ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಬದುಕಿ, ಬದುಕಿಸುವ ಸಂದೇಶ ಸಾರಿದ ಆರೋಗ್ಯ ಹಬ್ಬ

12:11 AM Aug 29, 2024 IST | Samyukta Karnataka

ಆರಾಮಾ… ಆರೋಗ್ಯವಾ… ಹೇಗಿದ್ದೀರಿ…? ಯಾರೇ ಪರಿಚಿತರು-ಅಪರಿಚಿತರು ಎದುರು ಬದುರಾದರೂ ಮಾತು ಆರಂಭಿಸುವುದೇ ಈ ಪ್ರಶ್ನೆಗಳಿಂದ. ಆ ನಂತರವೇ ಉಳಿದ ಸಂಭಾಷಣೆ, ಮಾತುಕತೆ, ಕುಶಲೋಪರಿ ಅಲ್ಲವೇ?
ಆರೋಗ್ಯವನ್ನು ಸಂಭ್ರಮಿಸುವುದು, ಆರೋಗ್ಯದ ಕುರಿತು ಕಾಳಜಿ ವಹಿಸುವುದು, ಜಾಗೃತಿ ಮೂಡಿಸುವುದು, ಅನಾರೋಗ್ಯ ಸಮಸ್ಯೆ ಇದ್ದವರಿಗೆ ಮಾತನಾಡಿಸಿ ಅದಕ್ಕೊಂದು ಪರಿಹಾರ ಸೂಚಿಸುವುದು… ಒಟ್ಟಾರೆ ಆರೋಗ್ಯಪರ ಚಿಂತನೆ ನಡೆಸುವುದು.. ಇದಕ್ಕಾಗಿಯೇ ಸಂಯುಕ್ತ ಕರ್ನಾಟಕ' ಒಂದು ವಿಶಿಷ್ಟವಾದ ಆರೋಗ್ಯ ಹಬ್ಬವನ್ನು ಹುಬ್ಬಳ್ಳಿಯಲ್ಲಿ ಮೂರು ದಿನಗಳ ಕಾಲ ಆಯೋಜಿಸಿತ್ತು. ಇಲ್ಲಿ ಬಡವ ಬಲ್ಲಿದ ಎಂಬ ಬೇಧ ಇರಲಿಲ್ಲ. ಆರೋಗ್ಯವಂತರು, ಅನಾರೋಗ್ಯ ಇದ್ದವರ ನಡುವಿನ ನೋವು ಸುಖ-ದುಃಖಗಳ ವಿನಿಮಯವಿತ್ತು. ಆರೋಗ್ಯ ದಾಸೋಹ ಇತ್ತು. ತನ್ನ ದೇಹಕ್ಕೆ ಏನು ಅಗತ್ಯ, ಯಾವುದು ಅನಗತ್ಯ, ಏನು ವ್ಯತ್ಯಾಸವಾಗಿದೆ, ಏನು ಲಾಭವಾಗಿದೆ ಎನ್ನುವ ಚಿಂತನೆ ಇತ್ತು. ವಿನಿಮಯ, ಮಾತು ಬರೀ ಆರೋಗ್ಯ ಸದೃಢತೆ, ಆಗಬೇಕಾದ ಅಗತ್ಯ ವ್ಯವಸ್ಥೆ ಇತ್ಯಾದಿಗಳ ಬಗ್ಗೆ ಇತ್ತು. ರಾಜ್ಯದ ಆರೋಗ್ಯ ಮಂತ್ರಿ ದಿನೇಶ್ ಗುಂಡೂರಾವ್ ದಿನವಿಡೀ ಎಲ್ಲರೊಟ್ಟಿಗೆ ಕುಳಿತು ಸರ್ಕಾರದ ಯೋಜನೆಗಳು, ಆರೋಗ್ಯ ಪರಿಕಲ್ಪನೆಗಳು, ಆಗಬೇಕಾದ ಕಾರ್ಯಗಳು, ಗೊತ್ತು ಗುರಿ ಎಲ್ಲವನ್ನೂ ಬಿಚ್ಚಿಟ್ಟರು. ವ್ಯವಸ್ಥೆಯಲ್ಲಿನ ದೋಷವನ್ನು ಮುಕ್ತವಾಗಿ ಆಲಿಸಿದರು. ಹಲವಷ್ಟು ಸಮಸ್ಯೆಗಳಿಗೆ ವೇದಿಕೆಯಲ್ಲಿ ಪರಿಹಾರ ನೀಡಿದರು. ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ತೊಡಗಿದ ಸಾಧಕರ ಬೆನ್ನು ತಟ್ಟಿದರು. ಕೇಂದ್ರದ ಸಚಿವ ಪ್ರಲ್ಹಾದ ಜೋಶಿ ದೇಶದ ಜನರ ಆರೋಗ್ಯ ಸಂರಕ್ಷಣೆಯ ಜವಾಬ್ದಾರಿ, ಕೈಗೊಂಡ ಯೋಜನೆ, ಅನುದಾನದ ಹೆಚ್ಚಳ, ರಾಜ್ಯ-ಕೇಂದ್ರ ಸರ್ಕಾರಗಳಆರೋಗ್ಯ'ಕರ ಸಂಬಂಧವನ್ನು ವಿವರಿಸಿ ಅಭಯ ಹಸ್ತವನ್ನೇ ನೀಡಿದರು. ಕೇಂದ್ರದ ಸಂಸದರಿಂದ ರಾಜ್ಯದ ಪ್ರತಿಪಕ್ಷದ ನಾಯಕರವರೆಗೆ, ಶಾಸಕರು, ಜನಪ್ರತಿನಿಧಿಗಳು ಸೇರಿದಂತೆ ಭಾಗವಹಿಸಿದ್ದ ಎಲ್ಲರೂ, ನಾಡಿನ ಜನರ ಯೋಗಕ್ಷೇಮದ ಜೊತೆಜೊತೆಗೆ ಎಲ್ಲ ವೈದ್ಯಕೀಯ ಪದ್ಧತಿಗಳ ವಿಶ್ಲೇಷಣೆ ನಡೆಸಿದರು.
ಆರೋಗ್ಯ ಹಬ್ಬ… ಇದೇ ವಿಶೇಷ. ಆರೋಗ್ಯವಂತ ಜನರನ್ನು ಗುರುತಿಸಿ ಅವರಿಂದ ಜೀವನ ಶೈಲಿ ಅರಿಯುವ, ಹಾಗೇ ಆರೋಗ್ಯ ಸಮಸ್ಯೆಯುಳ್ಳವರಿಗೆ ಪರಿಹಾರದ ಮಾರ್ಗ ತೋರಿಸುವ ವಿಶಿಷ್ಟ ಕಲ್ಪನೆ.
ರೋಗಕ್ಕೂ ನೋವಿಗೂ ನಮ್ಮ ದೇಹವನ್ನು ಅನುಭವಿಸುವ ಅವಕಾಶ ಹಕ್ಕು ಇದೆ ಎಂದು ಡಾ.ರಾಜಕುಮಾರ್ ಕಾಡುಗಳ್ಳ ವೀರಪ್ಪನ್‌ನಿಂದ ಬಿಡುಗಡೆಯಾದ ನಂತರ ಹೇಳಿದ್ದರು. ಮಂಡಿ ನೋವಿನಿಂದ ಬಳಲುತ್ತಿದ್ದ ರಾಜಕುಮಾರ್ ಎಣ್ಣೆ ಉಜ್ಜಿಕೊಳ್ಳುತ್ತಲೇ, ಈ ಮಂಡಿ ಇದೆಯಲ್ಲ, ನಾನು ಅರವತ್ತೈದು ವರ್ಷ ಬಳಸಿದ್ದೇನೆ, ಸಾಕಷ್ಟು ತೊಂದರೆ ಕೊಟ್ಟಿದ್ದೇನೆ... ಈಗ ಇದಕ್ಕೂ ನನ್ನ ದೇಹವನ್ನು ಅನುಭವಿಸುವ ಕಾಲ ಬಂದಿದೆ. ಇರಲಿ ಬಿಡಿ.. ಹೊಂದಿಕೊಳ್ಳೋಣ' ಎಂದಿದ್ದರು. ಹಾಗೇ. ನೋವನ್ನು ಸಕಾರಾತ್ಮಕವಾಗಿ ಸಂಭ್ರಮಿಸುವ, ಶಮನಗೊಳಿಸಿ, ದೇಹದಿಂದ ಕಳುಹಿಸುವ ಸಂಭ್ರಮದ ವ್ಯವಸ್ಥೆಯೇ ಆರೋಗ್ಯ ಹಬ್ಬ. ರಾಜ್ಯದ ಎಲ್ಲೆಡೆಯಿಂದ ಬಂದ ಜನ ತಮಗಿರುವ ಸಮಸ್ಯೆಗಳ ಬಗ್ಗೆ ಪರಿಣಿತರೊಂದಿಗೆ ಸಮಾಲೋಚಿಸಿದರು. ಹಾಗೇ, ಆರೋಗ್ಯ ಗೆದ್ದವರ ಅನುಭವ ಪಡೆದು ತಮ್ಮ ಜೀವನ ಶೈಲಿಗೊಂದು ಅನುಭವದ ಪಾಠ ಪಡೆದರು. ರಾಜ್ಯದ ಆರೋಗ್ಯ ಸಚಿವರು,ರೋಗ ಹೇಗೂ ಬರುತ್ತದೆ. ಆದರೆ ಉಪಶಮನ ಮತ್ತು ಚಿಕಿತ್ಸೆಗೆ ವ್ಯವಸ್ಥೆ ಮಾಡಲೇಬೇಕು. ಕೇರಳದ ನಂತರದ ಸ್ಥಾನದಲ್ಲಿ ನಾವಿದ್ದೇವೆ. ಆರೋಗ್ಯ ಜಾಗೃತಿ ಮತ್ತು ಜೀವನ ಶೈಲಿಯ ಬದಲಾವಣೆಯೇ ಪ್ರಮುಖವಾಗಬೇಕು. ದೇಹದ ಶೋಷಣೆಗೆ ಅವಕಾಶ ನೀಡಬಾರದು. ಆರೋಗ್ಯ ಚಿಕಿತ್ಸೆ ಎನ್ನುವುದನ್ನು ದುಬಾರಿಯಾಗಿಸಿರುವ ವ್ಯವಸ್ಥೆಗೆ ಶಸ್ತ್ರಚಿಕಿತ್ಸೆ ನಡೆಸುವ ಕಾಲ ಬಂದಿದೆ. ಏಕೆಂದರೆ ವೈದ್ಯಕೀಯ ಲಾಬಿ ಮತ್ತು ಲಕ್ಷಾಂತರ ಕೋಟಿ ರೂಪಾಯಿ ವ್ಯವಹಾರದಲ್ಲಿ ಸೇವೆ ಬದಲು ಉದ್ಯಮ ಸೇರಿಕೊಂಡಿರುವುದರಿಂದ ಬಡ ಜನರ ನೆರವಿಗೆ ಸರ್ಕಾರವೇ ಯೋಗ್ಯ ಕ್ರಮ ತೆಗೆದುಕೊಳ್ಳಬೇಕಿದೆ. ಇದರಲ್ಲಿ ಮಾನವೀಯತೆ ಮತ್ತು ಸೇವೆಗೆ ಪ್ರಧಾನ ಪಾತ್ರ' ಎನ್ನುವ ಮಾರ್ಮಿಕ ಮಾತು ಬಹುಶಃ ವೈದ್ಯಕೀಯ ಲೋಕಕ್ಕೊಂದು ಘನ ಸಂದೇಶ ಎನ್ನಬಹುದೇನೋ?
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವೈದ್ಯಕೀಯ ವ್ಯವಸ್ಥೆಯ, ಕಾರ್ಪೋರೇಟ್ ವಲಯದ ಮತ್ತು ಔಷಧ ಉದ್ಯಮದ ಭಯಂಕರ ಲಾಬಿ' ಬಗ್ಗೆ ಆತಂಕ ವ್ಯಕ್ತಪಡಿಸಿದಾಗ ಇಡೀ ಸಭೆ ಹೌದೆಂದಿತು. ಇನ್ನೋರ್ವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್,ವೈದ್ಯ ಕ್ಷೇತ್ರದಲ್ಲಿ ಲಾಬಿಗಳು ಎಂದಿಗೂ ತಲೆ ಎತ್ತಕೂಡದು; ಎತ್ತದಂತೆ ನೋಡಿಕೊಳ್ಳುವ ಜವಾಬ್ದಾರಿ ವೈದ್ಯ ಸಮುದಾಯದ ಮೇಲೆ ಹೆಚ್ಚಿದೆ' ಎಂದದ್ದು ತುಂಬ ಅರ್ಥಪೂರ್ಣವಾಗಿತ್ತು.
ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ, ವೈದ್ಯಕೀಯ ಸೇವೆ ಗ್ರಾಮೀಣ ಮಟ್ಟದಲ್ಲಿ ಸಮರ್ಪಕವಾಗಿ ದೊರೆಯುವಂತಾಗಲು, ಮೆಡಿಕಲ್ ಡಿಪ್ಲೋಮಾ ಕೋರ್ಸ್ ಅಸ್ತಿತ್ವಕ್ಕೆ ಬರಬೇಕು; ವೈದ್ಯರ ಕೊರತೆ ನೀಗುವುದಕ್ಕೆ ಇದೊಂದೇ ಪರಿಹಾರ' ಎಂಬ ಸಲಹೆ ಕಣ್ಣು ತೆರೆಸುವಂತಿತ್ತು. ಎಂಬಿಬಿಎಸ್ ಮತ್ತು ನಂತರದ ಸ್ನಾತಕ ಪದವಿ ಪಡೆದ ವೈದ್ಯರು ಗ್ರಾಮೀಣ ಸೇವೆ ಹಿಂದೇಟು ಹಾಕುತ್ತಿರುವ ದಿನಗಳಲ್ಲಿ ಇದೊಂದೇ ಪರಿಹಾರ ಎಂಬುದು ಈಗ ವ್ಯಾಪಕವಾಗಿ ಅನಿಸಲಾರಂಭಿಸಿದೆ. ಬೆಲ್ಲದ ಆಡಿದ ಮಾತು ಈ ಕಾರಣಕ್ಕೆ ಪ್ರಾಮುಖ್ಯ ಪಡೆದುಕೊಂಡಿತ್ತು. ಭಾರತೀಯ ವೈದ್ಯಕೀಯ ಪರಿಷತ್ತು (ಎಂಸಿಐ) ಮೆಡಿಕಲ್ ಡಿಪ್ಲೋಮಾ ಕೋರ್ಸ್ ಆರಂಭಿಸಲು ಇನ್ನಾದರೂ ಹಸಿರು ನಿಶಾನೆ ತೋರಿಸಬೇಕಾಗಿದೆ. ತಜ್ಞರ ಮಾತುಗಳು ಆರೋಗ್ಯ ಹಬ್ಬದ ಒಬ್ಬಟ್ಟಿನಂತಿದ್ದವು! ಇಂದಿನ ದಿನಗಳ ಕ್ಲಿಷ್ಟ ಆರೋಗ್ಯ ಸಮಸ್ಯೆಗಳಾಗಿರುವ ಮೂತ್ರಪಿಂಡ ವೈಫಲ್ಯ, ಹೃದ್ರೋಗ, ವಿವಿಧ ಸಾಂಕ್ರಾಮಿಕ ರೋಗಗಳನ್ನು ಹೇಗೆ ಎದುರಿಸಬೇಕು ಎನ್ನುವುದನ್ನು ತಜ್ಞ ವೈದ್ಯರು ಜನಕ್ಕೆ ತಿಳಿಯುವಂತೆ ವಿವರಿಸಿ, ಅರಿವು ಮೂಡಿಸಿದ್ದು ಹಬ್ಬದ ಬಹುದೊಡ್ಡ ಆಯಾಮ. ಏಕೆಂದರೆ ಬೇರೆ ದಿನಗಳಲ್ಲಿ ತಜ್ಞರ ಆರೋಗ್ಯ ಮಾತುಗಳನ್ನು ಇಷ್ಟು ಸುಲಭವಾಗಿ ಕೇಳುವ ಅವಕಾಶ ದೊರೆಯುವುದಿಲ್ಲ. ಇದೇ ರೀತಿ ಜೀವನ ಶೈಲಿಯ ರೋಗಗಳ ಕುರಿತು ಅಲೋಪತಿ ಮತ್ತು ನಿಸರ್ಗ ಚಿಕಿತ್ಸಾ ತಜ್ಞರು ಬೆಳಕು ಚೆಲ್ಲಿದ್ದು, ಒಬ್ಬಟ್ಟಿಗೆ ತುಪ್ಪದ ಘಮವನ್ನು ತಂದಿತ್ತು ಎಂದರೆ ಅತಿಶಯೋಕ್ತಿಯಾಗದು. ಮಂಡಿನೋವು, ಎಲುಬು ಸಾಂದ್ರತೆ, ಮಧುಮೇಹ, ಒತ್ತಡ ನಿರ್ವಹಣೆ, ಬೊಜ್ಜು, ಏರು ರಕ್ತದೊತ್ತಡ, ಆಹಾರ ಪದ್ಧತಿ ಸರಿಯಾಗಿ ಪಾಲಿಸದೇ ಎದುರಾಗುತ್ತಿರುವ ಸಮಸ್ಯೆಗಳು ಇವೇ ಮುಂತಾದ ಜೀವನ ಶೈಲಿಯ ರೋಗಗಳ ಕುರಿತು ಇವರೆಲ್ಲ ತಿಳಿವಳಿಕೆ ನೀಡಿದ್ದು ಮರೆಯದಂತಿತ್ತು. ಆರೋಗ್ಯ ಹಬ್ಬದಲ್ಲಿ ಏನಿರಲಿಲ್ಲ? ಆಯುರ್ವೇದ, ಯುನಾನಿ, ಅಲೋಪತಿ, ತಜ್ಞರು ಎಲ್ಲರೂ ಇದ್ದರು. ಜನ ತಮಗೆ ಬೇಕಾದವರೊಂದಿಗೆ ಸಮಾಲೋಚಿಸಿದರು. ಚಿಕಿತ್ಸೆಯನ್ನೂ ಪಡೆದರು. ಎಲ್ಲವೂ ಉಚಿತ. ದೇಶ-ರಾಜ್ಯದ ಪ್ರಖ್ಯಾತ ವೈದ್ಯರುಗಳು ಹೊಸ ಆವಿಷ್ಕಾರದ ಪರಿಕಲ್ಪನೆ ನೀಡಿದರು. ಜೀವನ ಪದ್ಧತಿಯ ಬಗ್ಗೆ, ತೆಗೆದುಕೊಳ್ಳಬೇಕಾದ ಆಹಾರ ಹಾಗೂ ಪ್ರವಾಸದ ವೇಳೆಯ ಊಟೋಪಚಾರದ ಬಗ್ಗೆಯೂ ಕಲ್ಪನೆ ನೀಡಿದ್ದು ವಿಶೇಷ. ಇಡೀ ದೇಹದಲ್ಲಿ ಎಲ್ಲಿಯೇ ಅಡಗಿ ಕುಳಿತಿರಲಿ, ಕ್ಯಾನ್ಸರ್ ಅಂಶ, ಅದನ್ನು ಪತ್ತೆ ಹಚ್ಚುವ ಯಂತ್ರೋಪಕರಣವಿತ್ತು. ಕಲ್ಮಶರಹಿತ ಸಿರಿ ಧಾನ್ಯವಿತ್ತು. ಪಂಚಾಮೃತದಿಂದ ಪಂಚಗವ್ಯದವರೆಗೆ, ಮನೆ ಮದ್ದಿನಿಂದ ತಕ್ಷಣ ಶಮನಗೊಳಿಸುವ ಟ್ಯಾಬ್ಲೆಟ್‌ಗಳವರೆಗೆ, ದೈಹಿಕ ಚಿಕಿತ್ಸೆಯಿಂದ ಬುದ್ಧಿ ಚಿಕಿತ್ಸೆಯವರೆಗೆ ಎಲ್ಲವೂ ಮೂರು ದಿನಗಳ ಕಾಲ ಲಭ್ಯವಿದ್ದವು. ಜನಸಾಮಾನ್ಯರಿಗೆ ಬಿಡಿ. ಲಕ್ಷಾಂತರ ತೆತ್ತರೂ ತಕ್ಷಣ ಪ್ರವೇಶ ದೊರೆಯದ ಬೃಹತ್ ಆಸ್ಪತ್ರೆಗಳು ಹಬ್ಬದಲ್ಲಿ ಪಾಲ್ಗೊಂಡು ತಮ್ಮ ಸಾಧನೆ ಬಿಚ್ಚಿಟ್ಟವು. ಹಾಗಾಗಿಯೇಸಂಯುಕ್ತ ಕರ್ನಾಟಕ' ಆರೋಗ್ಯ ಕ್ಷೇತ್ರಕ್ಕೆ ಈ ಹಬ್ಬದ ಮೂಲಕ ಹೊಸ ಆಯಾಮವನ್ನೇ ನೀಡಿದಂತಾಯಿತು.
ಸರ್ಕಾರ, ಬೃಹತ್ ಸಂಘಟನಾ ಸಂಸ್ಥೆಗಳು ಮಾಡಬೇಕಾದ ಕಾರ್ಯವನ್ನು ಮಾಧ್ಯಮ ಸಂಸ್ಥೆ ನಿರ್ವಹಿಸಿದೆ. ಇದಕ್ಕೆ ಕೈಜೋಡಿಸಿ, ಪರಿಕಲ್ಪನೆ ನೀಡಿದ್ದು `ಲೋಕ ಶಿಕ್ಷಣ ಟ್ರಸ್ಟ್' ಧರ್ಮದರ್ಶಿಗಳು ಮತ್ತು ಕೆಲ ಆಸಕ್ತ ಸಂಘ ಸಂಸ್ಥೆಗಳು. ಹಬ್ಬಕ್ಕೆ ಮೆರಗು ಬಂದದ್ದು ಅತ್ಯುತ್ತಮ ಸಂಯೋಜನೆ, ಸಂಘಟನೆ ಮತ್ತು ಕಾಳಜಿಯಿಂದ. ಇದು ಕೇವಲ ಶಿಬಿರವಾಗಿರದೇ ಹಬ್ಬದ ಖುಷಿಯಾಗಿ ಅರಳಿದ ಕಲ್ಪನೆಯಾಗಿತ್ತು.
ರಾಜ್ಯದ ಜನರ ಆರೋಗ್ಯ ಸಂರಕ್ಷಣೆಗೆ ಆಗಬೇಕಾದದ್ದು ಸಾಕಷ್ಟಿದೆ. ಪ್ರಥಮವಾಗಿ ಅನಾರೋಗ್ಯಪೀಡಿತರ ಶೋಷಣೆ ತಪ್ಪಬೇಕಿದೆ. ಜನರನ್ನು ರಕ್ತ ಹಿಂಡುವ ವ್ಯವಸ್ಥೆಗೆ ವಿದಾಯ ಹೇಳಬೇಕಿದೆ. ಜನರ ಅನಾರೋಗ್ಯ ಬಂಡವಾಳವಾಗಬಾರದು. ಹೂಡಿಕೆಯೂ ಆಗಕೂಡದು. ಅದು ಬದುಕಿಸುವ, ಬದುಕುವ ಪಾಠವಾಗಬೇಕು ಎನ್ನುವ ಉದ್ದೇಶವೇ ಆರೋಗ್ಯ ಹಬ್ಬ. ಇದು ಪತ್ರಿಕೆಯ ಆರೋಗ್ಯ ಹಬ್ಬ ನೀಡಿದ ಮೇರು ಸಂದೇಶ.

Next Article