕೆ ಮಾಡಿಕೊಂಡ ಕುಶಲ ಅಭ್ಯರ್ಥಿಗಳನ್ನು ನೇಮಕಗೊಳಿಸುತ್ತದೆ. ಸರ್ಕಾರಿ ಅಧಿಕಾರಿಗಳು ಲಾಲ್ ಬಹಾದ್ದೂರ್ ಶಾಸ್ತಿç ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಶನ್‌ನಲ್ಲಿ ಬುನಾದಿ ತರಬೇತಿ ಪೂರ್ಣಗೊಳಿಸಿದ ಬಳಿಕವಷ್ಟೇ ರಾಗೆ ಸೇರ್ಪಡೆಯಾಗಲು ಅರ್ಹತೆ ಹೊಂದುತ್ತಾರೆ.
ತರಬೇತಿಯ ಕೊನೆಯ ಬಳಿಕ, ತರಬೇತುದಾರರು ಮಾನಸಿಕ ಪರೀಕ್ಷೆ ಮತ್ತು ಸಂದರ್ಶನವನ್ನು ಏರ್ಪಡಿಸುತ್ತಾರೆ. ಇದರಲ್ಲಿ ಉತ್ತೀರ್ಣಗೊಂಡ ಅಭ್ಯರ್ಥಿಗಳು ರಾದಲ್ಲಿ ಒಂದು ವರ್ಷದ ಇಂಟರ್ನ್ಶಿಪ್ ಆರಂಭಿಸುತ್ತಾರೆ. ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್‌ಸಿ) ಐಎಎಸ್, ಐಪಿಎಸ್, ಮತ್ತು ಐಎಫ್‌ಎಸ್ ಸೇರಿದಂತೆ, ವಿವಿಧ ನಾಗರಿಕ ಸೇವಾ ಅಭ್ಯರ್ಥಿಗಳ ಆಯ್ಕೆ ನಡೆಸುತ್ತದೆ. ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಗಳನ್ನು ಮೂರು ಹಂತಗಳಲ್ಲಿ ನಡೆಸಲಾಗುತ್ತದೆ. ಅವೆಂದರೆ,
ಯುಪಿಎಸ್‌ಸಿ ಪ್ರಿಲಿಮಿನರಿ ಪರೀಕ್ಷೆ, ಯುಪಿಎಸ್‌ಸಿ ಮುಖ್ಯ ಪರೀಕ್ಷೆ ಮತ್ತು ವ್ಯಕ್ತಿತ್ವ ಪರೀಕ್ಷೆ, ಯುಪಿಎಸ್‌ಸಿ ಸಂದರ್ಶನ, ರಾಷ್ಟ್ರೀಯ ಭದ್ರತಾ ಮೈಲಿಗಲ್ಲುಗಳು,
ವಿದೇಶೀ ಗುಪ್ತಚರ
ರಾ ತನ್ನ ಬುದ್ಧಿಮತ್ತೆಯಿಂದ ವಿದೇಶಗಳಲ್ಲಿ ವಿವಿಧ ಮಹತ್ವದ ಕಾರ್ಯಾಚರಣೆಗಳಿಗೆ ಬೆಂಬಲ ನೀಡುತ್ತದೆ. ಇಂಟಲಿಜೆನ್ಸ್ ಬ್ಯೂರೋ (ಐಬಿ) ರೀತಿಯ ವಿವಿಧ ಗುಪ್ತಚರ ಸಂಸ್ಥೆಗಳೊಡನೆ ನಿಕಟವಾಗಿ ಕಾರ್ಯಾಚರಿಸುತ್ತದೆ. ಮಿಲಿಟರಿ, ಆರ್ಥಿಕ, ವೈಜ್ಞಾನಿಕ, ಹಾಗೂ ರಾಜಕೀಯ ಗುಪ್ತಚರ ಮಾಹಿತಿಗಳನ್ನು ಕಲೆಹಾಕಲು ರಾ ಬಹಿರಂಗ ಮತ್ತು ರಹಸ್ಯ ಕಾರ್ಯಾಚರಣೆಗಳೆರಡನ್ನೂ ನಡೆಸುತ್ತದೆ. ಆಯುಧಗಳು ಮತ್ತು ಮದ್ದುಗುಂಡುಗಳನ್ನು ಭಾರತಕ್ಕೆ ಕಳ್ಳ ಸಾಗಾಣಿಕೆ ನಡೆಸುವ ಗುಂಪುಗಳನ್ನು ಗಮನಿಸುವ ರಾ, ಉಗ್ರಗಾಮಿ ಗುಂಪುಗಳ ಮೇಲೆ ಸದಾ ಕಣ್ಣಿಟ್ಟಿರುತ್ತದೆ. ರಾ ತನ್ನ ಹೆಚ್ಚಿನ ಗಮನವನ್ನು ಭಾರತದ ನೆರೆಯ ರಾಷ್ಟ್ರಗಳ ಮೇಲಿರುತ್ತದೆ. ರಾ ತಾನು ಕಲೆಹಾಕುವ ಮಾಹಿತಿಗಳನ್ನು ಭಾರತೀಯ ಅಧಿಕಾರಿಗಳಿಗೆ ರವಾನಿಸುತ್ತದೆ. ಇಂತಹ ಮಾಹಿತಿಗಳು ಭಾರತದ ವಿದೇಶಾಂಗ ಮತ್ತು ರಾಷ್ಟ್ರೀಯ ಭದ್ರತಾ ನೀತಿಗಳನ್ನು ರೂಪಿಸಲು ನೆರವಾಗುತ್ತವೆ.
ರಾ ಸಂಸ್ಥೆಯ ಸಾಧನೆಗಳು
ಕಳೆದ ಹಲವು ದಶಕಗಳಲ್ಲಿ, ಭಾರತದ ಪ್ರಮುಖ ಗುಪ್ತಚರ ಸಂಸ್ಥೆಯಾದ ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್ (ರಾ) ಹಲವು ಮಹತ್ತರ ವಿದ್ಯಮಾನಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದೆ. ಅವೆಂದರೆ:
ಬಾಂಗ್ಲಾದೇಶದ ನಿರ್ಮಾಣ (೧೯೭೦), ಪಾಕಿಸ್ತಾನದ ಪರಮಾಣು ಯೋಜನೆಯ ಮೇಲೆ ಕಣ್ಗಾವಲು (೧೯೮೦ರ ದಶಕ), ಕಾರ್ಗಿಲ್ ಯುದ್ಧದ ವೇಳೆ ಗುಪ್ತಚರ ಮಾಹಿತಿ, ಸರ್ಜಿಕಲ್ ದಾಳಿ (೨೦೧೬), ಬಾಲಾಕೋಟ್ ದಾಳಿ (೨೦೧೯).
ರಾ ಕಾರ್ಯತಂತ್ರದ ದೃಷ್ಟಿ
ಭಾರತದ ರಾಷ್ಟ್ರೀಯ ಭದ್ರತೆಯನ್ನು ರೂಪಿಸಿದ ಹಲವಾರು ಮಹತ್ತರ ನಿರ್ಧಾರಗಳಲ್ಲಿ ರಾ ಪಾತ್ರ ಪ್ರಮುಖವಾಗಿದೆ. ರಾದ ವಿನ್ಯಾಸ, ವಿಭಾಗಗಳು ಮತ್ತು ಕಾರ್ಯಾಚರಣಾ ತಂಡಗಳು ವಿದೇಶೀ ಗುಪ್ತಚರ ಮಾಹಿತಿ ಕಲೆಹಾಕುವಲ್ಲಿ ಮತ್ತು ಕಾರ್ಯಾಚರಣೆ ನಡೆಸುವಲ್ಲಿ ಅದರ ಕಾರ್ಯತಂತ್ರವನ್ನು ಪ್ರದರ್ಶಿಸುತ್ತದೆ. ರಾ ಕೊಡುಗೆಗಳಲ್ಲಿ ಕಾರ್ಗಿಲ್ ಯುದ್ಧದ ವೇಳೆ ಗುಪ್ತಚರ ಮಾಹಿತಿ ಸಂಗ್ರಹಣೆ, ಬಾಂಗ್ಲಾದೇಶದ ಸ್ವಾತಂತ್ರ್ಯ ಚಳವಳಿಗೆ ಬೆಂಬಲ, ಮತ್ತು ಪಾಕಿಸ್ತಾನದ ಪರಮಾಣು ಕಾರ್ಯಕ್ರಮವನ್ನು ಬಯಲುಗೊಳಿಸಿದ್ದು ಮಹತ್ವದ್ದಾಗಿವೆ.
ರಾಗೆ ಸೇರ್ಪಡೆಯಾಗಲು ಶೈಕ್ಷಣಿಕ ಸಾಧನೆ, ವೃತ್ತಿ ಅನುಭವ, ವಿದೇಶೀ ಭಾಷಾ ಪರಿಣತಿಯಂತಹ ಸಾಮರ್ಥ್ಯಗಳಿರಬೇಕು. ಸಂಸ್ಥೆಯಲ್ಲಿ ಇರುವ ಸಿಬ್ಬಂದಿಗಳು ಅತ್ಯಂತ ಕೌಶಲಭರಿತರಾಗಿದ್ದು, ರಾ ವಿವಿಧ ಗುಪ್ತಚರ ಸಂಸ್ಥೆಗಳು ಮತ್ತು ಸರ್ಕಾರಿ ಸಂಸ್ಥೆಗಳೊಂದಿಗೆ ಕಾರ್ಯಾಚರಿಸುತ್ತದೆ.
ಆದರೆ, ಇತ್ತೀಚೆಗೆ ಅಂತಾರಾಷ್ಟ್ರೀಯ ಘಟನೆಗಳಲ್ಲಿ ಮತ್ತು ನೆರೆಯ ಪಾಕಿಸ್ತಾನದಲ್ಲಿ ಹೆಚ್ಚುತ್ತಿರುವ ಭಯೋತ್ಪಾದನಾ ದಾಳಿಗಳಲ್ಲಿ ರಾ ಪಾತ್ರವಿದೆ ಎಂಬ ಆರೋಪಗಳು ರಾಜತಾಂತ್ರಿಕ ಸಂಬಂಧಗಳಿಗೆ ಧಕ್ಕೆ ಉಂಟುಮಾಡಿವೆ. ಇವುಗಳು ಪ್ರಾದೇಶಿಕ ಸ್ಥಿರತೆ ಕಾಪಾಡುವಲ್ಲಿ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ಗುಪ್ತಚರ ಸಂಸ್ಥೆಗಳು ಎದುರಿಸಬೇಕಾಗುವ ಸವಾಲುಗಳು ಮತ್ತು ಸಂಕೀರ್ಣತೆಗಳಿಗೆ ಉದಾಹರಣೆಗಳಾಗಿವೆ.
ಜಾಗತಿಕ ಆಯಾಮಗಳು ಬದಲಾಗುತ್ತಿರುವಾಗ, ಪಾರದರ್ಶಕತೆಯನ್ನು ಕಾಯ್ದುಕೊಳ್ಳುತ್ತಾ, ಹೊಸ ಅಪಾಯಗಳಿಗೆ ಹೊಂದಿಕೊಳ್ಳುವ ಮತ್ತು ಪರಿಣಾಮಕಾರಿಯಾಗಿ ನಿಭಾಯಿಸುವ 'ರಾ'ದ ಸಾಮರ್ಥ್ಯ ಅತ್ಯಂತ ಮುಖ್ಯವಾಗುತ್ತದೆ. ಭಾರತದಲ್ಲಿ ಮತ್ತು ವಿದೇಶಗಳಲ್ಲಿ ತುರ್ತು ಭದ್ರತಾ ಸವಾಲುಗಳನ್ನು ಎದುರಿಸಲು ಪರಸ್ಪರ ಸಹಯೋಗ ಅವಶ್ಯಕವಾಗಿದೆ. ಮುಂದಿನ ದಿನಗಳಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುವ ಮತ್ತು ನಾವೀನ್ಯತೆಗಳನ್ನು ಸಾಧಿಸುವ ರಾ ವೈಶಿಷ್ಟ್ಯ ಭಾರತದ ಭದ್ರತಾ ಕಾರ್ಯತಂತ್ರದಲ್ಲಿ ಪ್ರಮುಖ ಪಾತ್ರ ವಹಿಸಲಿದೆ.