For the best experience, open
https://m.samyuktakarnataka.in
on your mobile browser.

ಬದುಕಿರದ ಬುದ್ಧಿಮತ್ತೆಯಿಂದ ಬದುಕಬೇಕೆನ್ನುವ ಹಂಬಲ

03:00 AM Feb 28, 2024 IST | Samyukta Karnataka
ಬದುಕಿರದ ಬುದ್ಧಿಮತ್ತೆಯಿಂದ ಬದುಕಬೇಕೆನ್ನುವ ಹಂಬಲ

ಇತ್ತೀಚೆಗೆ ನಡೆದ ಸ್ವಾಸ್ಥ್ಯ ಮತ್ತು ತಂತ್ರಜ್ಞಾನದ ಕುರಿತ ಹ್ಯಾಕಥಾನ್ ಒಂದರಲ್ಲಿ ವಿದ್ಯಾರ್ಥಿ ತಂಡದವರು ತೋರಿಸಿದ ಕೃತಕ ಬುದ್ಧಿಮತ್ತೆಯಿಂದ ಆತ್ಮಹತ್ಯೆಯನ್ನು ತಡೆಗಟ್ಟಬಹುದು ಎನ್ನುವ ಪ್ರಸ್ತುತಿಯು ನನ್ನನ್ನು ತುಂಬಾ ಯೋಚನೆಗೀಡುಮಾಡಿತು. ಕೃತಕ ಬುದ್ಧಿಮತ್ತೆಯ ಸಮಾಲೋಚನಾ ಸಾಧನದ ಮೂಲಕ ಏಕಾಂಗಿ ರೋಗಿಯ ಭಾವನೆಗಳನ್ನು, ಆಲೋಚನಾ ಲಹರಿಗಳನ್ನು ಅರ್ಥಮಾಡಿಕೊಂಡು, ಅದೇ ಅವನಿಗೆ ಸಮಾಲೋಚನೆ ನಡೆಸಿ ಅವನ ಮನಃಪರಿವರ್ತನೆ ಮಾಡಿ, ಆತ್ಮಹತ್ಯೆ ಮಾಡಿಕೊಳ್ಳಬೇಕೆನ್ನುವ ಆಲೋಚನೆಯಿಂದ ದೂರ ಸರಿಯುವಂತೆ ಮಾಡುವುದು ಅವರ ಪ್ರಸ್ತುತಿಯ ಗುರಿಯಾಗಿತ್ತು.
ಇವೆಲ್ಲ ಕೇಳಲು, ನೋಡಲು ಚೆನ್ನಾಗಿರುತ್ತವೆಯೇ ಹೊರತು ಭಾವನೆಯನ್ನು ಅನುಭವಿಸಲು ಅಲ್ಲ ಅನ್ನುವುದು ಕೆಲವು ವಿಜ್ಞಾನಿಗಳ ವಾದ. ಅದಕ್ಕಾಗಿಯೇ ಅವರು ಕೃತಕ ಬುದ್ಧಿಮತ್ತೆಯನ್ನು ದೂರವಿಡಿ ಎನ್ನುತ್ತಿರುವುದು. ಇನ್ನೂ ಕೆಲವರು ಇಂದಿನ ಡಿಜಿಟಲ್ ಯುಗದಲ್ಲಿ, ಎಲ್ಲವೂ ತಂತ್ರಜ್ಞಾನದ ಮೂಲಕ ಸುಗಮಗೊಳಿಸಿಕೊಳ್ಳಬಹುದು ಎನ್ನುವ ಉತ್ಸುಕತೆಯಲ್ಲಿ ಈ ಬುದ್ಧಿಮತ್ತೆಯ ಸಾಧನಗಳು ಕೆಲವಾರು ಆತ್ಮಹತ್ಯೆಯನ್ನು ತಡೆಯುವಲ್ಲಿ ಸಫಲವಾದರೂ ಅದು ದೊಡ್ಡ ಸಾಧನೆಯೇ ಎನ್ನುತ್ತಾರೆ. ಈ ಎಲ್ಲ ಬೇಕು-ಬೇಡಗಳ ನಡುವೆ ನಮ್ಮ ಅನುಭೂತಿಗೆ ಸಿಕ್ಕ, ಅನುಭವಕ್ಕಾದ ಕೆಲವು ಪ್ರಸಂಗಗಳನ್ನು ಹಂಚಿಕೊಳ್ಳುವ ಒಂದು ಚಿಕ್ಕ ಪ್ರಯತ್ನವಿಲ್ಲಿದೆ.
ತುಂಬಾ ವರ್ಷಗಳ ಕೆಳಗೆ ಅಂಗವೈಕಲ್ಯದ ಹುಡುಗಿಯೊಬ್ಬಳು ನನ್ನೊಡನೆ ಹೀಗೆ ಹೇಳಿಕೊಂಡಿದ್ದಳು. ಸರ್, ಜೀವನದಲ್ಲಿ ಎಲ್ಲ ತರಹದ ಕಷ್ಟಗಳನ್ನು ನೋಡಿದ್ದೇನೆ. ಬಡತನ, ಎರಡು ಹೊತ್ತು ಊಟಕ್ಕೂ ಸಾಕಾಗದ ಅಪ್ಪನ ಸಂಬಳ, ಮದುವೆಯಾಗುತ್ತೇನೆ ಎಂದು ಹೇಳಿ ನನ್ನ ಗೆಳತಿಯನ್ನೇ ಮದುವೆಯಾಗಿ ನನಗೆ ಮೋಸ ಮಾಡಿದವ, ಇವರೆಲ್ಲರ ನಡುವೆ ನನಗೆ ಸಮಾಧಾನ ಕೊಡುತ್ತಿದ್ದುದು ಕಸ ಗುಡಿಸುವಾಗ ಒಂದು ಇರುವೆ ಸಿಕ್ಕರೂ ಅದನ್ನು ಬದುಕಿಸಲು ಹೆಣಗಾಡುವ ಅಮ್ಮ, ಯಾವತ್ತೂ ಒಬ್ಬರಿಗೆ ಕೆಟ್ಟದ್ದು ಬಗೆದವಳಲ್ಲ. ಜೀವನದಲ್ಲಿ ತುಂಬಾ ಹತಾಶೆಯಾದಾಗ, ಸಾಯಬೇಕು ಎಂದು ಅಂದುಕೊಂಡಾಗ ನೆನಪಾಗುತ್ತಿದ್ದುದು ಅಮ್ಮನ ನಿರ್ಲಿಪ್ತ-ಶಾಂತ ಮುಖ. ಅವಳ ಮುಖ ನೆನಪಾದರೆ ನನಗೆ ಆವರಿಸಿದ್ದ ಖಿನ್ನತೆ, ಆತಂಕ ಎಲ್ಲವೂ ದೂರವಾಗುತ್ತಿದ್ದವು.
ಇನ್ನೊಬ್ಬ ಹುಡುಗಿಯದ್ದು ಇನ್ನೊಂದು ಕಥೆ. ಅವಳಿಗಿದ್ದ ಆತಂಕ, ಭಯಗಳ ನಡುವೆಯೇ ಕೋವಿಡ್‌ನಲ್ಲಿ ಅಪ್ಪ ತೀರಿಕೊಂಡಿದ್ದ. ಅಮ್ಮ ಮಾಡುತ್ತಿದ್ದುದು ಮನೆಗೆಲಸ. ಬೆಳಗ್ಗೆ ನಾಲ್ಕಕ್ಕೆ ಏಳುವ ಅವಳು ಮೊದಲ ಒಂದು ಗಂಟೆ ಓದಿ, ನಂತರ ಮಕ್ಕಳಿಗೆ ಟ್ಯೂಷನ್ ಹೇಳಿಕೊಡುತ್ತಿದ್ದಳು. ಆಮೇಲೆ ಕಾಲೇಜು, ಸಂಜೆ ಡೆಲಿವರಿ ಗರ್ಲ್ ಆಗುತ್ತಿದ್ದಳು. ಅವಳ ಜೀವನೋತ್ಸಾಹಕ್ಕೆ ನಾನೇ ಅವಳಿಗೆ ಕೈ ಮುಗಿದಿದ್ದೆ!
ಹುಟ್ಟಿ ಹನ್ನೆರಡನೇ ದಿನಕ್ಕೆ ತಾಯಿಯನ್ನು ಕಳೆದುಕೊಂಡು, ಪೌಷ್ಟಿಕಾಂಶಗಳ ಕೊರತೆಯಿಂದ, ಇರುವ ಎರಡು ಕಣ್ಣನ್ನೂ ಕಳೆದುಕೊಂಡು, ತಂದೆಯಿಂದ ಅಪಶಕುನದ ಮಗು ಎಂದು ಕರೆಸಿಕೊಂಡು ಅಜ್ಜಿಯ ಮನೆಯಲ್ಲಿ ಬೆಳೆದು, ಮುಂದೆ ಮೈಸೂರಿನಲ್ಲಿ ಓದಿ, ರಾಷ್ಟ್ರಮಟ್ಟದ ಅಥ್ಲೆಟ್ ಆಗಿ, ಸ್ವಾಧ್ಯಾಯ ಮಾಡಿ, ಪ್ರೌಢಶಾಲೆಗೆ ಮುಖ್ಯ ಶಿಕ್ಷಕನಾಗಿ ಅತ್ಯುತ್ತಮ ಶಿಕ್ಷಕ ಎಂದು ರಾಜ್ಯ ಪ್ರಶಸ್ತಿ ಪಡೆದ ನನ್ನ ಭಾವ.
ಒಬ್ಬಬ್ಬರದ್ದು ಒಂದೊಂದು ಕಥೆ. ಯಾರ ಸಮಸ್ಯೆಯೂ ಸಣ್ಣದಲ್ಲ, ಅವರವರ ದೃಷ್ಟಿಯಲ್ಲಿ. ಈ ಮೇಲ್ಕಂಡ ವ್ಯಕ್ತಿಗಳಿಗೆ ನಾನೇನೂ ವಿಶೇಷವಾಗಿ ಸಮಾಲೋಚನೆಯಲ್ಲಿ ಹೇಳಿಲ್ಲ, ಅವರದನ್ನು ಕೇಳಿಯೂ ಇರಲಿಲ್ಲ. ಇಲ್ಲೆಲ್ಲಾ ಮಾತಿಗಿಂತ ಮೌನದ ಸ್ವೀಕಾರಕ್ಕೆ ತೂಕ ಜಾಸ್ತಿ, ಅಲ್ಲಿ ಎಲ್ಲ ಪದಗಳೂ ತೃಣವಾಗಿ ಬಿಡುತ್ತವೆ. ಸಂಜೆ ಡೆಲಿವರಿ ಹುಡುಗಿಯಾಗುವವಳಿಗೆ ನನ್ನ ನಮಸ್ಕಾರವೇ ಸಾವಿರ ಪದಗಳಿಂದ ಹೇಳಬಹುದಾದ್ದನ್ನು ಹೇಳಿತು. ಮತ್ತೊಬ್ಬಳ ಕತೆಯಲ್ಲಿ ಕೇವಲ ನಾನು ನಾಲ್ಕು ಹೆಜ್ಜೆ ಹಾಕಿ ನಡೆದಿದ್ದೆ ಅಷ್ಟೇ. ಇವೆಲ್ಲದರಲ್ಲಿ ನನಗೆ ಕಂಡುಬರುತ್ತಿದ್ದುದು ಅವರ ನೋವುಂಡ ಮನಸ್ಸಿಗೆ ಶ್ರದ್ಧೆಯಿಂದ ನಮ್ಮ ಸಹಾನುಭೂತಿಯನ್ನು ತೋರಿಸುವುದರಲ್ಲಿ ಅಂದುಕೊಳ್ಳುತ್ತೇನೆ. ಈ ಸಹಾನುಭೂತಿಯನ್ನು ಬದುಕಿರದ ಕೃತಕ ಬುದ್ಧಿಮತ್ತೆಯಿಂದ ಪಡೆಯುವುದು ಸಾಧ್ಯವಾ ಎನ್ನುವುದು ನನ್ನ ಗ್ರಹಿಕೆಗೆ ಸಿಗದದ್ದು.
ಹಾಗೆ ಯೋಚಿಸುತ್ತಿರುವಾಗ ಪ್ರಾಣಿಗಳು, ಗಿಡ-ಮರಗಳು ಸಹ ನಮ್ಮ ಭಾವನೆಯನ್ನು ಅರಿಯುತ್ತವೆ ಎಂಬುದು ಕೂಡ ಮನೋವಿಜ್ಞಾನದಲ್ಲಿ ಸಾಬೀತಾದ ಕಲ್ಪನೆಗಳೇ. ಎಲ್ಲೆಲ್ಲಿ ಬದುಕಿರುತ್ತದೋ ಅಲ್ಲಲ್ಲಿ ಜೀವನಾನುಭವ ಪಡೆಯಬಹುದು, ನಮ್ಮ ಬದುಕನ್ನು ಹಸನುಗೊಳಿಸಿಕೊಳ್ಳಬಹುದು.
ಹಾಗಿದ್ದರೆ ನಮ್ಮ ಕಾಲ್ಕೆಳಗಿನ ಭೂಮಿ? ಅದನ್ನು ನಾವು ಭೂ ಪೂರ್ಣಿಮೆಯಂದು ಘಾಸಿ ಮಾಡುವುದಿಲ್ಲವಲ್ಲ? ಹರಿವ ನೀರನ್ನು ಅಮ್ಮ ಎಂದು ಕರೆದು ಬಗ್ಗಿ ನಮಸ್ಕರಿಸುವಾಗ ಇರುವ ಭಾವದ ಹಿಂದಿರುವುದು ಏನು? ಪರಂಪರಾಗತವಾಗಿ ಬಂದ ಶ್ರದ್ಧೆ, ನಂಬಿಕೆ ಅಥವಾ ಗೌರವದ ಭಾವನೆ? ಅಂದರೆ ಮುಂದೊಂದು ದಿನ ಮಾನವರು ಕೃತಕ ಬುದ್ಧಿಮತ್ತೆಯನ್ನೇ ಶ್ರದ್ಧೆ, ನಂಬಿಕೆ ಅಥವಾ ಗೌರವದಿಂದ ಕಂಡು ಅದರ ಸಲಹೆಗೆ, ಸಹಾನುಭೂತಿಗೆ ಬೆಲೆ ಕೊಡುತ್ತಾರ? ಬಹುಶಃ ಆ ದಿನಗಳು ಬರಬಹುದು, ಬದುಕೇ ಇರದ ಬುದ್ಧಿಮತ್ತೆಯಿಂದ ನಮಗೆ ಸಾಯಬೇಕೆನ್ನುವ ಮನಸ್ಸು ತೊಲಗಿ, ಬದುಕಬೇಕು, ಬದುಕಿ ಬಾಳಬೇಕು ಎನ್ನುವ ಹಂಬಲ ಬರಲೂಬಹುದು. ಅಂದರೆ ಮುಂದೊಂದು ದಿನ, ನಾವು ತೋರಿಸುವ ನಿಷ್ಕಲ್ಮಶ ಪ್ರೀತಿ, ಕರುಣೆ, ವಾತ್ಸಲ್ಯಗಳನ್ನೂ ಬದುಕೇ ಇರದ ಕೃತಕ ಬುದ್ಧಿಮತ್ತೆಯು ಕೊಡುತ್ತದೆಯಾ? ಸಾಧ್ಯವಾಗಬಹುದು, ಮುಂದಿನ ಜನಾಂಗದವರು ಅದರ ಅನುಭೂತಿಯನ್ನೂ ಪಡೆಯಬಹುದು.
ಇದೆಲ್ಲದರ ನಡುವೆ ನಾವು ನಮ್ಮನ್ನೇ ಕೇಳಿಕೊಳ್ಳಬೇಕಾದ ಪ್ರಶ್ನೆಯೊಂದಿದೆ. ನಮ್ಮ ನಡುವೆಯಿರುವ ನೊಂದ ಮನಸ್ಸುಗಳಿಗೆ, ಅಸಹಾಯಕ ಜನರಿಗೆ ನಾವೇ ಸಾಂತ್ವನ ನೀಡುವಂತಾದರೆ? ಎಲ್ಲವನ್ನೂ ಕೇವಲ ಲಾಭ-ನಷ್ಟದ ಲೆಕ್ಕಾಚಾರದ ಬದಲು, ನಾವಿರುವಷ್ಟು ದಿನ, ನಮ್ಮ ನೆರೆಹೊರೆಯವರಿಗೆ, ನಮ್ಮ ಬಾಂಧವರಿಗೆ ಅಥವಾ ಅಸಹಾಯಕರಿಗೆ, ನಾವೇ ಸಹಾಯ ಮಾಡಲಿಕ್ಕಾಗುವುದಿಲ್ಲವಾ? ತಮ್ಮ ಮೇಲೆಯೇ ಒಂದಿಷ್ಟು ವಿಶ್ವಾಸ, ನಂಬಿಕೆ ಬರುವಂತೆ, ಅವರಲ್ಲಿ ಭರವಸೆಯ ತುಂಬಿ ಅವರ ಜೀವನೋತ್ಸಾಹವನ್ನು ಹೆಚ್ಚು ಮಾಡಲು ನಾಗರಿಕ, ವಿದ್ಯಾವಂತ ಸಮಾಜ, ಸಮುದಾಯಕ್ಕೆ ಆಗುವುದಿಲ್ಲವೆಂತಾದರೆ ನಮ್ಮನ್ನು ನಾಗರಿಕ ಸಮಾಜದವರೆಂದುಕೊಳ್ಳಲು ಸಾಧ್ಯವಾಗುತ್ತದೆಯೇ? ನೊಂದವರಿಗೆ ಸಹಾಯ ಮಾಡಿದಾಗ ಸಿಗುವ ಸಂತೋಷ, ತೃಪ್ತ ಮತ್ತು ಧನ್ಯತಾ ಭಾವ ಬೇರೆ ಯಾವ ಕಾರ್ಯ, ಸಾಧನೆಯಲ್ಲೂ ಸಿಗುವುದಿಲ್ಲ ಎನ್ನುವುದು ಮನೋವಿಜ್ಞಾನಿಗಳ ಅಂಬೋಣ. ನಮ್ಮ ಸನಾತನ ಪರಂಪರೆಯೂ ಅದನ್ನೇ ಹೇಳುತ್ತಾ ಬಂದಿದೆಯಲ್ಲವೇ? ಹಾಗಿದ್ದರೆ, ಕೃತಕ ಬುದ್ಧಿಮತ್ತೆಯಿಂದ ನಮ್ಮ ಬದುಕಿಗೆ ಸಾಂತ್ವನ ಬಯಸುವ ಬದಲು ನಮ್ಮನ್ನು ನಮ್ಮೊಡನೆಯಿರುವ ನೊಂದವರಿಗೆ ನಾವು ಅವರೊಡನೆಯಿದ್ದೇವೆ ಎನ್ನುವ ಭಾವವ ಬರಿಸುವ ಪ್ರಯತ್ನ ಮಾಡೋಣ.