ಬದುಕನ್ನೇ ಬದಲಿಸುವ ವಿದ್ಯುತ್ ಸೂರ್ಯ
ಹಿಂದೆ ಒಂದು ಕಾಲವಿತ್ತು. ಪೆಟ್ರೋಲ್, ಡೀಸೆಲ್‌ಗೆ ಪರ್ಯಾಯವೇ ಇಲ್ಲ ಎಂದಾಗಿತ್ತು. ತೈಲ ದೇಶಗಳು ಇಡೀ ಜಗತ್ತನ್ನು ಲೂಟಿ ಮಾಡಿದವು. ಪೆಟ್ರೋಲ್ ಕಾಲ ಮುಕ್ತಾಯಗೊಳ್ಳುವ ಕಾಲಬಂದಿದೆ. ಈಗ ವಿದ್ಯುತ್ ಸೂರ್ಯ ಬಂದಿದ್ದಾನೆ. ಎಲ್ಲ ಕಡೆ ಸೋಲಾರ್ ವಿದ್ಯುತ್ ತಲೆ ಎತ್ತುತ್ತಿದೆ. ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆ ಪ್ರಕಟಿಸಿದೆ. ಇದು ಫೆಬ್ರವರಿ ೧೩ರಿಂದ ಜಾರಿಗೆ ಬಂದಿದೆ. ಕೇಂದ್ರ ಸರ್ಕಾರ ಉದಾರವಾಗಿ ಸಹಾಯಧನವನ್ನು ಪ್ರಕಟಿಸಿದೆ. ಈಗ ರಾಜ್ಯದ ಎಲ್ಲ ಎಸ್ಕಾಂಗಳನ್ನು ಇದರ ನೋಡಲ್ ಸಂಸ್ಥೆಯಾಗಿ ನೇಮಕ ಮಾಡಲಾಗಿದೆ. ಎಲ್ಲ ಎಸ್ಕಾಂಗಳು ಈಗ ತಮ್ಮ ಸಿಬ್ಬಂದಿಗೆ ತರಬೇತಿ ನೀಡುವ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಕೈಗೊಂಡಿದೆ.
ಸೂರಿನ ಮೇಲೊಂದು ಸೋಲಾರ್
ಈಗ ಕೇಂದ್ರ ಸರ್ಕಾರ ೧ ಕೋಟಿ ಮನೆಗಳ ಮೇಲೆ ಸೋಲಾರ್ ಫಲಕ ಅಳವಡಿಸಲು ಯೋಜಿಸಿದೆ. ಇದಕ್ಕಾಗಿ ಸರ್ಕಾರ ಸಹಾಯಧನವನ್ನೂ ಘೋಷಿಸಿದೆ. ಮನೆ ಮೇಲೆ ಮುಕ್ತವಾದ ಬಿಸಲು ಚೆನ್ನಾಗಿ ಬರುವ ಸ್ಥಳ ಇದ್ದರೆ ಸಾಕು. ಸೋಲಾರ್ ಫಲಕ ಬಳಸಿ ವಿದ್ಯುತ್ ಉತ್ಪಾದಿಸಿ ಹೆಚ್ಚುವರಿ ವಿದ್ಯುತ್ ಮಾರಾಟ ಮಾಡಬಹುದು. ಹಿಂದೆ ಇದನ್ನು ವಿತರಣ ಕಂಪನಿಗೇ ನೀಡಬೇಕಿತ್ತು. ಅವರು ಸಕಾಲದಲ್ಲಿ ಹಣ ನೀಡುತ್ತಿರಲಿಲ್ಲ. ಆದರೆ ಈಗ ಕೇಂದ್ರ ಸರ್ಕಾರ ನಿಯಮ ಬದಲಿಸಿದೆ. ಯಾರಿಗೂ ಬೇಕಾದರೂ ಸೋಲಾರ್ ವಿದ್ಯುತ್ ಮಾರಾಟ ಮಾಡಬಹುದು. ೨-೩ ಮನೆಯವರು ಸೇರಿ ಸೋಲಾರ್ ವಿದ್ಯುತ್ ಉತ್ಪಾದಿಸಿ ಬೇರೆಯವರಿಗೆ ನೇರವಾಗಿ ಮಾರಾಟ ಮಾಡಬಹುದು. ಇದನ್ನು ಎಸ್ಕಾಂಗಳು ನಿರ್ಬಂಧಿಸಲು ಬರುವುದಿಲ್ಲ. ಫೆಬ್ರವರಿ ೧೩ಕ್ಕೆ ಮುನ್ನ ಮನೆ ಮೇಲೆ ಸೋಲಾರ್ ಅಳವಡಿಸಿಕೊಳ್ಳುವವರಿಗೆ ಬೇರೆ ಸಹಾಯಧನವಿತ್ತು. ಈಗ ಅದನ್ನು ಬದಲಿಸಲಾಗಿದೆ.
ಸಹಾಯಧನ
೦-೧೫೦ ಯೂನಿಟ್-೧-೨ಕೆವ್ಯಾ.
-೩೦-೬೦ ಸಾವಿರ ರೂ.
೧೫೦-೩೦೦ ಯೂನಿಟ್-೨-೩ಕೆವ್ಯಾ
-೬೦-೭೮ ಸಾವಿರ ರೂ
೩೦೦ ಯೂನಿಟ್ ಮೇಲ್ಪಟ್ಟು
೩ ಕೆವ್ಯಾ ಮೇಲೆ-೭೮ ಸಾವಿರ ರೂ.
ಯಾರನ್ನು ಸಂಪರ್ಕಿಸಬೇಕು
ಕೇಂದ್ರ ಸರ್ಕಾರ ಆಯಾ ರಾಜ್ಯಗಳ ಎಸ್ಕಾಂಗಳಿಗೆ ನೋಡಲ್ ಸಂಸ್ಥೆಯಾಗಿ ನೇಮಿಸಿದೆ. ಕರ್ನಾಟಕದಲ್ಲಿ ಬೆಸ್ಕಾಂ ಸೇರಿದಂತೆ ಎಲ್ಲ ವಿತರಣ ಕಂಪನಿಗಳು ಮನೆ ಮೇಲೆ ಸೋಲಾರ್ ಅಳವಡಿಸಲು ಸಹಕಾರ ನೀಡುತ್ತವೆ. ಬೆಸ್ಕಾಂ ೬೬, ಮಂಗಳೂರು ೧೫, ಹುಬ್ಬಳ್ಳಿ ೨೫ ಗುಲ್ಬರ್ಗ ೭೪ ಮತ್ತು ಮೈಸೂರು ೧೩ ಉದ್ಯಮಿಗಳು ಮತ್ತು ಕಂಪನಿಗಳ ಪಟ್ಟಿಯನ್ನು ಹೊಂದಿವೆ. ಇವರ ಮೂಲಕ ಸೋಲಾರ್ ಫಲಕ ಅಳವಡಿಸಿಕೊಳ್ಳಬಹುದು.
ವಿವರಗಳು ಕೇಂದ್ರ ಮತ್ತು ರಾಜ್ಯ ವಿದ್ಯುತ್ ಕಂಪನಿಗಳ ವೆಬ್‌ಸೈಟ್‌ನಲ್ಲಿ ಲಭ್ಯ. ಆನ್‌ಲೈನ್ ಮೂಲಕ ಅರ್ಜಿಸಲ್ಲಿಸಬೇಕು. ಪ್ರತಿ ಗ್ರಾಹಕ ತನ್ನ ವಿದ್ಯುತ್ ಬಿಲ್, ಆಧಾರ್, ವಿಳಾಸಕ್ಕೆ ದಾಖಲೆ, ಮನೆ ಮೇಲೆ ಮುಕ್ತ ಅವಕಾಶ ಇರುವುದಿಕ್ಕೆ ದಾಖಲೆ ಸಲ್ಲಿಸಬೇಕು. ಮೊಬೈಲ್ ನಂಬರ್ ನೀಡಬೇಕು.
ಬಹುಮಹಡಿ-ಫ್ಲ್ಯಾಟ್
ಬಹುಮಹಡಿ ಕಟ್ಟಡದಲ್ಲಿರುವವರು ವೈಯಕ್ತಿಕವಾಗಿ ಅಥವಾ ಸಾಮೂಹಿಕವಾಗಿ ಸೋಲಾರ್ ಪಡೆಯಬಹುದು. ಇದಕ್ಕೆ ಆಯಾ ನಗರದ ಎಸ್ಕಾಂಗಳು ಸೂಕ್ತ ಸವಲತ್ತು ಕಲ್ಪಿಸಿಕೊಡಬೇಕು. ಇದಕ್ಕೆ ನಿರಾಪೇಕ್ಷಣ ಪತ್ರ ನೀಡಲು ವಿಳಂಬ ಮಾಡುವಂತಿಲ್ಲ. ನಿಗದಿತ ಅವಧಿಯಲ್ಲಿ ನೀಡಲಿಲ್ಲ ಎಂದರೆ ಅರ್ಜಿ ಸ್ವೀಕಾರವಾಗಿದೆ ಎಂದು ಭಾವಿಸಲಾಗುವುದು. ೧೦ ಕೆವಿವರೆಗೆ ತಾಂತ್ರಿಕ ವರದಿ ಬೇಕಿಲ್ಲ. ಎಲೆಕ್ಟ್ರಿಕ್ ವಾಹನ ಹೊಂದಿರುವವರು ಪ್ರತ್ಯೇಕ ವಿದ್ಯುತ್ ಸಂಪರ್ಕ ಪಡೆದುಕೊಳ್ಳಬಹುದು.
ಕರ್ನಾಟಕದ ನೀತಿ
ಸೋಲಾರ್ ವಿದ್ಯುತ್ ಬಳಕೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ೨೦೨೨ರಲ್ಲೇ ರಚಿಸಿತು. ಅದು ೨೦೨೭ವರೆಗೆ ಜಾರಿಯಲ್ಲಿದೆ. ಗ್ರಿಡ್ ಸೇರ್ಪಡೆಗೊಳ್ಳುವ ಅಥವಾ ತಮ್ಮ ಬಳಕೆಗೆ ಸೋಲಾರ್ ಬಳಸುವವರಿಗೆ ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ಎರಡು ರೀತಿಯ ಮೀಟರ್ ಅಳವಡಿಕೆ ಇದೆ. ಸೋಲಾರ್ ವಿದ್ಯುತ್ ನೇರವಾಗಿ ಕಂಪನಿಗೆ ಮಾರಾಟ ಮಾಡಬಹುದು. ಅದಕ್ಕೆ ಪ್ರತ್ಯೇಕ ಮೀಟರ್ ಇದೆ. ಮತ್ತೊಂದು ರೀತಿಯಲ್ಲಿ ನಿಮ್ಮ ಮನೆಗೆ ಎಷ್ಟು ಬೇಕೋ ಅಷ್ಟು ವಿದ್ಯುತ್ ಬಳಸಿ ಉಳಿದ ವಿದ್ಯುತ್ ಕಂಪನಿಗೆ ನೀಡಬಹುದು. ಇದಕ್ಕೆ ಮತ್ತೊಂದು ರೀತಿಯ ಮೀಟರ್ ಅಳವಡಿಸಲಾಗುವುದು. ಕಂಪನಿಗೆ ನೀಡಿದ ವಿದ್ಯುತ್ ದರ ಹಾಗೂ ನೀವು ಬಳಸಿದ ವಿದ್ಯುತ್ ಎರಡನ್ನೂ ಲೆಕ್ಕ ಮಾಡಿ ಕಂಪನಿ ಹಣ ನೀಡಲಿದೆ. ೨೫ ಒಪ್ಪಂದ ಮಾಡಿಕೊಂಡು ವಿದ್ಯುತ್ ಮಾರಾಟ ಮಾಡಬಹುದು. ಕೇಂದ್ರದ ನೀತಿ ಇನ್ನೂ ಉದಾರ ನಿಲುವು ತಳೆದಿದ್ದು ಹೆಚ್ಚುವರಿ ವಿದ್ಯುತ್ತನ್ನು ಬೇರೆಯವರಿಗೆ ಮುಕ್ತವಾಗಿ ಮಾರಾಟ ಮಾಡಬಹುದು. ಸಂಬಂಧಪಟ್ಟ ಕಂಪನಿಗೇ ನೀಡಬೇಕೆಂಬ ನಿಯಮ ಇಲ್ಲ.
ಬಹುಪಯೋಗಿ
ಸೋಲಾರ್ ಬಹುಪಯೋಗಿ. ವಿದ್ಯುತ್ ಪಡೆಯುವುದಲ್ಲದೆ ನೇರವಾಗಿ ನೀರನ್ನು ಕಾಯಿಸಲು ಬಳಸಬಹುದು. ಇದನ್ನು ಮನೆ ಬಳಕೆಗೆ ಅಲ್ಲದೆ ಕೈಗಾರಿಕೆಗಳಿಗೆ ಬಳಸಬಹುದು. ಅತಿ ಹೆಚ್ಚು ವಿದ್ಯುತ್ ಪಡೆಯಲು ಸಾಂದ್ರೀಕೃತ ಸೋಲರ್ ಫಲಕಗಳಿವೆ. ಇದರಲ್ಲಿ ಹೆಚ್ಚುವಿದ್ಯುತ್ ಪಡೆಯಲು ಕನ್ನಡಿಗಳನ್ನು ಅಳವಡಿಸಲಾಗುವುದು. ಅಲ್ಲದೆ ಡೀಸೆಲ್ ಜನರೇಟರ್ ಜತೆ ಸೋಲಾರ್ ವಿದ್ಯುತ್ ಮಿಶ್ರಣ ಮಾಡಿ ಬಳಸಬಹುದು.
ಸೋಲಾರ್ ಪಂಪ್‌ಸೆಟ್
ರೈತರ ಹೊಲಗಳಿಗೆ ವಿದ್ಯುತ್ ಸಂಪರ್ಕ ಅಗತ್ಯ. ಇದಕ್ಕೆ ಪ್ರತ್ಯೇಕ ಸೋಲಾರ್ ವಿದ್ಯುತ್ ನೀಡಿ ನೀರಾವರಿಗೆ ಸಹಾಯ ಮಾಡಬಹುದು. ೧ ಅಶ್ವಶಕ್ತಿಗೆ ೭೦ ಸಾವಿರ ವೆಚ್ಚ ಮಾಡಬೇಕು. ಕೇಂದ್ರ ಸರ್ಕಾರ ಸೌರಫಲಕಗಳಿಗೆ ಸಹಾಯಧನ ನೀಡುತ್ತದೆ. ರಾಜಸ್ತಾನ ಸೇರಿದಂತೆ ಹಲವು ರಾಜ್ಯಗಳಿಗೆ ಹೆಚ್ಚುವರಿ ಸಹಾಯಧನ ನೀಡುತ್ತಿದೆ. ಇದರಿಂದ ಕಡಿಮೆ ವೆಚ್ಚದಲ್ಲಿ ರೈತರಿಗೆ ಸೋಲಾರ್ ಪಂಪ್‌ಸೆಟ್ ಲಭಿಸುವಂತಾಗಿದೆ. ಈ ಪಂಪ್‌ಸೆಟ್ ಡಿಸಿ ಕರೆಂಟ್‌ನಲ್ಲಿ ಓಡುವುದರಿಂದ ಎಸಿ ಕರೆಂಟ್ ಬಳಸಲು ಬರುವುದಿಲ್ಲ.
ಆಸ್ಪತ್ರೆಗೂ ಸೋಲಾರ್
ಎಲ್ಲ ಆಸ್ಪತ್ರೆಗಳಲ್ಲಿ ಸೋಲಾರ್ ವಿದ್ಯುತ್ ಬಳಸಿಕೊಳ್ಳಬಹುದು. ಅಲ್ಲದೆ ಶುದ್ಧ ಬಿಸಿ ನೀರು ಪಡೆದುಕೊಳ್ಳಬಹುದು. ಬಾಷ್ಪೀಕರಿಸಿದ ನೀರು ಇದರಿಂದ ತೆಗೆದುಕೊಳ್ಳಬಹುದು.
ಹಸಿರು ಜಲಜನಕ
ಈಗ ಹೊಸ ತಂತ್ರಜ್ಞಾನ ಬಂದಿದೆ. ಇದರಲ್ಲಿ ನೀರನ್ನು ವಿಭಜಿಸಲು ಸೋಲಾರ್ ವಿದ್ಯುತ್ ಬಳಸಲಾಗುವುದು. ಅದರಿಂದ ನೀರು ವಿಭಜನೆಗೊಂಡು ಜಲಜನಕ ಲಭಿಸುತ್ತದೆ. ಇದನ್ನು ಪೆಟ್ರೋಲ್‌ಗೆ ಪರ್ಯಾಯವಾಗಿ ಬಳಸುವ ತಂತ್ರಜ್ಞಾನ ಬಂದಿದೆ.
ಇದು ಪೆಟ್ರೋಲ್ ಸಮಸ್ಯೆ ನೀಗಿಸುವುದಲ್ಲದೆ ಇಂಗಾಲಾಮ್ಲದ ಸಮಸ್ಯೆ ನಿವಾರಿಸುತ್ತದೆ.
ಯಾರು ಅರ್ಜಿ ಸಲ್ಲಿಸಬಹುದು
ಮನೆ ಮೇಲೆ ಸೂರ್ಯನ ಬೆಳಕು ಪಡೆಯುವವರು ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದು. ಅವರು ಈಗ ಬಳಸುತ್ತಿರುವ ವಿದ್ಯುತ್ ಆಧಾರದ ಮೇಲೆ ಸಹಾಯಧನ ನೀಡಲಾಗುವುದು. ಪ್ರತಿ ಚದರ ಪ್ರದೇಶದಲ್ಲಿ ಎಷ್ಟು ಸೌರಫಲಕ ಅಳವಡಿಸಬಹುದು ಎಂಬುದನ್ನು ಲೆಕ್ಕ ಹಾಕಿ ಸಹಾಯಧನ ನೀಡಲಾಗುವುದು. ಒಂದರಲ್ಲಿ ಸಹಾಯಧನ ಪಡೆದಿದ್ದರೆ ಮತ್ತೊಂದರಲ್ಲಿ ಸಹಾಯಧನ ಪಡೆಯಲು ಬರುವುದಿಲ್ಲ.